| ಮಹಮ್ಮದ್ ರಫಿ ಪಾಷಾಮುಸ್ಲಿಮರ ಪಾಲಿಗೆ ಈ ತಿಂಗಳು ಅಂದರೆ ಇಸ್ಲಾಮೀ ಕ್ಯಾಲೆಂಡರ್ ಪ್ರಕಾರ ಹೇಳುವುದಾದರೆ ರಬೀವುಲ್ ಅವ್ವಲ್ ತಿಂಗಳು ಪ್ರವಾದಿ ಮುಹಮ್ಮದರನ್ನು(ಸ) ಇಡೀ ವಿಶ್ವವೇ ಕೊಂಡಾಡುವ ತಿಂಗಳಾಗಿದೆ. ಜನವರಿ, ಫೆಬ್ರವರಿ ತಿಂಗಳ ಹಾಗೆ ರಬೀವುಲ್ ಅವ್ವಲ್ ಇಸ್ಲಾಮೀ ಕ್ಯಾಲೆಂಡರ್ ಪ್ರಕಾರ ಮೂರನೆಯ ತಿಂಗಳಾಗಿದೆ. ರಬೀವುಲ್ ಅವ್ವಲ್ ಹನ್ನೆರಡರಂದು ಪ್ರವಾದಿ ಮುಹಮ್ಮದರ ಜನನವಾಯಿತೆಂದು ಮುಸ್ಲಿಮ್ ವಿದ್ವಾಂಸರ ಅಭಿಪ್ರಾಯವಿದೆ. ಆ ದಿನ ಮುಸ್ಲಿಮರು ಹಬ್ಬ, ಜಾಥಾ, ಹಾಡು, ತಕ್ಬೀರ್ ಮೂಲಕ ಸಂಭ್ರಮಿಸುವರು. ದೇವಾರಾಧನೆಯೊಂದಿಗೆ ಪ್ರವಾದಿ ಮುಹಮ್ಮದರನ್ನು (ಸ) ಮುಸ್ಲಿಮರು ಸ್ತುತಿಸುತ್ತಾರೆ. ಅಲ್ಲದೆ ಇತರ ಪ್ರವಾದಿಗಳ ಮೇಲೆ ವಿಶ್ವಾಸ ಇರಿಸುವುದು ಸಹ ಮುಸ್ಲಿಮರಿಗೆ ಕಡ್ಡಾಯವಾಗಿದೆ. ಈ ತಿಂಗಳು ಪ್ರವಾದಿಯವರನ್ನು ಸ್ಮರಿಸುತ್ತಲೂ, ಕೊಂಡಾಡುತ್ತಲೂ, ಗುಣಗಾನ ಮಾಡುತ್ತಲೂ ಅವರ ಉದಾತ್ತ ಸಂದೇಶಗಳನ್ನು ಜಗತ್ತಿನಾದ್ಯಂತ ಪಸರಿಸುತ್ತಾರೆ. ಇಸ್ಲಾಮಿನಲ್ಲಿ ಪ್ರವಾದಿಯವರನ್ನು ಆರಾಧಿಸುವ, ಪೂಜಿಸುವ ಪದ್ಧತಿ ಇಲ್ಲ. ಅವರನ್ನು ಸ್ಮರಿಸುತ್ತಾ, ಅವರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸುತ್ತಾ ನೈಜ ಮುಸ್ಲಿಮನಾಗಬೇಕೆಂಬ ಆಶಯ ಇದೆ.
ಜಗಕ್ಕೆ ಆಗತರಾದ ಒಂದು ಲಕ್ಷಕ್ಕಿಂತಲು ಹೆಚ್ಚು ಪ್ರವಾದಿಗಳಲ್ಲಿ ಪ್ರವಾದಿ ಮುಹಮ್ಮದ್​ರು(ಸ) ಅಂತಿಮ ಪ್ರವಾದಿಯಾಗಿದ್ದಾರೆ. ಇತರ ಪ್ರವಾದಿಗಳು ಜನಾಂಗ, ಗೋತ್ರಗಳಿಗೆ ನೇಮಕರಾದರೆ ಪ್ರವಾದಿ ಮುಹಮ್ಮದರು(ಸ) ಇಡೀ ವಿಶ್ವಕ್ಕೆ ನೇಮಿಸಲ್ಪಟ್ಟ ಪ್ರವಾದಿಯಾಗಿದ್ದಾರೆ. ಇಡೀ ವಿಶ್ವದಲ್ಲೇ ಕ್ರಾಂತಿ ಮಾಡಿದ ಮಹಾನ್ ನಾಯಕ ಪ್ರವಾದಿ ಮುಹಮ್ಮದರು(ಸ). ಅಜ್ಞಾನ ಕಾಲದ ಅರೇಬಿಯಾದ ಸ್ಥಿತಿ ಬಹಳ ಶೋಚನೀಯವಾಗಿತ್ತು. ಸಾಮಾಜಿಕವಾಗಿ ಅರಬರು ಅನಾಗರಿಕರು ಹಾಗೂ ಅನೇಕ ವಿಷಯಗಳಲ್ಲಿ ಮುಜುಗರವನ್ನುಂಟು ಮಾಡುವಂತಹ ಜನರಾಗಿದ್ದರು. ಅಜ್ಞಾನ, ಅಶ್ಲೀಲತೆಯಲ್ಲಿ ಮುಳುಗಿದ್ದರು. ಕ್ಷುಲ್ಲಕ ಕಾರಣಗಳಿಗಾಗಿ ರಕ್ತಪಾತವೆಸಗುತ್ತಿದ್ದರು. ಅಲ್ಲಿ ಯಾವುದೇ ಕಾನೂನು ವ್ಯವಸ್ಥೆ ಇರಲಿಲ್ಲ. ಬುಡಕಟ್ಟು ಜನಾಂಗಗಳು ಪರಸ್ಪರ ಯುದ್ಧ ನಿರತವಾಗಿರುತ್ತಿದ್ದವು. ಅವರು ವಿಶ್ವಾಸಾರ್ಹ ಮಿತ್ರರೂ ಅಲ್ಲ. ಖಾತರಿಯ ಶತ್ರುಗಳೂ ಅಲ್ಲ. ಶೌರ್ಯ, ಪರಾಕ್ರಮಗಳ ಹೊರತಾಗಿಯೂ ಕ್ರೂರಿಗಳು, ಅಮಾನವೀಯರೂ, ಕಾನೂನು ಭಂಜಕರೂ ಆಗಿದ್ದರು.
ಅಜ್ಞಾನ ಕಾಲದ ಅರಬೀಯಾದಲ್ಲಿ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿತ್ತು. ಸ್ತ್ರೀಯರೊಂದಿಗೆ ಜಾನುವಾರುಗಳಂತೆ ವರ್ತಿಸಲಾಗುತ್ತಿತ್ತು. ಪುರುಷರ ಕಾಮಾಸಕ್ತಿಯನ್ನು ತಣಿಸುವುದೇ ಸ್ತ್ರೀಯರ ಮುಖ್ಯ ಕರ್ತವ್ಯವಾಗಿತ್ತು. ಶಿಶು ಹತ್ಯೆ ಸರ್ವೆಸಾಮಾನ್ಯವಾಗಿತ್ತು. ಶರಾಬು, ಜೂಜಾಟ ಅವರ ಸಂಸ್ಕೃತಿಯಾಗಿದ್ದು ಶೋಷಣೆ ನಿರಂತರವಾಗಿತ್ತು. ಬಡ್ಡಿ ವ್ಯವಹಾರ ಯಥೇಚ್ಛವಾಗಿ ಮಾಡುತ್ತಿದ್ದರು. ಜೀತಪದ್ಧತಿಯ ಮೂಲಕ ಗುಲಾಮರ ಮೇಲೆ ದೌರ್ಜನ್ಯ ಮುಗಿಲು ಮುಟ್ಟುವಂತಿತ್ತು. ಪುರುಷನು ಹೊಂದಬಹುದಾಗಿದ್ದ ಪತ್ನಿ, ಗುಲಾಮ ಸ್ತ್ರೀ, ಉಪಪತ್ನಿಯರ ಸಂಖ್ಯೆಗೆ ಯಾವುದೇ ಮಿತಿಯಿರಲಿಲ್ಲ. ಒಟ್ಟಿನಲ್ಲಿ ಸ್ತ್ರೀ ಪುರುಷರ ಸಂಬಂಧಕ್ಕೆ ಯಾವುದೇ ನೈತಿಕ ಮೇರೆಗಳಿರಲಿಲ್ಲ. ಬಡವರು, ಗುಲಾಮರು, ಸ್ತ್ರೀಯರು ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾಗಿದ್ದರು. ಇಂತಹ ಅಮಾನವೀಯ ಸನ್ನಿವೇಶದಲ್ಲಿ ಮುಹಮ್ಮದ್ (ಸ) ಪ್ರವಾದಿಯಾಗಿ ಆಗಮಿಸಿದರು. ಕೇವಲ 23 ವರ್ಷಗಳ ಹಗಲಿರುಳ ಪ್ರಯತ್ನದಲ್ಲಿ ಅಜ್ಞಾನಕಾಲದ ಕೆಡುಕು, ಕಂದಾಚಾರಗಳನ್ನು ತೊಡೆದು ಹಾಕಿ ಜಗತ್ತು ಎಂದೂ ಕಂಡರಿಯದ ಮೌಲ್ಯಗಳನ್ನು ಅರೇಬಿಯಾದಿಂದ ತೊಡಗಿ ಇಡೀ ವಿಶ್ವಕ್ಕೆ ನೀಡಿದರು. ಮಾನವನ ಸ್ಥಾನಮಾನವನ್ನು ಆತ ಊಹಿಸದ ಮಟ್ಟಕ್ಕೆ ತಲುಪಿಸಿದರು.
ಪ್ರವಾದಿ ಮುಹಮ್ಮದರು(ಸ) ಒಂದು ಜನಾಂಗಕ್ಕೆ, ಪ್ರದೇಶಕ್ಕೆ, ಸಮುದಾಯಕ್ಕೆ, ದೇಶಕ್ಕೆ, ಪ್ರಾಂತ್ಯಕ್ಕೆ ಮಾತ್ರ ಆಗಮಿಸಿದ ಪ್ರವಾದಿಯಲ್ಲ. ಅವರು ಇಡೀ ವಿಶ್ವದ ಪ್ರವಾದಿಯಾಗಿದ್ದರು. ಒಳಿತು- ಕೆಡುಕು, ಸತ್ಯ – ಮಿಥ್ಯಗಳ ಅಂತರವನ್ನು, ವಿಶ್ವದ ಸೃಷ್ಟಿಯ ಅದ್ಭುತವನ್ನು, ಅದರ ಹಿಂದಿರುವ ಶಕ್ತಿಯನ್ನು ಜಗಕ್ಕೆ ಪರಿಚಯಿಸಿದರು. ಮನುಷ್ಯನ ಹುಟ್ಟಿನ ಉದ್ದೇಶ, ಧ್ಯೇಯವನ್ನು ತಮ್ಮ ಸಂದೇಶಗಳ ಮೂಲಕ ತಿಳಿಸಿದ ಮಹಾನಾಯಕ. ಪ್ರವಾದಿಯವರ ಅತ್ಯದ್ಭುತ ಬದುಕು ಆದರ್ಶ ಮತ್ತು ಮಾದರಿಯಾಗಿತ್ತು. ನಡೆಯುವ ಕುರ್ ಆನ್ ಎಂದು ಸ್ವತಃ ಅವರ ಪತ್ನಿ ಆಯಿಶಾ(ರ) ಪ್ರವಾದಿಯವರನ್ನು ಜಗಕ್ಕೆ ಪರಿಚಯಿಸಿರುವರು.
ಮಾನವಕುಲಕ್ಕೆ ಪ್ರವಾದಿ ಮುಹಮ್ಮದರು ನೀಡಿರುವ ಕೊಡುಗೆಗಳು ಅಪಾರ. ಜಗತ್ತಿನ ಇತಿಹಾಸಗಳಲ್ಲಿ ಅತೀ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಯೆಂದರೆ ಪ್ರವಾದಿ ಮುಹಮ್ಮದರು. ಅದನ್ನು ದಿ ಹಂಡ್ರೆಡ್ ರ‍್ಯಾಂಕಿಂಗ್ ಆಫ್ ದಿ ಮೋಸ್ಟ್ ಇನ್​ಫ್ಲುಯೆನ್ಶಲ್ ಪರ್ಸನ್ಸ್ ಇನ್ ಹಿಸ್ಟರಿ ಎಂಬ ಪುಸ್ತಕದ ಲೇಖಕರಾದ ಮೈಕಲ್ ಎಚ್. ಹಾರ್ಟ್ ಅವರ ಪುಸ್ತಕದಲ್ಲಿ ಪ್ರವಾದಿಯವರ ಕುರಿತು ಬರೆದಿರುವರು.
ಧಾರ್ವಿುಕ ಮತ್ತು ಲೌಕಿಕ ಎರಡೂ ರಂಗಗಳಲ್ಲಿ ಇತಿಹಾಸದಲ್ಲಿ ಸರ್ವಶ್ರೇಷ್ಠ ಸಫಲತೆಯನ್ನು ಪಡೆದಿರುವವರು ಕೇವಲ ಮುಹಮ್ಮದ್ ಮಾತ್ರವಾಗಿದ್ದಾರೆ. ಅರಬ್ ಬುಡಕಟ್ಟುಗಳು ಪ್ರವಾದಿಯವರ ಬೋಧನೆಯಿಂದ ಪ್ರಭಾವಿತರಾಗಿ ಜಗತ್ತು ಈ ಹಿಂದೆ ಎಂದೂ ಕಂಡಿರದ ಅತ್ಯಂತ ವಿಶಾಲ ಸಾಮ್ರಾಜ್ಯವನ್ನು ಭಾರತದ ಸರಹದ್ದಿನಿಂದ ಹಿಡಿದು ಅಟ್ಲಾಂಟಿಕ್ ಸಾಗರದವರೆಗೆ ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಮುಹಮ್ಮದ್ ಧಾರ್ವಿುಕ ಮತ್ತು ಲೌಕಿಕ ನಾಯಕರಾಗಿದ್ದರು. ವಾಸ್ತವಿಕವಾಗಿ ಅರಬ್ ದಂಡಯಾತ್ರೆಗಳ ಹಿಂದಿರುವ ಅವರ ಪ್ರೇರಣೆಯನ್ನು ಪರಿಗಣಿಸಿದರೆ ಅವರನ್ನು ಸಾರ್ವಕಾಲಿಕ ಪ್ರಭಾವಶಾಲಿ ರಾಜಕೀಯ ನೇತಾರರೆಂದು ಹೇಳಬಹುದು ಎಂದು ಮೈಕಲ್ ಎಚ್. ಹಾರ್ಟ್ ತಮ್ಮ ಪುಸ್ತಕದಲ್ಲಿ ಬರೆದಿರುವರು.
ಜಗತ್ತು ಕಂಡಿರುವ ಪ್ರಖ್ಯಾತ ಸುಧಾರಕರಲ್ಲಿ, ಮುಹಮ್ಮದರು(ಸ) ಕೇವಲ ತತ್ವಗಳನ್ನು ಪ್ರತಿಪಾದಿಸಿದ್ದು ಮಾತ್ರವಲ್ಲ, ಅವುಗಳನ್ನು ಅನುಷ್ಟಾನಗೊಳಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರವಾದಿ ಮುಹಮ್ಮದ್(ಸ) ನಿರಂತರ ಸಚ್ಚಾರಿತ್ರ್ಯವನ್ನು ಪ್ರತಿಪಾದಿಸಿದರು. ಸತ್ಯಕ್ಕೆ ಪ್ರಾಧಾನ್ಯತೆ ನೀಡಲು ಹೋರಾಡಿದರು. ನೈತಿಕ ಬುನಾದಿಗಳ ಮೇಲೆ ಒಂದು ಸಂಪೂರ್ಣ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿದರು. ಪ್ರವಾದಿಯವರು ಹುಟ್ಟು ಹಾಕಿದ ಸುಧಾರಣೆ ಸಂಪೂರ್ಣ ಸಾಮಾಜಿಕ ವ್ಯವಸ್ಥೆಯ ಮೇಲೆ ತನ್ನ ಪ್ರಭಾವವನ್ನು ಬೀರಿತು. ಕೋಟ್ಯಾಂತರ ಅನುಯಾಯಿಗಳು ಅವರ ರಾಜಕೀಯ, ಸಾಮಾಜಿಕ, ಆರ್ಥಿಕ ಕಾನೂನು ವ್ಯವಸ್ಥೆಗಳಿಂದ, ಮಿಲಿಟರಿ ಕಾರ್ಯಾಚರಣೆಯಿಂದ ಮಾತ್ರ ಪ್ರಭಾವಿತರಾದವರಲ್ಲ. ಪ್ರವಾದಿಯವರ(ಸ) ಸರಳತೆ, ವಿಜಯದ ಸಂದರ್ಭದಲ್ಲೂ ದೇವನ ಮುಂದೆ ಅರ್ಪಿಸುವ ವಿನೀತ ಭಾವ, ನಿಷ್ಕಳಂಕ ಜೀವನ, ತತ್ವ ಆದರ್ಶಗಳಲ್ಲಿನ ನಿಷ್ಠೆ ಅನೇಕ ಹೃದಯಗಳನ್ನು ಆಕರ್ಷಿಸಲು ಕಾರಣವೂ ಆಗಿತ್ತು.
ಜಗತ್ತಿನಲ್ಲಿ ಕ್ರಾಂತಿ ಮಾಡುವುದು, ಸುಧಾರಣೆ ಮಾಡುವುದು, ಅನೇಕ ಶೋಷಣೆ ಮತ್ತು ದೌರ್ಜನ್ಯದ ಕಬಂಧ ಬಾಹುಗಳಿಂದ ವಿಮೋಚನೆಗೊಳಿಸುವುದು ಸುಲಭದ ಕೆಲಸವಲ್ಲ. ತನ್ನಂತೆ ಇತರರ ಬಗ್ಗೆ ಕಾಳಜಿ ವಹಿಸುವುದು, ಎಲ್ಲರನ್ನು ಸತ್ಯ, ನ್ಯಾಯ, ಪ್ರೀತಿಯೊಂದಿಗೆ ಪೊರೆಯುವುದು, ಒಬ್ಬ ಧಾರ್ವಿುಕ ನಾಯಕನಾಗಿಯೂ, ದಂಡನಾಯಕನಾಗಿಯೂ, ಮಾದರಿ ಶಿಕ್ಷಕನಾಗಿಯೂ, ಮನೆ ಕುಟುಂಬದ ನಿರ್ವಾಹಕನಾಗಿ ಪ್ರತಿಯೊಂದು ರಂಗಗಳಲ್ಲೂ ನೈಜತೆಯ ಅದರ್ಶ ಛಾಪನ್ನು ಮೂಡಿಸಿದವನು ಅದರಲ್ಲಿ ಯಶಸ್ವಿಯಾಗಬಲ್ಲ. ಅಂತಹ ಬದುಕನ್ನು ತೋರಿಸಿ ಕೊಟ್ಟ ಪ್ರವಾದಿಯವರು ಮಾನವ ಪ್ರಾಣದ ಘನತೆಯ ಬಗ್ಗೆ, ವೈಯಕ್ತಿಕ ಜೀವನದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದವರು. ಪ್ರತಿಯೊಂದು ಜೀವಿಗೆ ಜೀವಿಸುವ ಹಕ್ಕು ಮಾತ್ರವಲ್ಲ, ಮಾರ್ಯಾದಸ್ಥ ಜೀವನ ನಡೆಸುವ ಹಕ್ಕು ಇದೆಯೆಂದು ಸಾರಿದರು. ಇಸ್ಲಾಮ್ ತಾಯಿಯ ಹೊಟ್ಟೆಯಲ್ಲಿರುವ ಮಗುವಿಗೂ ಜೀವಿಸುವ ಹಕ್ಕನ್ನು ನೀಡಿದೆಯೆನ್ನುತ್ತಾ ಮಾನವ ಹತ್ಯೆ, ಶಿಶು ಹತ್ಯೆಯಂತಹ ಬರ್ಬರ ಕೃತ್ಯಗಳನ್ನು ತಡೆದರು. ಆ ಮೂಲಕ ಅರಬ್​ರಲ್ಲಿದ್ದ ಹೆಣ್ಣು ಮಕ್ಕಳನ್ನು ಜೀವಂತ ಹೂಳುವ ಕ್ರೂರತೆಯನ್ನು ಕೊನೆಗಾಣಿಸಿದರು. ವಿನಾಕಾರಣ ಕೊಲೆ ಮಾಡಿದವನು ಇಡೀ ಮಾನವ ಕುಲವನ್ನು ಹತ್ಯೆಗೈದಂತೆ ಹಾಗೂ ಒಬ್ಬನಿಗೆ ಜೀವದಾನ ಮಾಡಿದರೆ ಇಡೀ ಮಾನವಕುಲಕ್ಕೆ ಜೀವದಾನ ಮಾಡಿದಂತೆ ಎನ್ನುತ್ತಾ ಮಾನವ ಪ್ರಾಣಕ್ಕೆ ಗೌರವ ನೀಡಿದರು.
ಪ್ರವಾದಿ ಮುಹಮ್ಮದರು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದರೆಂದರೆ ತನ್ನ ಮನೆಗೂ ಸಹ ಯಾವುದೇ ಮುನ್ಸೂಚನೆ ಇಲ್ಲದೆ ಪ್ರವೇಶಿಸುವುದರಿಂದ ತಮ್ಮ ಅನುಚರರನ್ನು ತಡೆದಿದ್ದರು. ವೈಯಕ್ತಿಕ ಸ್ವಾತಂತ್ರ್ಯವನ್ನು ಅದರ ಸಂಪೂರ್ಣ ಅರ್ಥದಲ್ಲಿ ತೋರಿಸಿಕೊಟ್ಟವರು ಪ್ರವಾದಿ ಮುಹಮ್ಮದರು(ಸ). ಅಕ್ರಮ ಬಂಧನದಲ್ಲಿಡುವುದು, ಅಪಹರಿಸುವುದು, ಕಾನೂನು ಬಾಹಿರವಾಗಿ ಸೆರೆಯಲ್ಲಿರಿಸುವುದನ್ನು ನಿಷೇಧಿಸುತ್ತಿದ್ದರು. ಅಪರಿಚಿತರೂ ಸಹ ಇತರರ ಬಂಧನವನ್ನು ಪ್ರಶ್ನಿಸುವಂತಹ ವಾತಾವರಣ ಸೃಷ್ಟಿಸಿದ್ದರು. ಸರಕಾರವೂ ಜನರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ನಿರ್ದೇಶಿಸಿದ್ದರು. ಸ್ವತಂತ್ರ ಜನರನ್ನು ಸೆರೆ ಹಿಡಿದು ಗುಲಾಮರನ್ನಾಗಿಸುವ ಅನಾಗರಿಕ ಕಾಲದ ಪದ್ಧತಿಯನ್ನು ತೊಡೆದು ಹಾಕಿದರು. ಸೆರೆಯಾಳಾದ ಕೈದಿಗಳೊಂದಿಗೆ ನ್ಯಾಯೋಚಿತ ರೀತಿಯಲ್ಲಿ ಆತ್ಮೀಯತೆಯಿಂದ ವರ್ತಿಸುತ್ತಿದ್ದರು. ಶತ್ರುಗಳ ಮೇಲೆಯೂ ಕರುಣೆ ತೋರಿಸುತ್ತಿದ್ದರು. ವಿಜಯದ ಸಮಯದಲ್ಲಿ ದಾರಾಳವಾಗಿ ಕ್ಷಮಿಸುವ ಗುಣವನ್ನೂ ಹೊಂದಿದ್ದರು. ಯಾವುದೇ ವ್ಯಕ್ತಿಯನ್ನು ನಿರ್ದಿಷ್ಟ ಆರೋಪವಿಲ್ಲದೆ ಬಂಧಿಸಬಾರದು, ಸೂಕ್ತ ತನಿಖೆಯಿಲ್ಲದೆ ಆರೋಪ ಹೊರಿಸಬಾರದು, ನ್ಯಾಯೋಚಿತ ವಿಚಾರಣೆಯಿಲ್ಲದೆ ಯಾರನ್ನೂ ಶಿಕ್ಷಿಸಬಾರದು, ವಿಚಾರಣೆಯ ಸಮಯದಲ್ಲಿ ಆರೋಪಿಗೆ ಪ್ರತಿವಾದಿಸಲು ಅನುವು ಮಾಡಿಕೊಡಬೇಕು, ಒಬ್ಬರು ಎಸಗಿದ ಕೃತ್ಯಕ್ಕಾಗಿ ಮತ್ತೊಬ್ಬರನ್ನು ಶಿಕ್ಷಿಸಬಾರದೆಂಬ ಕಾನೂನನ್ನು ಸ್ಥಾಪಿಸಿದಲ್ಲದೆ ಅದನ್ನು ತಮ್ಮ ಬದುಕಿನುದ್ದಕೂ ಪಾಲಿಸುತ್ತಾ ಮಾರ್ಗದರ್ಶಕರಾಗಿ ಬದುಕಿದರು.
ಪ್ರವಾದಿ ಮುಹಮ್ಮದ್ (ಸ) ಒಬ್ಬ ಅತ್ಯುತ್ತಮ ಸ್ತ್ರೀ ವಿಮೋಚಕ. ಹೆಣ್ಣಿನ ಬದುಕಿನ ಹಕ್ಕಿನಿಂದ ಹಿಡಿದು ಆಕೆಯ ಮರಣದವರೆಗೂ ಇರುವ ಎಲ್ಲ ಹಕ್ಕುಗಳನ್ನು ನೀಡಬೇಕೆಂದು ಸಾರಿದರು. ಮಹಿಳೆಯ ಅಪಮಾನ ಇಸ್ಲಾಮಿನ ದುರದೃಷ್ಟದ ವಿಷಯವಾಗಿದೆ. ಈ ಪರಾಮರ್ಶೆಯನ್ನು ಪ್ರಮಾಣೀಕೃತ ಸತ್ಯವೆಂಬಂತೆ ಅಂಗೀಕರಿಸಲಾಯಿತು. ವಾಸ್ತವದಲ್ಲಿ ಪ್ರವಾದಿ ಮುಹಮ್ಮದರು ಸ್ತ್ರೀಯರ ವಿಮೋಚನೆಯಲ್ಲದೆ ಮತ್ತೇನನ್ನೂ ಮಾಡದಿರುತ್ತಿದ್ದರೂ ಲೋಕದ ಶ್ರೇಷ್ಟ ಅನುಗ್ರಹಿಯಾಗಿರುತ್ತಿದ್ದರು. ಎಂದು ಕುರ್​ಆನಿನ ಸಂಚಯವನ್ನು ಪ್ರಕಟಿಸಿದ ವಿಲಿಯಮ್ ಲೆನ್ ಅವರ ಪುಸ್ತಕದ ಮುನ್ನುಡಿಯಲ್ಲಿ ಬರೆದಿರುವುದು ಬಹಳ ಅರ್ಥಪೂರ್ಣ ಸಾಲುಗಳಾಗಿದ್ದುವು. ಹೆಣ್ಣಿಗೆ ಬದುಕುವ ಹಕ್ಕು, ಶಿಕ್ಷಣದ ಹಕ್ಕು, ವಿವಾಹದ ಹಕ್ಕು, ಆಯ್ಕೆಯ ಹಕ್ಕು, ವಿಧವಾ ವಿವಾಹ ಮತ್ತು ಮರುವಿವಾಹದ ಹಕ್ಕು, ವಿಚ್ಛೇದನ ಪಡೆಯುವ ಅಧಿಕಾರ, ಆಸ್ತಿಯ ಹಕ್ಕು ಹೀಗೆ ಪ್ರತಿಯೊಂದು ಹಕ್ಕುಗಳನ್ನು ನೀಡಬೇಕೆಂಬ ಇಸ್ಲಾಮಿನ ಸುಂದರ ವ್ಯವಸ್ಥೆಯನ್ನು ಪ್ರವಾದಿ ಮುಹಮ್ಮದ್ (ಸ) ಜನರಿಗೆ ಕಲಿಸಿಕೊಟ್ಟರು. ಥಿಂಗ್ಸ್ ಮುಹಮ್ಮದ್ ಡಿಡ್ ಫಾರ್ ವಿಮೆನ್ ಎಂಬ ಲೇಖನದ ಬರಹಗಾರ ಪಿಯರಿ ಕ್ರಾಬೈಟ್ಸ್​ರವರ ಮಾತಿನಲ್ಲಿ ಹೇಳುವುದಾದರೆ, ಮುಸ್ಲಿಮ್ ಮಹಿಳೆ ಮುಹಮ್ಮದ್ (ಸ) ರೂಪಿಸಿರುವ ಬಲಿಷ್ಟ ಚಾಲನಾ ಶಕ್ತಿಯಾಗಿದ್ದಾಳೆ. 1,400 ವರ್ಷಗಳ ಹಿಂದೆಯೇ ಮುಹಮ್ಮದ್ (ಸ) ಇಸ್ಲಾಮಿನ ಮಾತೆಯರಿಗೆ, ಪತ್ನಿಯರಿಗೆ ಮತ್ತು ಪುತ್ರಿಯರಿಗೆ ಪಾಶ್ಚಾತ್ಯ ದೇಶಗಳು ಮಹಿಳೆಯರು ಈವರೆಗೂ ನೀಡಿರದ ಸ್ಥಾನಮಾನ ಮತ್ತು ಘನತೆ ಗೌರವಗಳನ್ನು ನೀಡಿದ್ದಾರೆ ಎನ್ನುತ್ತಾ ಪ್ರವಾದಿಯವರನ್ನು ತನ್ನ ಲೇಖನದಲ್ಲಿ ಪರಿಚಯಿಸಿದರು.
ಇಸ್ಲಾಮ್ ಆಸ್ ಎ ಪೊಲಿಟಿಕಲ್ ಸಿಸ್ಟಮ್ ಎಂಬ ಕೃತಿಯ ಲೇಖಕರು ಹೀಗೆ ಬರೆದಿದ್ದಾರೆ. ಏಕಕಾಲದಲ್ಲಿ ರಾಜನೂ, ಯೋಧರೂ ಆಗಿದ್ದ ಧರ್ಮ ಸಂಸ್ಥಾಪಕರು ಜಗತ್ತಿನಲ್ಲಿ ಮುಹಮ್ಮದ್ ಮಾತ್ರವಾಗಿದ್ದಾರೆ. ಹಿಂಸೆ ಮತ್ತು ಅತಿಯಾಸೆ ನಿಯಂತ್ರಿಸಲು ಅವರು ಅಧಿಕಾರ ಬಳಸಿದ್ದರು. ತಮ್ಮ ಮಾತನ್ನು ವೇದ ವಾಕ್ಯವೆಂಬಂತೆ ಪರಿಗಣಿಸುತ್ತಿದ್ದ ಅನುಯಾಯಿಗಳನ್ನು ಹೊಂದಿದ್ದ ಅವರು ಧರ್ಮವನ್ನು ಲೌಕಿಕ ಸಂಪತ್ತು ಮತ್ತು ಅಧಿಕಾರ ಗಳಿಸಲು ಬಳಸಬಹುದಾಗಿತ್ತು. ಅವರ ನಡವಳಿಕೆ ಮನುಷ್ಯನ ಹೃದಯದಲ್ಲಿ ಸಾಮಾನ್ಯವಾಗಿ ಅಡಗಿರುವ ಆಕಾಂಕ್ಷೆಗಳಿಗೂ ತದ್ವಿರುದ್ಧವಾಗಿತ್ತು. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ, ಅಧಿಕಾರದ ಪ್ರಯೋಗದಲ್ಲಿ ಮುಹಮ್ಮದ್ (ಸ) ಸೌಮ್ಯ ಧೋರಣೆಯನ್ನು ಅನುಸರಿಸುತ್ತಿದ್ದರು. ವಿಜಯದ ಸಂದರ್ಭದಲ್ಲಿ ಕ್ಷಮೆ, ಧಾರ್ವಿುಕ ವಿಷಯಗಳಲ್ಲಿ ಸಹಿಷ್ಣುತೆ ಧೋರಣೆಯನ್ನು ಅನುಸರಿಸುತ್ತಿದ್ದರು.
ಧಾರ್ವಿುಕ ಸಹಿಷ್ಣುತೆಯ ಮೂಲಕ ಪ್ರವಾದಿ ಮುಹಮ್ಮದ್ (ಸ)ರು ಶಾಂತಿ ಸಂದೇಶವಾಹಕರಾಗಿದ್ದರೆಂದು ಜಗತ್ತಿಗೆ ತೋರಿಸಿದವರೂ ಆಗಿದ್ದರು. ಅವರ ನಡವಳಿಕೆ, ವಿನಯಶೀಲತೆ, ಅನುಕಂಪ, ವಿಶ್ವಾಸಾರ್ಹತೆ ಮತ್ತು ದೀನ ದಲಿತರ ಪರವಾಗಿದ್ದ ಅವರ ಹೃದಯ ವೈಶಾಲ್ಯತೆ ಜನರ ಮನಸ್ಸನ್ನು ಗೆಲ್ಲಲು ಸಹಕಾರಿಯಾಯಿತು. ಧಾರ್ವಿುಕ ಸ್ವಾತಂತ್ರ್ಯವನ್ನು ರಕ್ಷಿಸಲು ವಿವಿಧ ಜನರೊಂದಿಗೆ ಒಪ್ಪಂದಗಳನ್ನು ಮಾಡಿದ್ದೂ ಇದೆ. ಪ್ರವಾದಿ ಮುಹಮ್ಮದ್ (ಸ) ಮಾಡಿಕೊಂಡ ಒಡಂಬಡಿಕೆಗಳು ರಾಜಕೀಯ ದೃಷ್ಟಿಯಿಂದ ಅತಿ ಶ್ರೇಷ್ಟ ಮಟ್ಟದ ದಾಖಲೆಗಳಾಗಿದ್ದು, ಈ ಮುಂಚೆ ಯಾವ ಪ್ರವಾದಿಗೂ ಇದು ಸಾಧಿಸಲು ಸಾಧ್ಯವಾಗಿರಲಿಲ್ಲ. ಪ್ರವಾದಿ ಮುಹಮ್ಮದ್ (ಸ) ಹೇಳುತ್ತಾರೆ, ಎಚ್ಚರಿಕೆ ! ಇಸ್ಲಾಮೀ ಸಾಮ್ರಾಜ್ಯದಲ್ಲಿ ಯಾವನೇ ಮುಸ್ಲಿಮೇತರರನ್ನು ಶೋಷಿಸಿದರೆ ಅಥವಾ ಆತನ ಪ್ರಾಣ, ಸೊತ್ತುವಿತ್ತ ಮತ್ತು ಘನತೆಯ ಹಕ್ಕುಗಳನ್ನು ಉಲ್ಲಂಘಿಸಿದರೆ ಅಥವಾ ಆತನಿಗೆ ಸಹಿಸಲಾಗದ ಹೊರೆಯನ್ನು ಆತನ ಮೇಲೆ ಹಾಕಿದರೆ ಅಥವಾ ಆತನ ಅನುಮತಿ ಇಲ್ಲದೆ ಆತನ ಯಾವುದೇ ವಸ್ತುವನ್ನು ಬಳಸಿದರೆ, ಅಲ್ಲಾಹನ ನ್ಯಾಯಾಲಯದಲ್ಲಿ ಆತನ ಪರವಾಗಿ ನಾನು ವಾದಿಸುತ್ತೇನೆ.
ಪ್ರವಾದಿ ಮುಹಮ್ಮದರ(ಸ) ಜೀವನ ಮನುಷ್ಯ ಜೀವನವಾಗಿತ್ತು. ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಸಾಧಿಸಬಹುದಾದ ಅತ್ಯಂತ ಉನ್ನತ, ಪರಿಪೂರ್ಣ ಆದರ್ಶಗಳನ್ನು ಅವರು ಸಾಧಿಸಿದ್ದರು. ಸತ್ಯವಿಶ್ವಾಸ ಮತ್ತು ಸಚ್ಚಾರಿತ್ರ್ಯದಿಂದ ಮಾನವೀಯ ಪರಿಪೂರ್ಣತೆಯನ್ನು ಪಡೆಯ ಬಯಸುವವರಿಗೆ ಪ್ರವಾದಿಯವರ ಜೀವನದಲ್ಲಿ ಉತ್ತಮ ಉದಾಹರಣೆ ಮತ್ತು ಮಾರ್ಗದರ್ಶನವಿದೆ. ಅವರ ಸಂದೇಶಗಳನ್ನು ಅರ್ಥ ಮಾಡಿ ಅದನ್ನು ಬದುಕಿನೊಂದಿಗೆ ಅಳವಡಿಸುವ ಮೂಲಕ ಪ್ರವಾದಿ ಪ್ರೇಮವನ್ನು ತೋರಿಸಬೇಕಾಗಿದೆ. ಹಾಡು, ಕುಣಿತ, ಸಂಭ್ರಮಗಳಿಂದ ಪ್ರವಾದಿಯವರನ್ನು ಕೊಂಡಾಡಿದರೆ ಮಾತ್ರ ಸಾಲದು. ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಬೇಕಾಗಿರುವುದು ಮನುಷ್ಯ ಮನುಷ್ಯರನ್ನು ಪ್ರೀತಿಸುತ್ತಾ, ಹಕ್ಕು ಕರ್ತವ್ಯವನ್ನು ನೆರವೇರಿಸುತ್ತಾ ಅವರ ಸತ್ಯಸಂದೇಶವನ್ನು ಅಪರಿಚಿತವಾಗಿದ್ದ ಜಗತ್ತಿಗೆ ಪರಿಚಯಿಸಬೇಕಾಗಿದೆ.
(ಲೇಖಕರು ಅಸಿಸ್ಟೆಂಟ್ ಕಮಿಷನರ್, ಕಮರ್ಷಿಯಲ್ ಟ್ಯಾಕ್ಸ್, ಕರ್ನಾಟಕ ಸರ್ಕಾರ)
ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳಿಗೆ ಠಾಣೆಯಲ್ಲೇ ಶಾಸ್ತ್ರೋಕ್ತ ಸೀಮಂತ!

ಮಾಜಿ ಪ್ರಧಾನಿ ದೇವೇಗೌಡ, ಇಸ್ರೋ ಸೋಮನಾಥ್​ಗೆ ಗೌರವ ಡಾಕ್ಟರೇಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
