ಕೇಂದ್ರ ಬಜೆಟ್ ಗಾತ್ರವೇ ಸುಮಾರು 47 ಲಕ್ಷ ಕೋಟಿ ರೂ. ಇದೆ. ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಸಿದರೆ ಸುಮಾರು 40 ಲಕ್ಷ ಕೋಟಿ ರೂ. ವೆಚ್ಚವಾಗುತ್ತದೆ. ಹಾಗಾಗಿ ಕೇಂದ್ರ ಬಜೆಟ್​ನ ಸಂಪೂರ್ಣ ಮೊತ್ತವನ್ನು ಬೆಂಬಲ ಬೆಲೆಗೆ ಖರ್ಚು ಮಾಡಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಭಟನಾನಿರತ ‘ರೈತ’ ಸಂಘಟನೆಗಳು ಅರಿಯಬೇಕಿದೆ.
ಒಂದು ಸುಳ್ಳನ್ನು ಹತ್ತು ಬಾರಿ ಹೇಳಿದರೆ ಅದೇ ನಿಜ ಅನ್ನುವ ರೀತಿಯಲ್ಲಿ ಹರಿದಾಡುತ್ತದೆ. ‘ಸತ್ಯ ಮನೆಯಾಚೆ ಹೋಗುವ ಮೊದಲೇ ಸುಳ್ಳು ಇಡೀ ಊರು ಸುತ್ತಿಕೊಂಡು ಬಂದಿರುತ್ತದೆ’ ಎನ್ನುವ ಮಾತುಗಳು ಕಳೆದ ಎರಡುಮೂರು ವರ್ಷದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ‘ರೈತರು’ ನಡೆಸುತ್ತಿರುವ ಪ್ರತಿಭಟನೆಗೆ ಸರಿಯಾಗಿ ಹೊಂದುತ್ತವೆ.
ಹೌದು. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ಚುನಾವಣೆ ಘೊಷಣೆಯಾಗುವ ಸಂದರ್ಭದಲ್ಲೇ ಕೆಲವು ರೈತ ಸಂಘಟನೆಗಳು ‘ಶಾಂತಿಯುತ ಪ್ರತಿಭಟನೆ’ ನೆಪದಲ್ಲಿ ದೆಹಲಿಗೆ ದಾಳಿ ಮಾಡುವುದು ಹೆಚ್ಚಾಗುತ್ತಿದೆ. ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಕೇಂದ್ರ ಸರ್ಕಾರದ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಮೇಲೆ ಅಕ್ಷರಶಃ ದಾಳಿ ನಡೆಸಿದ್ದ ‘ಸೋಕಾಲ್ಡ್’ ರೈತರು ಇದೀಗ ಮತ್ತೊಮ್ಮೆ ವಿವಿಧ ಬೇಡಿಕೆಗಳ ಈಡೇರಿಕೆಗೆ
ಆಗ್ರಹಿಸಿ 200ಕ್ಕೂ ಹೆಚ್ಚು ಸಂಘಟನೆಗಳಿಂದ ಸಂಸತ್ ಮುತ್ತಿಗೆಗೆ ಕರೆ ನೀಡಿ ದೆಹಲಿಯತ್ತ ನುಗ್ಗಿದ್ದಾರೆ. ದೆಹಲಿಯಲ್ಲಿ ಮತ್ತೊಮ್ಮೆ ದಂಗೆಗೆ ಪ್ರಯತ್ನ ನಡೆದಿದೆ. ಪೊಲೀಸರು ಗಡಿ ಭಾಗದಲ್ಲಿಯೇ ತಡೆದಿರುವುದರಿಂದ, ದೆಹಲಿಯ ಹೊರಭಾಗದಲ್ಲಿ ಠಿಕಾಣಿ ಹೂಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ರೀತಿ ಬಗ್ಗೆ ಮೊದಲು ಅವಲೋಕಿಸಬೇಕು. ನೈಜ ಅನ್ನದಾತರ ಪ್ರತಿಭಟನೆ ಹೇಗಿರುತ್ತದೆ ಎಂಬುದನ್ನು ಈ ಹಿಂದೆ ನೋಡಿದ್ದೇವೆ. ಅಚ್ಚರಿ ಹಾಗೂ ಆಘಾತವೆಂದರೆ, ಕಳೆದ ವಾರ ಪಂಜಾಬ್ ಸುತ್ತಮುತ್ತಲಿನ ರೈತರು ಪ್ರತಿಭಟನೆ ಆರಂಭಿಸಲು ದೆಹಲಿಯತ್ತ ಬಂದಾಗ ನೀಡಿದ ಹೇಳಿಕೆಗಳು ಕಳವಳಕಾರಿಯಾಗಿವೆ. ‘ಮೋದಿ ಜನಪ್ರಿಯತೆಯ ಗ್ರಾಫ್ ಇಳಿಸಬೇಕು’ ಎಂದ ರೈತ ನಾಯಕ; ‘ಕಳೆದ ಬಾರಿ ಪಂಜಾಬ್​ನಿಂದ ಮೋದಿ ತಪ್ಪಿಸಿಕೊಂಡಿದ್ರು’; ‘ರಾಮ ಮಂದಿರ ಲೋಕಾರ್ಪಣೆ ನಂತರ ಮೋದಿ ಜನಪ್ರಿಯತೆ ಉತ್ತುಂಗದಲ್ಲಿದೆ’ ಎಂಬಿತ್ಯಾದಿ ಹೇಳಿಕೆಗಳು; ಹಾಗೆಯೇ ಕೆಲವು ಮೂಲಗಳ ಪ್ರಕಾರ ಕೆಲ ರೈತರು ಮಾರಕಾಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದಾರಂತೆ. ಕಳೆದ ಬಾರಿಯಂತೂ ಅಧಿಕೃತವಾಗಿಯೇ ಕೆಲ ರೈತರು ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ್ದರು.
ರೈತರ ಈ ಬಾರಿಯ ಬಹುತೇಕ ಬೇಡಿಕೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ಈಡೇರಿಸಿದೆ. ಇನ್ನು ಕೆಲವು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ರೈತ ಸಂಘಟನೆ ಮುಖಂಡರೊಂದಿಗೆ ಸಂಧಾನ ಸಭೆ ಸಂದರ್ಭದಲ್ಲಿ ಸಮಯ ಕೇಳಿದ್ದಾರೆ. ಕೆಲವನ್ನು ತಕ್ಷಣವೇ ಈಡೇರಿಸುವ ಭರವಸೆ ನೀಡಿದ್ದಾರೆ. ಆದರೂ, ಪ್ರತಿಭಟನೆ ನಿಲ್ಲಿಸದೆ, ರಾಷ್ಟ್ರಮಟ್ಟದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗುವ ಪ್ರಯತ್ನಕ್ಕೆ ಈ ರೈತರು ಕೈಹಾಕಿದ್ದಾರೆ. ಇದು ನೈಜ ರೈತ ಹೋರಾಟವೋ ಅಥವಾ ಮೋದಿ ವಿರೋಧಿ ಆಂದೋಲನವೋ ತಿಳಿಯುತ್ತಿಲ್ಲ.
ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿರುವ ಈ ರೈತ ಹೋರಾಟಗಾರರಿಗೆ ಒಂದು ವಿಷಯ ಮರೆತಂತಿದೆ. 2024-25ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಿಗೆ ಸುಮಾರು 1.27 ಲಕ್ಷ ಕೋಟಿ ರೂ.ಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಕಳೆದ ದಶಕದಲ್ಲಿ ರೈತರಿಗೆ ಹತ್ತಾರು ಯೋಜನೆಗಳ ಮೂಲಕ ಲಕ್ಷಾಂತರ ಕೋಟಿ ರೂ. ಸಹಾಯಧನ ವಿತರಿಸಿ ರೈತರ ಬದುಕನ್ನು ಹಸನು ಮಾಡುವಂಥ ಪ್ರಾಮಾಣಿಕ ಪ್ರಯತ್ನಕ್ಕೂ ಕೇಂದ್ರ ಸರ್ಕಾರ ಅಡಿಯಿಟ್ಟಿದೆ.
2014ರಿಂದ ಮೋದಿ ಸರ್ಕಾರ ರೈತರ ಸಬಲೀಕರಣ ಉದ್ದೇಶದಿಂದ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ಪ್ರಾರಂಭಿಸಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 6 ಸಾವಿರ ರೂ. ನೀಡಲಾಗುತ್ತಿದೆ. ಪಿಎಂ ಕಿಸಾನ್ ಯೋಜನೆಯಡಿ 11.80 ಕೋಟಿಗೂ ಹೆಚ್ಚಿನ ರೈತ ಕುಟುಂಬಗಳು ರೂ. 2.80 ಲಕ್ಷ ಕೋಟಿಗೂ ಅಧಿಕ ಹಣ ಪಡೆದಿವೆ. ಮಳೆಯಾಧಾರಿತ ಬೆಳೆ ಬೆಳೆಯುವ ರೈತರನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ವಿಮಾ ಯೋಜನೆ ಘೊಷಿಸಿತ್ತು. ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸಿ ಬೆಳೆ ಹಾನಿಯಾದರೆ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ‘ಪ್ರಧಾನಮಂತ್ರಿ ಫಸಲ್ ಬಿಮಾ’ ಯೋಜನೆಯಲ್ಲಿ ಪರಿಹಾರ ನೀಡಲಾಗುತ್ತಿದೆ. ಸದ್ಯ ವಾರ್ಷಿಕ 10 ಲಕ್ಷ ಕೋಟಿ ರೂ.ಗಳಲ್ಲಿ 23 ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲಾಗುತ್ತಿದೆ. ರೈತರಿಂದ 2022-23ರ ಅವಧಿಯಲ್ಲಿ ಸುಮಾರು 1062 ಲಕ್ಷ ಮೆಟ್ರಿಕ್ ಟನ್ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸಲಾಗಿದೆ. ಬೆಂಬಲ ಬೆಲೆಯಾಗಿ ರೈತರಿಗೆ ನೀಡಿದ ಹಣದ ಮೊತ್ತ ಸುಮಾರು 2.28 ಲಕ್ಷ ಕೋಟಿ ರೂ.. ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವ ಭರವಸೆಯನ್ನು ಕಾಂಗ್ರೆಸ್, ಲೋಕಸಭಾ ಚುನಾವಣೆ ದೃಷ್ಟಿಯಿಂದ ನೀಡಿದೆ. ಆದರೆ, ಇದೇ ಕಾಂಗ್ರೆಸ್ ತನ್ನ ಹಿಂದಿನ ಆಡಳಿತಾವಧಿಯಲ್ಲಿ ರೈತರ ಈ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. 2014-15ರಲ್ಲಿ ಬೆಂಬಲ ಬೆಲೆಯಡಿ ಕೇವಲ 761 ಲಕ್ಷ ಮೆಟ್ರಿಕ್ ಟನ್ ಧಾನ್ಯವನ್ನು ಖರೀದಿಸಿತ್ತು. ಅಂದರೆ ಬೆಂಬಲ ಬೆಲೆಯಾಗಿ ರೈತರಿಗೆ ಕಾಂಗ್ರೆಸ್ ನೀಡಿದ ಮೊತ್ತ ಸುಮಾರು 1.06 ಲಕ್ಷ ಕೋಟಿ ಮಾತ್ರ.
ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಅನೇಕ ಯೋಜನೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ರೈತರಿಗೆ ತಲುಪಿಸಿದೆ. ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಒಟ್ಟು ವೆಚ್ಚದ ಆಧಾರದಲ್ಲಿ ಶೇಕಡ 50ರಷ್ಟು ಲಾಭಾಂಶದ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಕೇಂದ್ರ ಬಜೆಟ್ ಗಾತ್ರವೇ 47 ಲಕ್ಷ ಕೋಟಿ ರೂ. ಇದೆ. ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಸಿದರೆ ಸುಮಾರು 40 ಲಕ್ಷ ಕೋಟಿ ರೂ. ವೆಚ್ಚವಾಗುತ್ತದೆ. ಹಾಗಾಗಿ ಕೇಂದ್ರ ಬಜೆಟ್​ನ ಸಂಪೂರ್ಣ ಮೊತ್ತವನ್ನು ಬೆಂಬಲ ಬೆಲೆಗೆ ಖರ್ಚು ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕಿದೆ.
ರೈತರ ಮತ್ತೊಂದು ಪ್ರಮುಖ ಬೇಡಿಕೆ- ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ. ಈಗಾಗಲೇ 23 ಬೆಳೆಗಳ ಖರೀದಿಗೆ ಬೆಂಬಲ ಬೆಲೆ ಘೊಷಿಸಿದ್ದು, ವರ್ಷಕ್ಕೆ ಸುಮಾರು 10 ಲಕ್ಷ ಕೋಟಿ ರೂ. ಅಗತ್ಯವಿದೆ. ಇನ್ನು, ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೆ ವಿಸ್ತರಿಸಿ ಸರ್ಕಾರದ ಸಹಾಯಧನದಿಂದ ಕೃಷಿ ಕೆಲಸ ಮಾಡುವಂತೆ ಅನುಕೂಲ ಕಲ್ಪಿಸಿರುವುದು ಮೋದಿ ಸರ್ಕಾರ. ಈಗಾಗಲೇ 2023-24ರಲ್ಲಿ ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ 73 ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.
2018ಕ್ಕೂ ಮೊದಲು ದೇಶದಲ್ಲಿ ರಸಗೊಬ್ಬರ ಖರೀದಿಯೇ ಬಹುದೊಡ್ಡ ಸಮಸ್ಯೆಯಾಗಿತ್ತು. ಮುಂಗಾರು ಮಳೆ ಶುರುವಾಗುತ್ತಿದ್ದಂತೆ, ರೈತ ಭೂಮಿ ಹದ ಮಾಡಿಕೊಳ್ಳುವ ಬದಲು, ರಸಗೊಬ್ಬರಕ್ಕಾಗಿ ಕಿ.ಮೀ.ಗಟ್ಟಲೇ ಸರತಿಯಲ್ಲಿ ನಿಲ್ಲಬೇಕಿತ್ತು. ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ, ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಹಾಗೂ ಅದಕ್ಕೆ ಬೇವಿನ ಎಣ್ಣೆ ಲೇಪಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಮೂರು ಪಟ್ಟು ಹೆಚ್ಚು ದರದಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಯೂರಿಯಾವನ್ನು ನಿಲ್ಲಿಸಿ, ಪ್ರತಿಯೊಬ್ಬ ರೈತನಿಗೂ ರಸಗೊಬ್ಬರ ಸಿಗುವಂತೆ ಮಾಡಿದ್ದು ಮೋದಿ. ಅಂಕಿ ಅಂಶಗಳ ಪ್ರಕಾರ ರೈತರಿಗೆ ರಸಗೊಬ್ಬರ ಕೈಗೆಟಕುವಂತೆ ಮಾಡಲು ಕೇಂದ್ರ ಸರ್ಕಾರ ವಾರ್ಷಿಕ 10 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದೆ. ವಿವಿಧ ದೇಶಗಳಲ್ಲಿ ಸಾವಿರಾರು ರೂ. ಇರುವ ಯೂರಿಯಾ ನಮ್ಮ ದೇಶದಲ್ಲಿ ಮಾತ್ರ ಅಗ್ಗವಾಗಿರುವುದಕ್ಕೆ ಕಾರಣ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿ. ಮೂಲಗಳ ಪ್ರಕಾರ, ಯೂರಿಯಾ ಬೆಲೆ ಅಮೆರಿಕದಲ್ಲಿ 3 ಸಾವಿರ ರೂ. ಇದ್ದರೆ, ಚೀನಾದಲ್ಲಿ 2100 ರೂ., ಪಾಕಿಸ್ತಾನದಲ್ಲಿ 800 ರೂ. ಇದೆ. ಆದರೆ ಭಾರತದಲ್ಲಿ ಅದೇ ಗುಣಮಟ್ಟದ ರಸಗೊಬ್ಬರ ಕೇವಲ 260-270 ರೂ. ಇದೆ. ಒಂದು ಬ್ಯಾಗ್ ಯೂರಿಯಾ ಮೇಲೆ ಮೋದಿ ಸರ್ಕಾರ ಸುಮಾರು 3000 ಸಬ್ಸಿಡಿ ಖರ್ಚು ಮಾಡುತ್ತಿದೆ. 2014ರವರೆಗೂ ಇದ್ದ ದೇಶದ ರೈತರ ಸಾಲ ಸುಮಾರು 8.4 ಲಕ್ಷ ಕೋಟಿ ರೂಪಾಯಿ. ಆದರೆ 2023ರಲ್ಲಿರುವ ರೈತರ ಒಟ್ಟು ಸಾಲ ಸುಮಾರು ರೂ. 22.1 ಲಕ್ಷ ಕೋಟಿ. ಇಷ್ಟು ಬೃಹತ್ ಸಾಲವನ್ನು ಮನ್ನಾ ಮಾಡಲು ಯಾವುದೇ ಸರ್ಕಾರಕ್ಕೆ ಸಾಧ್ಯವೇ?
ಜಾಗತೀಕರಣದಿಂದಾಗಿ ಇಡೀ ವಿಶ್ವವೇ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹೊಂದಿರುವ ಈ ಕಾಲಘಟ್ಟದಲ್ಲಿ ‘ವಿಶ್ವಸಂಸ್ಥೆ ಜತೆ ಮುಕ್ತ ವ್ಯಾಪಾರ-ವ್ಯವಹಾರ ಸಂಬಂಧಗಳನ್ನು ನಿಲ್ಲಿಸಿ’ ಎಂಬ ರೈತರ ಬೇಡಿಕೆಗೆ ಏನನ್ನೋಣ? ಈ ಬಗ್ಗೆ ಪ್ರಜ್ಞಾವಂತರೆಲ್ಲರೂ ಆಲೋಚಿಸಬೇಕಿದೆ. ಏಕೆಂದರೆ ಭಾರತ ವರ್ಷಕ್ಕೆ ಸುಮಾರು 4.15 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಆಹಾರ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ಈ ಬೇಡಿಕೆ ರೈತ ವರ್ಗಕ್ಕೆ ಮಾರಕವಲ್ಲವೇ? ಅಲ್ಲದೆ, ರೈತರಿಗೆ ತಾನು ಬೆಳೆದ ಬೆಳೆಯನ್ನು ತನ್ನಿಷ್ಟದ ಬೆಲೆಗೆ ಮಾರಾಟ ಮಾಡುವ ಸುವರ್ಣಾವಕಾಶವನ್ನು ಕಲ್ಪಿಸಿದ್ದು ಮೋದಿ ನೇತೃತ್ವದ ಸರ್ಕಾರ. ಪಟ್ಟಭದ್ರ ಹಿತಾಸಕ್ತಿಗಳ ಸುಳ್ಳು ಮಾಹಿತಿಯನ್ನೇ ನಂಬಿಕೊಂಡು ಕೇಂದ್ರದ ವಿರುದ್ಧ ಹೋರಾಡಿ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದರು. ಈಗ ಮತ್ತಷ್ಟು ಸುಳ್ಳುಗಳನ್ನು ಸೃಷ್ಟಿಸಿ ನಿಜವಾಗಿಯೂ ಭೂಮಿ ಉಳುವ ರೈತರಿಗೆ ಅನ್ಯಾಯ ಮಾಡಲು ಈ ‘ರೈತರು’ ಹೊರಟಿದ್ದಾರೆ.
‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿರುವ ರೈತರ ಹಿನ್ನೆಲೆಯನ್ನು ನೋಡಿದರೆ ಸಣ್ಣ ಹಿಡುವಳಿದಾರರಿಗಿಂತ ಜಮೀನ್ದಾರರೇ ಇದಕ್ಕೆ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ ಎನಿಸುತ್ತದೆ. ಈ ರೀತಿ ಕೇಂದ್ರ ಸರ್ಕಾರವನ್ನು ವಿರೋಧಿಸಲು ಪ್ರತಿಪಕ್ಷಗಳ ಮತ್ತು ದೇಶ ವಿರೋಧಿಗಳ ಬೆಂಬಲವೇ ಕಾರಣ ಎನ್ನುವುದು ಸ್ಪಷ್ಟ. ಕೇಂದ್ರ ಸರ್ಕಾರದಿಂದ ಸಾಲು ಸಾಲು ಯೋಜನೆಗಳ ಪ್ರಯೋಜನ ಪಡೆದಿದ್ದರೂ ವಿನಾಕಾರಣ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಡೀ ಸಚಿವ ಸಂಪುಟದ ವಿರುದ್ಧ ವಿಷ ಕಾರುತ್ತಿರುವುದಕ್ಕೆ ಈ ‘ರೈತ’ರಿಗೆ ರಾಜಕೀಯ ಲಾಭವಲ್ಲದೇ ಇನ್ನೇನು ಕಾರಣವಿದೆ? ಕಳೆದೊಂದು ದಶಕದಿಂದ ಇಡೀ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಮೋದಿ ಅವರ ಕಾಯಕವನ್ನು ಇಡೀ ದೇಶದ ಅನ್ನದಾತರು ವಾಸ್ತವಿಕ ನೆಲೆಗಟ್ಟಿನಲ್ಲಿ ಮನಗಾಣಬೇಕಿದೆ. ಒಟ್ಟಾರೆ, ರೈತರ ಬದುಕನ್ನು ಹಸನು ಮಾಡುವಂಥ ಪ್ರಾಮಾಣಿಕ ಪ್ರಯತ್ನವಾಗಿ 20ಕ್ಕೂ ಹೆಚ್ಚು ವಿವಿಧ ರೀತಿಯ ಯೋಜನೆಗಳನ್ನು ಕೇಂದ್ರ ಸರ್ಕಾರ ಕೃಷಿಕರಿಗಾಗಿ ಜಾರಿಗೆ ತಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಬೇಕು ಎಂಬ ಉದ್ದೇಶದಿಂದ ಪ್ರತಿಪಕ್ಷಗಳ ಪ್ರಾಯೋಜಿತ ರೈತ ಹೋರಾಟಗಳಿಗೆ ದೇಶದ ಮತದಾರರು ಮಣೆ ಹಾಕುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತೊಮ್ಮೆ ದೇಶಕ್ಕೆ ಅಗತ್ಯವಿದೆ ಎಂಬುದನ್ನು ಜನ ಅರಿತಿದ್ದಾರೆ.
(ಲೇಖಕರು ಭಾರತೀಯ ವಿಕಾಸ ಕೇಂದ್ರದ ಅಧ್ಯಕ್ಷರು)
ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
