ಬೆಂಗಳೂರು/ ಕಲಬುರಗಿ:ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ಗಳ 545 ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಪ್ರಕರಣದಲ್ಲಿ ಶಾಮೀಲಾಗಿರುವ ಡಿವೈಎಸ್​ಪಿ, ಇನ್​ಸ್ಪೆಕ್ಟರ್​ನನ್ನು ಸಿಐಡಿ ಕೊನೆಗೂ ಬಂಧಿಸಿದೆ. ಈ ಇಬ್ಬರಿಗೂ ಕೋಳ ತೊಡಿಸುವ ಮೂಲಕ ಬಂಧಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ರಾಯಚೂರು ಜಿಲ್ಲೆ ಲಿಂಗಸೂಗುರು ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಬೆರಳಚ್ಚು ವಿಭಾಗದ ಇನ್​ಸ್ಪೆಕ್ಟರ್​ ಆನಂದ ಮೇತ್ರೆನನ್ನು ಕಲಬುರಗಿಯಲ್ಲಿ ವಿಚಾರಣೆಗಾಗಿ ಕರೆದು ಬಂಧಿಸಲಾಗಿದೆ. ಅದೇ ರೀತಿ ಮೈಸೂರು ರಸ್ತೆ ಕುಂಬಳಗೋಡು ಠಾಣೆ ಕಾನ್​ಸ್ಟೇಬಲ್​ ಸೋಮನಾಥ್​ ಮತ್ತು ಕೆಂಗೇರಿ ಹೋಬಳಿ ಚಿನ್ನಕುರ್ಚಿ ಗ್ರಾಮದ ಸಿ.ಜಿ. ರಾಘವೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಹೈಗ್ರೌಂಡ್ಸ್​ ಠಾಣೆಯಲ್ಲಿ ದಾಖಲಾಗಿದ್ದ ಎಫ್​ಐಆರ್​ಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ 15 ಆರೋಪಿಗಳನ್ನು ಬಂಧಿಸಲಾಗಿದೆ. ಕಲಬುರಗಿಯಲ್ಲಿ 31 ಆರೋಪಿಗಳು ಸೇರಿ ರಾಜ್ಯದಲ್ಲಿ ಒಟ್ಟಾರೆ 46 ಮಂದಿಯನ್ನು ಸಿಐಡಿ ಬಲೆಗೆ ಬಿದ್ದಿದ್ದಾರೆ. ಇದರಲ್ಲಿ 9 ಮಂದಿ ಪೊಲೀಸರಿದ್ದಾರೆ.
ಮೈಸೂರು ರಸ್ತೆ ಕೆಂಗೇರಿ ಹೋಬಳಿ ಕುಂಬಳಗೋಡು ಸಮೀಪದ ಚಿನ್ನಕುರ್ಚಿ ಗ್ರಾಮದ ಸಿ.ಎಂ. ನಾಗರಾಜ್​, ಈತನ ಸಹೋದರ ಸಿ.ಎಂ. ನಾರಾಯಣ ಹಾಗೂ ಸಿ.ಜಿ. ರಾಘವೇಂದ್ರ ವಿರುದ್ಧ ಒಎಂಆರ್​ ಶೀಟ್​ ತಿದ್ದಿದ ಆರೋಪದ ಮೇಲೆ ಹೈಗ್ರೌಂಡ್ಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ನಾಗರಾಜನನ್ನು ಬಂಧಿಸಲಾಗಿತ್ತು. ಗುರುವಾರ ರಾಘವೇಂದ್ರನನ್ನು ಬಂಧಿಸಿದ್ದು, ನಾರಾಯಣ ಪತ್ತೆಗೆ ಬಲೆಬೀಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಸರ್ಕಾರಿ ಕೆಲಸಕ್ಕೆ ಸಿದ್ಧತೆ ನಡೆಸಿದ್ದ ಸಹೋದರರು ಎಸ್​ಐ ನೇಮಕಾತಿ ವಿಚಾರ ತಿಳಿದು ಬೆಂಗಳೂರು ಮೂಲದ ಪ್ರಭಾವಿ ವ್ಯಕ್ತಿ ಮೂಲಕ ಎಸ್​ಐ ಹುದ್ದೆಯ ಡೀಲ್​ ಕುದುರಿಸಿದ್ದರು. ಊರಿನಲ್ಲಿ ಕುಟುಂಬಕ್ಕಿದ್ದ 1 ಎಕರೆ ಜಮೀನನ್ನು ಮಾರಾಟ ಮಾಡಿ ಹಣ ಕೊಟ್ಟಿದ್ದರು. ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಮೂವರು ಲಿಖಿತ ಪರೀಕ್ಷೆ ಬರೆದಿದ್ದರು. ಮೂವರೂ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಸಾಮಾನ್ಯ ವರ್ಗದಲ್ಲಿ ಸಿ.ಎಂ. ನಾರಾಯಣ ರಾಜ್ಯಕ್ಕೆ 9ನೇ ರ್ಯಾಂಕ್​ (157.5 ಅಂಕಗಳು) , ಈತನ ಅಣ್ಣ ನಾಗರಾಜ್​ 11ನೇ ರ್ಯಾಂಕ್​ (ಅಂಕಗಳು 157) ಪಡೆದಿದ್ದರೆ, ರಾಘವೇಂದ್ರ 144 ಅಂಕಗಳೊಂದಿಗೆ 62ನೇ ರ್ಯಾಂಕ್​ ಪಡೆದಿದ್ದ. ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕಗಳಿಸಿ 2ನೇ ಪತ್ರಿಕೆಯಲ್ಲಿ ಹೆಚ್ಚಿನ ಅಂಕ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ನಾರಾಯಣನಿಗೆ ಮೊದಲ ಪತ್ರಿಕೆಯಲ್ಲಿ 24, 2ನೇ ಪತ್ರಿಕೆಯಲ್ಲಿ 133.5 ಅಂಕಗಳು, ನಾಗರಾಜ್​ಗೆ ಮೊದಲ ಪತ್ರಿಕೆಯಲ್ಲಿ 31 ಹಾಗೂ 2ನೇ ಪತ್ರಿಕೆಯಲ್ಲಿ 126 ಅಂಕಗಳು ಹಾಗೂ ರಾವೇಂದ್ರನಿಗೆ ಮೊದಲ ಪತ್ರಿಕೆಯಲ್ಲಿ 18 ಹಾಗೂ 2ನೇ ಪತ್ರಿಕೆಯಲ್ಲಿ 126 ಅಂಕಗಳು ಬಂದಿದ್ದವು. ಒಎಂಆರ್​ ಶೀಟ್​ ಮತ್ತು ಕಾರ್ಬನ್​ ಶೀಟ್​ ನಡುವೆ ವ್ಯತ್ಯಾಸ ಇದ್ದು, ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇವಾನಿರತ ಜೈಲಿಗೆಕುಂಬಳಗೋಡು ಠಾಣೆ ಕಾನ್​ಸ್ಟೇಬಲ್​ ಸೋಮನಾಥನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸೇವಾನಿರತ (ಇನ್​ ಸರ್ವಿಸ್​) ವಿಭಾಗದಲ್ಲಿ ಆಯ್ಕೆಯಾಗಿದ್ದ ಸೋಮನಾಥ ಸಹ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ 3ನೇ ಆರೋಪಿಯಾಗಿದ್ದ. ಸೇವೆಯಿಂದ ಜೈಲಿಗೆ ಹೋಗಿದ್ದಾನೆ.
ಎಸ್​ಐ ಸಮವಸ್ತ್ರ ಧರಿಸಿದವನಿಗೆ ಶಾಕ್​ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಬಂದ ಕೂಡಲೇ ಎಸ್​ಐ ಸಮವಸ್ತ್ರ ಧರಿಸಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ವಿವೇಕನಗರ ಠಾಣೆ ಕಾನ್​ಸ್ಟೇಬಲ್​ ಬಸನಗೌಡ ಕರೇಗೌಡರ್​ನನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಎಸ್​ಐ ಹುದ್ದೆಗೆ ಆಯ್ಕೆ ಆಗುವ ಮೊದಲೇ ಬಸನಗೌಡ, ಎಸ್​ಐ ಸಮವಸ್ತ್ರ ಧರಿಸಿ ಹುಟ್ಟೂರಿನಲ್ಲಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ. ಜತೆಗೆ ಫೋಟೋಶೂಟ್​ ಮಾಡಿಸಿ ಊರತುಂಬ ಫ್ಲೆಕ್ಸ್​ಗಳನ್ನು ಹಾಕಿಸಿದ್ದ. ಈ ವಿಡಿಯೋ, ಪೋಟೋ ವೈರಲ್​ ಆಗಿತ್ತು. ಈ ಬಗ್ಗೆ ವರದಿ ಪಡೆದು ಕೇಂದ್ರ ವಿಭಾಗ ಡಿಸಿಪಿ ಎಂ.ಎನ್​. ಅನುಚೇತ್​, ಪೊಲೀಸ್​ ನಿಯಮ ಉಲ್ಲಂನೆ ಆರೋಪದ ಮೇಲೆ ಅಮಾನತು ಮಾಡಿ ಆದೇಶಿಸಿದ್ದಾರೆ.
ತನಿಖೆ ಚುರುಕು ದಿವ್ಯಾ ಪಶ್ಚಾತ್ತಾಪಸಿಐಡಿ ತಂಡ ಅಕ್ರಮದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಡೀಲ್​ ಗ್ಯಾಂಗ್​ನವರನ್ನು ತೀವ್ರ ವಿಚಾರಣೆ ನಡೆಸಿ ಸರಣಿ ಪ್ರಶ್ನೆಗಳನ್ನು ಕೇಳಿ ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ. ದಿವ್ಯಾ ಹಾಗರಗಿ ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ನೀಡಿದ್ದು, ಮುಖ್ಯ ಗುರು ಕಾಶೀನಾಥ ಮಾತು ಕೇಳಿ ಅಕ್ರಮಕ್ಕೆ ಸೈ ಎಂದಿರುವೆ. ನಾನು ಮಾಡಿದ್ದು ತಪ್ಪು ಎಂದು ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ಗೊತ್ತಾಗಿದೆ. ಡೀಲ್​ನಲ್ಲಿ ಯಾರ್ಯಾರಿದ್ದಾರೆ? ದಿವ್ಯಾ ಯಾರ್ಯಾರ ಹೆಸರು ಬಾಯ್ಬಿಡುತ್ತಾರೋ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಇಲ್ಲಿನ ಎಂ.ಎಸ್​. ಇರಾಣಿ ಕಾಲೇಜಿನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಕಸ್ಟಡಿಯಲ್ಲಿರುವ ಚಂದ್ರಕಾಂತ ಕುಲಕರ್ಣಿ, ಪಿಎಸ್​ಐ ಅಭ್ಯರ್ಥಿ ರಾಜಾಪುರದ ಪ್ರಭು ಹಾಗೂ ಆತನ ತಂದೆ ಶರಣಪ್ಪ ಸೇರಿ ಕಿಂಗ್​ಪಿನ್​ ದಿವ್ಯಾ ಹಾಗರಗಿ, ಜ್ಯೋತಿ ಪಾಟೀಲ್​ ಇತರರನ್ನು ಸಹ ಗುರುವಾರ ಮತ್ತೊಮ್ಮೆ ವೈದ್ಯಕಿಯ ಪರೀಕ್ಷೆಗೆ ಒಳಪಡಿಸಲಾಯಿತು.
ಪ್ರಶ್ನೆಪತ್ರಿಕೆ ಲೀಕ್​ ಮಾಡಿದ್ದ ಮೇತ್ರೆ?:ಸಿಐಡಿ ಬಂಧಿಸಿರುವ ಫಿಂಗರ್​ ಪ್ರಿಂಟ್​ ವಿಭಾಗದ ಇನ್​ಸ್ಪೆಕ್ಟರ್​ ಆನಂದ ಮೇತ್ರೆ ವಿರುದ್ಧ ಪ್ರಶ್ನೆಪತ್ರಿಕೆಯನ್ನು ಜ್ಞಾನಜ್ಯೋತಿ ಶಾಲೆ ಕೇಂದ್ರದಿಂದ ಹೊರತಂದು ಲೀಕ್​ ಮಾಡಿದ ಆರೋಪ ಕೇಳಿ ಬಂದಿದೆ. ಪರೀಕ್ಷೆಗೆ ಗೈರಾಗುವ ಅಭ್ಯರ್ಥಿಗಳ ಪ್ರಶ್ನೆಪತ್ರಿಕೆಗಳು ಕೇಂದ್ರದಲ್ಲಿ ಇರುತ್ತವೆ. ಶಾಲೆ ಮುಖ್ಯಗುರು ಕಾಶೀನಾಥ ಜತೆಗೂಡಿ ಗೈರು ಆದ ಅಭ್ಯರ್ಥಿಯೊಬ್ಬರ ಪ್ರಶ್ನೆಪತ್ರಿಕೆ ಬಯಲಿಗೆ ತಂದು ಉತ್ತರಗಳನ್ನು ಸಿದ್ಧಪಡಿಸುವಂತೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಶ್ನೆಪತ್ರಿಕೆ ಹೊರಗೆ ಕಳುಹಿಸಿ ಉತ್ತರ ಬರುವಂತೆ ಮಾಡಿದ್ದು, ಅದು ಅಲ್ಲಿದ್ದ ಪೊಲೀಸರ ಗಮನಕ್ಕೂ ಬಾರದಂತೆ ನೋಡಿಕೊಂಡಿದ್ದರು ಎನ್ನಲಾಗುತ್ತಿದೆ. ಮೇತ್ರೆ ಮೂಲತ@ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಪಡ್ನೂರ ಗ್ರಾಮದವರು. 2009ರಲ್ಲಿ ಫಿಂಗರ್​ಪ್ರಿಂಟ್​ ಪಿಎಸ್​ಐ ಆಗಿ ನೇಮಕಗೊಂಡಿದ್ದರು.
ಅಶ್ವತ್ಥನಾರಾಯಣ ಬೆಂಬಲಕ್ಕೆ ಸಿಎಂ, ಸಚಿವರುಬೆಂಗಳೂರು: ಪಿಎಸ್​ಐ ನೇಮಕದ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದಲ್ಲಿ ಉನ್ನತ ಶಿಣ ಸಚಿವ ಅಶ್ವತ್ಥನಾರಾಯಣ ಹೆಸರು ತಳುಕುಹಾಕಿ ಕಾಂಗ್ರೆಸ್​ ನಡೆಸಿರುವ ಟೀಕೆ ಟಿಪ್ಪಣಿಗೆ ಬೊಮ್ಮಾಯಿ ಸಂಪುಟದ ಸಹೋದ್ಯೋಗಿಗಳು ಸಾಮೂಹಿಕವಾಗಿ ತಿರುಗೇಟು ನೀಡಿದ್ದು, ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್​ನದ್ದು ಯಾವಾಗಲೂ ಹಿಟ್​ ಅಂಡ್​ ರನ್​ ಮನಸ್ಥಿತಿ, ಅಶ್ವತ್ಥನಾರಾಯಣ್​ ವಿಚಾರದಲ್ಲಿಯೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದಾರೆ. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ, ಸಿಐಡಿಯ ತನಿಖೆ ಹಾದಿ ತಪ್ಪಿಸಲು ಕಾಂಗ್ರೆಸ್​ ನಾಯಕರು ಷಡ್ಯಂತ್ರ ಹೆಣೆದಿದ್ದಾರೆ. ತನಿಖೆ ಮುಂದುವರಿದರೆ ಅವರ ಮುಖ ಬಯಲಾಗಲಿದೆ. ಈ ಹೆದರಿಕೆಯಲ್ಲಿ ತಲೆಬುಡ ಇಲ್ಲದೇ ಅಶ್ವತ್ಥನಾರಾಯಣ್​ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ. ಪಿಎಸ್​ಐ ನೇಮಕದಲ್ಲಿ ಅಶ್ವತ್ಥನಾರಾಯಣ ಸುಳ್ಳು ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಸಚಿವ ಮುನಿರತ್ನ ಹೇಳಿದರೆ, ದಾಖಲೆ ಇಲ್ಲದ ಆರೋಪಕ್ಕೆ ರಾಜೀನಾಮೆ ಏಕೆ ಕೊಡಬೇಕು ಎಂದು ಕೋಟ ಹಾಗೂ ಸೋಮಶೇಖರ್​ ಪ್ರಶ್ನಿಸಿದರು. ಕಂದಾಯ ಸಚಿವ ಆರ್​.ಅಶೋಕ್​ ಮಾತನಾಡಿ, ಚುನಾವಣೆ ವೇಳೆ ಈ ರೀತಿಯ ಗಿಮಿಕ್​ ಮಾಡುವುದು ಕಾಂಗ್ರೆಸ್​ಗೆ ರಕ್ತಗತವಾಗಿದೆ. ಪಿಎಸ್​ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು. ಕಾಂಗ್ರೆಸ್​ ಗೃಹಸಚಿವರನ್ನು ಅಭಿನಂದಿಸಬೇಕಿತ್ತು ಎಂದರು. ಯಾವುದೇ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡಿದ್ದಾರೆ. ಹಿಂದೆ ಬಿಟ್​ ಕಾಯಿನ್​ನಲ್ಲೂ ಹೀಗೆ ಆರೋಪ ಮಾಡಿ ಝೀರೋ ಆಗಿದ್ರು. ಕಾಂಗ್ರೆಸ್​ ಭಾಷಣ ಬಿಟ್ಟು ದಾಖಲೆ ಇದ್ದರೆ ಕೊಡಲಿ ಎಂದು ಹೇಳಿದರು.
| ಎಚ್​.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ತುಮಕೂರಿಗೂ ತಟ್ಟಿದ ಅಕ್ರಮದ ನಂಟುತುಮಕೂರು/ಹುಲಿಯೂರುದುರ್ಗ: ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಪಿಎಸ್​ಐ ನೇಮಕಾತಿ ಅಕ್ರಮದ ನಂಟು ತುಮಕೂರು ಜಿಲ್ಲೆಗೂ ತಟ್ಟಿದೆ. ಪರೀಕ್ಷೆಯಲ್ಲಿ 9ನೇ ರ್ಯಾಂಕ್​ ಪಡೆದಿದ್ದ ಸಿ.ಎಸ್​.ನಾಗೇಶ್​ಗೌಡ ಹೆಸರು ಕೂಡ ಚರ್ಚೆಯಾಗುತ್ತಿದೆ. ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ ಮಾಡಿರುವ ಉನ್ನತ ಶಿಣ ಸಚಿವ ಡಾ.ಅಶ್ವತ್ಥನಾರಾಯಣ ಸಂಬಂಧಿ ನಾಗೇಶ್​ಗೌಡ ತುಮಕೂರು ಜಿಲ್ಲೆಯ ಕುಣಿಗಲ್​ ತಾಲೂಕಿನ ಚಿಕ್ಕಮಾವತ್ತೂರು ನಿವಾಸಿ. ನಾಗೇಶ್​ಗೌಡ 2020ರಲ್ಲಿ ಬೆಂಗಳೂರಿನಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಆಗಿ ಇಲಾಖೆ ಸೇರಿದ್ದು, ಪ್ರಸ್ತುತ ನೆಲಮಂಗಲ ಠಾಣೆಯಲ್ಲಿ ಕಾನ್​ಸ್ಟೇಬಲ್​ ಆಗಿದ್ದಾರೆ. ಊರಿನ ಗೆಳೆಯರಿಗೆ ನಾನು ಶ್ರೀದಲ್ಲಿ ಪಿಎಸ್​ಐ ಆಗುತ್ತೇನೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಅಕ್ರಮದ ಅರೋಪ ಕೇಳಿಬಂದ ನಂತರ ನಾಗೇಶ್​ಗೌಡ ಮೊಬೈಲ್​ ಫೋನ್​​ ಸ್ಥಗಿತಗೊಂಡಿದ್ದು, ತನಿಖೆಗಾಗಿ ಪೊಲೀಸರು ಕೂಡ ತಪಾಸಣೆ ನಡೆಸುತ್ತಿದ್ದಾರೆ.
| ಸೋಬ್ಬಗಯ್ಯ ನಾಗೇಶ್​ಗೌಡ ತಂದೆ
ಸಿಒಡಿ ವಶಕ್ಕೆ ಕುಂಬಳಗೂಡು ಠಾಣೆ ಪಿಸಿರಾಮನಗರ: ಪಿಎಸ್​ಐ ಅಕ್ರಮ ನೇಮಕಾತಿ ಹಗರಣದ ಕಬಂಧ ಬಾಹು ರಾಮನಗರ ಜಿಲ್ಲೆಗೂ ವ್ಯಾಪಿಸಿದ್ದು, ಬಿಜಾಪುರ ಮೂಲದ ಕಾನ್​ಸ್ಟೆಬಲ್​ ಒಬ್ಬರನ್ನು ಸಿಒಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮನಗರ ಜಿಲ್ಲಾ ಪೊಲೀಸ್​ ವ್ಯಾಪ್ತಿಯ ಕುಂಬಳಗೂಡು ಠಾಣೆಯಲ್ಲಿ 2 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಬಿಜಾಪುರ ಜಿಲ್ಲೆಯ ಸೋಮನಾಥ್​ ಹಿರೇಮಠ್​ ಸಿಒಡಿ ವಶಕ್ಕೆ ಒಳಪಟ್ಟ ಕಾನ್​ಸ್ಟೆಬಲ್​. ಪಿಎಸ್​ಐ ಪರೀಕ್ಷೆಯಲ್ಲಿ ಆಯ್ಕೆ ಸಹ ಆಗಿದ್ದರು. ಹೀಗಾಗಿ ಇವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ಮೇರೆಗೆ ಸಿಒಡಿ ಪೊಲೀಸರು ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ಬುಧವಾರ ಕಚೇರಿಯಲ್ಲಿ ವಿಚಾರಣೆ ನಡೆಸಿದ ಎಸ್​ಪಿ ಸಂತೋಷ್​ ಬಾಬು, ಸಿಒಡಿ ಪೊಲೀಸರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ವಿಚಾರಣೆಗೆಂದು ಪೇದೆಯನ್ನು ಕರೆಸಿಕೊಂಡು, ಆತನನ್ನು ರಾತ್ರಿಯೇ ಬಂಧಿಸಿದ್ದಾರೆ. ಪೇದೆಯಾಗುವ ಮುನ್ನ ಸೋಮನಾಥ್​ ಪಾಧ್ಯಾಪಕನಾಗಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಆದರೆ, ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪೇದೆ ಸೋಮನಾಥ್​ ಹಿರೇಮಠ್​ ರಾಮನಗರ ಎಸ್​ಪಿಗೆ ಹೇಳಿಕೆ ನೀಡಿದ್ದಾನೆ.
ಎಫ್​ಐಆರ್​ ರದ್ದುಕೋರಿ ಅರ್ಜಿಬೆಂಗಳೂರು: ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್​ಐಆರ್​ ರದ್ದುಪಡಿಸುವಂತೆ ಕೋರಿ ಮೊದಲ ಆರೋಪಿ ಎಸ್​. ಜಾಗೃತ್​ ಹಾಗೂ 17ನೇ ಆರೋಪಿ ರಚನಾ ಹನುಮಂತ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ರಚನಾ ಹಾಗೂ ಜಾಗೃತ್​ ಸಲ್ಲಿಸಿರುವ ಪ್ರತ್ಯೇಕ ತಕರಾರು ಅರ್ಜಿಗಳು ನ್ಯಾಯಮೂರ್ತಿ ಎಸ್​. ವಿಶ್ವಜಿತ್​ ಶೆಟ್ಟಿ ಅವರಿದ್ದ ರಜಾಕಾಲದ ಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು. ಅರ್ಜಿಯನ್ನು ಮೇ 19ರಂದು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ಪೀಠ, ವಿಚಾರಣೆ ಮುಂದೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ನಡೆದಿರುವ ಸಿಐಡಿ ತನಿಖೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ತಮ್ಮ ವಿರುದ್ಧ ಯಾವುದೇ ಆರೋಪ ಮತ್ತು ಸಾಕ್ಷಾಧಾರಗಳು ಕಂಡುಬಂದಿಲ್ಲ. ಹೀಗಿದ್ದರೂ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸುವ ಉದ್ದೇಶದಿಂದ ಎಫ್​ಐಆರ್​ ದಾಖಲಿಸಲಾಗಿದೆ. ಸಿಐಡಿ ಪೊಲೀಸ್​ ಅಧಿಕಾರಿ ನರಸಿಂಹ ಮೂರ್ತಿ ಪ್ರಕರಣದ ದೂರುದಾರರಾಗಿದ್ದು, ಅವರೇ ತನಿಖಾ ತಂಡದಲ್ಲಿ ಸಹಾಯಕ ಅಧಿಕಾರಿಯಾಗಿದ್ದಾರೆ. ನಿಯಮಗಳ ಪ್ರಕಾರ ದೂರು ಸಲ್ಲಿಸಿದ ಅಧಿಕಾರಿಯೇ ತನಿಖೆ ನಡೆಸುವಂತಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಪರೀಕ್ಷೆ ನಡೆದು ಬಹುತೇಕ 1 ವರ್ಷ ಕಳೆದಿದೆ. ಆದರೆ, ಇದೀಗ ಫಲಿತಾಂಶಪ್ರಕಟಗೊಂಡ ನಂತರ ಎಫ್​ಐಆರ್​ ದಾಖಲಿಸಲಾಗಿದೆ. ಪ್ರಕರಣದ ಇತರ ಆರೋಪಿಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 4 =
Remember me
