ಬೆಂಗಳೂರು:ಕರೊನಾವೈರಸ್ ನಿಯಂತ್ರಿಸಲು ಸರ್ಕಾರಗಳು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಸೇರಿ ಅನೇಕರು ಸಾಂಸ್ಥಿಕವಾಗಿ ಹೋರಾಟ ನಡೆಸುತ್ತಿದ್ದರೆ, ಇತ್ತ ದೇಶದ ನಾಗರಿಕರೂ ವೈಯಕ್ತಿಕ ನೆಲೆಗಟ್ಟಿನಲ್ಲಿ ಯುದ್ಧದ ಸೇನಾನಿಗಳಾಗುವ ಪ್ರಯತ್ನ ನಡೆಸಿದ್ದಾರೆ. ಕರೊನಾ ಸೋಂಕು ಕಡಿಮೆ ಮಾಡಲು, ವೈದ್ಯಕೀಯ ಸಿಬ್ಬಂದಿಗೆ ನೆರವಾಗಲು ತಮ್ಮ ಕ್ಷೇತ್ರದ ಪರಿಣಿತಿಯನ್ನು ಬಳಸಿಕೊಂಡು ಅನೇಕ ಆವಿಷ್ಕಾರಗಳನ್ನು ಕೈಗೊಂಡಿದ್ದಾರೆ. ಸಂಶೋಧನೆಗಳು ಸರ್ಕಾರದಿಂದ ಮಾನ್ಯತೆ ಪಡೆಯಬೇಕೆಂಬುದು ಸತ್ಯವಾದರೂ, ಕರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ಪಾಲಿರಲೆಂಬ ಹಂಬಲ ಮುಖ್ಯ.
ತಾಮ್ರ-ಬೆಳ್ಳಿ ಮಾಸ್ಕ್:ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಬಳಸಬೇಕಿದ್ದರೂ, ಮಾಸ್ಕ್​ಗಳ ವಿಲೇವಾರಿ, ಅವುಗಳ ಸಾಮರ್ಥ್ಯ ಪ್ರಶ್ನಾರ್ಥಕ. ಬೆಂಗಳೂರಿನ ನಾಗರಭಾವಿ ನಿವಾಸಿಯಾಗಿರುವ ಮೆಕಾನಿಕಲ್ ಇಂಜಿನಿಯರ್ ಕೆ.ವಿಶ್ವನಾಥ್, ತಾಮ್ರ ಹಾಗೂ ಬೆಳ್ಳಿ ಆಧಾರಿತ ಮಾಸ್ಕ್ ತಯಾರಿಸಿದ್ದಾರೆ. ಮಾಸ್ಕ್ ಮೇಲೆ ತಾಮ್ರ, ಒಳಗೆ ಬೆಳ್ಳಿ ಅಂಶ ಹಾಗೂ ಕೆಳಗಡೆ ಬಟ್ಟೆ ಫಿಲ್ಟರ್ ಇದೆ. ಬಟ್ಟೆ ಮಾಸ್ಕ್​ನಲ್ಲಿ 7 ದಿನ ವೈರಸ್ ಇರುತ್ತದೆ. ತಾಮ್ರ, ಬೆಳ್ಳಿ ಮೇಲೆ ನಾಲ್ಕು ಗಂಟೆಯಲ್ಲೇ ನಾಶವಾಗುತ್ತವೆ ಎಂಬುದು ಅಂತಾರಾಷ್ಟ್ರೀಯ ಸಂಶೋಧನೆಯಿಂದ ಕಂಡುಬಂದಿದೆ. ಬಳಸಿ ಇರಿಸಿದ ನಂತರ ಮಾಸ್ಕ್ ತಾನಾಗಿಯೇ ಸೋಂಕು ನಿವಾರಕವಾಗುತ್ತದೆ. ಇನ್ನಿತರ ಧೂಳು, ಉಗುಳನ್ನು ಹೋಗಲಾಡಿಸಲು ಸ್ವಚ್ಛಗೊಳಿಸಿ ಪುನಃ ಬಳಸಬಹುದು. ಸಮಾಜಕ್ಕೆ ಚಿಕ್ಕ ಕೊಡುಗೆ ನೀಡಬೇಕೆಂಬ ಹಂಬಲದಲ್ಲಿ ಅಭಿವೃದ್ಧಿಪಡಿಸಿದ್ದೇನೆ. ಸರ್ಕಾರ ಸಹಕಾರ ನೀಡಿದರೆ ವೈದ್ಯರು, ರೋಗಿಗಳು ಹಾಗೂ ಸಾರ್ವಜನಿಕರಿಗೆ ನೀಡುತ್ತೇನೆ ಎಂದು ಹೇಳುತ್ತಾರೆ ವಿಶ್ವನಾಥ್.
ನೋ ಟಚ್ ಹ್ಯಾಂಡ್ ಸ್ಯಾನಿಟೈಸರ್:ಕರೊನಾ ತೊಲಗಿಸಲು ಆಗಾಗ್ಗೆ ಕೈತೊಳೆಯುವುದು ಮುಖ್ಯ. ಸಾರ್ವಜನಿಕ ಸ್ಥಳಗಳಲ್ಲಿ ಇಟ್ಟ ಸ್ಯಾನಿಟೈಸರ್ ಬಳಸಲು ಅದರ ಮುಚ್ಚಳವನ್ನು ಅನೇಕರು ಮುಟ್ಟಿ ಸೋಂಕು ಹರಡುವ ಅಪಾಯವೂ ಇರುತ್ತದೆ. ಇದಕ್ಕೆ ಪರಿಹಾರವಾಗಿ ಲೆಗೊ ಮೈಂಡ್ ಸ್ಟಾಮ್ರ್ ಇವಿ 3 ತಂತ್ರಜ್ಞಾನ ಬಳಸಿ 14 ವರ್ಷದ ಕೃಷ್ಣ ಗುಪ್ತಾನೋ ಟಚ್ ಹ್ಯಾಂಡ್ ಸ್ಯಾನಿಟೈಸರ್ ರೊಬೋಟ್ ಅಭಿವೃದ್ಧಿಪಡಿಸಿದ್ದಾರೆ. ರೊಬೋಟ್​ನಲ್ಲಿ ಸೆನ್ಸರ್ ಅಳವಡಿಸಿದ್ದು, ಎದುರು ನಿಂತರೆ ಸ್ವಯಂಚಾಲಿತವಾಗಿ ಚಾಲನೆಯಾಗಿ ಸ್ಯಾನಿಟೈಸರ್ ಹೊರಬರುತ್ತದೆ.
ಕೊಪ್ಪದ ಯುವಕ ಸ್ಮಾರ್ಟ್ ಸ್ಟೆತ್ ಜನಕ:ಸ್ಮಾರ್ಟ್ ಸ್ಟೆತಸ್ಕೋಪ್, ಇದು ಮಾಮೂಲಿ ಸ್ಟೆತಸ್ಕೋಪ್​ಗಿಂತ ಭಿನ್ನ. ಬಹು ಉಪಯೋಗಿಯಾಗಿರುವ ಇದರಿಂದ ಕರೊನಾ ಚಿಕಿತ್ಸೆಗೆ ಹೆಚ್ಚು ಉಪಯುಕ್ತ. ಈ ಸ್ಮಾರ್ಟ್ ಸ್ಟೆತಸ್ಕೋಪ್​ನ ಜನಕ ಕರ್ನಾಟಕದ ಯುವಕ, ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಕೆ.ಆದರ್ಶ ಎಂಬುದು ವಿಶೇಷ. ಬ್ಲೂಟೂಥ್ ಇರುವ ಈ ಸ್ಮಾರ್ಟ್ ಸ್ಟೆತಸ್ಕೋಪ್​ನಿಂದ ದೇಶ ವಿದೇಶದ ಯಾವುದೇ ಮಹಾನಗರಗಳ ಆಸ್ಪತ್ರೆಗಳಲ್ಲಿರುವ ತಜ್ಞ ವೈದ್ಯರಿಗೆ ರೋಗಿಯ ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಯ ಮಾಹಿತಿಯನ್ನು ಅವರ ಮೊಬೈಲ್ ಇಲ್ಲವೆ ಲ್ಯಾಪ್​ಟ್ಯಾಪ್​ಗೆ ರವಾನೆ ಮಾಡಬಹುದು. ಇದರಿಂದ ಈ ರೋಗಿಯ ಸಮಸ್ಯೆ ಏನು ಎಂಬುದನ್ನು ವೈದ್ಯರು ತಿಳಿಸುತ್ತಾರೆ. ಅಗತ್ಯಬಿದ್ದರೆ ಮೊಬೈಲ್ ಮೂಲಕವೇ ಚಿಕಿತ್ಸೆ ಸಲಹೆ ನೀಡಬಹುದು. ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಇಂತಹ ಸ್ಥಳಗಳಲ್ಲಿ ಈ ಸ್ಟೆತಸ್ಕೋಪ್ ಬಳಕೆಗೆ ತರಬೇತಿ ಪಡೆದ ಪ್ಯಾರಾಮೆಡಿಕಲ್ ಸಿಬ್ಬಂದಿ ಬೇಕಾಗುತ್ತದೆ. ಇದೀಗ ಹೆಚ್ಚು ಪ್ರಸ್ತುತವಾಗುತ್ತಿರುವುದು ಕರೊನಾ ಸೋಂಕಿತರ ಚಿಕಿತ್ಸೆಗೆ. ವೈರ್​ಲೆಸ್ ಸ್ಟೆತಸ್ಕೋಪನ್ನು ರೋಗಿ ಪಕ್ಕವಿಟ್ಟರೆ ಹೃದಯ ಬಡಿತ ಮತ್ತು ಶ್ವಾಸಕೋಶದ ಶಬ್ಧ ವೈದ್ಯರಿಗೆ ಕೇಳುತ್ತದೆ.
ಸೋಂಕಿತನ ಚಲನವಲನ ಗುರುತಿಸುವ ಆಪ್ ಸಿದ್ಧ:ಕರೊನಾ ಸೋಂಕಿತರನ್ನು ಪತ್ತೆ ಹಚ್ಚುವ ಸವಾಲಿನ ಕೆಲಸವನ್ನು ಸುಲಭವಾಗಿಸಲು ಪೂರಕವಾದ ಆಪ್​ವೊಂದನ್ನು ಇಲ್ಲಿನ ಜೆಎಸ್​ಎಸ್ ಸೆಂಟ್ರಲ್ ಸ್ಕೂಲ್​ನ 10ನೇ ತರಗತಿ ವಿದ್ಯಾರ್ಥಿ ಮನೋಜ ಶಿರಹಟ್ಟಿ ಆವಿಷ್ಕರಿಸಿದ್ದಾನೆ. ಕೋವಿಸೀಲ್ಡ್ ಎಂಬ ಈ ಆಪ್, ಸೋಂಕಿತ ವ್ಯಕ್ತಿ, ಆತ ಎಲ್ಲಿಗೆ ಹೋಗಿದ್ದ, ಆತನೊಂದಿಗೆ ಸಂಪರ್ಕ ಹೊಂದಿರುವವರು ಹಾಗೂ ಆತ ಭೇಟಿ ನೀಡಿದ ಸ್ಥಳಗಳ ಕುರಿತ ಸಮಗ್ರ ಮಾಹಿತಿಯನ್ನು ಸರಳವಾಗಿ ಪಡೆಯಲು ಸಹಕಾರಿಯಾಗಿದೆ. ಆಪ್ ಸಿದ್ಧಪಡಿಸುವ ಕುರಿತು ಬಾಲಕ ಆನ್​ಲೈನ್​ನಲ್ಲಿ ತರಬೇತಿ ಪಡೆಯುತ್ತಿದ್ದ. ಲಾಕ್​ಡೌನ್ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 2 ವಾರಗಳಲ್ಲಿ ಸೋಂಕಿತ ವ್ಯಕ್ತಿಯ ಟ್ರ್ಯಾವೆಲ್ ಹಿಸ್ಟರಿ ಪತ್ತೆ ಮಾಡುವ ಆಪ್ ಸಿದ್ಧಪಡಿಸಿದ್ದಾನೆ. ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಕೋವಿಶೀಲ್ಡ್ ಆಪ್​ನ ಕ್ಯೂಆರ್ ಕೋಡ್ ಅಂಟಿಸಬೇಕು. ಈ ಕೋಡ್ ಸ್ಕ್ಯಾನ್ ಮಾಡಿದಾಗ ವ್ಯಕ್ತಿಯ ಮಾಹಿತಿ ಸಂಗ್ರಹವಾಗಿ ಆಪ್ ಅಡ್ಮಿನ್​ಗೆ ಲಭ್ಯವಾಗಲಿದೆ. ಪ್ರಾಯೋಗಿಕವಾಗಿ ಸಿದ್ಧಪಡಿಸಿರುವ ಈ ಆಪ್​ನ ಕಾರ್ಯವೈಖರಿ ಕುರಿತ ಮಾಹಿತಿಯನ್ನು ಪ್ರಧಾನಮಂತ್ರಿ ಕಚೇರಿಗೆ ಕಳುಹಿಸಲಾಗಿದ್ದು, ಪ್ರತ್ಯುತ್ತರದ ನಿರೀಕ್ಷೆಯಲ್ಲಿರುವುದಾಗಿ ಮನೋಜ್ ಮಾಹಿತಿ ನೀಡುತ್ತಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 15 =
Remember me
