ಬೆಂಗಳೂರು:ರಾಜಸ್ವ ಕೊರತೆ ನಡುವೆಯೂ ಪ್ರಸ್ತುತ ಬಜೆಟ್​ನಲ್ಲಿ ಯಾರ ಮೇಲೂ ಹೊಸ ತೆರಿಗೆ ಭಾರ ಹೊರಿಸದಿರುವುದು ಸಮಾಧಾನಕರ ಸಂಗತಿ. ತಂತ್ರಜ್ಞಾನ ಬಳಕೆ ಮೂಲಕ ಸಂಪನ್ಮೂಲ ಕ್ರೋಡೀಕರಣದಲ್ಲಿ ದಕ್ಷತೆ, ಹೊಸ ಮಾರ್ಗಗಳ ಶೋಧದೆಡೆ ಗಮನ… ಇದು ರಾಜ್ಯದ 2024-25ನೇ ಸಾಲಿನ ಆಯ-ವ್ಯಯ ಲೆಕ್ಕಾಚಾರದ ಹೈಲೈಟ್.
ಮೇಲ್ನೋಟಕ್ಕೆ ರ್ಚಚಿತ ಗ್ಯಾರಂಟಿಗಳ ವೆಚ್ಚದ ಗಾತ್ರಕ್ಕೆ ಈ ಬಾರಿ ಬಜೆಟ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನ ಕಲ್ಯಾಣದ ‘ಅರ್ಥ’ವನ್ನು ಬೆಸೆದಿದ್ದಾರೆ. ಆ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಗತಿ ಮೇಲೆ ಸೂಕ್ಷ್ಮವಾಗಿ ಬೆಳಕು ಚೆಲ್ಲಿದ್ದಾರೆ. ಅಭಿವೃದ್ಧಿಯ ಫಲವನ್ನು ಹಕ್ಕುದಾರರಾದ ಜನಸಾಮಾನ್ಯರಿಗೆ ಹಿಂತಿರುಗಿಸುವುದರಲ್ಲಿ ಸಂತೃಪ್ತಿಯಿದೆ. ನಿರ್ಗತಿಕರು, ಬಡವರು ಹಾಗೂ ಸಂಕಷ್ಟದಲ್ಲಿರುವ ಜನರ ನೆರವಿಗೆ ರಾಜ್ಯ ಸರ್ಕಾರ ಬಾರದಿದ್ದರೆ ಹೆಚ್ಚುವರಿ ರಾಜಸ್ವ ಸಂಗ್ರಹವೇ ಅರ್ಥಹೀನವೆಂದು ಪ್ರತಿಪಾದಿಸಿದ್ದಾರೆ. ಬಡವ- ಬಲ್ಲಿದನ ಮಧ್ಯೆ ಕಂದಕ ಮುಚ್ಚಿಹಾಕಲು, ಸುಸ್ಥಿರ ಪ್ರಗತಿ ಸಾಧನೆಗೆ ಸಂಪತ್ತಿನ ಸಮಾನ ಹಂಚಿಕೆಯೇ ರಹದಾರಿಯಾಗಿದೆ. ಗ್ಯಾರಂಟಿಗಳಿಂದ ಪ್ರತಿ ಕುಟುಂಬ ವಾರ್ಷಿಕ 50 ರಿಂದ 55 ಸಾವಿರ ರೂ. ಪಡೆಯಲು ಸಾಧ್ಯವಾಗಿದೆ. ‘ಕರ್ನಾಟಕ ಮಾದರಿ ಅಭಿವೃದ್ಧಿ’ ದೇಶಕ್ಕೆ ಮೇಲ್ಪಂಕ್ತಿಯಾಗಿದೆ. ಪ್ರತಿ ಕುಟುಂಬಕ್ಕೆ ಆದಾಯ ಖಾತರಿ ನೀಡಲೆಂದು ಐದು ಗ್ಯಾರಂಟಿಗಳಿಗೆ 2024-25ನೇ ಸಾಲಿನ ಬಜೆಟ್​ನಲ್ಲಿ 52 ಸಾವಿರ ಕೋಟಿ ರೂ. ಮೀಸಲಿರಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
27,354 ಕೋಟಿ ರೂ. ಕೊರತೆ: ಒಟ್ಟು ಆದಾಯ 3,68,674 ಕೋಟಿ ರೂ., ವೆಚ್ಚ 3,71,383 ಕೋಟಿ ರೂ.ಗಳಿಗೆ ತುಲನೆ ಮಾಡಿದರೆ ಮೂರು ಸಾವಿರ ಕೋಟಿ ರೂ.ಗಳ ಕೊರತೆ ಕಂಡುಬರುತ್ತದೆ. ಆದಾಯದ ಬಾಬ್ತಿನಲ್ಲಿ ಪಡೆಯಲು ಉದ್ದೇಶಿತ 1,05,246 ಕೋಟಿ ರೂ. ಸಾಲವನ್ನು ಸೇರ್ಪಡೆ ಮಾಡಿರುವುದು ಗಮನಿಸಬೇಕಾದ ಅಂಶ. 2023-24ರ 88 ಸಾವಿರ ಕೋಟಿ ರೂ. ಸಾಲದ ಪ್ರಸ್ತಾಪ ಪರಿಗಣಿಸಿದರೆ 17,246 ಕೋಟಿ ರೂ. ಹೆಚ್ಚಳವಾಗಲಿದೆ. ರಾಜಸ್ವ ಜಮೆ ಅಂದಾಜು 2,63,178 ಕೋಟಿ ರೂ., ರಾಜಸ್ವ ವೆಚ್ಚ 2,90,531 ಕೋಟಿ ರೂ.ಗಳಿಗೆ ಹೋಲಿಸಿದರೆ 27,354 ಕೋಟಿ ರೂ. ಕೊರತೆ ಅಂದಾಜಿದೆ.
ರಾಜಸ್ವ ಜಮೆಯಲ್ಲಿದೆ ರಾಜ್ಯದ ಸ್ವಂತ ತೆರಿಗೆಯಿಂದ 1,89,893, ಕೋಟಿ ರೂ., ತೆರಿಗೆಯೇತರ ರಾಜಸ್ವ 13,500 ಕೋಟಿ ರೂ., ಸಂಗ್ರಹ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು 44,485 ಕೋಟಿ ರೂ., ಸಹಾಯಾನುದಾನ 15,300 ಕೋಟಿ ರೂ. ಸ್ವೀಕೃತಿ ಅಂದಾಜಿಸಲಾಗಿದೆ. ಅಭಿವೃದ್ಧಿ, ತಲಾ ಆದಾಯ ಹೆಚ್ಚಳಕ್ಕೆ ಆಧಾರಸ್ತಂಭವಾದ ಬಂಡವಾಳ ವೆಚ್ಚದಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ. ರಾಜಸ್ವ ವೆಚ್ಚ 2,90,351, ಬಂಡವಾಳ ವೆಚ್ಚ 55,877 ಕೋಟಿ ರೂ., ಸಾಲದ ಮರು ಪಾವತಿ 24,974 ಕೋಟಿ ರೂ. ಒಳಗೊಂಡು 3,71,383 ಕೋಟಿ ರೂ.ಗಳಾಗುತ್ತದೆ ಎಂದು ಅಂದಾಜಿಸಲಾಗಿದೆ.
ಚೇತೋಹಾರಿ, ಕಳವಳಕಾರಿ:ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಸೇವಾ ಮತ್ತು ಕೈಗಾರಿಕಾ ವಲಯಗಳು ಪ್ರಮುಖ ಪಾತ್ರ ವಹಿಸಿರುವುದು ಚೇತೋಹಾರಿಯಾಗಿದೆ. ಸ್ಥಿರ ಬೆಲೆಗಳ ಮಾನದಂಡದ ಪ್ರಕಾರ 2023-24ನೇ ಸಾಲಿನ ಸೇವಾ ವಲಯವು ಶೇ.8.7, ಕೈಗಾರಿಕೆ ವಲಯವು ಶೇ.7.5ರಷ್ಟು ಬೆಳವಣಿಗೆ ಸಾಧಿಸಿದೆ. ಪ್ರಸಕ್ತ ವರ್ಷದ ಮುಂಗಾರು ವೈಫಲ್ಯದಿಂದ ರಾಜ್ಯವು ತೀವ್ರ ಬರಗಾಲ ಎದುರಿಸಿದೆ. ಇದರಿಂದಾಗಿ ಕೃಷಿ ಕ್ಷೇತ್ರವು ಶೇ.1.8ರಷ್ಟು ಋಣಾತ್ಮಕ ಬೆಳವಣಿಗೆ ಹೊಂದಿರುವುದು ಕಳವಳಕಾರಿಯಾಗಿದೆ. 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಜಿಎಸ್​ಟಿ ಸಂಗ್ರಹಣೆಯು ಶೇ.18ರಷ್ಟು ಹೆಚ್ಚಳ ಕಂಡಿದೆ. ಸ್ವಂತ ತೆರಿಗೆ ರಾಜಸ್ವವು ಶೇ.12ರಷ್ಟು ಬೆಳವಣಿಗೆ ಸಾಧಿಸಲಿದೆ ಎಂಬ ಆಶಾಭಾವನೆಯಿದೆ.
ಲಕ್ಷ್ಮಣರೇಖೆ ಸಮೀಪಿಸಿದ ಆರ್ಥಿಕ ಸ್ಥಿತಿ:ಯಾವುದೇ ರಾಜ್ಯದ ಖಜಾನೆ ಖಾಲಿಯಾಗಿ ಬದ್ಧತಾ ವೆಚ್ಚ, ಅಭಿವೃದ್ಧಿಗೆ ಹೊಡೆತ ಬೀಳದಂತೆ ವಿತ್ತೀಯ ಮಿತಿ, ಹೊಣೆಗಾರಿಕೆ ಕಾಯ್ದೆ ನೋಡಿಕೊಳ್ಳುತ್ತದೆ. ಅಧಿನಿಯಮ 2002ರಂತೆ ರಾಜ್ಯದ ನಿವ್ವಳ ದೇಶೀಯ ಉತ್ಪನ್ನ (ಜಿಎಸ್​ಡಿಪಿಯ)ದ ಶೇ.3ರಷ್ಟು ವಿತ್ತೀಯ ಕೊರತೆ ಮತ್ತು ಶೇ.25ರಷ್ಟು ವಿತ್ತೀಯ ಹೊಣೆಗಾರಿಕೆ ಮೀರುವಂತಿಲ್ಲ. ಸದ್ಯಕ್ಕೆ ರಾಜ್ಯದ ವಿತ್ತೀಯ ಸ್ಥಿತಿ ‘ಲಕ್ಷ್ಮಣರೇಖೆ’ಗೆ ಸಮೀಪಿಸಿದೆ. ವಿತ್ತೀಯ ಕೊರತೆ 82,981 ಕೋಟಿ ರೂ (ಶೇ.2.95), ವಿತ್ತೀಯ ಹೊಣೆಗಾರಿಕೆಯು 2024-25ರ ಅಂತ್ಯಕ್ಕೆ 6,65,05 ಕೋಟಿ ರೂ (ಶೇ.23.68)ಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ತಂತ್ರಜ್ಞಾನ ಬಳಕೆಗೆ ಒತ್ತು:ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಜನವರಿ ಅಂತ್ಯದವರೆಗೆ 58,180 ಕೋಟ ರೂ. ಎಸ್​ಜಿಎಸ್​ಟಿ ಸ್ವೀಕೃತವಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.14ರಷ್ಟು ಬೆಳವಣಿಗೆಯಾಗಿದೆ. ಸರ್ಕಾರ ಇಷ್ಟಕ್ಕೆ ತೃಪ್ತವಾಗದೆ ತೆರಿಗೆ ಸಂಗ್ರಹಣೆಯಲ್ಲಿ ದಕ್ಷತೆ ಸಾಧಿಸಲು ತಂತ್ರಜ್ಞಾನ ಬಳಕೆ, ಹೊಸ ಮಾರ್ಗಗಳ ಶೋಧನೆ, ವಂಚನೆಗೆ ಮೂಗುದಾರ, ತೆರಿಗೆ ವಿವಾದ ತ್ವರಿತ ಇತ್ಯರ್ಥಕ್ಕೂ ಒತ್ತು ನೀಡಿದೆ. ಗ್ರಾಹಕ ಸಂವೇದಿ ಜಿಎಸ್​ಟಿ ದತ್ತಾಂಶ ನಿರ್ವಹನೆ, ಕೃತಕಬುದ್ಧಿಮತ್ತೆ ಚಾಲಿತ ವಿಶ್ಲೇಷಣಾತ್ಮಕ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ. ಮಾಹಿತಿಯ ನಿಖರತೆ ಮತ್ತು ಮುನ್ಸೂಚಕ ವಿಶ್ಲೇಷಣೆಯು ರಾಜಸ್ವ ಕ್ರೋಡೀಕರಣಕ್ಕೆ ಸಹಕಾರಿಯಾಗಲಿದೆ. ಜಿಎಸ್​ಟಿ ಮೇಲ್ಮನವಿ ನ್ಯಾಯಮಂಡಳಿಯ ಎರಡು ರಾಜ್ಯ ಪೀಠಗಳನ್ನು ರಚಿಸಿ, ಅನುಷ್ಠಾನಕ್ಕೆ ತರುವ ಮೂಲಕ ತೆರಿಗೆ ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸಲಿದೆ. ತೆರಿಗೆ ರಾಜಸ್ವ ಸೃಜನೆ, ಹೊಸ ಮಾರ್ಗಗಳ ಅನ್ವೇಷಣೆ, ಮೋಸದ ನೋಂದಣಿ ಪತ್ತೆ ಹಚ್ಚಲು, ತೆರಿಗೆ ಕಾನೂನು ಮತ್ತು ತಾಂತ್ರಿಕ ಪರಿಣತಿ ಹೊಂದಲೆಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಇ-ತರಬೇತಿ ನೀಡಲು ತೀರ್ವನಿಸಿದೆ.
ವೆಚ್ಚದ ಮೂಲದಲ್ಲೇ ಆದಾಯ:ಜನಕಲ್ಯಾಣ ಕಾರ್ಯಕ್ರಮಗಳಿಗೆ ವೆಚ್ಚದ ಬಾಬ್ತು ಬೊಕ್ಕಸಕ್ಕೆ ಹೆಚ್ಚಿನ ಭಾರ ಹೊರಿಸುವುದನ್ನು ತಪ್ಪಿಸಲು ಆಯಾ ಮೂಲದಲ್ಲೇ ತೆರಿಗೆಯೇತರ ಆದಾಯದ ಮಾಗೋಪಾಯ ಹುಡುಕಿರುವುದು ಬಜೆಟ್​ನ ಮತ್ತೊಂದು ವಿಶೇಷ. ನಗರ ಪ್ರದೇಶದ ಬಡ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಬೇಕಾದ ಸಂಪನ್ಮೂಲವನ್ನು ಇಲಾಖೆಯು ಸುಧಾರಣಾ ಕ್ರಮಗಳ ಮೂಲಕ ಕ್ರೋಡೀಕರಿಸಲಿದೆ. ವಸತಿ ಸೆಸ್, ವಿವಿಧ ಶಾಸನ ಬದ್ಧ ಶುಲ್ಕ, ಅಸೆಟ್ ಮೊನೆಟೈಸೇಷನ್ ಮೂಲಕ ಸಂಪನ್ಮೂಲ ಕ್ರೋಡೀಕರಿಸಿ ‘ಕರ್ನಾಟಕ ಕೈಗೆಟುಕುವ ನಿಧಿ’ ಸ್ಥಾಪಿಸಲಿದೆ. ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯಡಿ ಕೊಳೆಗೇರಿ ಸೆಸ್ ದರ ಪರಿಷ್ಕರಣೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಸ್ಥಿರ ಆಸ್ತಿಗಳಿಂದ ಸಂಪನ್ಮೂಲ ಸೃಜಿಸಲಿದೆ. ಗಿಗ್ ಕಾರ್ವಿುಕ ಬದುಕಿನ ಭದ್ರತೆಗಾಗಿ ವೇದಿಕೆಯಾಧಾರಿತ ಗಿಗ್ ವರ್ಕ್​ಸ್ ನಿಧಿ ಮತ್ತು ಕಲ್ಯಾಣ ಶುಲ್ಕ ಎಂಬ ಹೊಸ ವಿಧೇಯಕ ಜಾರಿಗೆ ತರಲಿದೆ. ತನ್ಮೂಲಕ ಅರ್ಹ ಆನ್​ಲೈನ್ ವಹಿವಾಟುಗಳ ಮೇಲೆ ಸೆಸ್ ವಿಧಿಸಿ ಗಿಗ್ ಕಾರ್ವಿುಕರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಿದೆ. ವಾಣಿಜ್ಯ ಸಾರಿಗೆ ವಾಹನಗಳ ನೋಂದಣಿಯ ಮೇಲೆ ಸುಂಕ ವಿಧಿಸಲಾಗುತ್ತದೆ. ಈ ಹಣವನ್ನು ಸಾರಿಗೆ ವಾಹನಗಳ ಕಾರ್ವಿುಕರಿಗೆ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಿದೆ. ನಗರ-ಪಟ್ಟಣ ಪ್ರದೇಶಗಳಲ್ಲಿ ಪರಿಷ್ಕೃತ ಜಾಹೀರಾತು, ಪ್ರೀಮಿಯಂ ಎಫ್​ಎಆರ್ ನೀತಿ ಜಾರಿಗೆ ತರುವ ಮೂಲಕ 2 ಸಾವಿರ ಕೋಟಿ ರೂ.ಗಳಷ್ಟು ತೆರಿಗೆಯೇತರ ಸಂಪನ್ಮೂಲ ಸಂಗ್ರಹಿಸುವ ಗುರಿ ಹೊಂದಿದೆ.
ಸಮತೋಲಿತ ಗುರಿ:2023-24 ಪರಿಷ್ಕೃತ ಬಜೆಟ್​ನಲ್ಲಿ ಸ್ವಂತ ತೆರಿಗೆ ಮೂಲಗಳಿಂದ ಒಟ್ಟಾರೆ ಶೇ.15ರಷ್ಟು ಗುರಿ ಹೆಚ್ಚಳ ಮಾಡಲಾಗಿತ್ತು. ಸಂಗ್ರಹ, ವಸೂಲಿಯಲ್ಲಿ ಪ್ರಗತಿ ಸಾಧಿಸಿದ್ದರೂ ಗುರಿ ನಿರೀಕ್ಷೆಗೆ ಮೀರಿದ್ದಾಗಿತ್ತು ಎಂಬ ಕಟು ವಾಸ್ತವ ವೇದ್ಯವಾಗಿದೆ. ನೋಂದಣಿ ಮತ್ತು ಮುದ್ರಾಂಕ, ಅಬಕಾರಿ, ಸಾರಿಗೆ ಮೂಲಗಳಿಂದ ನಿಗದಿತ ಗುರಿಯಲ್ಲಿ ಒಟ್ಟು 10 ಸಾವಿರ ಕೋಟಿ ರೂ. ಕಡಿಮೆಯಾಗುವ ಅಂದಾಜಿಸಿದೆ. ವಸ್ತುಸ್ಥಿತಿ ಅರಿತುಕೊಂಡು ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಗುರಿಯನ್ನು ಎರಡರಿಂದ ಮೂರು ಸಾವಿರ ಕೋಟಿ ರೂ.ಗಳಷ್ಟೇ ಹೆಚ್ಚಿಸಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆ- 1,10,00 ಕೋ. ರೂ., ನೋಂದಣಿ ಮತ್ತು ಮುದ್ರಾಂಕ- 26 ಸಾವಿರ ಕೋ.ರೂ., ಅಬಕಾರಿ- 38,255, ಸಾರಿಗೆ- 13 ಸಾವಿರ ಕೋಟಿ ರೂ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಂಭತ್ತು ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ವಿಧಿಸಲಾಗಿದೆ.
ಸ್ಟಾರ್ಟಪ್ ಕ್ಷೇತ್ರಕ್ಕೆ ಆದ್ಯತೆ:ನವೋದ್ಯಮ (ಸ್ಟಾರ್ಟಪ್) ವಲಯದಲ್ಲಿ ಕರ್ನಾಟಕ ಪ್ರಸ್ತುತ ಹೊಂದಿರುವ ಮುಂಚೂಣಿ ಸ್ಥಾನವನ್ನು ಕಾಯ್ದುಕೊಳ್ಳಲು ಮೂರು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದೆಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ಬಜೆಟ್ ಮಂಡನೆ ವೇಳೆ ಹೇಳಿದರು. ‘ನಾವು ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಪೂರಕ ವಾತಾವರಣವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿನೂತನ ಕಾರ್ಯಶೈಲಿ ಹಾಗೂ ಚಿಂತನಾ ಕ್ರಮದ ಅಗತ್ಯವಿದೆ. ನಮ್ಮ ಪರಿಸರವೇ ನಾವೀನ್ಯತೆಯನ್ನು ಉತ್ತೇಜಿಸುವಂತಿರಬೇಕು’ ಎಂಬ ಕರ್ನಾಟಕದವರೇ ಆದ ಖ್ಯಾತ ವಿಜ್ಞಾನಿ ಭಾರತ ರತ್ನ ಪೊ›. ಸಿ.ಎನ್.ಆರ್.ರಾವ್ ಅವರ ಹೇಳಿಕೆಯನ್ನು ಭಾಷಣದಲ್ಲಿ ಉದ್ಧರಿಸಿದ ಸಿದ್ದರಾಮಯ್ಯ, ನವೋದ್ಯಮಗಳಿಗೆ ರಾಜ್ಯ ಸರ್ಕಾರ ಕೊಡುತ್ತಿರುವ ಆದ್ಯತೆಯನ್ನು ವಿವರಿಸಿದರು. ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಂದ ಪ್ರಾರಂಭವಾದ ನವೀನ ಪ್ರಯತ್ನಗಳು ಹಾಗೂ ಸ್ಟಾರ್ಟಪ್​ಗಳನ್ನು ಉತ್ತೇಜಿಸಲು ಜ್ಞಾನಾಧಾರಿತ ಮತ್ತು ತಂತ್ರಜ್ಞಾನ ಚಾಲಿತ ಪರಿಕಲ್ಪನೆಗಳು ಮತ್ತು ನಾವೀನ್ಯತೆಗಳನ್ನು ಪೋಷಿಸಲಾಗುವುದು ಎಂದರು.
ಸಮತೋಲಿತ ಗುರಿ:2023-24 ಪರಿಷ್ಕೃತ ಬಜೆಟ್​ನಲ್ಲಿ ಸ್ವಂತ ತೆರಿಗೆ ಮೂಲಗಳಿಂದ ಒಟ್ಟಾರೆ ಶೇ.15ರಷ್ಟು ಗುರಿ ಹೆಚ್ಚಳ ಮಾಡಲಾಗಿತ್ತು. ಸಂಗ್ರಹ, ವಸೂಲಿಯಲ್ಲಿ ಪ್ರಗತಿ ಸಾಧಿಸಿದ್ದರೂ ಗುರಿ ನಿರೀಕ್ಷೆಗೆ ಮೀರಿದ್ದಾಗಿತ್ತು ಎಂಬ ಕಟು ವಾಸ್ತವ ವೇದ್ಯವಾಗಿದೆ. ನೋಂದಣಿ ಮತ್ತು ಮುದ್ರಾಂಕ, ಅಬಕಾರಿ, ಸಾರಿಗೆ ಮೂಲಗಳಿಂದ ನಿಗದಿತ ಗುರಿಯಲ್ಲಿ ಒಟ್ಟು 10 ಸಾವಿರ ಕೋಟಿ ರೂ. ಕಡಿಮೆಯಾಗುವ ಅಂದಾಜಿಸಿದೆ. ವಸ್ತುಸ್ಥಿತಿ ಅರಿತುಕೊಂಡು ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಗುರಿಯನ್ನು ಎರಡರಿಂದ ಮೂರು ಸಾವಿರ ಕೋಟಿ ರೂ.ಗಳಷ್ಟೇ ಹೆಚ್ಚಿಸಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆ- 1,10,00 ಕೋ. ರೂ., ನೋಂದಣಿ ಮತ್ತು ಮುದ್ರಾಂಕ- 26 ಸಾವಿರ ಕೋ.ರೂ., ಅಬಕಾರಿ- 38,255, ಸಾರಿಗೆ- 13 ಸಾವಿರ ಕೋಟಿ ರೂ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಂಭತ್ತು ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ವಿಧಿಸಲಾಗಿದೆ.
ಮಹಿಳಾ ಉದ್ಯಮಿಗಳಿಗೆ ಬೆಂಬಲ:ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಕೃಷಿ ಆವಿಷ್ಕಾರಕ ನವೋದ್ಯಮಗಳನ್ನು (ಅಗ್ರಿ ಇನ್ನೋವೇಶನ್ ಸ್ಟಾರ್ಟಪ್​ಗಳನ್ನು ಸ್ಥಾಪಿಸಲು ಸಿ-ಕ್ಯಾಂಪ್​ನ ಅಗ್ರಿ ಇನ್ನೋವೇಶನ್ ಪಾರ್ಕ್​ಗೆ 5 ಎಕರೆ ಜಮೀನನ್ನು ಮೀಸಲಿಡಲು ಸರ್ಕಾರ ಉದ್ದೇಶಿಸಿದೆ ಎಂದರು.ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಈ ಸ್ಥಾನವನ್ನು ಬಲಪಡಿಸಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲು ಫಿನ್​ಟೆಕ್, ಸ್ಪೇಸ್​ಟೆಕ್ ಮತ್ತು ಆಟೋಮೋಟಿವ್ ಟೆಕ್​ನಲ್ಲಿ ಶ್ರೇಷ್ಠತಾ ಕೇಂದ್ರವನ್ನು (ಸೆಂಟರ್ ಆಫ್ ಎಕ್ಸಲೆನ್ಸ್) ಸ್ಥಾಪಿಸಲಾಗುತ್ತದೆ.

ಕ್ರಿಕೆಟಿಗ ಸರ್ಫರಾಜ್ ಖಾನ್ ತಂದೆಗೆ ಥಾರ್ ಬಹುಮಾನ: ಆನಂದ್ ಮಹೀಂದ್ರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
