ಬೆಂಗಳೂರು:ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸಭೆಯಿಂದ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ-ಜೆಡಿಎಸ್​ನಿಂದ ಎರಡನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಪರ್ಧೆಗೆ ಇಳಿದಿರುವುದರಿಂದ ಕಣ ರಂಗೇರಿದೆ. ಮೂರು ಪಕ್ಷಗಳಿಗೂ ಅಡ್ಡ ಮತದಾನದ ಭೀತಿ ಎದುರಾಗಿದ್ದು, ‘ಕುದುರೆ ವ್ಯಾಪಾರ’ ನಡೆಯುವುದು ಖಚಿತವಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಕಾಂಗ್ರೆಸ್​ನ ಅಜೇಯ್ ಮಾಕನ್, ನಾಸೀರ್ ಹುಸೇನ್, ಜೆ.ಸಿ. ಚಂದ್ರಶೇಖರ್ ಹಾಗೂ ಬಿಜೆಪಿಯ ನಾರಾಯಣ ಸಾ. ಭಾಂಡಗೆ ನಾಮಪತ್ರ ಸಲ್ಲಿಸಿದರು.
ಕೊನೆಗಳಿಗೆಯ ತೀರ್ವನದಂತೆ ಕುಪೇಂದ್ರ ರೆಡ್ಡಿ ಸಹ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಚುನಾವಣೆ ನಡೆಯುವುದು ಖಚಿತವಾಗಿದೆ. ಕುಪೇಂದ್ರ ರೆಡ್ಡಿ ಅವರಿಗೆ ಬಿಜೆಪಿಯಲ್ಲಿ ಒಂದು ಅಭ್ಯರ್ಥಿ ಗೆಲುವಿನ ನಂತರ ಉಳಿಯುವ ಹೆಚ್ಚುವರಿ ಮತಗಳ ಜತೆಗೆ 7 ಮತಗಳ ಅಗತ್ಯವಿದೆ. ಆದ್ದರಿಂದ ಕುದುರೆ ವ್ಯಾಪಾರ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇದು ಸಹಜವಾಗಿಯೇ ಎಲ್ಲ ಪಕ್ಷಗಳಲ್ಲಿಯೂ ಅಡ್ಡ ಮತದಾನದ ಸಾಧ್ಯತೆಗಳನ್ನು ನಿಚ್ಚಳಗೊಳಿಸಿದೆ.
ನಾಮಪತ್ರ ಸಲ್ಲಿಕೆ:ಕಾಂಗ್ರೆಸ್​ನ ಅಭ್ಯರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಬಂದು ಚುನಾವಣಾಧಿಕಾರಿಯಾಗಿರುವ ಎಂ.ಕೆ. ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಹಾಗೂ ಪಕ್ಷೇತರ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ.20 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಫೆ.27 ರಂದು ಚುನಾವಣೆ ನಡೆಯಲಿದೆ.
ಚುನಾವಣೆ ಹೇಗೆ ನಡೆಯಲಿದೆ:ಪಕ್ಷದ ಶಾಸಕರು ತಮ್ಮ ಚುನಾವಣಾ ಏಜೆಂಟರಿಗೆ ಮತಪತ್ರವನ್ನು ತೋರಿಸಬೇಕು. ಇದರಿಂದಾಗಿ ಅಡ್ಡ ಮತದಾನ ಮಾಡಿದವರು ಯಾರು ಎಂಬುದು ಸುಲಭವಾಗಿ ಗೊತ್ತಾಗಲಿದೆ. ಪಕ್ಷದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಬಹುದು. ಎಲ್ಲ ಪಕ್ಷಗಳು ವಿಪ್ ನೀಡುತ್ತವೆ. ಆದರೆ, ವಿಪ್ ಉಲ್ಲಂಘಿಸಿದರೂ ಸದಸ್ಯತ್ವಕ್ಕೆ ಅಡ್ಡಿ ಏನಿಲ್ಲ.
ಜೆಡಿಎಸ್​ನಲ್ಲಿದೆ ಭೀತಿ?:ಬಿಜೆಪಿಯ ಹೆಚ್ಚುವರಿ ಹಾಗೂ ಕಾಂಗ್ರೆಸ್​ನಿಂದ ಅಸಮಾಧಾನಿತರ ಮತಗಳನ್ನು ಪಡೆದು ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳುವ ನಿರೀಕ್ಷೆ ಜೆಡಿಎಸ್​ನದ್ದಾಗಿದೆ. ಜೆಡಿಎಸ್​ನ 19 ಹಾಗೂ ಬಿಜೆಪಿಯ ಹೆಚ್ಚುವರಿ ಮತ 17 ಸೇರಿದರೂ 9 ಮತಗಳ ಅಗತ್ಯವಿದೆ. ಜನಾರ್ದನ ರೆಡ್ಡಿಯ ಮತ ಗ್ಯಾರಂಟಿ ಇದೆ. ಇನ್ನೂ ಎಂಟು ಮತಗಳಿಗೆ ಪ್ರಯತ್ನ ಮಾಡಬೇಕಾಗಿದೆ. ಜೆಡಿಎಸ್​ನಲ್ಲಿ ಅಡ್ಡ ಮತದಾನ ಹಿಂದೆಯೂ ನಡೆದಿದೆ. ಸುಮಾರು 7 ಮತಗಳು ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಹೋದ ಉದಾಹರಣೆಗಳಿವೆ. ಈ ಬಾರಿಯೂ ನಾಲ್ಕು ಮತಗಳನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಗೆ ಸುಲಭ:ವಿಧಾನಸಭೆಯಲ್ಲಿ ಬಿಜೆಪಿ 66 ಸದಸ್ಯರಿದ್ದಾರೆ. ಒಂದು ಸ್ಥಾನ ಗೆಲ್ಲಲು ಬೇಕಾದ 46 ಮತಗಳ ಬಳಿಕ 20 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಆದರೆ, ಬಿಜೆಪಿ ತನ್ನ ಅಭ್ಯರ್ಥಿಗೆ ಎರಡು ಅಥವಾ ಮೂರು ಮತಗಳನ್ನು ಹೆಚ್ಚುವರಿಯಾಗಿ ಹಾಕಿಕೊಳ್ಳಲಿದೆ. ಹೀಗಾಗಿ 17 ಮತಗಳು ಮಾತ್ರ ಉಳಿಯಬಹುದು. ಆದರೆ ಬಿಜೆಪಿಯಲ್ಲಿ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಬೆಂಬಲಿಸ ಬಹುದೆಂದು ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಇವರಿಬ್ಬರ ನಡೆ ಗೊತ್ತಾಗಲಿ ಎಂಬುದು ಬಿಜೆಪಿಯ ಅಭಿಪ್ರಾಯವೂ ಆಗಿದೆ.
ಕಾಂಗ್ರೆಸ್ ಸ್ಥಿತಿ ಏನು?:ಕಾಂಗ್ರೆಸ್​ಗೆ ವಿಧಾನಸಭೆಯಲ್ಲಿ 135 ಸದಸ್ಯರಿದ್ದಾರೆ. ಜತೆಗೆ ಪಕ್ಷೇತರರಾದ ಪುಟ್ಟಸ್ವಾಮಿ ಗೌಡ, ಲತಾ ಮಲ್ಲಿಕಾರ್ಜುನ್ ಹಾಗೂ ಸವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತಗಳನ್ನು ನೆಚ್ಚಿಕೊಂಡಿದೆ. ತನ್ನ ಯಾವುದೇ ಮತ ಚದುರದಂತೆ ನೋಡಿಕೊಂಡು ಪಕ್ಷೇತರರ ಮತಗಳನ್ನು ಪಡೆದರೆ ಮೂವರು ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಮತಬುಟ್ಟಿಗೆ ಕುಪೇಂದ್ರ ರೆಡ್ಡಿ ಕೈ ಹಾಕಿದರೆ ಸಮಸ್ಯೆಯಾಗಲಿದೆ. ಆ ರೀತಿ ಆಗದಂತೆ ಕಾಂಗ್ರೆಸ್ ನಾಯಕರು ಎಚ್ಚರಿಕೆ ವಹಿಸುತ್ತಿ ದ್ದಾರೆ. ಸರ್ಕಾರ ಇನ್ನೂ 4 ವರ್ಷ ಇರುವುದರಿಂದ ತನ್ನ ಶಾಸಕರು ಅಡ್ಡ ಮತದಾನದಲ್ಲಿ ಭಾಗವಹಿಸು ವುದಿಲ್ಲವೆಂಬ ನಂಬಿಕೆ ಪಕ್ಷದಲ್ಲಿದೆ.
ವಿಧಾನಸಭೆಯ ಬಲಾಬಲ:ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19, ಪಕ್ಷೇತರ 4, ಒಟ್ಟು 224
ನಮಗೂ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ನಮ್ಮ ಅಭ್ಯರ್ಥಿಗಳಿಗೂ ಆತ್ಮಸಾಕ್ಷಿ ಮತಗಳು ಬೀಳಲಿವೆ. ಜೆಡಿಎಸ್ ವಿಫಲವಾಗಿರುವ ಕಾರಣದಿಂದ ಅವರು ಬಿಜೆಪಿ ಜತೆ ನೆಂಟಸ್ಥನ ಮಾಡುತ್ತಿದ್ದಾರೆ. ಆ ಪಕ್ಷಗಳಿಂದ ನಮಗೂ ಆತ್ಮಸಾಕ್ಷಿಯ ಮತಗಳು ಬರುವ ವಿಶ್ವಾಸವಿದೆ. ಬಿಜೆಪಿ ಮತ್ತು ಜೆಡಿಎಸ್​ನವರು ಕುದುರೆ ವ್ಯಾಪಾರಕ್ಕೆ ಹೆಸರುವಾಸಿ. ಬಿಜೆಪಿಯ ಎಷ್ಟು ಮತಗಳು ಅವರಿಗೆ ಸಿಗಲಿದೆ ಎಂಬುದನ್ನು ಕಾದುನೋಡಿ.
-ಡಿ.ಕೆ. ಶಿವಕುಮಾರ್ ಉಉಪ ಮುಖ್ಯಮಂತ್ರಿ
ನಮ್ಮ ಪಕ್ಷದ ಮತಗಳು ನಷ್ಟವಾಗಬಾರದು ಎಂಬ ಕಾರಣಕ್ಕೆ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದ್ದೇವೆ. ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯನಾಯಕರ ಸಲಹೆ ಮೇರೆಗೆ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಗೆಲುವಿಗೆ ಸಂಖ್ಯಾಬಲದ ಕೊರತೆ ಇರುವುದು ನಿಜ. ಬಿಜೆಪಿಯ ಹೆಚ್ಚುವರಿ ಮತಗಳು ನಮಗೆ ದೊರೆಯಲಿವೆ.
-ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅತ್ಯುತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ರಾಜ್ಯದಲ್ಲೂ ಬಿಜೆಪಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತ ಬಂದಿದೆ. ಹಿಂದೆ ಬಿಜೆಪಿ ರಾಜ್ಯ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ -ಠಿ;7,500 ಕೋಟಿ ಮೀಸಲಿಟ್ಟಿತ್ತು. ಸಿದ್ದರಾಮಯ್ಯ ಸರ್ಕಾರವು -ಠಿ;4,500 ಕೋಟಿ ಮೀಸಲಿಟ್ಟು, ಕೃಷಿ ಕ್ಷೇತ್ರಕ್ಕೂ ಮೊತ್ತ ಕಡಿಮೆ ಮಾಡಿ ರೈತರಿಗೆ ಅನ್ಯಾಯ ಮಾಡಿದೆ. ಕೇಂದ್ರದ ವಿರುದ್ಧ ಹೋರಾಟಕ್ಕೆ ಬೀದಿಗೆ ಇಳಿದಿರುವುದು ಕಾಂಗ್ರೆಸ್ ಷಡ್ಯಂತ್ರ.
-ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಮೈತ್ರಿ ಪಕ್ಷಗಳಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಇಬ್ಬರೂ ಗೆಲ್ಲುವ ವಿಶ್ವಾಸವಿದೆ. ಇಂಡಿ ಒಕ್ಕೂಟದಲ್ಲಿ ಎಲ್ಲ ಪಕ್ಷಗಳು ಒಂದೊಂದಾಗಿ ಖಾಲಿ ಆಗುತ್ತಿವೆ. ಕೊನೆಗೆ ಐ ಮಾತ್ರ ಉಳಿಯಲಿದೆ. ಮಮತಾ ಖಾಲಿ, ಒಕ್ಕೂಟ ಹುಟ್ಟು ಹಾಕಿದ ನಿತೀಶ್ ಖಾಲಿ, ಕೇಜ್ರಿವಾಲ್ ಖಾಲಿ. ಮಹಾರಾಷ್ಟ್ರದಲ್ಲಿ ಅಶೋಕ್ ಚೌಹಾಣ್ ಕಾಂಗ್ರೆಸ್ ತೊರೆದಿದ್ದಾರೆ. ಹತಾಶವಾದ ಕಾಂಗ್ರೆಸ್ ರೈತರನ್ನು ಟೂಲ್ ಕಿಟ್ ಆಗಿ ಬಳಸಿಕೊಂಡಿದೆ. ರೈತರು ಕೇಳುವ ಮೊದಲೇ ಕಾಂಗ್ರೆಸ್ ಬೆಂಬಲ ಘೊಷಿಸಿದೆ. ಇದು ಹತಾಶೆಯ ಸಂಕೇತ. ಇವರೇ ಇದರ ಸೂತ್ರಧಾರರು.
-ಆರ್. ಅಶೋಕ್ ಪ್ರತಿಪಕ್ಷ ನಾಯಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 18 =
Remember me
