ಬೆಂಗಳೂರು:ಗಣೇಶ ಚತುರ್ಥಿ ನಿಮಿತ್ತ ರಾಜಧಾನಿಯಲ್ಲಿ ಗಣೇಶ ಮತ್ತು ಗೌರಿ ಮೂರ್ತಿಗಳ ಖರೀದಿಯ ಭರಾಟೆ ಜೋರಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿದೆ.
ದೊಡ್ಡ ದೊಡ್ಡ ಸಂಘ ಸಂಸ್ಥೆಗಳು ಕೋಟ್ಯಂತರ ರೂ.ವ್ಯಯಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿವೆ. ಗಲ್ಲಿ ಗಲ್ಲಿಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಗೆ ತಳಿರು ತೋರಣ, ಹೂವುಗಳಿಂದ ಅಲಂಕರಿಸಿದ್ದು, ಹಬ್ಬದಿನದಂದು ಸಂಪ್ರದಾಯದಂತೆ ಮೂರ್ತಿಗಳ ಬರಮಾಡಿಕೊಳ್ಳಲು ತಯಾರಿ ನಡೆಯುತ್ತಿದೆ. 3-4 ದಿನಗಳಿಂದ ಲಕ್ಷಕ್ಕೂ ಅಧಿಕ ಮೂರ್ತಿಗಳು ಮಾರಾಟವಾಗಿದೆ.
ಬಸವನಗುಡಿ, ಆರ್.ವಿ.ರಸ್ತೆ, ಮಲ್ಲೇಶ್ವರ, ಬಾಣಸವಾಡಿ, ಯಶವಂತಪುರ, ಹನುಮಂತನಗರ, ಶಿವಾಜಿನಗರ, ಟ್ಯಾನರಿ ರಸ್ತೆ, ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ, ಜೆ.ಪಿ.ನಗರ ಮತ್ತು ಮೈಸೂರು ರಸ್ತೆ ಸೇರಿ ನಗರದ ಇತರೆಡೆ ಮಾರಾಟ ಮಳಿಗೆಗಳಲ್ಲಿ ಸಾರ್ವಜನಿಕರು ಗಣಪ ಮೂರ್ತಿ ಖರೀದಿಸಿ ಕಾರು ಮತ್ತು ಆಟೋದಲ್ಲಿ ಕೊಂಡೊಯ್ಯುತ್ತಿದ್ದ ದೃಶ್ಯ ಭಾನುವಾರ ಕಂಡುಬಂತು. ಕೆಲವರು ಕುಟುಂಬ ಸಮೇತ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದರೆ, ಗಣೇಶ ಹಬ್ಬ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿರುವ ಕೆಲವರು, ತಂಡೋಪತಂಡವಾಗಿ ಆಗಮಿಸಿ ಮೂರ್ತಿಗಳ ಖರೀದಿಯಲ್ಲಿ ತೊಡಗಿದರು. ಗೌರಿ ಮೂರ್ತಿಗೆ 100 ರೂ.ನಿಂದ 2 ಸಾವಿರ ರೂ.ವರೆಗೆ, ಗಣಪ ಮೂರ್ತಿಗಳು 500 ರೂ. ನಿಂದ 5 ಲಕ್ಷ ರೂ.ವರೆಗೆ ಮಾರಾಟವಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಾರ್ಮಿಕರ ಮತ್ತು ಜೇಡಿಮಣ್ಣಿನ ಕೊರತೆಯಿಂದಾಗಿ ಬೆಲೆ ಹೆಚ್ಚಳವಾಗಿದೆ.
ತರಹೇವಾರಿ ಗಣೇಶ ಮೂರ್ತಿಗಳುಅಪ್ಪು ಮಾದರಿ ಗಣಪ, ಹರಿಶಿಣ ಗಣಪ, ಒಡಿಶಾ ಶೈಲಿಯ ಗಣೇಶ, ಬಾಂಬೆಯಲ್ಲಿ ಜನಪ್ರಿಯವಾಗಿರುವ ‘ಲಾಲ್‌ಬಾಗ್ ರಾಜ’, ಪೂನಾಡಿನ ‘ದಗಡು ಸೇಟ್ ಗಣಪ’, ವಿಳೀಪುರಂನ ‘ಪೇಪರ್ ಗಣಪ’, ಪರಿಸರ ಪೂರಕ ‘ಜೇಡಿ ಮಣ್ಣಿನ ಗಣಪ’, ‘ಪೇಪರ್ ಗಣೇಶ’, ಗಜಗೌರಿ, ಮಂಗಳ ಗೌರಿ, ಮಡಿ ಗೌರಿ, ಮೈಸೂರು ಗೌರಿ, ಬೆಂಗಳೂರು ಗೌರಿಯರು ಸೇರಿ ತರಹೇವಾರಿ ಗೌರಿಗಳು ನೋಡುಗರ ಗಮನ ಸೆಳೆಯುತ್ತಿವೆ. ಅವರವರ ಸಂಪ್ರದಾಯಕ್ಕೆ ತಕ್ಕಂತೆ ಉದ್ದನಾಮ ಹಾಗೂ ಅಡ್ಡನಾಮವುಳ್ಳ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ಪಾಂಡೀಚೇರಿ, ಕೃಷ್ಣಗಿರಿ, ಮುಂಬೈ, ಕೊಲ್ಲಾಪುರ, ಕೋಲ್ಕತ್ತಾ, ಹೈದರಾಬಾದ್ ಸೇರಿ ದೇಶದ ವಿವಿಧ ನಗರಗಳಿಂದ ಕೆಲ ಗಣಪಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈ ಬಾರಿ 3 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳು ಮಾರಾಟವಾಗಲಿವೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಆಸೀಸ್ ಎದುರು ಏಕದಿನ ಸರಣಿ ಗೆದ್ದ ದಕ್ಷಿಣ ಆಫ್ರಿಕಾ: ಪಾಕ್‌ಗೆ ಒಲಿದ ಅದೃಷ್ಟ
ಪರಿಸರಕ್ಕೆ ಪಿಒಪಿ ಹಾನಿಕಾರಕನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಬಳಸಿ ಗಣೇಶ ಮೂರ್ತಿ ತಯಾರಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರಸ್ನೇಹಿ ಗಣೇಶ ಮಾತ್ರ ಪ್ರತಿಷ್ಠಾಪಿಸಬೇಕು. ರಾಸಾಯನಿಕ ಬಣ್ಣ, ಥರ್ಮಾಕೋಲ್ ಹಾಗೂ ಪಿಒಪಿ ಬಳಸಿ ತಯಾರಿಸುವ ಮೂರ್ತಿಯನ್ನು ನಿಷೇಧಿಸಲಾಗಿದೆ. ರಾಸಾಯಾನಿಕ ವಸ್ತುಗಳನ್ನು ಬಳಸಿ ತಯಾರಿಸಿ ಮಾರಾಟ ಮಾಡಿದಲ್ಲಿ ದಂಡ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ನಿಷೇಧಿಸಿದ ವಸ್ತುಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡುವುದಾಗಿ ಪಾಲಿಕೆ ಆದೇಶಿಸಿದೆ. ಆದರೂ ಕೆಲವೆಡೆ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮಾಡಲಾಗುತ್ತಿದೆ. ಕೆಲವರು 10 ಅಡಿಗಿಂತ ಅಧಿಕ ಮೂರ್ತಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದರೆ, ಇನ್ನೂ ಕೆಲವೆಡೆ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕಯುಕ್ತ ಬಣ್ಣಗಳಲ್ಲಿರುವ ಮರ್ಕ್ಯುರಿ, ಆರ್ಸೆನಿಕ್, ಲೆಡ್, ಕ್ರೋಮಿಯಂ, ತಾಮ್ರ, ಕ್ಯಾಡ್ಮಿಯಂ, ಕೋಬಾಲ್ಟ್, ಸತು ಇತ್ಯಾದಿ ಹಾನಿಕಾರಕ ವಸ್ತುಗಳನ್ನು ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ನೀರಿನಲ್ಲಿ ವಿಸರ್ಜಿಸಿದಾಗ ನೀರಿನ ಮೂಲಗಳು ಕಲುಷಿತವಾಗುತ್ತವೆ. ನೀರಿನಲ್ಲಿನ ಮೀನುಗಳು ಸೇರಿ ಇತರೆ ಜಲಚರಗಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಈ ನೀರನ್ನು ಬಳಸುವಂತಹ ಸುತ್ತಮುತ್ತಲಿನ ಜನ ಹಾಗೂ ಜಾನುವಾರುಗಳಿಗೆ ವಿವಿಧ ರೀತಿಯ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಂತಹ ರೋಗರುಜಿನಗಳು ಹರಡುವ ಸಾಧ್ಯತೆಯಿದೆ. ಹೀಗಾಗಿ, ಪರಿಸರಕ್ಕೆ ಹಾನಿ ಉಂಟುಮಾಡುವ ಪಿಒಪಿ ಗಣೇಶ ಮೂರ್ತಿ ಖರೀದಿಸಬೇಡಿ ಎಂಬುದು ಪರಿಸರವಾದಿಗಳ ಸಲಹೆ.
ಪೇಪರ್ ಮೂರ್ತಿ ಗಣೇಶಕ್ಕೆ ಮೊರೆಆಂಧ್ರಪ್ರದೇಶ, ತಮಿಳುನಾಡುನಿಂದ ರಾಜ್ಯಕ್ಕೆ ಹೆಚ್ಚು ಪೇಪರ್ ಗಣೇಶ ಮೂರ್ತಿ ಆಮದಾಗುತ್ತಿವೆ. ಇವುಗಳನ್ನು ತಯಾರಿಸುವುದು ಕಷ್ಟ. ಆದರೆ, ನಿರ್ವಹಣೆ ಸುಲಭ. ಪೂಜೆಯ ನಂತರ ವಿಸರ್ಜನೆಗೆ ತೊಡಕಿಲ್ಲ. ಇಂಥ ಮೂರ್ತಿಗಳು ಪರಿಸರಕ್ಕೆ ಹಾನಿಯಾಗದು. ಹೀಗಾಗಿ, ಗ್ರಾಹಕರು ಕೂಡ ಪೇಪರ್ ಗಣೇಶ ಮೂರ್ತಿಗಳ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇನ್ನೂ ಕೆಲವರು ಪೂಜೆಗೆ ಶ್ರೇಷ್ಠವೆಂದು ಮಣ್ಣಿನಿಂದ ತಯಾರಿಸಿರುವ ಗಣಪತಿಯೇ ಖರೀದಿಸಲಾಗುತ್ತಿದೆ. ಒಟ್ಟಿನಲ್ಲಿ ಜನರು ಸಂಭ್ರಮ ಸಡಗರಿಂದ ಮೂರ್ತಿಗಳನ್ನು ಖರೀದಿಸುವಂತಾಗಿದೆ ಎನ್ನುತ್ತಾರೆ ರಾಜಶೇಖರ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 2 =
Remember me
