ಕಾರವಾರ:ಬಾಟಲಿ ಮೇಲ್ಭಾಗಲ್ಲಿ ಜೈವಿಕ ಎನ್ನುವ ಲೇಬಲ್! ಒಳಗಡೆ ಇರುವುದು ಶುದ್ಧ ರಾಸಾಯನಿಕ! ಇದು ರಾಜ್ಯ ಹಾಗೂ ಹೊರ ರಾಜ್ಯಗಳ 100 ಜೈವಿಕ ಕೀಟನಾಶಕಗಳ ಅಸಲಿಯತ್ತು. ಜೈವಿಕ ಕೀಟ ನಾಶಕಗಳು ವಿಷಕಾರಿ ರಾಸಾಯನಿಕ ಮಿಶ್ರಣ ಹೊಂದಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ಸಾಬೀತಾಗಿದ್ದು, ಇದರ ತಯಾರಿಕಾ ಕಂಪನಿಗಳು ಕೀಟನಾಶಕ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿವೆ. ಹಾಗಾಗಿ ಕಾನೂನು ಕ್ರಮ ವಹಿಸುವಂತೆ ಕೃಷಿ ಇಲಾಖೆ ಆಯುಕ್ತರ ಕಾರ್ಯಾಲಯ ಎಲ್ಲ ಜಿಲ್ಲೆಯ ಜಂಟಿ ನಿರ್ದೇಶಕರಿಗೆ ಫೆ.17 ರಂದು ಆದೇಶ ಹೊರಡಿಸಿದೆ. ಯಾವುದೇ ಜಿಲ್ಲೆಯಲ್ಲಿ ಅಂಥ ಕೀಟನಾಶಕಗಳು ಮಾರಾಟ ಕಂಡು ಬಂದಲ್ಲಿ ಕ್ರಮ ವಹಿಸಬೇಕು. ಇಂಥ ಉತ್ಪನ್ನಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪರವಾನಗಿ ರದ್ದು?:ನಿಯಮಗಳನ್ನು ಉಲ್ಲಂಘನೆ ಮಾಡಿದ ಕಂಪನಿಗಳ ಪರವಾನಗಿ ರದ್ದು ಮಾಡಬೇಕು ಹಾಗೂ ಅಂಥ ಕಂಪನಿ ಮತ್ತು ಮಾರಾಟಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಕೀಟನಾಶಕ ಕಾಯ್ದೆ 1968 ಹಾಗೂ 1971 ನಿಯಮಗಳು ಹೇಳುತ್ತವೆ. ಬುಲ್ ಫೈಟ್, ರಾಕ್ ಸ್ಟಾರ್, ಥ್ರಿಶೂಲ್, ಬಯೋ ಸ್ಪೀಡ್, ಸ್ಟಾರ್ ಗೋಲ್ಡ್ ಸೇರಿ ನಿಯಮ ಉಲ್ಲಂಘಿಸಿದ 100 ಕಂಪನಿಗಳ ಪಟ್ಟಿಯನ್ನು ಕೃಷಿ ಇಲಾಖೆ ಮಾಡಿದೆ. ಅವುಗಳಿಗೀಗ ಪರವಾನಗಿ ರದ್ದಾಗುವ ಆತಂಕ ಎದುರಾಗಿದೆ. ಕೆಲ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿವೆ. ಯಾವ ಕಂಪನಿ ಅವು ಎಂಬ ಮಾಹಿತಿ ಇಲ್ಲ ಎನ್ನುವುದಾಗಿ ಹೆಸರು ಹೇಳಲಿಚ್ಛಿಸದ ಕೃಷಿ ಅಧಿಕಾರಿ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕಡಿಮೆ:ಅಕ್ರಮ ಎಸಗಿರುವ ಕಂಪನಿಗಳಲ್ಲಿ ಹೆಚ್ಚಿನವು ಹೈದರಾಬಾದ್ ಮೂಲದವು. ಕೆಲವು ಬೆಂಗಳೂರು ಹಾಗೂ ಗೋವಾದ ಕಂಪನಿಗಳೂ ಕೃಷಿ ಇಲಾಖೆ ಗುರುತಿಸಿರುವ ಪಟ್ಟಿಯಲ್ಲಿವೆ. ಎಲ್ಲ ಕಂಪನಿಗಳು ಜೈವಿಕ ಕೀಟ ನಾಶಕಗಳಿಗೆ ಸಂರಕ್ಷಕ ಎಮಾಮೆಥಿನ್ ಬೆಂಜೊಯೆಟ್ ಎಂಬ ರಾಸಾಯನಿಕ ಬಳಸುತ್ತಿವೆ. ಅದನ್ನು ಹೊರತುಪಡಿಸಿಯೂ ಯಾವ್ಯಾವ ರಾಸಾಯನಿಕ ಬಳಸುತ್ತಿವೆ ಎಂಬುದನ್ನು ಕೃಷಿ ಇಲಾಖೆ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ತೊಂದರೆ ಏನು?:ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದಂತೆ ಕೆಲ ರೈತರು ಜೈವಿಕ ಕೀಟನಾಶಕಗಳ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ. ರೈತರ ಮನೋಭಾವ ವನ್ನು ವರವಾಗಿಸಿಕೊಂಡ ಕಂಪನಿಗಳು ಜೈವಿಕ ಗೊಬ್ಬರ, ಬೆಳೆ ಪ್ರಚೋದಕ, ಕೀಟನಾಶಕದ ತಯಾರಿಕೆ ಹೆಸರಿನಲ್ಲಿ ಪರವಾನಗಿ ಪಡೆದು, ಪ್ರಚಾರ ಮಾಡುತ್ತಿವೆ. ಅದನ್ನು ನಂಬಿ ಬಳಸಿದಲ್ಲಿ ಸಾವಯವ ರೈತರ ಉತ್ಪನ್ನಗಳು ಸಾವಯವ ಮಾನ್ಯತೆ ಪಡೆಯದೇ ಇರಬಹುದು. ಮುನ್ನೆಚ್ಚರಿಕೆ ವಹಿಸದೇ ಬಳಸಿದಲ್ಲಿ ರೈತರ, ಕೃಷಿ ಕೂಲಿ ಕಾರ್ವಿುಕರ ಜೀವಕ್ಕೆ ತೊಂದರೆ ಉಂಟಾಗಬಹುದು. ಅಲ್ಲದೆ, ಆಹಾರ ಉತ್ಪನ್ನಗಳನ್ನು ಸೇವಿಸುವ ಜನರ ಮೇಲೂ ದುಷ್ಪರಿಣಾಮ ಬೀರುವ ಆತಂಕವಿದೆ.
ಜೀವದ ಜತೆ ಚೆಲ್ಲಾಟ
ಕರಾವಳಿ ಭಾಗದಲ್ಲಿ ಎಂಡೋಸ ಲ್ಪಾನ್ ಕೀಟನಾಶಕವನ್ನು ಸರ್ಕಾರ ಗೇರು ಬೆಳೆಗೆ ಉಪಯೋಗಿಸಿದ್ದರಿಂದ ಮೂರು ಜಿಲ್ಲೆಗಳ 6 ಸಾವಿರಕ್ಕೂ ಅಧಿಕ ಜನ ಅಂಗವೈಕಲ್ಯಕ್ಕೆ ಒಳಗಾಗಿ ಚಿತ್ರಹಿಂಸೆ ಅನುಭವಿಸುತ್ತಿರುವುದು ಕರಾಳ ಇತಿಹಾಸ. ಇಂಥ ಜೀವಂತ ಉದಾಹರಣೆ ನಂತರವೂ ನಿಷೇಧವಾಗಿರುವ ಹಲವು ಕೀಟನಾಶಕಗಳು ವ್ಯಾಪಕವಾಗಿ ಬಳಕೆ ಹಾಗೂ ಮಾರಾಟವಾಗುತ್ತಿರುವ ಆರೋಪವಿದೆ. ಜನರ ಜೀವದ ಜತೆ ಆಟವಾಡುವ ಇಂಥ ಕಂಪನಿಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಜೈವಿಕ ಕೀಟ ನಾಶಕದ ಹೆಸರಿನಲ್ಲಿ ರಾಸಾಯನಿಕ ಬಳಸಿ ಮಾರಾಟ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಮಾಹಿತಿ ಪಡೆದು ಅಂಥ ಕಂಪನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲು ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಲಾಗುವುದು.
| ಬಿ.ಸಿ. ಪಾಟೀಲ್ ಕೃಷಿ ಸಚಿವ
| ಸುಭಾಸ ಧೂಪದಹೊಂಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
