ಬೆಂಗಳೂರು:ವಿಲೀನ ಮತ್ತು ಬಡ್ತಿ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಸಾವಿರಾರು ಇಂಜಿನಿಯರ್​ಗಳು, ಜ್ಯೇಷ್ಠತೆಯಲ್ಲಿ ತಮಗಾಗುತ್ತಿರುವ ಅನ್ಯಾಯ ಸರಿಪಡಿಸಿಕೊಳ್ಳಲು ಪ್ರತ್ಯೇಕವಾಗಿ ನ್ಯಾಯಾಲಯದ ಮೆಟ್ಟಿಲೇರಲು ಆರಂಭಿಸಿದ್ದಾರೆ.
ಈ ನಡುವೆ ಇಂಜಿನಿಯರ್​ಗಳ ಬಡ್ತಿ ಸಮಸ್ಯೆ ವಿಚಾರವಾಗಿ ಲೋಕೋಪಯೋಗಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೋಮವಾರ ಸಭೆ ನಡೆಸಲಿದ್ದಾರೆ. ಒಂದು ಬಾರಿ ಇಲಾಖೆ ವಿಭಜಿಸುವವರೆಗೂ ಬಡ್ತಿ ಪ್ರಕ್ರಿಯೆ ತಡೆ ಹಿಡಿಯುವುದು ಮತ್ತು ಗೊಂದಲಗಳನ್ನು ಪರಿಹರಿಸುವ ಬಗ್ಗೆ ರ್ಚಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಚೆಯಿಂದಲೂ ಲೋಕೋಪಯೋಗಿ ಇಲಾಖೆಯೇ ಹತ್ತು ಹಲವು ಇಲಾಖೆಗಳಿಗೆ ಅಗತ್ಯವಾದ ಇಂಜಿನಿಯರ್​ಗಳನ್ನು ನಿಯೋಜಿಸುತ್ತಿತ್ತು. ಆದರೆ ಇತ್ತೀಚೆಗೆ ಬೇರೆ ಬೇರೆ ಇಲಾಖೆಗಳು ತಾವೇ ಸ್ವತಃ ಇಂಜಿನಿಯರ್​ಗಳನ್ನು ನೇಮಿಸಿಕೊಳ್ಳುವುದು ಮತ್ತು ಬಡ್ತಿ ನೀಡುವುದು ಮಾಡುತ್ತಿವೆ. ಆದರೆ, ಈ ಹಿಂದಿನಿಂದಲೂ ಲೋಕೋಪಯೋಗಿ ಇಲಾಖೆಯ ಜಂಟಿ ಜ್ಯೇಷ್ಠತಾ ಪಟ್ಟಿ ಯಂತೆಯೇ ನಡೆದು ಈಗ ಆಯಾಯ ಇಲಾಖೆಗಳಲ್ಲಿ ಬಡ್ತಿ ನೀಡುತ್ತಿರುವುದರಿಂದ ಮಾತೃಇಲಾಖೆ ಲೋಕೋಪಯೋಗಿ ಇಲಾಖೆ ಯಲ್ಲಿ ಕಾರ್ಯನಿರ್ವಹಿಸುವವರಿಗೆ ಬಡ್ತಿ ಇಲ್ಲದೆ, ಜ್ಯೇಷ್ಠತೆಯಲ್ಲೂ ಹಿಂದೆ ಬೀಳುತ್ತ ಪರದಾಡುವಂತಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ ನಗರಾಭಿವೃದ್ಧಿ, ವಸತಿ, ಸಹಕಾರ ಇಲಾಖೆ, ಪಾಲಿಕೆಗಳಲ್ಲಿ ಇಂಜಿನಿಯರ್​ಗಳನ್ನು ನಿಯೋಜಿ ಸುವುದು ಲೋಕೋಪಯೋಗಿ ಇಲಾಖೆಯೇ ಆಗಿತ್ತು. ಈ ಇಲಾಖೆಗಳ ಕಿರಿಯ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಾರ್ಯಪಾಲಕ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್ ಸೇರಿ ಎಲ್ಲ ಹಂತದ ಇಂಜಿನಿಯರ್ ಹುದ್ದೆಗಳ ಜವಾಬ್ದಾರಿಯೂ ಲೋಕೋಪಯೋಗಿಯದ್ದೇ ಆಗಿತ್ತು. ಕಾಲಾನುಕ್ರಮದಲ್ಲಿ ವಿವಿಧ ಇಲಾಖೆಗಳು ಲೋಕೋಪಯೋಗಿ ಇಲಾಖೆ ಹುದ್ದೆಗಳನ್ನು ಬದಿಗಿಟ್ಟು ತಾವೇ ಸ್ವತಃ ನೇಮಕ ಮಾಡಿಕೊಳ್ಳಲಾರಂಭಿಸಿದವು ಮತ್ತು ತಮಗಿಷ್ಟ ಬಂದಾಗ ಬಡ್ತಿ ನೀಡಿದವು. ಈ ಬೆಳವಣಿಗೆಯಿಂದ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಇಂಜಿನಿಯರ್​ಗಳಿಗೆ ಬಡ್ತಿ ಸಿಗದೇ ಹೋಯಿತು. ಬೇರೆ ಇಲಾಖೆಗೆ ಇಲ್ಲಿಂದಲೇ ಹೋದವರಿಗೆ ಬಡ್ತಿ ಸಿಕ್ಕಿದ್ದೂ ಇದೆ.
ಉದಾಹರಣೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಎಇ ಹುದ್ದೆಯಿಂದ ಎಇಇ ಹುದ್ದೆಗೆ ಬಡ್ತಿ ಸಿಗಲು 25 ವರ್ಷ ಬೇಕಾಗಿದ್ದೂ ಇದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಇದೇ ಹುದ್ದೆಗೆ 4 ವರ್ಷಕ್ಕೆ, ಜಲಸಂಪನ್ಮೂಲ ಇಲಾಖೆಯಲ್ಲಿ 11 ವರ್ಷ, ಗೃಹಮಂಡಳಿಯಲ್ಲಿ 2 ವರ್ಷ, ಸ್ಲಂ ಬೋರ್ಡ್​ನಲ್ಲಿ 1 ವರ್ಷಕ್ಕೆ ಬಡ್ತಿ ನೀಡಲಾಗಿದೆ. 2015-16ರಲ್ಲಿ ನೇಮಕ ವಾದವರು ಅಧೀಕ್ಷಕ ಇಂಜಿನಿಯರ್ ಆದವರೂ ಇದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಸಂಯುಕ್ತ ಜ್ಯೇಷ್ಠತಾ ಪಟ್ಟಿ ಇರುವಾಗ ಬೇರೆ ಬೇರೆ ಇಲಾಖೆಗಳು ತಾವೇ ಇಂಜಿನಿಯರ್​ಗಳನ್ನು ನೇಮಿಸಿ ಕೊಂಡು ಬಡ್ತಿ ನೀಡುತ್ತಿರುವುದರಿಂದ ಅನೇಕ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವವರು ಕಕ್ಕಾಬಿಕ್ಕಿ ಆಗುವಂತಾಗಿದೆ.
ಯಾರ ತಪ್ಪು?:ಗೊಂದಲ ಕಾಲಕಾಲಕ್ಕೆ ತೀವ್ರಗೊಂಡು, ಪರಿಹಾರ ಸೂತ್ರವಾಗಿ ಇಲಾಖೆ ವಿಭಜನೆ ಪ್ರಕ್ರಿಯೆ ನಡೆಯು ತ್ತದೆ. ಆದರೆ ಅದು ತಾತ್ವಿಕ ಅಂತ್ಯ ಕಾಣುತ್ತಲೇ ಇಲ್ಲ. ಸಂಪುಟ ಉಪ ಸಮಿತಿ ಇದ್ದರೂ ಪರಿಹಾರ ಕೊಟ್ಟಿಲ್ಲ. ಅಪರ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿಯೂ ಪರಿಹಾರ ಸೂತ್ರ ಕಂಡುಕೊಂಡಿಲ್ಲ. ಇಷ್ಟರ ನಡುವೆ ಬಡ್ತಿ ನೀಡುವ ಕೆಲಸ ಇತರೆ ಇಲಾಖೆಗಳಲ್ಲಿ ನಡೆದೇ ಇದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೇ ಬಡ್ತಿ ನೀಡುವ ಜವಾಬ್ದಾರಿ ತೆಗೆದುಕೊಂಡರೂ ಸಮಸ್ಯೆ ಆಗುತ್ತಿರಲಿಲ್ಲ. ಈಗಲಾದರೂ ಸಿಎಂ, ಮುಖ್ಯಕಾರ್ಯದರ್ಶಿಯವರು ಸಮಯ ಮಾಡಿಕೊಂಡು ಸಮಸ್ಯೆ ಬಗ್ಗೆ ಕಿವಿಗೊಟ್ಟರೆ ಸಾವಿರಾರು ಇಂಜಿನಿಯರ್​ಗಳಿಗೆ ಅನುಕೂಲವಾಗುತ್ತದೆ ಎಂಬ ಕೂಗಿದೆ. ಜ್ಯೇಷ್ಠತಾ ಪಟ್ಟಿ ಗೊಂದಲದಿಂದಾಗಿಯೇ ಇಂಜಿನಿಯರ್​ಗಳು ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚಿನ ಕೆಲವು ತಿಂಗಳಲ್ಲಿ ನಲವತ್ತು ಪ್ರಕರಣ ನ್ಯಾಯಾಲಯದಲ್ಲಿ ದಾಖಲಾಗಿದೆ. ಎಲ್ಲ ಇಲಾಖೆಗಳಲ್ಲಿ ಸುಮಾರು 7000 ಎಇ, 5000 ಎಇಇ, 3000 ಇಇ, 1000 ಎಸ್​ಇ, 150 ಸಿಇಗಳಿದ್ದು, ಇವರ ಗೊಂದಲಕ್ಕೆ ಪರಿಹಾರ ಸೂತ್ರ ತುರ್ತು ಅಗತ್ಯವಿದ್ದು, ಇಲ್ಲವಾದರೆ ಕಾರ್ಯಕ್ಷಮತೆ ಮೇಲೂ ಪರಿಣಾಮ ಉಂಟಾಗಲಿದೆ.
ಮೇಕ್​ ಇನ್​ ಇಂಡಿಯಾ ಪರಿಕಲ್ಪನೆಯಲ್ಲಿ ಸಜ್ಜಾಯ್ತು ಕರೊನಾ ಲಸಿಕೆ; ಮತ್ತೊಂದು ಔಷಧಕ್ಕೆ ದೇಶೀಯ ಮಾನ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + three =
Remember me
