ಬೆಂಗಳೂರು: ರಾಜ್ಯದಲ್ಲಿಯೂ ಜನತಾ ಕರ್ಫ್ಯೂಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ಇಡೀ ದಿನ ಮನೆಯಿಂದ ಹೊರಬರದೆ ತಮಗೆ ತಾವೇ ದಿಗ್ಬಂಧನ ವಿಧಿಸಿಕೊಳ್ಳುವ ಮುಖಾಂತರ ಮಾರಕ ಕರೊನಾ ಮಣಿಸುವ ಹೋರಾಟಕ್ಕೆ ಜನ ಕೈಜೋಡಿಸಿದರು.
ಬೆಳಗ್ಗೆ 7 ಗಂಟೆಗೆ ಹಾಲು ಮಾರಾಟ ಕೇಂದ್ರಗಳು ವ್ಯಾಪಾರ ಮುಗಿಸಿ ಬಾಗಿಲು ಮುಚ್ಚಿದ್ದವು. ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್ ಮಾಡಿದ್ದರು. ಹೋಟೆಲ್, ಹಣ್ಣು-ತರಕಾರಿ ಮಾರುಕಟ್ಟೆ, ಹೂವು, ಮದ್ಯ ಮಾರಾಟ ಇರಲಿಲ್ಲ. ಸರ್ಕಾರಿ, ಖಾಸಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿದ್ದವು. ಅಲ್ಲೊಬ್ಬ ಇಲ್ಲೊಬ್ಬರ ಓಡಾಟ ಬಿಟ್ಟರೆ, ಯಾರೊಬ್ಬರೂ ಹೊರಗೆ ಸುಳಿದಾಡಲಿಲ್ಲ.
ಸಂಜೆ 5 ಗಂಟೆ ಆಗುತ್ತಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿ ಹಲವು ರಾಜಕರಣಿಗಳು, ಸಿನಿಮಾ ತಾರೆಯರು ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು. ಆ ಮೂಲಕ ವೈದ್ಯರು, ನರ್ಸ್ ಸೇರಿ ಕರೊನಾ ತಡೆಗೆ ಶ್ರಮಿಸುತ್ತಿರುವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ, ಕಲಬುರಗಿ ಸೇರಿ ರಾಜ್ಯಾದ್ಯಂತ ದೈನಂದಿನ ಕೆಲಕಾರ್ಯ ತೊರೆದು ಮನೆಯಲ್ಲಿಯೇ ಬಂಧಿಯಾಗಿದ್ದರು. ಅಗತ್ಯ ವಸ್ತುಗಳಾದ ಔಷಧ, ಹಾಲು, ಪತ್ರಿಕೆ, ಪಟ್ರೋಲ್ ಬಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕಿರಾಣಿ ಅಂಗಡಿಗಳು, ಎಪಿಎಂಸಿ ಮಾರುಕಟ್ಟೆ, ಸಿನಿಮಾ ಥಿಯೇಟರ್, ಐಟಿ-ಬಿಟಿ ಕಂಪನಿಗಳು, ಹೋಟೆಲ್​ಗಳು, ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇವೆ ಬಂದ್ ಆಗಿತ್ತು. ಖಾಸಗಿ ಆಸ್ಪತ್ರೆಗಳು ಹೊರರೋಗಿಗಳ ವಿಭಾಗ ಬಂದ್ ಮಾಡಿದ್ದವು. ಒಳ ರೋಗಿಗಳ ವಿಭಾಗ ಹಾಗೂ ತುರ್ತು ಚಿಕಿತ್ಸೆ ಸೇವೆ ಲಭ್ಯವಿತ್ತು.
ಕುಟುಂಬದ ಜತೆ ಸಂತಸ ಕ್ಷಣಗಳು
ದೇಶವೇ ಬಂದ್ ಆಗಿದ್ದ ಪರಿಣಾಮ ಬಹುತೇಕರು ತಮ್ಮ ಕುಟುಂಬದ ಜತೆ ಇಡೀ ದಿನ ಕಾಲ ಕಳೆದರು. ಶಾಪಿಂಗ್, ಸಿನಿಮಾ, ಪ್ರವಾಸ ಎಂದೆಲ್ಲ ಹೋಗುತ್ತಿದ್ದ ಜನರು ಜನತಾ ಕರ್ಫ್ಯೂದಿಂದ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದರು. ಮಕ್ಕಳು, ಮೊಮ್ಮಕ್ಕಳ ಜತೆ ಆಟ-ಪಾಠ ಎಂದೆಲ್ಲ ಕಾಲ ಕಳೆದರು. ಕೆಲವೆಡೆ ರಸ್ತೆಗಳಲ್ಲಿ ಮಕ್ಕಳು ಆಟವಾಡುತ್ತಿದ್ದ ದೃಶ್ಯ ಕಂಡುಬಂತು.
ನಿಂತಲ್ಲೆ ನಿಂತ ಸಾರಿಗೆ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ 18 ಸಾವಿರಕ್ಕೂ ಹೆಚ್ಚಿನ ಬಸ್​ಗಳು, ನಮ್ಮ ಮೆಟ್ರೋ 50 ರೈಲುಗಳು, ನೈಋತ್ಯ ರೈಲ್ವೆಯ 50ಕ್ಕೂ ಹೆಚ್ಚಿನ ರೈಲುಗಳು, ರಾಜ್ಯಾದ್ಯಂತ ಇರುವ 3 ಲಕ್ಷಕ್ಕೂ ಹೆಚ್ಚಿನ ಆಟೋ, ಬಾಡಿಗೆ ಆಧಾರ ದಲ್ಲಿ ಸಂಚರಿಸುವ 20 ಲಕ್ಷಕ್ಕೂ ಹೆಚ್ಚಿನ ವಾಹನಗಳು ನಿಂತಲ್ಲೇ ನಿಂತಿದ್ದವು. ಜತೆಗೆ ಸರಕು ಸಾಗಣೆ ವಾಹನಗಳು ಕೂಡ ಸಂಚರಿಸಲಿಲ್ಲ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ಬೈಕ್​ಗಳು ಹೊರತುಪಡಿಸಿದರೆ ಮತ್ಯಾವುದೇ ವಾಹನಗಳು ಕಾಣಿಸಲಿಲ್ಲ.
ವೈದ್ಯರ ಕಾಳಜಿಗೆ ಎಚ್​ಡಿಕೆ ಪ್ರಣಾಮ
ಕರೊನಾ ಸೋಂಕು ತಗುಲದಂತೆ ಇನ್ನು ಕೆಲ ವಾರ ಕಾಲ ಸಂಯಮದಿಂದ ಇರುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜನತೆಯಲ್ಲಿ ಮನವಿ ಮಾಡಿದ್ದಾರೆ. ‘ಜನತಾ ಕರ್ಫ್ಯೂ’ ಬೆಂಬಲಿಸಿದ ಸಮಸ್ತ ನಾಗರಿಕರಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ತೋರುತ್ತಿರುವ ಅತೀವ ಜನಪರ ಕಾಳಜಿಗೂ ಪ್ರಣಾಮ ಸಲ್ಲಿಸಿದ್ದಾರೆ.
ಜನತಾ ಕರ್ಫ್ಯೂ ಬೆಂಬಲಿಸಿ ಮನೆಯಿಂದ ಹೊರಗೆ ಬಂದು ಚಪ್ಪಾಳೆ ತಟ್ಟಿದ ರಾಜ್ಯದ ನಾಗರಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
