ಬೆಂಗಳೂರು:ವಿಧಾನಮಂಡಲ ಅಧಿವೇಶನ ರಾಜಕೀಯ ಮೇಲಾಟದಲ್ಲಿ ಮಂಗಳವಾರವೇ ಕೊನೆಗೊಳ್ಳುವುದು ಖಚಿತವಾಗಿದೆ. ಪ್ರತಿಪಕ್ಷದ ಹಠ, ಆಡಳಿತ ಪಕ್ಷದ ಧಾವಂತ ಈ ಬೆಳವಣಿಗೆಗೆ ಪುಷ್ಟಿ ನೀಡಿದೆ. ಕಲಾಪ ಸುಸೂತ್ರವಾಗಿ ನಡೆಯದ ವಾತಾವರಣ ಸೋಮವಾರವೂ ಮರುಕಳಿಸಿತು. ಈ ನಡುವೆ, ಕಿಂಚಿತ್ತೂ ಚರ್ಚೆ ಇಲ್ಲದೆ ನಾಲ್ಕು ಮಹತ್ವದ ವಿಧೇಯಕಗಳ ಅನುಮೋದನೆ ಪ್ರಕ್ರಿಯೆಗೂ ವಿಧಾನಸಭೆ ಸಾಕ್ಷಿಯಾಯಿತು. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮೇಲಾಟ ಮಂಗಳವಾರ ರಾಜಭವನ ತಲುಪಲಿದೆ. 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಶಾಸಕರು ಮಂಗಳವಾರ ಸಂಜೆ ವಿಧಾನಸೌಧದಿಂದ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಲಿದ್ದಾರೆ. ಇದರೊಟ್ಟಿಗೆ ವರ್ಷದ ಆರಂಭದ ಅಧಿವೇಶನವು ಪ್ರತಿಪಕ್ಷದ ಅಸಹಕಾರದೊಂದಿಗೆ ಕೊನೆಗೊಳ್ಳುತ್ತಿದೆ. ಜನರ ನಿರೀಕ್ಷೆ ಹಿನ್ನೆಡೆಗೆ ಸರಿದಂತಾಗಿದೆ. ಸೋಮವಾರ ಕಲಾಪ ಆರಂಭವಾಗುವ ಮುನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ನ
ಪ್ರಮುಖ ನಾಯಕರೊಂದಿಗೆ ಸಮಾಲೋಚಿಸಿ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಕೋರಿದರು. ಆದರೆ, ಈ ಪ್ರಯತ್ನ ಫಲಕೊಡಲಿಲ್ಲ. ಪ್ರಶ್ನೋತ್ತರ ಕಲಾಪ ಗದ್ದಲದಲ್ಲೇ ನಡೆಯಿತು. ಬಿಜೆಪಿ, ಜೆಡಿಎಸ್ ಶಾಸಕರ ಪ್ರಶ್ನೆಗಳಿಗೆ ಸಚಿವರುಗಳು ಉತ್ತರ ನೀಡಿದರು. ಕಾಂಗ್ರೆಸ್ ಶಾಸಕರು ಘೋಷಣೆ ಹಾಕುತ್ತಲೇ ಸ್ಪೀಕರ್ ಪೀಠದ ಮುಂದೆ ಧರಣಿ ನಿರತರಾಗಿದ್ದರು. ಬಳಿಕ ವಿಧೇಯಕಗಳ ಪರ್ಯಾಲೋಚನೆ ಪ್ರಕ್ರಿಯೆ ಆರಂಭವಾದಾಗ ಸ್ಪೀಕರ್ ಪುನಃ ಧರಣಿ ನಿರತರನ್ನು ಮನವೊಲಿಸಲು ಯತ್ನಿಸಿದರು. ಅಭಿಪ್ರಾಯಭೇದ ಇದ್ದೇ ಇರುತ್ತದೆ, ವಿಧೇಯಕದ ಬಗ್ಗೆ ರ್ಚಚಿಸಿ ಎಂದು ಕೇಳಿಕೊಂಡರೂ ಕೈ ಶಾಸಕರು ಹಠ ಬಿಡಲಿಲ್ಲ. ‘ಧ್ವಜ’ ಪ್ರಕರಣದಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷದ ನಡುವಿನ ಹಗ್ಗ ಜಗ್ಗಾಟ ಮುಂದುವರಿ ದಿದ್ದು, ಮೇಲ್ಮನೆಯಲ್ಲಿ ಕಾಂಗ್ರೆಸ್​ನ ಧರಣಿ, ಗದ್ದಲದಿಂದ ಕಲಾಪ ಸರಿಯಾಗಿ ನಡೆಯಲಿಲ್ಲ.
ಸದನ ಸುಸೂತ್ರವಾಗಿ ನಡೆಯುವುದಕ್ಕೆ ಸಹಕರಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಕೋರಿದರು. ಅಧಿವೇಶನ ಫೆ.14ರಂದು ಶುರುವಾಗಿದ್ದು, ಈವರೆಗೆ ಕೇವಲ 11 ಗಂಟೆಗಳ ಚರ್ಚೆಯಾಗಿದೆ ಎಂದು ಬೇಸರ ಹೊರಹಾಕಿದರು. ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಿವಮೊಗ್ಗದ ಹತ್ಯೆ ಘಟನೆ ಬಗ್ಗೆ ಪ್ರಸ್ತಾಪಿಸಿ, ಸಚಿವ ಈಶ್ವರಪ್ಪ ಅವರೇ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಈ ಕೊಲೆ ಮಾಡಿಸಿದ್ದಾರೆ ಎಂದು ಅರೋಪಿಸಿದಾಗ ಬಿಜೆಪಿ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು. ಈ ವಿಷಯವನ್ನು ಯಾವ ರೂಪದಲ್ಲಿ ಪ್ರಸ್ತಾಪಿಸುತ್ತಿದ್ದೀರಿ? ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಕೇಳಿದರು. ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಬಿಡುತ್ತಿಲ್ಲವೆಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಸಭಾನಾಯಕರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದೇನೆ, ಕೇಳೋಣ ಸುಮ್ಮನಿರಿ ಎಂದು ಸಭಾಪತಿ ಸಲಹೆ ನೀಡಿದರು.
ಕೋಟ ಶ್ರೀನಿವಾಸ ಪೂಜಾರಿ ‘ನಿಲುವಳಿ ಸೂಚನೆಯನ್ನು ಸಭಾಪತಿ ತಳ್ಳಿ ಹಾಕಿದ್ದು, ಈಶ್ವರಪ್ಪ ವಿಷಯ ಮುಗಿದ ಅಧ್ಯಾಯ. ನದಿಗಳ ಜೋಡಣೆ, ಶಿವಮೊಗ್ಗ ಘಟನೆ ಸೇರಿ ವಿವಿಧ ವಿಷಯಗಳನ್ನು ಯಾವುದೇ ರೂಪದಲ್ಲಿ ತಂದರೂ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದರು. ಕಾಂಗ್ರೆಸ್​ನವರು ಇದನ್ನೊಪ್ಪದೆ ಧರಣಿ, ಈಶ್ವರಪ್ಪ ವಜಾಕ್ಕೆ ಒತ್ತಾಯ, ಧಿಕ್ಕಾರ ಘೋಷಣೆ ನಡುವೆ ಪ್ರಶ್ನೋತ್ತರ ಪೂರ್ಣಗೊಳಿಸಿದ ಸಭಾಪತಿ ಕಲಾಪವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು.
ಭೋಜನ ವಿರಾಮದ ಬಳಿಕ ಸದನ ಸೇರಿದಾಗ ಗಮನ ಸೆಳೆಯುವ ಸೂಚನೆ ಪ್ರಕ್ರಿಯೆಯನ್ನು ಸಭಾಪತಿ ಪೂರೈಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ‘ಸಭಾಪತಿ ಪೀಠದ ತೀರ್ಪು ಹೊರಬಿದ್ದ ನಂತರವೂ ಪ್ರತಿಪಕ್ಷ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದೆ. ಅವರ (ಕಾಂಗ್ರೆಸ್) ನಿಲುವಿಗೆ ಅವರು ಬದ್ಧರಾಗಿದ್ದು, ಈಶ್ವರಪ್ಪ ಅವರಿಂದ ರಾಜೀನಾಮೆ ಕೊಡಿಸುವುದಿಲ್ಲ ಎಂಬ ನಿರ್ಧಾರಕ್ಕೆ ಸರ್ಕಾರವೂ ಬದ್ಧವಾಗಿದೆ’ ಎಂದು ಪುನರುಚ್ಚರಿಸಿದರು. ಈ ನಡುವೆಯೂ ಪರಿಸ್ಥಿತಿ ತಿಳಿಯಾಗದ ಕಾರಣ ಸಭಾಪತಿ ಕಲಾಪವನ್ನು ಮಂಗಳವಾರ ಬೆಳಗ್ಗೆ 11ಕ್ಕೆ ಮುಂದೂಡಿದರು.
ಇಂದು ಸಿಎಂ ಉತ್ತರ:ರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣಾ ಪ್ರಸ್ತಾಪದ ಮೇಲಿನ ಚರ್ಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಉತ್ತರ ನೀಡಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಮಾತಿಗೆ ಕಾಂಗ್ರೆಸ್ ಅವಕಾಶ ಕೊಡುವುದು ಅನುಮಾನ. ಹಾಗೆಯೆ ಸಿಎಂ ಭಾಷಣದೊಂದಿಗೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಡುವ ಸಾಧ್ಯತೆ ಇದೆ.
ಆರ್​ಎಸ್​ಎಸ್ ವಿರುದ್ಧ ಘೋಷಣೆಗೆ ಆಕ್ಷೇಪ:‘ಆರ್​ಎಸ್​ಎಸ್ ಕೈಗೊಂಬೆ’ ಎಂದು ಸರ್ಕಾರವನ್ನು ದೂಷಣೆ ಮಾಡುತ್ತಿದ್ದ ಕಾಂಗ್ರೆಸ್ ಸದಸ್ಯರ ವಿರುದ್ಧ ಸ್ಪೀಕರ್ ಅಸಮಾಧಾನಗೊಂಡು ಗದರಿದ ಪ್ರಸಂಗ ನಡೆಯಿತು. ‘ಆರ್​ಎಸ್​ಎಸ್ ಅನ್ನು ಏಕೆ ಎಳೆದು ತರುತ್ತೀರಿ? ರಾಷ್ಟ್ರೀಯ ವಿಚಾರ ಹೊಂದಿದ ಸಂಘಟನೆಗೆ ನಿಮ್ಮ ಸಹಕಾರ ಇರಬೇಕಿತ್ತು. ನಿಮ್ಮ ರಾಜಕೀಯ ಚರ್ಚೆಯಲ್ಲಿ ಆರ್​ಎಸ್​ಎಸ್ ಎಳೆದು ತರವುದು ಸೂಕ್ತವಲ್ಲ’ ಎಂದು ಏರಿದ ದನಿಯಲ್ಲಿ ಹೇಳಿ, ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.
ಕೆಪಿಎಸ್ಸಿ 2011ರ ಬ್ಯಾಚ್​ನ ವಿವಾದಿತ ಪಟ್ಟಿಯನ್ನು ಸಕ್ರಮಗೊಳಿಸಲು ಸರ್ಕಾರ ತಂದಿರುವ ವಿಧೇಯಕ ಏಳು ನಿಮಿಷದಲ್ಲಿ ಅನುಮೋದನೆ ಪಡೆದುಕೊಂಡಿದ್ದು ವಿಶೇಷ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕದ ಉದ್ದೇಶ ವಿವರಿಸಿದರು. ಜೆಡಿಎಸ್​ನ ಬಂಡೆಪ್ಪ ಕಾಶೆಂಪುರ್ ಈ ವಿಧೇಯಕಕ್ಕೆ ಜೆಡಿಎಸ್ ಬೆಂಬಲ ಇದೆ ಎಂದರು. ಇದೇ ರೀತಿ, 2022ನೇ ಸಾಲಿನ ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, 2022ನೇ ಸಾಲಿನ ಕರ್ನಾಟಕ ಸ್ಟಾಂಪು (ಎರಡನೇ ತಿದ್ದುಪಡಿ) ವಿಧೇಯಕ, 2022ನೇ ಸಾಲಿನ ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ, 1944 (ಕರ್ನಾಟಕ ತಿದ್ದುಪಡಿ) ವಿಧೇಯಕಗಳು ಸರಾಸರಿ ತಲಾ 5-6 ನಿಮಿಷಗಳಲ್ಲಿ ಚರ್ಚೆಯಿಲ್ಲದೇ ಅನುಮೋದನೆಗೊಂಡವು.
ಕಂಪನಿಗಳ ವಿಲೀನ ಅಥವಾ ಬೇರ್ಪಡುವಿಕೆಯಲ್ಲಿ ಸ್ಟಾಂಪ್ ಡ್ಯೂಟಿಗೆ 25 ಕೋಟಿ ರೂ. ಮಿತಿ ಹಾಕುವುದು, ಸಹಕಾರ ಸಂಘಗಳ ನಿವೇಶನ ನೋಂದಣಿಗೆ ನಿವೇಶನ ಹಂಚಿಕೆಯಾದ ದಿನದ ಮಾರ್ಗಸೂಚಿ ದರ ನಿಗದಿ ಮಾಡುವುದು, ಆರ್ಥಿಕ ಅಪರಾಧದ ಪ್ರಕರಣದಲ್ಲಿ ಸ್ಥಳೀಯ ಕೋರ್ಟ್​ಗೆ ಅಟ್ಯಾಚ್​ವೆುಂಟ್ ಅಧಿಕಾರ ನೀಡುವ ವಿಧೇಯಕಗಳು ಚರ್ಚೆಯಾಗಲಿಲ್ಲ. ಸರ್ಕಾರಕ್ಕೂ ಚರ್ಚೆ ಮಾಡುವ ಆಸಕ್ತಿ ಕಾಣಿಸಲಿಲ್ಲ. ಈ ವಿಧೇಯಕಗಳ ಬಗ್ಗೆ 15-16 ನಿಮಿಷದಲ್ಲಿ ಪರ್ಯಾಲೋಚನೆ ಮುಗಿದವು. ಆಡಳಿತ ಪಕ್ಷದ 44 ಶಾಸಕರು, ಜೆಡಿಎಸ್​ನ 14 ಮಂದಿ ಆಸನದಲ್ಲಿದ್ದರೆ, ಕಾಂಗ್ರೆಸ್​ನ ಶಾಸಕರು ಸ್ಪೀಕರ್ ಪೀಠದ ಮುಂದೆ ಘೋಷಣೆ ಹಾಕುತ್ತಿದ್ದರು.
ಕರ್ನಾಟಕ ಲೋಕಸೇವಾ ಆಯೋಗದ 2011ನೇ ಸಾಲಿನ 362 ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕ ಆದೇಶ ಸಿಂಧುಗೊಳಿಸುವ ಮತ್ತು ಆಯ್ಕೆ ಪಟ್ಟಿಯನ್ನು ಕಾನೂನುಬದ್ಧಗೊಳಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಗೆಜೆಟೆಡ್ ಪ್ರೊಬೆಷನರ್​ಗಳಿಗೆ ಸರ್ಕಾರ ನೀಡಿರುವ ನೇಮಕಾತಿ ಆದೇಶ ಸಿಂಧುಗೊಳಿಸಲು ಈ ವಿಧೇಯಕ ತರಲಾಗಿದೆ ಎಂದು ಕಾನೂನು ಸಚಿವರು ವಿಧೇಯಕ ಪರ್ಯಾಲೋಚನೆ ವೇಳೆ ತಿಳಿಸಿದರು. ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂಬ ದೂರಿನನ್ವಯ ಸಿಐಡಿ ತನಿಖೆ ನಡೆದಿತ್ತು, ಮಧ್ಯಂತರ ವರದಿ ಮೇಲೆ ನ್ಯಾಯಾಲಯ ಪಟ್ಟಿಯನ್ನು ಅಸಿಂಧುಗೊಳಿಸಿತ್ತು. ಆದರೆ, ಅಧಿವಿಚಾರಣಾ ನ್ಯಾಯಾಲಯದಲ್ಲಿ ಅಭ್ಯರ್ಥಿಗಳ ಮೇಲೆ ಹೊರಿಸಿದ ಆರೋಪಗಳು ರ್ತಾಕ ಅಂತ್ಯ ತಲುಪಿವೆ.
ಕರ್ನಾಟಕ ಲೋಕಸೇವಾ ಆಯೋಗದ ಯಾರೇ ಸದಸ್ಯರಾಗಲಿ ಅಥವಾ ಅಭ್ಯರ್ಥಿಯಾಗಲಿ ಯಾವುದೇ ಅಪರಾಧದ ಅಪರಾಧಿ ಎಂದು ಸಾಬೀತಾಗದಿರುವುದರಿಂದ ಹಾಗೂ ಯಾವುದೇ ವಿಚಾರಣಾ ನ್ಯಾಯಾಲಯದಲ್ಲಿ ಅಪರಾಧ ನಿರ್ಣಿತವಾಗದಿರುವುದರಿಂದ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್​ಗಳಿಗೆ ಸರ್ಕಾರ ನೇಮಕ ಆದೇಶ ನೀಡಿರುವುದನ್ನು ಸಿಂಧುಗೊಳಿಸುವುದು ಮತ್ತು ಆಯ್ಕೆ ಪಟ್ಟಿಯನ್ನು ಕಾನೂನು ಬದ್ಧಗೊಳಿಸುವುದು ಅವಶ್ಯವೆಂದು ಪರಿಗಣಿಸಲಾಗಿದೆ ಎಂದರು. ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಗೊಳಿಸದ ಮತ್ತು ಸವಿವರವಾಗಿ ತನಿಖೆ ನಡೆಸದ ಹಾಗೂ ಯುಕ್ತ ವಿಚಾರಣೆಯ ನಂತರ ನ್ಯಾಯಾಲಯದಲ್ಲಿ ಅಪರಾಧಿಗಳೆಂದು ಸಾಬೀತಾಗದ ಹೊರತು ಪರೀಕ್ಷೆ ನಿರರ್ಥಕವೆಂದು ನಿರ್ಣಯಿಸುವುದು ಸೂಕ್ತವಲ್ಲ. ಕಳಂಕಿತರಲ್ಲದ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅವರ ಪ್ರಾಮಾಣಿಕ ಪರಿಶ್ರಮವನ್ನು ಗೌರವಿಸಬೇಕಾಗುತ್ತದೆ. ನೇಮಕ ಸಂದರ್ಭದಲ್ಲಿ ಅವರ ನ್ಯಾಯಯುತ ನಿರೀಕ್ಷೆಯನ್ನು ಗೌರವಿಸಬೇಕು ಎಂದು ಹೇಳಿದರು.
ಸಿಡಿದೆದ್ದ ಹಿಂದೂಪರ ಕಾರ್ಯಕರ್ತರು: ಹರ್ಷ ಕೊಲೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಪರಪುರುಷನೊಂದಿಗೆ ಓಡಿಹೋದ ಪತ್ನಿ; ನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
