ಬಾಹುಬಲಿ ಚಿತ್ರದ ಒಂದು ಅವಿಸ್ಮರಣೀಯ ದೃಶ್ಯ. ದೇವಾಲಯಕ್ಕೆ ತೆರಳಿದ್ದ ತುಂಬುಗರ್ಭಿಣಿ ದೇವಸೇನಾಳನ್ನು ಬಲ್ಲಾಳನ ಸೇನಾಪತಿ ಅವಮಾನಿಸಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸುತ್ತಾನೆ. ಪ್ರತಿಯಾಗಿ ದೇವಸೇನಾ ಆತನ ಬೆರಳು ಕತ್ತರಿಸುತ್ತಾಳೆ. ರಾಜಮಾತೆ ಶಿವಗಾಮಿಯ ಆಸ್ಥಾನದಲ್ಲಿ ಈ ಪ್ರಸಂಗದ ವಿಚಾರಣೆ ನಡೆಯುತ್ತದೆ. ಅಷ್ಟರಲ್ಲಿ ಅಲ್ಲಿಗೆ ಆಗಮಿಸುವ ಬಾಹುಬಲಿ, ಮಹಿಳೆಯ ಘನತೆ-ಗೌರವಕ್ಕೆ ಧಕ್ಕೆ ತರುವ ವ್ಯಕ್ತಿಯ ಬೆರಳುಗಳನ್ನಲ್ಲ, ತಲೆ ಕತ್ತರಿಸಬೇಕು ಎಂದು ರೌದ್ರಾವತಾರ ತಳೆದು ಕ್ಷಣಾರ್ಧದಲ್ಲಿ ಸೇನಾಪತಿಯ ತಲೆ ಕತ್ತರಿಸುತ್ತಾನೆ.
ನಿಜ ಜೀವನದ ಘಟನೆ ಅಶ್ಲೀಲ ವಿಡಿಯೋ, ಅಸಭ್ಯ ಸಂದೇಶ, ನಿಂದನೆಗಳ ಕಿರುಕುಳದಿಂದ ಗೆಳತಿ ಅನುಭವಿಸುತ್ತಿರುವ ಮಾನಸಿಕ ಯಾತನೆಯಿಂದ ಕ್ರುದ್ಧನಾಗುವ ನಟನೊಬ್ಬ ಅಭಿಮಾನಿಯ ಮರ್ಡರ್ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರುತ್ತಾನೆ.
ಮನೆಯ ಹೆಣ್ಣುಮಗಳಿರಲಿ, ಯಾರೇ ಇರಲಿ, ಹೆಣ್ಣೊಬ್ಬಳ ಘನತೆ- ಗೌರವಕ್ಕೆ ಧಕ್ಕೆ ಒದಗಿದ ಸಂದರ್ಭದಲ್ಲಿ ಗಂಡು ಸಿಡಿದೇಳುವುದು ಎಲ್ಲ ಕಾಲದಲ್ಲೂ ಇರುವಂಥದ್ದೇ. ಹೆಣ್ಣಿನ ಗೌರವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಕೂಡ. ಆದರೆ, ಚಲನಚಿತ್ರಗಳಲ್ಲಿ ಸಿನಿಮೀಯವಾಗಿ ಮಾಡುವ ಸ್ತ್ರೀ-ರಕ್ಷಣೆಗೂ ನಿಜಜೀವನಕ್ಕೂ ವ್ಯತ್ಯಾಸವಿದೆ. ಬಣ್ಣದ ಲೋಕದಲ್ಲಿ ನಾಯಕನಾಗಿರುವವನು ಕ್ಷಣಾರ್ಧದಲ್ಲಿ ತಾನೇ ಪೊಲೀಸ್ ಆಗಬಹುದು, ಮುಖ್ಯಮಂತ್ರಿ ಆಗಬಹುದು, ಅತಿಮಾನುಷ ಶಕ್ತಿ ತೋರಿ ನೊಂದವರಿಗೆ ನ್ಯಾಯ ಕೊಡಿಸಬಹುದು. ಆದರೆ, ಬಣ್ಣದ ಬದುಕು, ನಿಜ ಬದುಕು ಎರಡೂ ಬೇರೆಬೇರೆ ಎಂಬ ವಾಸ್ತವಪ್ರಜ್ಞೆ ಇರಲೇಬೇಕು. ಅದನ್ನು ಮರೆತು ಕ್ಯಾಮೆರಾ ಎದುರು ತೋರಿದ ಪೌರುಷವನ್ನೇ ಸಮಾಜದಲ್ಲೂ ತೋರಹೊರಟರೆ ಕಾನೂನು ಪ್ರಕಾರ ಅದು ಅಪರಾಧವಾಗುತ್ತದೆ. ತಪು್ಪ ಮಾಡಿದವರನ್ನು ಶಿಕ್ಷಿಸುವುದಕ್ಕೆ ಕಾನೂನಿದೆ, ಪೊಲೀಸರಿದ್ದಾರೆ, ನ್ಯಾಯಾಲಯಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅದನ್ನು ಬಿಟ್ಟು ಹಣ, ಪ್ರಭಾವ, ಪ್ರಸಿದ್ಧಿಯ ಮದದಿಂದ ನಾನೇ ಸರ್ಕಾರ, ನಾನೇ ಕಾನೂನು ಎಂಬಂತೆ ವರ್ತಿಸಿದಾಗ ಆಗಬಾರದ್ದೇ ನಡೆಯುತ್ತದೆ.
ಸಿರಿವಂತಿಕೆಯೂ ಶಾಪ ಎಂಬ ಮಾತಿದೆ. ಅಡಗೂಲಜ್ಜಿ ಕಥೆಗಳಲ್ಲಿ ರಾಜಕುಮಾರಿಗೆ ಮದುವೆಯ ವಯಸ್ಸು ಬಂದಾಗ ಎರಡು ಆಯ್ಕೆಗಳನ್ನು ಮುಂದಿಡಲಾಗುತ್ತಿತ್ತು. ಗಂಡನಾಗುವವನು ಸಿರಿವಂತನಿರಬೇಕೇ ಇಲ್ಲವೇ ಗುಣವಂತನಾಗಿರಬೇಕೇ ಎಂಬ ಆಯ್ಕೆಗಳವು. ರಾಜಕುಮಾರಿ ಯಾವ ಆಯ್ಕೆ ಮಾಡಿಕೊಳ್ಳುತ್ತಾಳೆಂಬುದರ ಮೇಲೆ ಕಥೆ ಮುಂದೆ ವಿಸ್ತಾರವಾಗುತ್ತಿತ್ತು. ಅಂದರೆ, ಸಂಪತ್ತು-ಸದ್ಗುಣ ಒಟ್ಟಿಗಿರುವುದಿಲ್ಲ ಎಂಬುದು ಅದರರ್ಥವಾ? ತಲೆಮಾರುಗಳ ಕಾಲ ಕುಳಿತು ತಿಂದರೂ ಕರಗದಷ್ಟೂ ಸಿರಿ-ಸಂಪತ್ತಿದ್ದರೂ ಕೆಲವರು ಸರಳವಾಗಿ, ವಿನಯಸಂಪನ್ನರಾಗಿ ಇರುತ್ತಾರಲ್ಲವಾ? ಹೌದು, ಅಂಥವರೂ ಇರುತ್ತಾರೆ. ಜಗತ್ತಿನಲ್ಲಿ ಎಲ್ಲರೂ ಹುಟ್ಟುವಾಗಲೇ ಶ್ರೀಮಂತರಾಗಿರುವುದಿಲ್ಲ. ಕಷ್ಟ- ಕತ್ತಲೆಯ ದಿನಗಳನ್ನು ಅನುಭವಿಸಿ, ಎಲ್ಲ ಬಗೆಯ ಕಾರ್ಪಣ್ಯಗಳನ್ನು ನೋಡಿಕೊಂಡು, ದೆಸೆ ತಿರುಗಿದಾಗ ಶ್ರೀಮಂತಿಕೆ, ಪ್ರಖ್ಯಾತಿ, ಪ್ರಭಾವದ ಐಷಾರಾಮ ನೋಡುವ ವ್ಯಕ್ತಿ ಹೇಗೆ ಬದಲಾಗಿ ಬಿಡುತ್ತಾನೆ ಎನ್ನುವುದೇ ದೊಡ್ಡ ಆಶ್ಚರ್ಯ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬಂತೆ ಸಿರಿವಂತಿಕೆ ಕಂಡ ವ್ಯಕ್ತಿ ತನ್ನ ಗತಜೀವನದ ಯಾತನೆಗಳನ್ನು ಮರೆತುಬಿಡುತ್ತಾನೆ. ಹಣದಿಂದ ಎಲ್ಲವನ್ನೂ ಖರೀದಿಸಬಹುದು ಅಂದುಕೊಳ್ಳುತ್ತಾನೆ. ಸುಖದ ಸುಪ್ಪತ್ತಿಗೆ, ವೈಭೋಗಗಳೂ ಶಾಶ್ವತ ಎಂದು ಭಾವಿಸುತ್ತಾನೆ. ಪ್ರಾಮಾಣಿಕತೆ, ವಿನಯ-ವಿಧೇಯತೆಗಳ ಜಾಗದಲ್ಲಿ ದರ್ಪ, ಅಹಂಕಾರ, ಕ್ರೋಧ, ಮದ ಪ್ರತಿಷ್ಠಾಪನೆಗೊಳ್ಳುತ್ತವೆ. ಕಾನೂನು, ಸರ್ಕಾರ ತನ್ನ ಮುಷ್ಠಿಯಲ್ಲಿದೆ ಎಂದು ಭಾವಿಸುತ್ತಾನೆ. ವರ್ತಮಾನದ ವೈಭೋಗದಲ್ಲಿ ನಿನ್ನೆಯ ಕಷ್ಟಗಳನ್ನು ಮರೆತವನು ನಾಳೆ ಎದುರಾಗಬಹುದಾದ ಸಂಕಷ್ಟಗಳನ್ನು ಅರಿಯಲಾರ ಎಂಬಂತೆ ಅಹಂಕಾರದಲ್ಲಿ ಮುಳುಗಿಹೋಗಿರುತ್ತಾನೆ.
ಸಿನಿಮಾ ಜಗತ್ತಿನಲ್ಲಿ ನಾಯಕ ದೊಡ್ಡ ಸಾಧನೆ ಮಾಡಿದ ಬಳಿಕ ಶುಭಂ ಎಂದು ಕಥೆ ಮುಗಿಸಲಾಗುತ್ತದೆ. ಆದರೆ, ನಿಜಜೀವನದಲ್ಲಿ ಕಥೆ ಶುರುವಾಗುವುದೇ ಅಲ್ಲಿಂದ. ಮದುವೆಯೊಂದಿಗೆ ಯಾವ ಕಥೆಯೂ ಮುಗಿಯುವುದಿಲ್ಲ. ಹೊಸದೊಂದು ಅಧ್ಯಾಯ ಆರಂಭವಾಗುತ್ತದೆ! ದುರ್ಗಮವಾದ ಗುರಿ ಬೆನ್ನಟ್ಟಿ ಯಶಸ್ವಿಯಾಗುವುದು ಒಂದು ಹೋರಾಟವಾದರೆ, ಸಾಧನೆ ಮಾಡಿದ ಬಳಿಕ ಸಾಧಿಸಿದ್ದು ಶಾಶ್ವತವಾಗಿ ಉಳಿಯುವಂತೆ ನೋಡಿಕೊಳ್ಳುವುದು ಮತ್ತೊಂದು ಹೋರಾಟ. ಜೀವಮಾನದ ಕನಸು ಕಂಡು, ಜೀವವನ್ನೇ ಪಣಕ್ಕಿಟ್ಟು ಹಿಮಾಲಯ ಚಾರಣ ಕೈಗೊಳ್ಳುವ ಸಾಹಸಿಗಳು ಶಿಖರ ಏರಿದ ಮೇಲೆ ಅಲ್ಲಿ ಎಷ್ಟು ಹೊತ್ತು ಉಳಿಯುತ್ತಾರೆ? ಶಿಖರ ಏರುವುದು ಸಾಧನೆ. ಆದರೆ, ಶಾಶ್ವತವಾಗಿ ಶಿಖರದ ಮೇಲೆಯೇ ಇರುವುದು ಸಾಧ್ಯವೇ? ಇರುತ್ತೇನೆಂದು ಹಟ ಹಿಡಿದರೂ ಅದು ಸಾಧ್ಯವಿಲ್ಲ. ಮೇಲೇರಿದವನು ಕೆಳಗಿಳಿಯಲೇಬೇಕು. ಏರುವುದು- ಇಳಿಯುವುದು ಜಗತ್ತಿನ ಪ್ರಕ್ರಿಯೆ. ಆದರೆ, ಮೇಲೇರಿದವನು ತನ್ನಿಚ್ಛೆಯಂತೆಯೇ ಪಯಣ ಕೈಗೊಂಡಾಗ ಜೀವನ ಸಾರ್ಥಕ. ಅದನ್ನು ಬಿಟ್ಟು ಎಡವಿ, ಜಾರಿ ಪ್ರಪಾತಕ್ಕೆ ಬಿದ್ದರೆ ಆಗ ದುರಂತ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ಯಾವುದೇ ಕ್ಷೇತ್ರವಿರಲಿ, ಸಾಧನೆಗೆ ದೊಡ್ಡ ತಪಸ್ಸೇ ಬೇಕು. ಯಶಸ್ಸಿಗೆ ದೊಡ್ಡ ಹೋರಾಟವೇ ಬೇಕು. ಆದರೆ, ನಾಯಕ, ಖಳನಾಯಕ ಆಗುವುದಕ್ಕೆ ಒಂದೇ ಒಂದು ತಪು್ಪ ಸಾಕು.
ಮೊನ್ನೆ ಪುಣೆಯಲ್ಲೊಂದು ಕಾರು ಅಪಘಾತ ದೊಡ್ಡ ಸುದ್ದಿಯಾಯಿತು. ಜಗತ್ತಿನಲ್ಲಿ ನಿತ್ಯ ಲಕ್ಷಾಂತರ ಅಪಘಾತಗಳು ಸಂಭವಿಸುತ್ತವೆ. ಲಕ್ಷಾಂತರ ದುರ್ದೈವಿಗಳು ರಸ್ತೆಯಲ್ಲಿ ಸಾಯುತ್ತಾರೆ. ಆದರೆ, ಪುಣೆ ಪ್ರಕರಣದಲ್ಲಿ ಅಪಘಾತ ಎಸಗಿದವ ಅಪ್ರಾಪ್ತ. ಕೋಟಿ ಬೆಲೆಯ ಐಷಾರಾಮಿ ಕಾರಿನಲ್ಲಿ ಮದ್ಯದ ಅಮಲಿನಲ್ಲಿ, ಸ್ನೇಹಿತರೊಂದಿಗೆ ಮೋಜು-ಮಸ್ತಿ ಮಾಡಲು ಹೋಗಿ ಬಾಲಕನೊಬ್ಬ ಇಬ್ಬರು ಅಮಾಯಕರ ಬಲಿ ತೆಗೆದುಕೊಂಡಿದ್ದ. ಈ ಪ್ರಕರಣವನ್ನು ದುಡ್ಡು, ಪ್ರಭಾವ, ದೊಡ್ಡವರ ಸಖ್ಯ, ಭ್ರಷ್ಟಾಚಾರದಿಂದ ಮುಚ್ಚಿಹಾಕಲು ಯತ್ನಿಸಿದ ಇಡೀ ಕುಟುಂಬವೇ ಜೈಲು ಸೇರುವಂತಾಯಿತು. ಅಂದರೆ, ಮಾಡಬಾರದ ಕೆಲಸ ಮಾಡಿದಾಗ ಯಾವ ಹಣ, ಅಂತಸ್ತು, ಅಧಿಕಾರವೂ ನೆರವಿಗೆ ಬರುವುದಿಲ್ಲ. ಇದೇ ಸತ್ಯ. ಆದರೆ, ತುಂಬಾ ಜನರಿಗೆ ಇದು ಬಹಳ ತಡವಾಗಿ ಅರ್ಥವಾಗುತ್ತದೆ. ಅಷ್ಟು ಹೊತ್ತಿಗೆ ಪರಿಸ್ಥಿತಿ ಕೈಮೀರಿರುತ್ತದೆ.
ನಾಗರಿಕ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರಿಗೂ ಸಾಮಾಜಿಕ ಜವಾಬ್ದಾರಿ ಎನ್ನುವುದೊಂದಿರುತ್ತದೆ. ಪ್ರತಿಯೊಬ್ಬರಿಗೂ ತಮ್ಮಿಷ್ಟದಂತೆ ಬದುಕುವ ಹಕ್ಕಿದೆ. ಆದರೆ, ಬೇರೆಯವರ ಬದುಕು, ಬೇರೆಯವರ ಹಕ್ಕು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಜೀವ ಕೊಡುವ ಶಕ್ತಿ ನಮಗಿಲ್ಲವೆಂದ ಮೇಲೆ ಜೀವ ತೆಗೆಯುವ ಅಧಿಕಾರವೂ ಇಲ್ಲ. ಕೋಟಿ ಬೆಲೆಯ ಕಾರಿನಲ್ಲಿ ಓಡಾಡುವವರೂ, ಚಿನ್ನದ ತಟ್ಟೆಯಲ್ಲಿ ಊಟ ಮಾಡುವವರೂ ತಾಯಿಯ ಗರ್ಭದಿಂದಲೇ ಜನಿಸಿರುತ್ತಾರೆ. ಅನ್ಯಗ್ರಹದಿಂದೇನೂ ಬಂದಿರುವುದಿಲ್ಲ. ಅದರಲ್ಲೂ ಸೆಲೆಬ್ರಿಟಿಗಳು ಎನಿಸಿಕೊಂಡವರಿಗೆ ಸಾಮಾಜಿಕ ಜವಾಬ್ದಾರಿ ಸ್ವಲ್ಪ ಹೆಚ್ಚೇ ಇರುತ್ತದೆ. ಏಕೆಂದರೆ, ಗಣ್ಯರೆನಿಸಿಕೊಂಡವರನ್ನು ಜನ ಅನುಸರಿಸುತ್ತಾರೆ, ಅನುಕರಿಸುತ್ತಾರೆ. ಸಿನಿಮಾ ತಾರೆಗಳನ್ನು ಆರಾಧಿಸುವ, ಅಭಿಮಾನಿಸುವ ದೊಡ್ಡ ವರ್ಗವೇ ಇರುತ್ತದೆ. ಎರಡೂವರೆ- ಮೂರು ಗಂಟೆಗಳ ಸಿನಿಮಾ ನೋಡಿ ತಮ್ಮ ಮೂವತ್ತು ವರ್ಷದ ಕಷ್ಟ ಮರೆಯುವ ಜನ, ಸ್ಟಾರ್​ಗಳನ್ನು ಸ್ಪೂರ್ತಿಯಾಗಿ, ಮಾದರಿಯಾಗಿ ಪರಿಗಣಿಸಿರುತ್ತಾರೆ. ಹಾಗಾಗಿ ಒಳ್ಳೆಯದಿರಲಿ, ಕೆಟ್ಟದಿರಲಿ ತಮ್ಮ ನಡೆನುಡಿಯನ್ನು ಅನುಸರಿಸುವವರಿರುತ್ತಾರೆ ಎಂಬ ಎಚ್ಚರ ಇರಲೇಬೇಕು.
ಸೆಲೆಬ್ರಿಟಿ ಅವಾಂತರಗಳು ಜಗತ್ತಿನ ಮಟ್ಟಿಗೆ ಹೊಸದೇನೂ ಅಲ್ಲ. ಬ್ಲೇಡ್ ರನ್ನರ್ ಎಂದೇ ಖ್ಯಾತಿಯಾಗಿದ್ದ, ಎರಡೂ ಕಾಲುಗಳಿಲ್ಲದ, ಕೃತಕ ಕಾಲಿನಲ್ಲಿ ರೇಸ್ ಓಡುತ್ತಿದ್ದ ಒಲಿಂಪಿಯನ್ ಆಸ್ಕರ್ ಪಿಸ್ಟೋರಿಯಸ್ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಜೈಲು ಪಾಲಾದ. ಗಾಲ್ಪ್ ಆಟದ ದಂತಕಥೆ, ಸರ್ವಶ್ರೇಷ್ಠ ಆಟಗಾರ ಟೈಗರ್ ವುಡ್ಸ್ 19ಕ್ಕೂ ಹೆಚ್ಚು ಮಹಿಳೆಯರ ಜತೆ ವಿವಾಹಬಾಹಿರ ಸಂಬಂಧ ಬೆಳೆಸಿ ಘನತೆ, ಗೌರವ, ದಾಂಪತ್ಯ ಹಾಗೂ ಮುಕ್ಕಾಲುಪಾಲು ಸಂಪತ್ತನ್ನು ಕಳೆದುಕೊಂಡ. ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಅತ್ಯಾಚಾರ ಆರೋಪಕ್ಕೆ ಸಿಲುಕಿ ನಾಲ್ಕಾರು ವರ್ಷ ಜೈಲಿನಲ್ಲಿ ಕಳೆದ. ಹಾಲಿವುಡ್, ಮಾಡೆಲಿಂಗ್, ಸಂಗೀತ ಕ್ಷೇತ್ರದ ಸ್ಟಾರ್​ಗಳಾದ ಕಿಮ್ ಕರ್ದಾಶಿಯನ್, ಜಸ್ಟಿನ್ ಬೀಬರ್, ರಿಹಾನಾ, ಮೈಲಿ ಸೈರಸ್, ಲೇಡಿ ಗಾಗಾ, ಟೇಲರ್ ಸ್ವಿಫ್ಟ್, ಫುಟ್​ಬಾಲ್ ದಂತಕಥೆ ಡೀಗೊ ಮರಡೋನಾ, ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹೀಗೆ.. ಒಬ್ಬರೇ ಇಬ್ಬರೇ, ಇವರೆಲ್ಲರೂ ಒಂದಿಲ್ಲೊಂದು ವಿವಾದ, ಜಗಳ, ರಗಳೆಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡವರೇ. ತಪು್ಪ ಮಾಡುವುದು ಮನುಷ್ಯ ಸಹಜ ಗುಣ. ಆದರೆ, ತಿದ್ದಿಕೊಳ್ಳದೆ ಪದೇಪದೆ ತಪು್ಪ ಮಾಡುವನು ಮೃಗಸಮಾನನೆನಿಸುತ್ತಾನೆ. ಮನುಷ್ಯ ಮೃಗತ್ವ ಕಳೆದುಕೊಂಡು ದೈವತ್ವದ ಕಡೆಗೆ ಸಾಗಬೇಕೇ ಹೊರತು, ಮನುಷ್ಯತ್ವ ಕಳೆದುಕೊಂಡು ಮೃಗವೇ ಆಗಬಾರದು.
ಸೋಷಿಯಲ್ ಮೀಡಿಯಾ ಸೃಷ್ಟಿಸುತ್ತಿರುವ ಅವಾಂತರವೂ ಅಷ್ಟಿಷ್ಟಲ್ಲ. ಕೈಲೊಂದು ಮೊಬೈಲ್ ಇದ್ದರೆ, ತಾನು ಸರ್ವತಂತ್ರ ಸ್ವತಂತ್ರ ಎಂದು ಜನ ಸ್ವೇಚ್ಛಾಚಾರಿಗಳಾಗಿ ಬಿಡುತ್ತಾರೆ. ಅದರಲ್ಲೂ ತಮಗೆ ಬೇಕಾದವರ ಬಗ್ಗೆ ಅಂಧಭಕ್ತಿ ಪ್ರದರ್ಶಿಸುವ, ಇಷ್ಟವಿಲ್ಲದವರ ಬಗ್ಗೆ ವಾಚಾಮಗೋಚರವಾಗಿ ಟೀಕಿಸುವ ಚಾಳಿ ಇಷ್ಟು ದಿನವಾದರೂ ಯಾವ ಕಾನೂನಿನ ಪರಿಧಿಗೂ ಬಾರದೇ ಇರುವುದು ಅನೇಕ ಅವಾಂತರಗಳಿಗೆ ಕಾರಣವಾಗುತ್ತಿದೆ. ಫೇಸ್​ಬುಕ್, ಇನ್​ಸ್ಟಾ, ಎಕ್ಸ್ ಪುಟಗಳನ್ನು ತೆರೆದರೆ, ಕೆಟ್ಟ ಮಾತು, ನಿಂದನೆ, ಅಶ್ಲೀಲ ವಿಡಿಯೋ, ಕುಹಕ, ವ್ಯಂಗ್ಯ, ತುಚ್ಛ ಭಾಷೆಯ ಹೊಲಸು ಸಂದೇಶಗಳಿಂದ ಜಾಲತಾಣಗಳ ಮೆಸೇಜ್ ಬಾಕ್ಸ್​ಗಳು ಕೊಳಕು ಮೋರಿಯಂತೆ ನಾರುತ್ತಿರುತ್ತವೆ. ಜನ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡಾಗ ಅದು ಸೈಬರ್​ಕ್ರೖೆಂ ವ್ಯಾಪ್ತಿಗೆ ಬರುತ್ತಿದೆಯೇ ಹೊರತು, ಹೊಲಸು ಸಂದೇಶಗಳ ಮೂಲಕ ವಿಕೃತಿ ಕಾರಿಕೊಳ್ಳುತ್ತಿರುವವರು ಸೈಬರ್ ಅಪರಾಧಿಗಳಾಗುತ್ತಿಲ್ಲ. ಅಭಿಮಾನಿಯ ದಾರುಣ ಹತ್ಯೆಗೂ ಸೋಷಿಯಲ್ ಮೀಡಿಯಾ ಕಾರಣವಾಗಿರುವುದು ವಿಪರ್ಯಾಸ. ಇದಕ್ಕೆ ಕಡಿವಾಣ ಬೀಳದಿದ್ದರೆ ಮುಂದೆ ಇನ್ನೂ ಎಂಥೆಂಥ ಅನಾಹುತ ಕಾದಿದೆಯೋ ದೇವರೇ ಬಲ್ಲ.
ಕೊನೆಯದಾಗಿ:ಗೆದ್ದವರ ಹಿಂದೆ ಓಡುವುದು, ಬಿದ್ದವರಿಗೆ ಗುಂಡಿ ತೋಡುವುದು ಸಮಾಜದ ಮನೋಧರ್ಮ. ಇದೊಂದು ಕಾಲಾತೀತ ಸತ್ಯ. ಜಗತ್ತಿನ ಯಾವ ಮೂಲೆಗೆ ಹೋದರೂ ಜನ ಇರುವುದೇ ಹೀಗೆ. ಒಬ್ಬ ವ್ಯಕ್ತಿ ಯಶಸ್ಸಿನ ಶಿಖರವೇರಿದಾಗ ಆತನ ಜತೆ ಗುರುತಿಸಿಕೊಳ್ಳಲು ಮುಗಿಬೀಳುವವರು ಸಾವಿರ. ಆತ ನನಗೆ ಹಾಗೆ ಗೊತ್ತು, ಹೀಗೆ ಗೊತ್ತು. ಹತ್ತು ವರ್ಷ ಕೆಳಗೆ ಆತ ಹಾಗಿದ್ದ, ಹೀಗಿದ್ದ, ಅಂಥ ವ್ಯಕ್ತಿ ಇಂಥ ಎತ್ತರಕ್ಕೇರಿದ ಎಂದು ಆತನ ಪಯಣದಲ್ಲಿ ತಮ್ಮನ್ನೂ ಸೇರಿಸಿಕೊಂಡು ಹೊಗಳುವಾಗ, ಸಾಧಕನ ಪ್ರಶಂಸೆಗಿಂತ, ತಮ್ಮ ಬ್ರಾ್ಯಂಡಿಂಗ್ ಪ್ರಯತ್ನವೇ ಹೆಚ್ಚಿರುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿ ತಪು್ಪ ಮಾಡಿ ಸಿಕ್ಕಿಕೊಂಡಾಗಲೂ ಜನ ಆತನ ಹಣೆಬರಹ, ಅನುಭವಿಸಲಿ ಎಂದು ಸುಮ್ಮನಿರುವುದಿಲ್ಲ. ಆತ ಯಾವಾಗಲೋ ಮಾಡಿದ್ದ, ಮಾಡದ ತಪು್ಪಗಳನ್ನೆಲ್ಲ ನೆನಪಿಸಿಕೊಂಡು ರಾಡಿ ಎಬ್ಬಿಸುವವರ ಸಂಖ್ಯೆಯೂ ನೂರಾರು. ಒಬ್ಬ ವ್ಯಕ್ತಿಯಿಂದ ಅನ್ಯಾಯವಾಗಿದ್ದರೆ, ತಕ್ಷಣವೇ ದೂರು ಕೊಟ್ಟು ಕಾನೂನು ಹೋರಾಟ ಮಾಡಬಹುದಿತ್ತಲ್ಲ? ವರ್ಷಾನುಗಟ್ಟಲೆ ಮೌನವಾಗಿದ್ದು, ಆತ ಗುಂಡಿಗೆ ಬಿದ್ದಾಗ ನನಗೂ ಕಾಟ ಕೊಟ್ಟಿದ್ದ ಎಂದು ಕಲ್ಲು ಎಸೆಯುವುದೇಕೆ? ಅದರಲ್ಲೂ ಅಪರಾಧಿ ಸ್ಥಾನದಲ್ಲಿ ನಿಂತ ವ್ಯಕ್ತಿ ಸೆಲೆಬ್ರಿಟಿ ಆಗಿಬಿಟ್ಟರಂತೂ, ತಾವೇ ನ್ಯಾಯಾಧೀಶರಂತೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಟ್ಟುಬಿಡುತ್ತಾರೆ. ಬೆಂಕಿ ಬಿದ್ದ ಮನೆಯಲ್ಲಿ ಚಳಿ ಕಾಯಿಸಿಕೊಳ್ಳುವ ಇಂಥ ಜನರು ತುಂಬಾ ಅಪಾಯಕಾರಿ.
ಹುಟ್ಟಿದ ಮನುಷ್ಯ ಸಾಯಲೇಬೇಕು. ಜಗತ್ತಿನಲ್ಲಿ ಯಾರೂ ಚಿರಂಜೀವಿಗಳಾಗಿ ಹುಟ್ಟಿಲ್ಲ. ತಪು್ಪ ಮಾಡಿದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ. ಅದಕ್ಕೆಂದೇ ಸಮಾಜದಲ್ಲಿ ಕೋರ್ಟ್​ಗಳಿವೆ, ಕಾನೂನಿದೆ. ಕೆಲವೊಮ್ಮೆ ಜಾಣತನದಿಂದ ಕಾನೂನಿನ ಕುಣಿಕೆಯಿಂದ ಬಚಾವಾದರೂ, ವಿಧಿಯ ಕುಣಿಕೆಯಿಂದ, ಕರ್ಮಶೇಷದಿಂದ ಪಾರಾಗಲು ಸಾಧ್ಯವಿಲ್ಲ. ಹಾಗಾಗಿ ತಪು್ಪ ಮಾಡಿದವರಿಗೆ ಶಿಕ್ಷೆಯಾಗಲಿ. ಪಾಠ ಕಲಿಯುವಂತಾಗಲಿ. ಒಂದು ತಪು್ಪ ನಡೆದಾಗ ತಪು್ಪ ಮಾಡಿದವನು ಮತ್ತು ನೋವು ಅನುಭವಿಸಿದವನಿಗೆ ಮಾತ್ರ ಆ ಪ್ರಕರಣದ ಪರಿಣಾಮ ಸೀಮಿತವಾಗಿರುವುದಿಲ್ಲ. ಸುತ್ತಲಿನ ಸಮಾಜ ಕೂಡ ಕಲಿಯುವಂಥದ್ದು ಸಾಕಷ್ಟು ಇರುತ್ತದೆ. ಯಾರು ಯಾರು ಯಾವ ಯಾವ ವಿಷಯದಲ್ಲಿ ತಿದ್ದಿಕೊಳ್ಳಬೇಕೋ, ಎಚ್ಚೆತ್ತುಕೊಳ್ಳಬೇಕೋ ಅದು ಅವರವರ ಆತ್ಮಸಾಕ್ಷಿಗೆ ಬಿಟ್ಟಿದ್ದು.
(ಲೇಖಕರು ‘ವಿಜಯವಾಣಿ’ ಸಿನೀಯರ್ ಡೆಪ್ಯೂಟಿ ಎಡಿಟರ್)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 + seven =
Remember me
