ಇಪ್ಪತ್ತು ವರ್ಷಗಳಿಂದಲೂ ನಿರಂತರವಾಗಿ ಚುನಾಯಿತ ಲೋಕಸಭಾ ಸದಸ್ಯರಾಗಿರುವ ರಾಹುಲ್ ಗಾಂಧಿಯವರಿಗೆ ಮೊತ್ತಮೊದಲ ಬಾರಿಗೆ ಈಗ ಗುರುತರವಾದ ಸ್ಥಾನವೊಂದು ದೊರೆತಿದೆ. ಹದಿನೆಂಟನೆಯ ಲೋಕಸಭೆಯಲ್ಲಿ ಅವರಿಂದು ವಿರೋಧ ಪಕ್ಷಗಳ ನಾಯಕ. ಅಂದರೆ ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೇರ ಎದುರಾಳಿ! ಹಾಗೆ ನೋಡಿದರೆ ರಾಷ್ಟ್ರದ ಆಡಳಿತ ವ್ಯವಸ್ಥೆಯ ಮಹತ್ವದ ಸ್ಥಾನವೊಂದು ಇದುವರೆಗೂ ಅವರನ್ನು ಅರಸಿ ಬಂದಿರಲಿಲ್ಲವೆಂದಲ್ಲ. ಯುಪಿಎ ಆಡಳಿತಾವಧಿಯ ‘ಸೂಪರ್ ಪ್ರೖೆಮ್ ಮಿನಿಸ್ಟರ್’ ಸೋನಿಯಾ ಗಾಂಧಿಯವರ ಈ ಪುತ್ರ ಹಾಗೂ ಉತ್ತರಾಧಿಕಾರಿಯನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಇರಾದೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಹೊಂದಿದ್ದರು.
ಅದಾಗದೆ ಹೋದದ್ದಕ್ಕೆ ಕಾರಣ ಅಧಿಕೃತವಾಗಿ ಹೊರಬಿದ್ದಿಲ್ಲ. ಆದಾಗ್ಯೂ, ತಾವು ಪ್ರಧಾನಮಂತ್ರಿಯಾಗಲು ಅರ್ಹರು, ಅದಕ್ಕಿಂತ ಕೆಳಗಿನ ಸ್ಥಾನ ತಮಗೆ ಬೇಕಾಗಿಲ್ಲ ಎಂಬ ನಿಲುವನ್ನು ನೆಹರು-ಗಾಂಧಿ ಪರಿವಾರದ ಪ್ರಸಕ್ತ ತಲೆಮಾರಿನ ಈ ನಾಯಕ ಹೊಂದಿದ್ದುದು ಅವರು ಸಿಂಗ್ ಮಂತ್ರಿಮಂಡಲದ ಸದಸ್ಯರಾಗದೇಹೋದುದರ ಹಿಂದಿನ ಕಾರಣ ಎಂಬ ಮಾತು ರಾಜಕೀಯ ವಲಯದಲ್ಲಿ ಆಗಾಗ ಕೇಳಿಬರುವುದುಂಟು. ಆಮೇಲೆ ತಾವು ಬಯಸಿದ ಪ್ರಧಾನಮಂತ್ರಿ ಸ್ಥಾನ 2012ರಲ್ಲಿ ರಾಹುಲ್ ಗಾಂಧಿಯವರ ಮುಂದೆ ಹೀಗೆ ಬಂದು ಹಾಗೆ ಹೊರಟುಹೋದದ್ದರ ಬಗೆಗೂ ಒಂದು ‘ಕಥೆ’ ರಾಜಕೀಯ ವಲಯದಲ್ಲಿ ಪ್ರಚಲಿತವಿದೆ. ಇರಲಿ, ಅದು ಬೇರೆಯೇ ‘ಕಥೆ’ ಬಿಡಿ.
ಕಾಂಗ್ರೆಸ್ 2014ರಲ್ಲಿ ಚುನಾವಣಾ ಕಣಕ್ಕಿಳಿದದ್ದೇ ಮನಮೋಹನ್ ಸಿಂಗ್ ಅವರನ್ನು ಹಿಂದಿರಿಸಿ ರಾಹುಲ್ ಗಾಂಧಿಯವರನ್ನು ಮುಂದಿಟ್ಟುಕೊಂಡು. ಆದರೆ, ಕಾಂಗ್ರೆಸ್ ತನ್ನ ಇತಿಹಾಸದಲ್ಲೇ ಅತಿ ಹೀನಾಯ ಸೋಲು ಅನುಭವಿಸಿದ ಕಾರಣ ಲೋಕಸಭೆಯಲ್ಲಿ ವಿರೋಧಪಕ್ಷಗಳ ನಾಯಕನ ಸ್ಥಾನವೂ ರಾಹುಲ್ ಗಾಂಧಿಯವರಿಗೆ ದೊರೆಯಲಿಲ್ಲ. ಯಾಕೆಂದರೆ ಪ್ರಮುಖ ವಿರೋಧ ಪಕ್ಷವೆಂದು ಪರಿಗಣಿಸಲ್ಪಡಲು ಅಗತ್ಯವಾದ ಕನಿಷ್ಠ 55 ಸ್ಥಾನಗಳೂ (ಒಟ್ಟು 543 ಚುನಾಯಿತ ಸ್ಥಾನಗಳಲ್ಲಿ ಶೇಕಡ ಹತ್ತು) ಕಾಂಗ್ರೆಸ್​ಗೆ ದೊರೆಯಲಿಲ್ಲ. ಕೇವಲ 44 ಸ್ಥಾನಗಳಿಗೆ ಕುಸಿದಿದ್ದ ಕಾಂಗ್ರೆಸ್​ನೊಂದಿಗೆ ಆ ಸಂಖ್ಯೆಯನ್ನೂ ತಲುಪದ ಇತರ ವಿರೋಧ ಪಕ್ಷಗಳಿದ್ದ ಕಾರಣ ಹದಿನಾರನೆಯ ಲೋಕಸಭೆಯಲ್ಲಿ ‘ವಿರೋಧಪಕ್ಷಗಳ ನಾಯಕ’ ಎಂಬ ಗುರುತರ ಜವಾಬ್ದಾರಿಯುತ ಸ್ಥಾನ ಯಾರಿಗೂ ಸಿಗಲೇ ಇಲ್ಲ. ಐದು ವರ್ಷಗಳ ನಂತರ ಹದಿನೇಳನೆಯ ಲೋಕಸಭೆಯಲ್ಲಿ ಆದದ್ದೂ ಅದೇ. ವಿರೋಧ ಪಕ್ಷಗಳಲ್ಲೇ ಅತಿ ದೊಡ್ಡದಾದ ಕಾಂಗ್ರೆಸ್​ಗೆ ಸಿಕ್ಕಿದ್ದು ಕೇವಲ 52, ಮುಖ್ಯ ವಿರೋಧಪಕ್ಷದ ಸ್ಥಾನ ಪಡೆಯಲ ಮೂರು ಸ್ಥಾನಗಳ ಕೊರತೆ! ಒಟ್ಟಾರೆ, ಮೋದಿಯವರ ಹಿಂದಿನ ಎರಡೂ ಪ್ರಧಾನಮಂತ್ರಿ ಅವಧಿಗಳಲ್ಲಿ ಲೋಕಸಭೆಯಲ್ಲಿ ಯಾವ ವಿರೋಧಪಕ್ಷಗಳ ನಾಯಕನೂ ಇರಲಿಲ್ಲ.
ಆದರೀಗ ವಸ್ತುಸ್ಥಿತಿ ಬದಲಾಗಿದೆ. ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದು ಅತಿ ದೊಡ್ಡ ವಿರೋಧಪಕ್ಷವಾಗಿ ಹೊರಹೊಮ್ಮಿದೆ ಮತ್ತದು ತನ್ನ ನಾಯಕನನ್ನಾಗಿ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಅವರು ಹದಿನೆಂಟನೆಯ ಲೋಕಸಭೆಯಲ್ಲಿ ವಿರೋಧಪಕ್ಷಗಳ ನಾಯಕ.
ಸರಿ, ಈ ಸ್ಥಾನದೊಂದಿಗೆ ರಾಹುಲ್ ಗಾಂಧಿಯವರಿಗೆ ದೊರೆಯುವ ಸವಲತ್ತುಗಳು ಮತ್ತು ಅಧಿಕಾರಗಳೇನು ಎಂದು ನೋಡೋಣ. ಮೊದಲಿಗೆ, ವಿರೋಧಪಕ್ಷಗಳ ನಾಯಕನಾಗಿ ರಾಹುಲ್ ಗಾಂಧಿಯವರಿಗೆ ಮೋದಿ ಸರ್ಕಾರದ ಯಾವುದೇ ಕ್ಯಾಬಿನೆಟ್ ಮಂತ್ರಿಗೆ ಸಿಗುವಷ್ಟೇ ಸಂಬಳ ಮತ್ತು ಸವಲತ್ತುಗಳು ಸಿಗುತ್ತವೆ. ಅದು ತಿಂಗಳಿಗೆ ಸುಮಾರು 3.3 ಲಕ್ಷ ರೂಪಾಯಿಗಳು. ಇದರ ಜತೆಗೆ ಸುಸಜ್ಜಿತ ಸರ್ಕಾರಿ ನಿವಾಸ ಹಾಗೂ ಸಂಸತ್ ಭವನದಲ್ಲಿ ಅಧಿಕೃತ ಕಚೇರಿ ಮತ್ತವುಗಳಿಗೆ ಸಂಬಂಧಿತ ಸೌಕರ್ಯಗಳು, ಅಮಿತ ಪುಕ್ಕಟೆ ವಿಮಾನ ಹಾಗೂ ರೈಲು ಪ್ರಯಾಣದ ಸೌಲಭ್ಯಗಳು ಹಾಗೂ ಉನ್ನತ ಝೆಡ್ ಪ್ಲಸ್ ಭದ್ರತೆ ಕೂಡ.
ಇನ್ನು ರಾಹುಲ್ ಗಾಂಧಿಯವರಿಗೆ ದೊರೆತಿರುವ ಅಧಿಕಾರಗಳನ್ನು ನೋಡೋಣ. ವಿರೋಧಪಕ್ಷಗಳ ನಾಯಕನಾಗಿ ಅವರು ವಿವಿಧ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಗಳು, ಪಬ್ಲಿಕ್ ಅಕೌಂಟ್ಸ್ ಕಮಿಟಿ, ಎಸ್ಟಿಮೇಟ್ ಕಮಿಟಿ ಸೇರಿದಂತೆ ಹಲವು ಮಹತ್ವದ ಕೇಂದ್ರೀಯ ಸಮಿತಿಗಳ ಸದಸ್ಯರಾಗಿರುತ್ತಾರೆ. ಅವುಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಅವರು ಭಾಗವಹಿಸುತ್ತಾರೆ. ಅಲ್ಲಿ ಅವರ ಅಭಿಪ್ರಾಯಗಳಿಗೆ ಮನ್ನಣೆ ದೊರೆಯುತ್ತದೆಯೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ಮೋದಿ ಸರ್ಕಾರದ ನೀತಿಗಳು, ಅದು ಕೈಗೊಳ್ಳಬಹುದಾದ ತೀರ್ವನಗಳು ಹಾಗೂ ಸಂಸತ್ತಿನಲ್ಲಿ ಅದು ಮಂಡಿಸಬಹುದಾದ ಮಸೂದೆಗಳ ಬಗ್ಗೆ ರಾಹುಲ್ ಗಾಂಧಿಯವರಿಗೆ ತಿಳಿದುಹೋಗುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯ.
ರಾಹುಲ್ ಗಾಂಧಿಯವರಿಗೆ ಸಿಕ್ಕಿರುವ ಇನ್ನೊಂದು ಮಹತ್ತರ ಅಧಿಕಾರವೆಂದರೆ ವಿವಿಧ ಆಯ್ಕೆ ಸಮಿತಿಗಳ ಸದಸ್ಯತ್ವ. ರಾಷ್ಟ್ರದ ಚುನಾವಣೆಗಳ ಜವಾಬ್ದಾರಿ ಹೊತ್ತ ಚೀಫ್ ಎಲೆಕ್ಷನ್ ಕಮಿಷನರ್, ಭ್ರಷ್ಟಾಚಾರದ ಮೇಲೆ ನಿಗಾ ಇರಿಸುವ ಚೀಫ್ ವಿಜಿಲೆನ್ಸ್ ಆಫೀಸರ್, ಸಿಬಿಐ ಡೈರೆಕ್ಟರ್ ಸೇರಿದಂತೆ ರಾಷ್ಟ್ರೀಯ ಸ್ತರದ ಪ್ರಮುಖ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಮಿತಿಗಳಲ್ಲಿ ಪ್ರಧಾನಿ ಮೋದಿ ಮತ್ತು ಒಬ್ಬರು ಕ್ಯಾಬಿನೆಟ್ ಮಂತ್ರಿಯೊಂದಿಗೆ ರಾಹುಲ್ ಗಾಂಧಿಯವರೂ ಇರುತ್ತಾರೆ.
ಆದರೆ ರಾಹುಲ್ ಗಾಂಧಿ ಬೇರೆಯಾಗಿ ನಿಲ್ಲುವುದು ರಾಷ್ಟ್ರದ ಮುಂದೆ ಇದುವರೆಗೆ ಅವರು ತಮ್ಮನ್ನು ತಾವು ಪ್ರದರ್ಶಿಸಿರುವ ರೀತಿಯಲ್ಲಿ. ರಾಷ್ಟ್ರೀಯ ನಾಯಕನಿಗಿರಬೇಕಾದ ಬುದ್ಧಿಮತ್ತೆ, ಪಕ್ವತೆ, ಗಾಂಭೀರ್ಯ, ಮಾತು ಮತ್ತು ಹೇಳಿಕೆಗಳ ಮೇಲೆ ಹಿಡಿತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಭಾರತವೆಂಬ ರಾಷ್ಟ್ರದ ಬಗ್ಗೆ ಪ್ರಶ್ನಾತೀತ ನಿಷ್ಠೆ ತಮ್ಮಲ್ಲಿ ಇಲ್ಲ ಎನ್ನುವುದನ್ನು ಐವತ್ತನಾಲ್ಕರ ಈ ನೇತಾರ ಮತ್ತೆಮತ್ತೆ ತೋರಿಸಿಕೊಂಡಿರುವುದನ್ನು ದೇಶ ನೋಡಿದೆ, ನೋಡಿ ನೊಂದಿದೆ.
‘ಭಾರತ ಒಂದು ರಾಷ್ಟ್ರವಲ್ಲ, ಇದೊಂದು ರಾಜ್ಯಗಳ ಒಕ್ಕೂಟ’ ಎಂಬ ಅಪರಿಪಕ್ವ ಮಾತಿನಿಂದ ಹಿಡಿದು ‘ನಿಂಬುಪಾನಿ ಮಾರುತ್ತಿದ್ದವನೊಬ್ಬ ಕೋಕಾ ಕೋಲಾ ಕಂಪನಿ ಸ್ಥಾಪಿಸಿದ’ ಎಂಬ ಅರ್ಥಹೀನ ಹೇಳಿಕೆಯವರೆಗೆ ಅದೆಷ್ಟೋ ಅಪರಿಪಕ್ವ ಮಾತುಗಳನ್ನಾಡಿ ಆ ಕಾರಣದಿಂದಲೇ ಹಲವರಿಂದ ‘ಪಪ್ಪು’ ಎಂದು ಲೇವಡಿಗೊಳಗಾಗುತ್ತಿರುವ; ಬೆಲ್ಲ ಮತ್ತು ಸಕ್ಕರೆಗಳೆರಡಕ್ಕೂ ಮೂಲವಸ್ತು ಕಬ್ಬು ಎಂಬ ಸಾಮನ್ಯ ತಿಳಿವಳಿಕೆಯೂ ಇಲ್ಲದೆ, ಕಬ್ಬು ಉತ್ಪಾದನೆ ಕಡಿಮೆಯಾಗಿರುವುದರಿಂದ ಅವೆರಡೂ ಅಗತ್ಯವಸ್ತುಗಳ ಉತ್ಪಾದನೆ ಕುಸಿದಿದೆ ಎಂದೂ ಅರಿಯದೆ, ‘ಸಕ್ಕರೆ ಇಲ್ಲದಿದ್ದರೆ ಬೆಲ್ಲ ಉಪಯೋಗಿಸಿ’ ಎಂದು ಜನತೆಗೆ ಸಲಹೆ ನೀಡಿದ, ಒಮ್ಮೆ ಸಂಸತ್ತಿನ ಬಜೆಟ್ ಅಧಿವೇಶನವನ್ನೂ ತೊರೆದು ಸತತ 57 ದಿನಗಳವರೆಗೆ ವಿದೇಶಗಳಲ್ಲಿ ‘ಮಾಯ’ವಾಗಿದ್ದುದರಿಂದ ಹಿಡಿದು ಐದು ವರ್ಷಗಳಲ್ಲಿ ಸರಾಸರಿ ತಿಂಗಳಿಗೆ ಎರಡು ಸಲ ವಿದೇಶಗಳಿಗೆ ಹಾರಿಹೋಗುವ ದಾಖಲೆ ಹೊಂದಿರುವ, ಆ ಕಾರಣದಿಂದಲೇ ‘ನಾನ್ ಸೀರಿಯಸ್ ಪಾಲಿಟೀಶಿಯನ್’ ಎಂಬ ತಿರಸ್ಕಾರಕ್ಕೊಳಗಾಗಿರುವ, ಭ್ರಷ್ಟಾಚಾರದ ಆಪಾದನೆಯಲ್ಲಿ ಜಾಮೀನು ಪಡೆದು, ಮಾನಹಾನಿ ಆರೋಪಕ್ಕೊಳಗಾಗಿ ಕಾರಾಗೃಹ ಶಿಕ್ಷೆಗೆ ತುತ್ತಾಗಿ, ಸವೋಚ್ಚ ನ್ಯಾಯಾಲಯದ ತಡೆಹಿಡಿಯುವಿಕೆಯಿಂದಾಗಿ ಇನ್ನೂ ಶಿಕ್ಷೆ ಅನುಭವಿಸದಿರುವ, ಆ ಕಾರಣದಿಂದಾಗಿ ತಮ್ಮ ರಾಜಕೀಯ ಭವಿಷ್ಯವನ್ನು ಅನಿಶ್ಚಿತಗೊಳಿಸಿಕೊಂಡಿರುವ ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ಪ್ರಧಾನಮಂತ್ರಿಗಳಿಗೆ ಎದುರಾಗಿ ನಿಲ್ಲಿಸಿದೆ! ಆ ಮೂಲಕ, ಯಾವುದೇ ಕಾರಣದಿಂದ ಮೋದಿ ಸರ್ಕಾರ ಉರುಳಿದರೆ ತಾವು ಸರ್ಕಾರ ರಚಿಸಲು ಮುಂದಾಗುವ ಅವಕಾಶವನ್ನು ರಾಹುಲ್ ಗಾಂಧಿಯವರಿಗೆ ನೀಡಿದೆ. ವಿಷಯ ಇನ್ನಷ್ಟು ಗಂಭೀರವಾಗುವುದು ಇಲ್ಲಿ.
‘ರಾಹುಲ್ ಗಾಂಧಿ ಭಾರತದೊಂದಿಗೆ ಇಟಲಿ ಹಾಗೂ ಬ್ರಿಟನ್​ನ ಪೌರತ್ವಗಳನ್ನೂ ಹೊಂದಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಹೇಳುತ್ತಾರೆ ಹಾಗೂ ಆ ಬಗ್ಗೆ ಕೇಂದ್ರ ಗೃಹಸಚಿವಾಲಯಕ್ಕೆ ಲಿಖಿತವಾಗಿಯೂ ತಿಳಿಸಿದ್ದಾರೆ. ಇದರ ಸತ್ಯಾಸತ್ಯತೆ ಬಗ್ಗೆ ಸಾರ್ವಜನಿಕವಾಗಿ ಮಾಹಿತಿಯ ಕೊರತೆ ಇದೆ. ಆದಾಗ್ಯೂ, 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಮಂತ್ರಿಯಾಗದೆ ಹೋದದ್ದು ಡಾ.ಸ್ವಾಮಿ ದೇಶದ ಪೌರತ್ವ ಕಾಯಿದೆಯ ಒಂದು ನಿಬಂಧನೆಯನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಗಮನಕ್ಕೆ ತಂದದ್ದರಿಂದ ಮತ್ತು ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಹೊರಟಾಗ ಅವರ ಬಹುಪೌರತ್ವಗಳ ಬಗೆಗೆ ‘ನನ್ನಲ್ಲಿರುವ ಮಾಹಿತಿಗಳನ್ನು ಬಹಿರಂಗಪಡಿಸುತ್ತೇನೆ’ ಎಂದವರು ಹೇಳಿರುವ ಕಾರಣ ಈ ಹಿರಿಯ ರಾಜಕಾರಣಿಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪ್ರಸಕ್ತ ವಿರೋಧಪಕ್ಷಗಳ ನಾಯಕನ ಬಹುಪೌರತ್ವದ ಬಗೆಗಿನ ಅನುಮಾನಗಳ ಕುರಿತಾಗಿ ಅಲಹಾಬಾದ್ ಹೈಕೋರ್ಟ್​ನಲ್ಲಿ ದಾಖಲಾಗಿರುವ ಪಿಐಎಲ್ ಸತ್ಯವನ್ನು ದೇಶದ ಮುಂದೆ ತೆರೆದಿಡಬಹುದು.
ರಾಹುಲ್ ಗಾಂಧಿಯವರ ಚೀನಾ ಸಂಬಂಧ ಇಲಿ ಉಲ್ಲೇಖಾರ್ಹ. 2008ರ ಜುಲೈನಲ್ಲಿ ಬೀಜಿಂಗ್ ಒಲಿಂಪಿಕ್ಸ್​ನ ಉದ್ಘಾಟನಾ ಸಮಾರಂಭಕ್ಕೆ ಚೀನೀ ಸರ್ಕಾರದಿಂದ ಆಹ್ವಾನಿತರಾಗಿ ತಮ್ಮ ತಾಯಿಯೊಂದಿಗೆ ಅಲ್ಲಿ ಚೀನೀ ಸತ್ಕಾರ ಸವಿದ ರಾಹುಲ್ ಗಾಂಧಿ ಮರುತಿಂಗಳು ಚೀನೀ ಕಮ್ಯೂನಿಸ್ಟ್ ಪಕ್ಷದ ಬೇಹುಗಾರಿಕಾ ವಿಭಾಗ ಇಂಟರ್​ನ್ಯಾಷನಲ್ ಲಿಯಾಸನ್ ಡಿಪಾರ್ಟ್​ವೆುಂಟ್​ನೊಂದಿಗೆ ತಮ್ಮ ಕಾಂಗ್ರೆಸ್ ಪಕ್ಷದ ಪರವಾಗಿ ಒಪ್ಪಂದವೊಂದಕ್ಕೆ ಸಹಿಹಾಕಿದರು. ನಂತರ ಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಜೀವ್ ಗಾಂಧಿ ಫೌಂಡೇಷನ್​ಗೆ ಚೀನೀ ಕಮ್ಯೂನಿಸ್ಟ್ ಪಕ್ಷ, ಚೀನೀ ಸರ್ಕಾರ ಹಾಗೂ ನವದೆಹಲಿಯಲ್ಲಿನ ಚೀನೀ ದೂತಾವಾಸದಿಂದ ಹಣ ಹರಿದುಬಂತು ಎಂಬ ವಿಷಯ ಗಂಭೀರವಾದುರು. ಆ ದಿನಗಳಲ್ಲಿ ಚೀನೀ ಸೇನೆ ನಮ್ಮ ಗಡಿಗಳಲ್ಲಿ ಮತ್ತೆಮತ್ತೆ ಅತಿಕ್ರಮಣ ಎಸಗಿತು ಮತ್ತು ಸುಮಾರು ಒಂದುಸಾವಿರ ಚದರ ಕಿಲೋಮಿಟರ್ ಪ್ರದೇಶವನ್ನು ಆಕ್ರಮಿಸಿಕೊಂಡಿತು ಎಂಬ ಆಗಿನ ವಿದೇಶಾಂಗ ಕಾರ್ಯದರ್ಶಿ ಶ್ಯಾಮ್ ಸರನ್ ಅವರ ಹೇಳಿಕೆಯನ್ನು 2008ರ ಆಗಸ್ಟ್ ರಹಸ್ಯ ಒಪ್ಪಂದ ಮತ್ತು ರಾಜೀವ್ ಗಾಂಧಿ ಫೌಂಡೇಷನ್​ಗೆ ಚೀನೀ ಹಣ ಬಂದಿದೆ ಎನ್ನಲಾದ ವಿಷಯದೊಂದಿಗೆ ಜೋಡಿಸಿದರೆ ರಾಹುಲ್ ಗಾಂಧಿಯವರ ರಾಷ್ಟ್ರನಿಷ್ಠೆಯ ಬಗ್ಗೆ ಸಹಜವಾಗಿಯೇ ಅನುಮಾನಗಳು ಮೂಡುತ್ತವೆ. ಇವುಗಳನ್ನು ಪರಿಹರಿಸುವ ನಡೆಯನ್ನು ಸ್ವತಃ ರಾಹುಲ್ ಗಾಂಧಿ ತಾವು ವಿರೋಧಪಕ್ಷಗಳ ನಾಯಕನಾಗುವ ಮೊದಲು ತೋರಿದ್ದರೆ ಒಳಿತಾಗುತ್ತಿತ್ತು.
ನಂತರ 2017ರ ದೊಕ್ಲಾಂನಲ್ಲಿ ನಮ್ಮ ಸೇನೆ ಚೀನೀ ಸೇನೆಗೆ ಎದುರಾಗಿ ನಿಂತಿದ್ದಾಗ ರಾಹುಲ್ ಗಾಂಧಿ ನವದೆಹಲಿಯಲ್ಲಿನ ಚೀನೀ ದೂತಾವಾಸಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದರು. ಆ ಬಗ್ಗೆ ಮಾಧ್ಯಮಗಳಲ್ಲಿ ಪ್ರಶ್ನೆಗಳೆದ್ದಾಗ ತಾವು ಅಲ್ಲಿಗೇನೂ ಹೋಗಿರಲಿಲ್ಲ ಎಂದವರು ಹೇಳಿದರು. ಆದರೆ ತಮ್ಮಲ್ಲಿಗೆ ಅವರು ಭೇಟಿ ನೀಡಿದ್ದರು ಎಂದು ಚೀನೀ ದೂತಾವಾಸವೇ ಬಹಿರಂಗವಾಗಿ ಹೇಳಿಕೊಂಡಾಗ ರಾಹುಲ್ ಗಾಂಧಿ ಸಹ ಅದನ್ನು ಒಪ್ಪಿಕೊಳ್ಳಬೇಕಾಯಿತು. ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿರುವ ಚೀನೀ ದೂತಾವಾಸಗಳಲ್ಲಿ ರಾಯಭಾರಿಗಿಂತಲೂ ಅನಧಿಕೃತವಾಗಿ ಉನ್ನತ ಸ್ಥಾನ ಹೊಂದಿರುವುದು ಚೀನೀ ಕಮ್ಯೂನಿಸ್ಟ್ ಪಕ್ಷದ ಇಂಟರ್​ನ್ಯಾಷನಲ್ ಲಿಯಾಸನ್ ಡಿಪಾರ್ಟ್​ವೆುಂಟ್​ನ ಪ್ರತಿನಿಧಿ. 2008ರ ಆಗಸ್ಟ್​ನಲ್ಲಿ ರಾಹುಲ್ ಗಾಂಧಿ ಸಹಿಹಾಕಿದ್ದು ಆ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ 2017ರ ಜುಲೈನಲ್ಲಿ ಅವರು ಚೀನೀ ದೂತಾವಾಸದಲ್ಲಿ ಯಾರನ್ನು ಭೇಟಿಯಾದರು, ಯಾಕಾಗಿ ಎಂಬ ಪ್ರಶ್ನೆಗಳೇಳುತ್ತವೆ.
ಇನ್ನು ‘ಪೂರ್ವ ಕ್ಷೇತ್ರದಲ್ಲಿ ಭಾರತೀಯ ಸೈನಿಕರು ಚೀನೀ ಸೈನಿಕರಿಂದ ಹೊಡೆಸಿಕೊಳ್ಳುತ್ತಿದ್ದಾರೆ’ ಎಂದು 2022ರ ಡಿಸೆಂಬರ್​ನಲ್ಲಿ ಲೋಕಸಭೆಯಲ್ಲಿ ಹೇಳಿದ್ದು ಮತ್ತೀಗ 2024ರ ಜುಲೈನಲ್ಲಿ ಅದೇ ಲೋಕಸಭೆಯಲ್ಲಿ, ‘ಚೀನಾ ತನ್ನ ಸೈನಿಕರಿಗೆ ಐದು ವರ್ಷಗಳ ತರಬೇತಿ ನೀಡುತ್ತದೆ, ಪ್ರತಿಯಾಗಿ ಭಾರತ ಕೇವಲ ಆರುತಿಂಗಳ ತರಬೇತಿ ನೀಡಿ ಅಗ್ನಿವೀರರನ್ನು ಚೀನೀಯರಿಗೆ ಎದುರಾಗಿ ನಿಲ್ಲಿಸುತ್ತದೆ’ ಎಂದು ಹೇಳುವ ಮೂಲಕ ಭಾರತೀಯ ಸೇನೆಯ ಸಾಮರ್ಥ್ಯದ ಬಗ್ಗೆ ಸಂದೇಹ ಮೂಡಿಸುವ ಮಾತುಗಳನ್ನಾಡಿರುವುದೂ ಅವರ ಚೀನಾ-ಪರ ನಿಲುವನ್ನು ಹೊರಗೆಡಹುತ್ತಿರುವಂತೆ ತೋರಿಸುತ್ತಿದೆ.
ಪ್ರಸಕ್ತ ವಿರೋಧಪಕ್ಷಗಳ ನಾಯಕನ ಬಗೆಗಿನ ಈ ಅನುಮಾನಗಳು ಹಾಗೂ ಪ್ರಶ್ನೆಗಳಲ್ಲಿ ಹುರುಳಿರಬಹುದು ಅಥವಾ ಇಲ್ಲದಿರಬಹುದು. ಆದರೆ ಇಂತಹ ಪ್ರಶ್ನೆಗಳು ವ್ಯಾಪಕವಾಗಿ ಎದ್ದಾಗ ಸೂಕ್ತ ವಿವರಗಳ ಮೂಲಕ ಅವುಗಳನ್ನು ಪರಿಹರಿಸುವುದು ಯಾವುದೇ ರಾಷ್ಟ್ರನಾಯಕನ ಕರ್ತವ್ಯ. ಹಾಗೆ ಮಾಡುವ ಮೂಲಕ ಜನಮನದಲ್ಲಿ ವಿಶ್ವಾಸಾರ್ಹ ನಾಯಕನಾಗಿ ನೆಲೆಗೊಳ್ಳುವುದು ಯಾವುದೇ ರಾಜಕೀಯ ನೇತಾರರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮುಖ್ಯವೆನಿಸುತ್ತದೆ. ಏಳು ವರ್ಷಗಳ ಹಿಂದೆ ಚೀನೀ ದೂತಾವಾಸಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದು ಬಯಲಾದಾಗ ರಾಹುಲ್ ಗಾಂಧಿ ಹೇಳಿದ್ದು, ತಾವು ಅಲ್ಲಿಗೆ ಹೋದದ್ದು ದೊಕ್ಲಾಂ ಬಗೆಗಿನ ಸತ್ಯಗಳನ್ನು ತಿಳಿದುಕೊಳ್ಳಲು, ಈ ದೇಶದ ಒಬ್ಬ ನಾಯಕನಾಗಿ ನಮ್ಮ ಗಡಿಗಳಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಅಗತ್ಯ ನನಗಿದೆ ಎಂದು. ಇಂದು ವಿರೋಧಪಕ್ಷಗಳ ನಾಯಕನಾಗಿರುವ, ನಾಳೆ ದೇಶದ ಪ್ರಧಾನಮಂತ್ರಿಯೂ ಆಗಬಹುದಾದ ನಾಯಕನ ಬಗ್ಗೆ ಸತ್ಯ ತಿಳಿಯುವ ಹಕ್ಕೂ ಈ ದೇಶದ ಜನತೆಗಿದೆ.
ಇಷ್ಟೆಲ್ಲ ಮಾತುಗಳ ಹಿನ್ನೆಲೆಯಲ್ಲಿ ಲೋಕಸಭೆಯ ಅಧಿವೇಶನದಲ್ಲಿ ರಾಹುಲ್ ಗಾಂಧಿ ನಡೆದುಕೊಂಡ ಬಗೆ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬಲಹೀನಗೊಳಿಸಬಹುದಾದ ಅಪಾಯದ ಕುರಿತಾದ ಚರ್ಚೆ ಮುಂದಿನವಾರ, ಲೇಖನದ ಎರಡನೆಯ ಭಾಗ ಬಾಲಕ ಬುದ್ಧಿಯ ಸಾಧಕ-ಬಾಧಕಗಳಲ್ಲಿ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಜಮ್ಮು & ಕಾಶ್ಮೀರಾದ ಕಥುವಾದಲ್ಲಿ ಉಗ್ರರ ಪತ್ತೆಗೆ ಜಂಟಿ ಕಾರ್ಯಾಚರಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
