ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಶಿವಮೊಗ್ಗ, ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರತ್ಯೇಕ ಮಳೆ ಅವಘಡಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಪರಿಸ್ಥಿತಿ ಗಂಭೀರಗೊಂಡಿದ್ದು, ಕೃಷ್ಣಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಅಪಾರ ಹಾನಿಯಾಗಿದೆ.
ಶಿವಮೊಗ್ಗ ತತ್ತರ:ಮಲೆನಾಡಿನಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ತುಂಗಾ, ಶರಾವತಿ, ವರದ ಸೇರಿ ಜಿಲ್ಲೆಯ ಹಲವು ನದಿ, ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಅಕ್ಕಪಕ್ಕ, ತಗ್ಗು ಪ್ರದೇಶದ ಜಮೀನುಗಳು ಜಲಾವೃತಗೊಂಡಿವೆ. ಸಾಗರ ತಾಲೂಕಿನಲ್ಲಿ 29 ಮನೆಗಳಿರುವ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಅಕ್ಕಪಕ್ಕದ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿವೆ. ಅಲ್ಲಲ್ಲಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಇಬ್ಬರ ಸಾವು:ಸೊರಬ ತಾಲೂಕು ಯಡಗೊಪ್ಪ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯುವಾಗ ಕೊಚ್ಚಿಹೋಗಿದ್ದ ಉದ್ರಿ-ಒಡ್ಡಿಗೇರಿ ಗ್ರಾಮದ ಯಲ್ಲಪ್ಪ (48) ಶವ ಶನಿವಾರ ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಬಿದರಿಕೆರೆ ಲಂಬಾಣಿ ಹಟ್ಟಿಯಲ್ಲಿ ಶುಕ್ರವಾರ ರಾತ್ರಿ ಮನೆಗೋಡೆ ಕುಸಿದು ರಾಜನಾಯಕ್ (49) ಮೃತಪಟ್ಟಿದ್ದಾರೆ.
ಭದ್ರೆಗೆ 8 ದಿನದಲ್ಲಿ 25 ಅಡಿ ನೀರು!:ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶ ಹಾಗೂ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಭದ್ರಾ ಜಲಾಶಯಕ್ಕೆ ಕಳೆದ 24 ಗಂಟೆಯಲ್ಲಿ 5.19 ಅಡಿ ನೀರು ಹರಿದುಬಂದಿದೆ. ಜತೆಗೆ ಎಂಟು ದಿನದಲ್ಲೇ ದಾಖಲೆಯ 24.9 ಅಡಿಯಷ್ಟು ಹರಿದುಬಂದಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶನಿವಾರ ಸ್ವಕ್ಷೇತ್ರದ ಹಲವೆಡೆ ನೆರೆ ಹಾನಿ ವೀಕ್ಷಿಸಿದರು. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಸತತ ಮೂರನೇ ದಿನ(ಶನಿವಾರ) ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿತ್ತು.
ನಾಲ್ವರಿಗೆ ಗಾಯ:ಪಕ್ಕದ ಮನೆಯ ಗೋಡೆ ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಕುಸಿದು, ಮನೆಯಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶಿಕಾರಿಪುರ ತಾಲೂಕು ಕಪ್ಪನಹಳ್ಳಿಯಲ್ಲಿ ಸಂಭವಿಸಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೊರಬ ತಾಲೂಕಿನಲ್ಲಿ ಹಲವೆಡೆ ಜಮೀನು, ರಸ್ತೆಗಳು ಜಲಾವೃತಗೊಂಡಿವೆ. ದಂಡಾವತಿ ನದಿ ಉಕ್ಕಿ ಹರಿಯುತ್ತಿದೆ. ಸೊರಬ-ಆನವಟ್ಟಿ ರಸ್ತೆಯ ಬಿಳವಗೋಡು ಬಳಿ ಬೃಹತ್ ಮಾವಿನ ಮರವೊಂದು ಧರೆಗುರುಳಿ ಆನವಟ್ಟಿ, ಬನವಾಸಿ, ಶಿರಸಿ ಮಾರ್ಗದಲ್ಲಿ ತಾಸುಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಚಂದ್ರಗುತ್ತಿ ಹೋಬಳಿ ಪುರದೂರು ಗ್ರಾಮದಲ್ಲಿ ವರದಾ ನದಿ ಪ್ರವಾಹದಿಂದ 5 ಮನೆಗಳು ಜಲಾವೃತಗೊಂಡಿವೆ.
2 ಸಾವಿರ ಎಕರೆ ಹಾನಿ:ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ ಹರಿದಿರುವ ಪೂರ್ವವಾಹಿನಿ ವರದಾ ನದಿ ಉಕ್ಕಿ ಹರಿಯುತ್ತಿದ್ದು, 2000 ಎಕರೆಗೂ ಹೆಚ್ಚು ಕೃಷಿ ಭೂಮಿ ಜಲಾವೃತವಾಗಿದೆ. ಮೊಗಳ್ಳಿ ಸೇರಿ ಕೆಲವು ಗ್ರಾಮಗಳ ಸಂಪರ್ಕ ಕಡಿದುಹೋಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರಿದರೆ ವರದಾ ನದಿ ನೀರು ಹಲವು ಮನೆಗಳಿಗೆ ನುಗ್ಗುವ ಆತಂಕ ಉಂಟಾಗಿದೆ.
ಬೆಳಗಾವಿ, ಶಿವಮೊಗ್ಗ ಹೊರತುಪಡಿಸಿದರೆ ಉಳಿದೆಡೆ ಮಳೆ ಇಳಿಕೆ ಆಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೊಷಿಸಿದ್ದರೂ, ಶನಿವಾರ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಗಾಳಿಯ ಅಬ್ಬರ ಹೆಚ್ಚಿದ್ದ ಕಾರಣ, ಕಡಲ್ಕೊರೆತ ಮುಂದುವರಿದಿದೆ. ಭಾನುವಾರ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಿದ ಪರಿಣಾಮ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಸೇತುವೆಗಳು, ಬ್ಯಾರೇಜ್​ಗಳು ಮುಳುಗಡೆಯಾಗುತ್ತಿವೆ. ಬೆಳಗಾವಿ ತಾಲೂಕಿನ ಮಾರ್ಕಂಡೇಯ ಜಲಾಶಯಕ್ಕೆ ರಕ್ಕಸಕೊಪ್ಪದಿಂದ 3,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ, ಘಟಪ್ರಭಾ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಗೋಕಾಕ ತಾಲೂಕಿನ ಗೊಡಚಿನಮಲಕಿ ಫಾಲ್ಸ್ ವ್ಯಾಪ್ತಿಯ ಸೇತುವೆಗಳು ಮುಳುಗಡೆಯಾಗಿವೆ. ಪರಿಣಾಮ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.
ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಮೋದಗಾ, ಶೆಟ್ಟಿಹಳ್ಳಿ ಗ್ರಾಮದ ನಾಲ್ಕು ಸೇತುವೆ ಶನಿವಾರ ಮುಳುಗಿದ್ದು, ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನದಿ ದಡದ ರೈತರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಸೇತುವೆ ಮೇಲೆ ಜನ ಓಡಾಡದಂತೆ ಪೊಲೀಸರು ಬ್ಯಾರಿಕೇಡ್ ಇಟ್ಟು ನಿಗಾವಹಿಸಿದ್ದಾರೆ. ನದಿ ಆಚೆಗಿನ ರೈತರಿಗೆ ಹಾಗೂ ಶಾಲಾ ಮಕ್ಕಳಿಗೆ ಬೇರೆ ಮಾರ್ಗದಲ್ಲಿ ಸಂಚರಿಸಲು ಬಸ್ ಸೌಕರ್ಯ ಒದಗಿಸಲಾಗಿದೆ.
*ಕೃಷ್ಣಾ ನದಿಗೆ 81,208 ಕ್ಯೂಸೆಕ್ ನೀರು
*ನದಿಗಳ ನೀರಿನ ಮಟ್ಟ ಎರಡು ಅಡಿ ಏರಿಕೆ
*ಕೆಳಹಂತದ ಬ್ಯಾರೇಜ್​ಗಳು ಮತ್ತೆ ಜಲಾವೃತ
*ದೂಧಗಂಗಾ, ವೇದಗಂಗಾ ನದಿಗಳಲ್ಲೂ ನೆರೆ
*ಸತತ ಮಳೆಗೆ ಖಾನಾಪುರ ತಾಲೂಕು ತತ್ತರ
*ಮಲಪ್ರಭಾ ನದಿ ತೀರದ ಕೃಷಿ ಜಮೀನು ಜಲಾವೃತ
ಅಂಕೋಲ ಬಳಿ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ಮರದ ದಿಮ್ಮಿಗಳನ್ನು ತುಂಬಿದ ಲಾರಿ ಚಾಲಕ ಅರ್ಜುನ್ ಜೀವಂತ ಇರಬಹುದೆಂಬ ಚರ್ಚೆ ಶುರುವಾಗಿದೆ. ಲಾರಿ ಮಾಲೀಕ ಜು. 16ರಂದು ಚಾಲಕನಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಇತ್ತು. ಬಳಿಕ ಅರ್ಜುನ್ ಕುಟುಂಬದವರು ಜು. 18ರಂದು ಕರೆ ಮಾಡಿದಾಗ ಫೋನ್ ಒಮ್ಮೆ ಆನ್ ಆಗಿ ರಿಂಗ್ ಆಗಿತ್ತೆಂದು ತಿಳಿದು ಬಂದಿದೆ. ಹೀಗಾಗಿ ಸುರತ್ಕಲ್ ಎನ್​ಐಟಿಕೆಯ ತಜ್ಞರು ಗ್ರೌಂಡ್ ಪೆನಟ್ರೇಟಿಂಗ್ ರಡಾರ್ ಯಂತ್ರದ ಮೂಲಕ ಲಾರಿ ಇರುವ ಸ್ಥಳ ಪರಿಶೀಲಿಸಿದ್ದಾರೆ.
ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದ ಸ್ಥಳಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರ ಗಮನ ಸೆಳೆದು ನಿಯಮದಂತೆ ಏನು ಸಹಾಯ ಮಾಡಬೇಕೋ ಅದನ್ನು ಮಾಡಿಸುತ್ತೇನೆ. ಗುಡ್ಡ ಕುಸಿತದಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳ ಜತೆಗೆ ರಾಜ್ಯ ಸರ್ಕಾರವೂ ನಿಲ್ಲಬೇಕು ಎಂದು ಒತ್ತಾಯಿಸಿದರು.
ಕಾರವಾರ: ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರ ಗಮನಸೆಳೆದು ನಿಯಮದಂತೆ ಏನು ಸಹಾಯ ಮಾಡಬೇಕೋ ಅದನ್ನು ಮಾಡಿಸುತ್ತೇನೆ ಎಂದು ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ, ಸಂತ್ರಸ್ತರ ಅಳಲು ಆಲಿಸಿದರು. ಈ ಹಿಂದೆ ನಾನು 2018ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೊಡಗಿನ ದುರಂತದಲ್ಲಿ ಸಂತ್ರಸ್ತ ಎಲ್ಲರಿಗೂ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡುವ ಕಾರ್ಯ ಮಾಡಿದ್ದೇನೆ. ಕೇಂದ್ರ ಸರ್ಕಾರ ಹಣ ನೀಡಿಲ್ಲ ಎಂದು ನಾನು ಕೈ ಕಟ್ಟಿ ಕುಳಿತುಕೊಂಡಿರಲಿಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.
ಬೆಂಗಳೂರು: ಶಿರೂರಿನ ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡುವುದು ಸುದ್ದಿಯಾಗದಂತೆ ತಡೆಯಲು ಯತ್ನಿಸಿರುವುದು ಸಿಎಂ ಸಿದ್ದರಾಮಯ್ಯ ಅವರ ಅಂಜು ಬುರುಕುತನ ತೋರಿಸುತ್ತದೆ. ರಕ್ಷಣಾ ಕಾರ್ಯಾಚರಣೆ ಸ್ಥಳದಿಂದ 5 ಕಿ.ಮೀ ದೂರದಲ್ಲೇ ಬ್ಯಾರಿಕೇಡ್ ಹಾಕಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ನಿಮ್ಮ ಈ ನಡೆ ಸಂವಿಧಾನ ವಿರೋಧಿ ಅಲ್ಲವೇ ಎಂದು ಜೆಡಿಎಸ್ ಪ್ರಶ್ನಿಸಿದೆ. ದುರಂತ ನಡೆದು ಇಷ್ಟು ದಿನಗಳಾದರೂ ಶಿರೂರಿಗೆ ನೀವಾಗಲಿ, ಸಚಿವರಾಗಲಿ ಭೇಟಿ ನೀಡಿಲ್ಲ. ಸಂತ್ರಸ್ತರ ಸಂಕಷ್ಟ ಆಲಿಸಿಲ್ಲ. ಆದರೆ, ಕುಮಾರಸ್ವಾಮಿ ಭೇಟಿ ನೀಡುವ ವೇಳೆಯೂ ನಿಮ್ಮ ಸರ್ಕಾರದ ಈ ಸೇಡಿನ ರಾಜಕೀಯ ಥರವೇ? ಎಂದು ಕೇಳಿದೆ.
ಸಿಎಂ, ವಿಜಯೇಂದ್ರ ಭೇಟಿ ಇಂದು :ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭಾನುವಾರ ಭೇಟಿ ನೀಡಲಿದ್ದಾರೆ.
121 ಅಡಿಗೆ ಕೆಆರ್​ಎಸ್:ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ ಶನಿವಾರ 121 ಅಡಿಗೆ ತಲುಪಿದೆ.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 15 ಸಾವಿರ ಕ್ಯೂಸೆಕ್ ನೀರನ್ನು ನದಿ ಹಾಗೂ 2,700 ಕ್ಯೂಸೆಕ್ ನೀರನ್ನು ನಾಲೆಗೆ ಹರಿಸಲಾಗುತ್ತಿದೆ. 124.80 ಅಡಿ ಗರಿಷ್ಠ ಸಂಗ್ರಹದ ಅಣೆಕಟ್ಟೆ ಭರ್ತಿಯಾಗಲು ಕೆಲವೇ ಅಡಿ ಬಾಕಿ ಉಳಿದಿದೆ.
ಗೊಂಡಾ ರೈಲು ದುರಂತಕ್ಕೆ ಕಾರಣವೇನು ಗೊತ್ತಾ? ಅಪಘಾತದ ಪ್ರಾಥಮಿಕ ವರದಿಯಲ್ಲಿ ಕಾರಣ ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
