ಬೆಂಗಳೂರು:ರಾಜ್ಯದ ಹಲವೆಡೆ ಒಂದು ವಾರದಿಂದ ರುದ್ರನರ್ತನ ಮಾಡುತ್ತಿದ್ದ ವರುಣನ ಆರ್ಭಟ ಕಡಿಮೆಯಾಗಿದ್ದು, ಪ್ರವಾಹೋಪಾದಿಯಲ್ಲಿ ಭೋರ್ಗರೆಯುತ್ತಿದ್ದ ನದಿಗಳು ಪರಿಧಿಯೊಳಗೆ ಹರಿಯುತ್ತಿವೆ. ಜಲಭೀತಿಯಿಂದ ನಲುಗಿದ್ದ ನದಿತಟ ನಿವಾಸಿಗರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಜಲಾವೃತವಾಗಿದ್ದ ಗ್ರಾಮಗಳೆಲ್ಲ ಇದೀಗ ಕೆಸರು ಗದ್ದೆಗಳಂತಾಗಿವೆ.
ಅಲ್ಲದೆ ಸರ್ಕಾರದ ಕಾಳಜಿ ಕೇಂದ್ರ, ಸುರಕ್ಷಿತ ಪ್ರದೇಶಗಳಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಈಗ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಆವರಿಸಿದೆ. ತಂಪಾದ ಪ್ರದೇಶಗಳಲ್ಲೇ ವಾಸ್ತವ್ಯ ಮಾಡಿರುವುದರಿಂದ ಮಕ್ಕಳು-ವೃದ್ಧರಿಗೆ ಕೆಮ್ಮು, ಶೀತ ಹಾಗೂ ಜ್ವರ ಬರುತ್ತಿರುವುದರಿಂದ ಕರೊನಾ ಸೋಂಕಿನ ಆತಂಕಕ್ಕೂ ಸಂತ್ರಸ್ತರು ಒಳಗಾಗುತ್ತಿದ್ದಾರೆ.
ಗುರುವಾರ ಬೆಳಗ್ಗೆಯಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿ ಹಾಗೂ ಬಳ್ಳಾರಿ ನಾಲಾದಲ್ಲಿ ಒಳಹರಿವು ಕಡಿಮೆಯಾಗಿದೆ. ಹೀಗಾಗಿ ಜಲದಿಗ್ಬಂಧನಕ್ಕೆ ತುತ್ತಾಗಿದ್ದ ರಾಮದುರ್ಗ, ಗೋಕಾಕ, ಮೂಡಲಗಿ, ಸವದತ್ತಿ ತಾಲೂಕು ವ್ಯಾಪ್ತಿಯ ನದಿತಟದ ಗ್ರಾಮಗಳಲ್ಲಿ ಪ್ರವಾಹ ಆತಂಕ ತಗ್ಗಿದೆ. ಅನೇಕ ಗ್ರಾಮಗಳಲ್ಲಿ ಪ್ರವಾಹ ತಗ್ಗುತ್ತಿದ್ದು, ಅಲ್ಲಿನ ಓಣಿಗಳು, ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ರಸ್ತೆ ಮೇಲೆ ಕಾಲಿಡಲೂ ಆಗದಷ್ಟು ಕೆಸರು ಆವರಿಸಿದೆ. ಮನೆಗಳ ಒಳಗೂ ಕೆಸರುಮಿಶ್ರಿತ ನೀರು ನುಗ್ಗಿದ್ದರಿಂದ ಮನೆಗಳನ್ನು ಸ್ವಚ್ಛ ಮಾಡಿ ಸಹಜ ಸ್ಥಿತಿಗೆ ತರಲು ತಿಂಗಳುಗಳೇ ಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಾರೆ. ಇನ್ನು, ಈ ಪ್ರವಾಹದ ಪರಿಹಾರ ಯಾವಾಗ ಕೊಡುತ್ತಾರೋ ಎಂದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರು ಗೊಣಗುತ್ತಿದ್ದಾರೆ.
‘ಮಹಾ’ ತೊಡಕು: ಮಹಾರಾಷ್ಟ್ರ ಕೊಯ್ನಾ ಜಲಾಶಯ ಸೇರಿ ಅಲ್ಲಿನ ವಿವಿಧ ಜಲಾಶಯಗಳಿಂದ ಚಿಕ್ಕೋಡಿ ಸಮೀಪದ ಕೃಷ್ಣಾ ನದಿಗೆ 2.32 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಕಾಗವಾಡ, ಅಥಣಿ ತಾಲೂಕು ವ್ಯಾಪ್ತಿಯ ನದಿತಟದ ಗ್ರಾಮಗಳಲ್ಲಿ ಇನ್ನೂ ಪ್ರವಾಹ ಸ್ಥಿತಿ ಮುಂದುವರಿದಿದೆ. ಮಲಪ್ರಭಾ ನದಿ ಪ್ರವಾಹದಿಂದಾಗಿ ಮುಳಗಡೆಯಾಗಿದ್ದ ರಾಮದುರ್ಗ ತಾಲೂಕಿನ 5 ಹಳ್ಳಿಗಳ 139 ಕುಟುಂಬಗಳ ಸಂತ್ರಸ್ತರು ಗುರುವಾರ ಮಳೆ ತಗ್ಗಿದ್ದರಿಂದ ಆರೈಕೆ ಕೇಂದ್ರಗಳಿಂದ ತಮ್ಮ ಗ್ರಾಮಗಳಿಗೆ ಹಾಗೂ ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಪ್ರವಾಹ ಇರುವುದರಿಂದ ಸುರೇಬಾನ ಪರಿಹಾರ ಕೇಂದ್ರದಲ್ಲಿ 60 ಕುಟುಂಬಗಳ 165 ಜನರು ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರಗಳ ಸೌಲಭ್ಯ ಸಿಗದ ಅನೇಕ ಸಂತ್ರಸ್ತರು ಸುರಕ್ಷಿತ ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡು ತಮ್ಮ ಮಕ್ಕಳು-ಮರಿಗಳೊಂದಿಗೆ ಆತಂಕದಿಂದಲೇ ದಿನ ಕಳೆಯುತ್ತಿದ್ದಾರೆ. ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ 45ಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡಿದ್ದು, 12ಕ್ಕೂ ಅಧಿಕ ಗ್ರಾಮ ಸಂಪೂರ್ಣ ಮುಳುಗಡೆಯಾಗಿವೆ. 110ಕ್ಕೂ ಅಧಿಕ ಕುಟುಂಬಗಳು ಸರ್ಕಾರದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ಇನ್ನೂ ಕೆಲ ಕುಟುಂಬಗಳು ಅಲ್ಲಲ್ಲಿ ಟೆಂಟ್ ಹಾಕಿಕೊಂಡು ದಿನ ಕಳೆಯುತ್ತಿವೆ.
ಕಡಿಮೆಯಾಗದ ‘ಕೃಷ್ಣೆ’ ಆರ್ಭಟ
ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆಯಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ಆರ್ಭಟ ತಗ್ಗಿಲ್ಲ. ಅಲ್ಲದೆ, ವೇದಗಂಗಾ ಮತ್ತು ದೂಧಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ತಟ ನಿವಾಸಿಗರಿಗೆ ಇನ್ನೂ ‘ಜಲ ಭೀತಿ’ ತಗ್ಗಿಲ್ಲ.
ವೃದ್ಧೆ ಸಾವು
ಮಲಪ್ರಭಾ ನದಿ ಪ್ರವಾಹದಿಂದಾಗಿ ಸುರೇಬಾನ ಕಾಳಜಿ ಕೇಂದ್ರದಲ್ಲಿ ರಕ್ಷಣೆ ಪಡೆದಿದ್ದ ವೃದ್ಧೆ, ಗಂಗಮ್ಮ ಬಸಯ್ಯ ಮುಳಗುಂದಮಠ (88) ಶೀತಮಯ ವಾತಾವರಣ ಕಾರಣದಿಂದ ಮೃತಪಟ್ಟಿದ್ದಾರೆ.
ಘಟಪ್ರಭೆಯ ಅಬ್ಬರಕ್ಕೆ ಮುಧೋಳ ತತ್ತರ
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಘಟಪ್ರಭಾ ನದಿ ಉಕ್ಕಿ ಹರಿಯಲಾರಂಭಿಸಿದ್ದರಿಂದ ಜನಜೀವನ ತತ್ತರಗೊಂಡಿದೆ. ಮುಧೋಳ ತಾಲೂಕಿನ ಚಿಚಖಂಡಿ ಬಳಿಯ ಸೇತುವೆ ಮುಳುಗುವ ಲಕ್ಷಣ ಗೋಚರಿಸಿದೆ. ಈ ಸೇತುವೆ ಮುಳುಗಿದರೆ ಬಾಗಲಕೋಟೆಯಿಂದ ಮುಧೋಳ-ಜಮಖಂಡಿ ನಗರ ಸಂಪರ್ಕ ಕಡಿತಗೊಳ್ಳಲಿದೆ. ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಇಳಿದಿದ್ದು, ಮಂಗಳವಾರ ಜಲಾವೃತಗೊಂಡಿದ್ದ ಬಾದಾಮಿ ತಾಲೂಕಿನ ಚೊಳಚಗುಡ್ಡ ಸೇತುವೆ ಹಾಗೂ ಗೋವನಕೊಪ್ಪ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. ಮುಧೋಳ ತಾಲೂಕಿನ ಮಾಚಕನೂರು ಹೊಳೆಬಸವೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿ, ದೇವಸ್ಥಾನದ ಗೋಪುರ ಮಾತ್ರ ಕಾಣಿಸುತ್ತಿದೆ.
ತಗ್ಗಿದ ತುಂಗಭದ್ರಾ ಪ್ರವಾಹ
ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ನದಿಯಲ್ಲಿ ಪ್ರವಾಹ ಭೀತಿ ದೂರವಾಗಿದೆ. ಜಲಾಶಯದಿಂದ ನದಿಗೆ ಬಿಡಲಾಗುತ್ತಿದ್ದ ನೀರಿನ ಪ್ರಮಾಣ 1.12 ಲಕ್ಷ ಕ್ಯೂಸೆಕ್​ನಿಂದ 46698 ಕ್ಯೂಸೆಕ್​ಗೆ ಇಳಿದಿದೆ. ಪ್ರವಾಹ ತಗ್ಗಿದ್ದರಿಂದ ಗುರುವಾರ ಬೆಳಗ್ಗೆಯಿಂದ ಕಂಪ್ಲಿ-ಗಂಗಾವತಿ ಸೇತುವೆ ಮೇಲೆ ವಾಹನಗಳ ಸಂಚಾರ ಮರು ಆರಂಭವಾಗಿದೆ. ಹಂಪಿಯ ರಾಮಲಕ್ಷ್ಮಣ ದೇವಸ್ಥಾನದ ಬಳಿ ನೀರಿನ ಪ್ರಮಾಣ ಗಣನೀಯವಾಗಿ ಇಳಿದಿದೆ. ಆದರೆ, ಪುರಂದರ ಮಂಟಪ, ಚಕ್ರತೀರ್ಥದ ಬಳಿಯ ನೂರೆಂಟು ಲಿಂಗ, ನಂದಿ ಹಾಗೂ ಋಷಿಮುಖ ಪರ್ವತದ ಬಳಿ ಇರುವ ಸಾಲು ಕಂಬಗಳು ಇನ್ನೂ ಜಲಾವೃತಗೊಂಡಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಸತತ ಮಳೆಯಾಗುತ್ತಿದ್ದು, ಡ್ಯಾಂ ಒಳಹರಿವು ಹೆಚ್ಚುತ್ತಿದೆ. ಆಣೆಕಟ್ಟೆಯ ಕೆಳದಂಡೆ ಹಾಗೂ ನದಿಪಾತ್ರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷತಾ ದೃಷ್ಟಿಯಿಂದ ಎತ್ತರದ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಮುಳುಗಿದ ಬೋಟ್
ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಧಾರೇಶ್ವರ ವ್ಯಾಪ್ತಿಯ ಕಡಲಿನಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಗುರುವಾರ ಆಕಸ್ಮಿಕವಾಗಿ ಮುಳುಗಿದ್ದು ಬೋಟ್​ನಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ. ಕಿಮಾನಿಯ ಮೋಹನ ಹರಿಕಂತ್ರ ಎಂಬುವವರ ವಿಜಯಲಕ್ಷ್ಮೀ ಎಂಬ ಹೆಸರಿನ ಟ್ರಾಲ್ ಬೋಟ್ ಸಮುದ್ರದಲ್ಲಿ ಮುಳುಗುತ್ತಿರುವದನ್ನು ಗಮನಿಸಿದ ಬೇರೆ ಬೋಟಿನಲ್ಲಿದ್ದವರು ಆರೂ ಮೀನುಗಾರರನ್ನು ರಕ್ಷಿಸಿದ್ದಾರೆ. ದಡಕ್ಕೆ ಬೋಟ್ ಎಳೆತರುವ ಪ್ರಯತ್ನ ಫಲಿಸಲಿಲ್ಲ, ಮುಳುಗಡೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಇಂದು ಕೆಆರ್​ಎಸ್-ಕಬಿನಿಗೆ ಸಿಎಂ ಯಡಿಯೂರಪ್ಪ ಬಾಗಿನ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ. 21ರಂದು ಮಂಡ್ಯ ಮತ್ತು ಮೈಸೂರು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12.05ಕ್ಕೆ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸುವವರು. ಮಧ್ಯಾಹ್ನ 1.15ಕ್ಕೆ ಕಬಿನಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಣೆ ಮಾಡುವರು.
ಯೆಲ್ಲೋ ಅಲರ್ಟ್
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಮಳೆ ಮುಂದುವರಿದಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ವ್ಯಾಪಕ ಮಳೆಯಾಗಲಿರುವುದರಿಂದ ಆ.21ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆ.24ರ ನಂತರ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನದಲ್ಲಿ ಮಳೆ ಚುರುಕಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ಮಾಹಿತಿ ನೀಡಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
