ಬೆಂಗಳೂರು:ಮಳೆ ಹಾನಿ ತಡೆಗಟ್ಟಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಖುದ್ದು ಹಾವೇರಿ ಜಿಲ್ಲೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.
ಹಿಂದಿನ ಪ್ರವಾಹದ ಅನುಭವದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಜೀವಹಾನಿ ತಪ್ಪಿ ಸಬಹುದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.
ಪ್ರವಾಹ ಬಂದಾಗ ಬಹಳ ರೈತರನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಅನಾಹುತಗಳನ್ನು ತಪ್ಪಿಸಲು ಹೆಚ್ಚಿನ ಗಮನ ನೀಡಬೇಕು. ಜಿಲ್ಲಾಧಿಕಾರಿಗಳು ಪದೇ ಪದೇ ಪ್ರವಾಹವಾಗುವ ಸ್ಥಳಗಳಲ್ಲಿ ಜನರನ್ನು ಬಲವಂತವಾಗಿ ಸ್ಥಳಾಂತರ ಮಾಡಿ ಜೀವಹಾನಿ ತಪ್ಪಿಸಬೇಕು ಎಂದು ಸೂಚಿಸಿದರು. ನೆರೆ ಬಂದು ನೀರು ಹೆಚ್ಚಾದರೆ ಅಲ್ಲಿಗೆ ಜನರು ಹೋಗದಂತೆ ತಡೆಗಟ್ಟಬೇಕು. ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡಬೇಕು. ಅರಿವು ಮೂಡಿಸಿ ಪ್ರಾಣಹಾನಿಯನ್ನು ತಪ್ಪಿಸಬೇಕು ಎಂದರು.
ಇಲಾಖೆಗಳಲ್ಲಿ ಸಮನ್ವಯ ಅವಶ್ಯ:ತುರ್ತು ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಪೊಲೀಸ್, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಧ್ಯೆ ಸಮನ್ವಯ ಅಗತ್ಯ. ಸಮನ್ವಯವಿದ್ದರೆ ಸಾಕಷ್ಟು ಜೀವಹಾನಿ ತಪ್ಪಿಸಬಹುದು. ಮಣ್ಣು ಕುಸಿತವಾಗುವ ಸ್ಥಳಗಳ ಬಗ್ಗೆ ಇಲಾಖೆಗಳಿಗೆ ಮಾಹಿತಿ ಇರುತ್ತದೆ. ಅಂಥವನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಒಂಭತ್ತು ಜೀವಹಾನಿಯಾಗಿದೆ. ಅಪಘಾತಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಾವುಗಳನ್ನು ತಪ್ಪಿಸುವುದು ಬಹಳ ಮುಖ್ಯ. ಜ.1 ರಿಂದ ಜು.25 ರವರೆಗೆ 64 ಜನ ಮರಣಹೊಂದಿದ್ದಾರೆ. ಇದನ್ನು ತಪ್ಪಿಸಬೇಕು ಎಂದು ಹೇಳಿದರು.ಆದ್ಯತೆಯ ಮೇರೆಗೆ ಶಿಥಿಲಗೊಂಡ ಆಸ್ಪತ್ರೆ, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳನ್ನು ದುರಸ್ತಿ ಮಾಡಿಸಬೇಕು. ಮುಂಚಿತವಾಗಿಯೇ ಶಿಥಿಲವಾಗಿರುವ ಶಾಲಾ ಕಟ್ಟಡಗಳು, ಆಸ್ಪತ್ರೆಗಳು, ಅಂಗನವಾಡಿ ಕಟ್ಟಡಗಳನ್ನು ದುರಸ್ತಿ ಮಾಡಿಸಬೇಕು. ತಪ್ಪಿದರೆ ಬೇರೆಡೆಗೆ ಅವುಗಳನ್ನು ಸ್ಥಳಾಂತರ ಮಾಡಿಸಬೇಕು. ಅನಾಹುತವಾದರೆ ಅಧಿಕಾರಿಗಳನ್ನು ನೇರ ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅನುದಾನದ ಕೊರತೆ ಇಲ್ಲಪ್ರತಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಅನುದಾನ ಲಭ್ಯವಿದೆ. ಎಸ್ .ಡಿ.ಆರ್.ಎ್ನಡಿ ಅನುದಾನದ ಲಭ್ಯತೆಯೂ ಇದೆ . ದುರಸ್ತಿಗೆ ತಕ್ಷಣ ಕ್ರಮ ವಹಿಸಿ. ಹೆಚ್ಚಿನ ಅನುದಾನ ಅಗತ್ಯವಿದ್ದರೆ ಪ್ರಸ್ತಾವನೆ ಕಳಿಸಲು ಸೂಚಿಸಿದರು. ಜಿಲ್ಲೆಯ ಎಲ್ಲ ಆಗು-ಹೋಗುಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ನಿಗಾ ವಹಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ಉಳಿಯಬೇಕು ಎಂದು ಸೂಚಿಸಿದರು.ಕಡಲು ಕೊರೆತ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಬೇಕು. ಸೇತುವೆ ಕಡಿತಗೊಂಡಲ್ಲಿ ಪರ್ಯಾಯ ರಸ್ತೆ ಕಲ್ಪಿಸಬೇಕು ಎಂದು ಹೇಳಿದರು. ಬೆಳಗಾವಿ ಜಿಲ್ಲೆಯಲ್ಲಿ 12 ಸೇತುವೆಗಳ ಸಂಪರ್ಕ ಕಡಿತಗೊಂಡಿದೆ. ಪ್ರತಿ ವರ್ಷ ತಗ್ಗು ಪ್ರದೇಶಗಳಲ್ಲಿ ನೀರು ತುಂಬುವುದರಿಂದ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡಲು ಕಡಿಮೆ ಜನರಿರುವ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಎಂದು ಸಲಹೆ ನೀಡಿದರು.
ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಕೃಷ್ಣಾ ನದಿಯ ನೀರು ಹರಿಸಿದರೆ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತದೆ. ನೀರು ಬಿಡುವ ಮುನ್ನವೇ ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಅನಾಹುತಗಳು ಸಂಭವಿಸದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು. ಕಲಬುರಗಿ ಜಿಲ್ಲಾಧಿಕಾರಿಗಳು ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಉಜ್ಜನಿ ಜಲಾಶಯದಿಂದ ನೀರು ಹರಿಸುವ ಮುನ್ನ ಎಚ್ಚರಿಕೆ ವಹಿಸಿ. ಕಲಬುರಗಿ, ವಿಜಯಪುರ ಜಿಲ್ಲಾಧಿಕಾರಿಗಳು ಸಂಪರ್ಕದಲ್ಲಿರಬೇಕೆಂದು ಸೂಚಿಸಿದರು.
ಭೂ ಕುಸಿತ ತಡೆಗಟ್ಟಲು ಕ್ರಮ ವಹಿಸಿ:ಕೊಡಗು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭೂ ಕುಸಿತ ತಡೆಗಟ್ಟಲು ಕ್ರಮ ವಹಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಹುತೇಕ ಮಳೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ಸಮನ್ವಯ ಸಾಧಿಸಬೇಕು. ವಾರ್ ರೂಂ ಗಳನ್ನು ತೆರೆಯಬೇಕು. ಪ್ರವಾಹ ಬರುವ ಮುನ್ನ ತಗ್ಗು ಪ್ರದೇಶಗಳಲ್ಲಿನ ಜನರ ಕುರಿತು ಎಚ್ಚರಿಕೆವಹಿಸಬೇಕು ಎಂದು ಸೂಚನೆ ನೀಡಿದರು.
ಬಿತ್ತನೆ ಬೀಜ, ರಸಗೊಬ್ಬರ ಒದಗಿಸಿ:ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬಿತ್ತನೆಯಾಗಿದ್ದು, ಬೀಜ, ಗೊಬ್ಬರ ಹಾಗೂ ಕೀಟನಾಶಕ ಕೊರತೆಯಾಗದಂತೆ ವ್ಯವಸ್ಥೆ ಮಾಡಬೇಕು. ಮಳೆ ಬಾರದೆ ಬಿತ್ತನೆ ಹಾಳಾಗಿರುವ ಜಿಲ್ಲೆಗಳಲ್ಲಿ ರೈತರಿಗೆ ಬಿತ್ತನೆ ಬೀಜ ನೀಡಬೇಕು. ಕರ್ತವ್ಯ ಲೋಪ ಕಂಡುಬಂದರೆ ಅವರ ಮೇಲೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಜಿ.ಪರಮೇಶ್ವರ್, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಎಂ.ಸಿ.ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ ಖರ್ಗೆ,ಈಶ್ವರ್ ಖಂಡ್ರೆ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ , ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಡಿಯೋ ಸಂವಾದದ ಮುಖ್ಯಾಂಶಗಳು:*ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ ಭಿಪರ್ ಜಾಯ್ ಚಂಡಮಾರುತದ ಕಾರಣದಿಂದಾಗಿ ಶೇ.56 ರಷ್ಟು ಮಳೆ ಕೊರತೆ ಕಂಡು ಬಂತು.*ಜುಲೈ ತಿಂಗಳಿನಲ್ಲಿ ಇಲ್ಲಿಯವರೆಗೆ ವಾಡಿಕೆ ಮಳೆ 228 ಮಿ.ಮೀ. ನಷ್ಟಿದೆ. ಆದರೆ ರಾಜ್ಯದಲ್ಲಿ 313 ಮಿ.ಮೀ. ಮಳೆ ಆಗಿದೆ. ಇದು ವಾಡಿಕೆ ಮಳೆಗಿಂತ ಶೇ.37 ರಷ್ಟು ಹೆಚ್ಚಾಗಿದೆ.*ಜುಲೈ ತಿಂಗಳಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೂನ್ ಅಂತ್ಯಕ್ಕೆ ಇದ್ದ ಮಳೆ ಕೊರತೆಯು ಕಡಿಮೆಯಾಗಿದೆ. ಮಳೆ ಕೊರತೆ ಕಂಡು ಬಂದ ತಾಲ್ಲೂಕುಗಳ ಸಂಖ್ಯೆ ಇಳಿಕೆಯಾಗಿದೆ. * ಜೂನ್ 1 ರಿಂದ ಈವರೆಗೆ ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು, 21 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. 6 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ.*ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದು, ಮಳೆ ಕೊರತೆಯಿರುವ ತಾಲ್ಲೂಕುಗಳ ಸಂಖ್ಯೆ ಇಳಿಕೆಯಾಗಲಿದೆ.*ಬಹುತೇಕ ಎಲ್ಲ ಜಲಾಶಯಗಳಲ್ಲಿ ನೀರು ಬಹುತೇಕ ಭರ್ತಿಯಾಗುತ್ತಿವೆ. ಕಳೆದ ಒಂದು ವಾರದಲ್ಲಿ ಒಟ್ಟು ಸಂಚಿತ ಒಳಹರಿವು 227 ಟಿಎಂಸಿಯಷ್ಟಾಗಿದೆ.*ಜೂನ್ 1 ರಿಂದ ಈ ವರೆಗೆ ರಾಜ್ಯದಲ್ಲಿ ನೀರಿನಲ್ಲಿ ಸಿಲುಕಿ, ಸಿಡಿಲು ಬಡಿದು, ಮನೆ ಕುಸಿದು, ಮರ ಬಿದ್ದು ಹಾಗೂ ಭೂಕುಸಿತದಿಂದ ಒಟ್ಟು 38 ಮಾನವ ಜೀವಹಾನಿ ಆಗಿದೆ. 35 ಜನರು ಗಾಯಗೊಂಡಿದ್ದಾರೆ.*ರಾಜ್ಯದಲ್ಲಿ 57 ಮನೆಗಳು ಸಂಪೂರ್ಣವಾಗಿ, 208 ಮನೆಗಳು ತೀವ್ರವಾಗಿ ಹಾಗೂ 2682 ಮನೆಗಳಿಗೆ ಭಾಗಶಃ ಹಾನಿಯಾಗಿದೆ.*ಮಳೆಯಿಂದಾಗಿ 105 ಜಾನುವಾರುಗಳು ಮೃತಪಟ್ಟಿವೆ*185 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 356 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಸೇರಿ ಒಟ್ಟು 541.39 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದೆ.*407 ಕಿ.ಮೀ. ರಾಜ್ಯ ಹೆದ್ದಾರಿ, 425 ಕಿ.ಮೀ. ಜಿಲ್ಲಾ ಹೆದ್ದಾರಿ, ಗ್ರಾಮೀಣ ರಸ್ತೆಗಳು 1277 ಕಿ.ಮೀ. ಒಟ್ಟು 2109 ಕಿ.ಮೀ. ರಸ್ತೆ ಹಾನಿಯಾಗಿದೆ.*189 ಸೇತುಮೆ, 889 ಶಾಲಾ ಕೊಠಡಿ, 8 ಪ್ರಾಥಮಿಕ ಕೇಂದ್ರಗಳು, 269 ಅಂಗನವಾಡಿ ಕೇಂದ್ರಗಳು ಹಾನಿಯಾಗಿವೆ.*11,995 ವಿದ್ಯುತ್ ಕಂಬಗಳು, 894 ಟ್ರಾನ್ಸ್‌ಫಾರ್ಮರ್ ಗಳು ಹಾನಿಯಾಗಿದ್ದು, 215 ಕಿ.ಮೀ. ಉದ್ದದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.*ಪ್ರಸ್ತುತ ಎರಡು ಪರಿಹಾರ ಶಿಬಿರಗಳಲ್ಲಿ 50 ಜನರಿಗೆ ಆಶ್ರಯ ನೀಡಲಾಗಿದೆ.*ಜೂನ್ ತಿಂಗಳಿನಲ್ಲಿ ಮಳೆ ಕೊರತೆಯಾದ್ದರಿಂದ ಮುಂಗಾರು ಹಂಗಾಮಿನಲ್ಲಿ ಈ ವರೆಗೆ ಶೇ. 53 ರಷ್ಟು ಬಿತ್ತನೆಯಾಗಿದೆ. ವಾಡಿಕೆಯಂತೆ ಶೇ. 83 ರಷ್ಟು ಬಿತ್ತನೆಯಾಗಿದೆ.*ರಾಜ್ಯದಲ್ಲಿ 156 ಲಕ್ಷ ಟನ್ ಮೇವು ದಾಸ್ತಾನು ಇದ್ದು, ಮುಂದಿನ 29 ವಾರಗಳಲ್ಲಿ ಸಾಕಾಗುವಷ್ಟಿದೆ.
ಬೀಜ, ಗೊಬ್ಬರಕ್ಕೆ ತೊಂದರೆಯಾಗದಂತೆ ಕ್ರಮ:ಬಿತ್ತನೆ ಮಾಡಲು ಯಾವುದೇ ಕಾರಣಕ್ಕೂ ಬೀಜ, ಗೊಬ್ಬರ, ಕೀಟನಾಶಕ ತೊಂದರೆಯಾದ ಹಾಗೆ ನೋಡಿಕೊಳ್ಳಬೇಕು. ಬೆಳೆ ಹಾಕಿ ಪ್ರವಾಹ ಬಂದು ಮುಳುಗಡೆಯಾದರೆ ನಷ್ಟವಾಗಿದ್ದರೆ ಅಂತಹವರಿಗೆ ಬಿತ್ತನೆ ಬೀಜ ಗೊಬ್ಬರ ಪೂರೈಸಲು ಹೇಳಿದ್ದೇವೆ. ಒಂದು ವೇಳೆ ಬಿತ್ತನೆ ಬೀಜ ಕೊಟ್ಟು ಮೊಳಕೆ ಬರದೇ ಹೋದರೆ ಅಂತಹವರಿಗೂ ಕೂಡ ಮತ್ತೆ ಬೀಜ ಕೊಡಬೇಕು ಎಂದು ಹೇಳಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರೈತರಿಂದ ಪ್ರವಾಹದ ಸಂದರ್ಭದಲ್ಲಿ ಬಲವಂತವಾಗಿ ಸಾಲ ವಸೂಲು ಮಾಡಬಾರದು. ಖಾಸಗಿಯವರು ಸಾಲ ಕೊಟ್ಟು ಹೆಚ್ಚು ಬಡ್ಡಿ ಹಾಕಿ ಸಾಲ ವಸೂಲು ಮಾಡಿದರೆ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಳೆಯಿಂದ ಪ್ರಾಣ ಕಳೆದುಕೊಂಡವರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ. ಜಾನುವಾರು, ಮನೆ ಹಾನಿಗೆ ಪರಿಹಾರ ಕೊಡಲು ಸೂಚಿಸಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ಸೇತುವೆ ಮುಳಗಿವೆ.ಅಂತಹ ಕಡೆ ಪರ್ಯಾಯ ರಸ್ತೆಗೆ ವ್ಯವಸ್ಥೆ ಮಾಡಲು ಹೇಳಿದ್ದೇನೆ. ಅನಾಹುತದ ಮುನ್ಸೂಚನೆ ಅರಿತು ಮುಂಜಾಗ್ರತಾ ಕ್ರಮ ಕೈಗೊಂಡು ಜೀವ ಹಾನಿ ತಡೆಯಲು ಸೂಚಿಸಿದ್ದೇನೆ.-ಸಿದ್ದರಾಮಯ್ಯ, ಸಿಎಂ
ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು, ಕಂದಾಯ ಅಧಿಕಾರಿಗಳು ಹೋಬಳಿ, ಗ್ರಾಪಂ ಕಾರ್ಯದರ್ಶಿಗಳು ಗ್ರಾಪಂ ಮಟ್ಟದಲ್ಲೇ ಇರಬೇಕು. ಅಧಿಕಾರಿಗಳು ತಮ್ಮ ಮೊಬೈಲ್ ಹಾಗೂ ಹಾಲಿ ವಾಸವಿರುವ ಸ್ಥಳದ ವಿಳಾಸವನ್ನು ಜನರಿಗೆ ತಿಳಿಸಬೇಕು. ಈ ಬಗ್ಗೆ ಸಣ್ಣ ಕೈಪಿಡಿ ಮಾಡಿ ಜನರಿಗೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.-ಡಿ.ಕೆ.ಶಿವಕುಮಾರ್, ಡಿಸಿಎಂ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
