ಬೆಂಗಳೂರು:ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಇನ್ನೂ 5 ದಿನ ಮುಂದುವರಿಯಲಿದೆ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಭಾನುವಾರವೂ ಭಾರಿ ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಆ.10 ಮತ್ತು ಆ.11ರಂದು ಯೆಲ್ಲೋ ಅಲರ್ಟ್ ಇರಲಿದೆ. ಈ ಮಧ್ಯೆ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟದ ಪ್ರಮಾಣ ತಿಳಿದುಕೊಳ್ಳುವುದು ಸವಾಲಿನ ಕೆಲಸವಾಗಿದೆ.
ರಾಜ್ಯದ ಬಹುಭಾಗ ನೆರೆಹಾವಳಿಯಿಂದ ತತ್ತರಿಸಿದೆ. ನದಿಗಳು ಉಕ್ಕೇರಿ ಹರಿಯುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಜಿಲ್ಲಾಡಳಿತಗಳು ಸನ್ನದ್ಧ ಸ್ಥಿತಿಯಲ್ಲಿದ್ದು, ಮನೆಗಳ ಹಾನಿ, ಬೆಳೆ ನಷ್ಟದ ಸಮೀಕ್ಷೆಗೆ ತಾಲೂಕುಮಟ್ಟದಲ್ಲಿ ತಂಡಗಳಾಗಲಿವೆ. ಆದರೆ ತಕ್ಷಣಕ್ಕೆ ಕಾರ್ಯಾಚರಣೆಯಿಂದ ಯಾವುದೇ ಪ್ರಯೋಜನವಿಲ್ಲ. ಮಳೆ ನಿಲ್ಲುವ ತನಕ ನಷ್ಟ ಸಮೀಕ್ಷೆ ಕಷ್ಟಸಾಧ್ಯವೆಂದು ಕಂದಾಯ ಇಲಾಖೆ ಮೂಲಗಳು ಹೇಳುತ್ತವೆ. ಇನ್ನೆರಡು ದಿನದಲ್ಲಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಭಾರಿ ಪ್ರಮಾಣದ ಹಾನಿ:ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್ಯದಲ್ಲಿ 3,600 ಮನೆಗಳು ಸಂಪೂರ್ಣ, 17,212 ಮನೆಗಳು ಭಾಗಶಃ ಹಾನಿಗೀಡಾಗಿದ್ದರೆ, 1.37 ಲಕ್ಷ ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ನಷ್ಟವಾಗಿವೆ. ನಿರಂತರ ಮಳೆಯಿಂದ ಹಳೆಯ ಮನೆಗಳು, ಮಣ್ಣಿನ ಗೋಡೆಯ ಮನೆಗಳು ಕೆಲ ದಿನ ನಂತರ ಬಿದ್ದಿರುವ ನಿದರ್ಶನಗಳು ಸಾಕಷ್ಟಿವೆ. ನದಿ, ಹಳ್ಳ ಸಮೀಪದ ಜನವಸತಿ, ಕೃಷಿ ಪ್ರದೇಶಕ್ಕೆ ತಕ್ಷಣ ಸಮಸ್ಯೆ ಎದುರಾದರೆ, ದೂರದ ಕೆಳ ಪ್ರದೇಶವು ತಡವಾಗಿ ಪರಿಣಾಮ ಅನುಭವಿ ಸುತ್ತದೆ. ಹಿಂದಿನ ವರ್ಷಗಳ ಅತಿವೃಷ್ಟಿ, ನೆರೆಹಾವಳಿ ಅನುಭವಗಳು ಪಾಠ ಕಲಿಸಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳಿಗೆ ಮೊದಲ ಆದ್ಯತೆ ನೀಡಲಾಗಿದೆ.
ದುರಸ್ತಿ ಕಷ್ಟ:ಕುಡಿಯುವ ನೀರು, ವಿದ್ಯುತ್, ರಸ್ತೆ, ಸೇತುವೆ ಇತ್ಯಾದಿ ಮೂಲ ಸವಲತ್ತುಗಳ ತಾತ್ಕಾಲಿಕ ದುರಸ್ತಿ, ತುರ್ತು ಮರುಸ್ಥಾಪನೆಗೂ ತೊಂದರೆ ಎದುರಾಗಿದೆ. ಈಗ ರಿಪೇರಿ ಮಾಡಿದರೂ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಮತ್ತೆ ಕಾಮಗಾರಿ ಹಾಳಾಗಿ, ಪರಿಶ್ರಮ ವ್ಯರ್ಥವಾಗಲಿದೆ ಎನ್ನುವುದು ಅಧಿಕಾರಿಗಳ ಬೇಗುದಿ. ಸಂಚಾರಕ್ಕೆ ಸಮಸ್ಯೆಯಾಗದಂತೆ ತಗ್ಗು-ಗುಂಡಿಗಳನ್ನು ಮುಚ್ಚಬಹುದು. ಆದರೆ ಕಿತ್ತುಹೋಗಿರುವ ರಸ್ತೆಗಳ ರಿಪೇರಿಗೆ ಮಳೆ ಬಿಡುವ ತನಕ ಕಾಯಲೇಬೇಕು. ಅದರಲ್ಲೂ ವಿದ್ಯುತ್ ಕಂಬಗಳ ಬದಲಾವಣೆ, ಟ್ರಾನ್ಸ್​ಫಾರ್ಮರ್​ಗಳ ರಿಪೇರಿ ಸವಾಲಿನದು. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಅಂದಾಜು 16,760 ವಿದ್ಯುತ್ ಕಂಬಗಳು, 1,469 ಟ್ರಾನ್ಸ್​ಫಾರ್ಮರ್​ಗಳ ಜತೆಗೆ ವಿದ್ಯುತ್ ತಂತಿ ಹಾನಿಗೀಡಾಗಿರುವ ಕಾರಣ ಮರುಸ್ಥಾಪಿಸಲು ಕನಿಷ್ಠ 10 ದಿನಗಳಾದರೂ ಬೇಕು ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ವಾರ ಬಳಿಕ ಸಮೀಕ್ಷೆ ಸಾಧ್ಯತೆ:ಹೊಲ, ಗದ್ದೆ, ತೋಟಗಳು ಜಲಾವೃತವಾಗಿವೆ. ಮಳೆ ನಿಂತು ಕನಿಷ್ಠ ಒಂದು ವಾರದ ನಂತರ ಸಮೀಕ್ಷೆ ಕೈಗೆತ್ತಿಕೊಂಡರೆ ವಾಸ್ತವಿಕ ಅಂಕಿ-ಅಂಶಗಳನ್ನು ಸಂಗ್ರಹಿಸಲು ಸಾಧ್ಯ. ನಿಖರ ಮಾಹಿತಿಯಿದ್ದರೆ ಸಮೀಕ್ಷಾ ವರದಿ ಬಗ್ಗೆ ಅಪಸ್ವರಕ್ಕೆ ಅವಕಾಶವಿರದು. ಅರ್ಹ ಸಂತ್ರಸ್ತರ ಗುರುತಿಸುವ ಜತೆಗೆ ಪರಿಹಾರ ವಿತರಣೆ ಪಾರದರ್ಶಕವಾಗಿರಲಿದೆ. ಬಾಧಿತ ರೈತರ ಕಷ್ಟಗಳಿಗೆ ಸಕಾಲಕ್ಕೆ ಸ್ಪಂದಿಸಿಲ್ಲ ಎಂಬ ಆತಂಕಕ್ಕೂ ಅವಕಾಶವಿಲ್ಲ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅಲ್ಪಾವಧಿಯಲ್ಲಿ ಸಂತ್ರಸ್ತ ರೈತರ ಬ್ಯಾಂಕ್ ಖಾತೆಗೆ ಇನ್ಪುಟ್ ಸಬ್ಸಿಡಿ ಜಮಾ ಮಾಡುವ ಕ್ರಾಂತಿಕಾರಿ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದು, ಅಗತ್ಯವಿರುವ ಕಾಲಾವಕಾಶ ಪಡೆಯಲು ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಮಾರ್ಗಸೂಚಿ, ನಿಯಮಾವಳಿ ಪ್ರಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೋಶದ ಪೋರ್ಟಲ್​ಗೆ ಪ್ರತಿದಿನದ ಮಾಹಿತಿ ಅಪ್​ಡೇಟ್ ಮಾಡಲಾಗುತ್ತದೆ. ರಾಜ್ಯದ ದೈನಂದಿನ ಮಾಹಿತಿ ಕೇಂದ್ರದ ಬಳಿ ಲಭ್ಯವಿರುತ್ತದೆ. ಇದರಿಂದಾಗಿ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್​ನಡಿ ಲಭಿಸಬೇಕಾದ ನೆರವಿನಲ್ಲಿ ವಿಳಂಬವಾಗದು ಎಂದು ಮೂಲಗಳು ಸಮರ್ಥಿಸಿಕೊಂಡಿವೆ.
ಅವಘಡಗಳಿಗೆ ಮೂವರು ಬಲಿ:ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಶನಿವಾರ ರಾತ್ರಿ, ಭಾನುವಾರ ದಿನವಿಡೀ ಮಳೆ ಸುರಿದಿದೆ. ಮಾಗಡಿ ತಾಲೂಕಿನ ಗುಡೇಮಾರನಹಳ್ಳಿಯ ಕೂಡ್ಲೂರು ಬಳಿ ಶನಿವಾರ ರಾತ್ರಿ ಶೆಡ್ ಮೇಲೆ ಹಳೆಯ ಮನೆ ಗೋಡೆ ಬಿದ್ದು ಮಲಗಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಆ.8ರಂದು ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ನೀಡಲಾಗಿದೆ. ಇನ್ನೂ 5 ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನವದೆಹಲಿ:ತಾಪಮಾನ ಬದಲಾವಣೆಯಿಂದಾಗಿ ಭಾರಿ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆಯ ನಿಖರ ಅಧ್ಯಯನಕ್ಕೂ ಇದರಿಂದ ತೊಂದರೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಬದಲಾವಣೆಯಿಂದ ವಾತಾವರಣದಲ್ಲಿನ ಅಸ್ಥಿರತೆ ಹೆಚ್ಚಿದೆ. ಅದರ ಪರಿಣಾಮವಾಗಿ ಗುಡುಗು, ಸಿಡಿಲು ಮತ್ತು ಭಾರಿ ವರ್ಷಧಾರೆ ಹೆಚ್ಚಿವೆ. ನಿಖರವಾಗಿ ಹವಾಮಾನ ಮುನ್ಸೂಚನೆ ನೀಡುವುದು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಮುಂಗಾರು ಋತುವಿನಲ್ಲಿ ಆಗಾಗ ಭಾರಿ ಮಳೆಯಾಗುತ್ತಿದೆ. ಈ ರೀತಿ ಭಾರಿ ಮಳೆಯಾಗುವ ದಿನಗಳ ಸಂಖ್ಯೆ ಹೆಚ್ಚಾಗಿದೆ. ಸಾಧಾರಣ ಅಥವಾ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ದಿನಗಳು ಕಡಿಮೆಯಾಗಿವೆ. ಕಡಿಮೆ ಒತ್ತಡದ ಸನ್ನಿವೇಶ ಸೃಷ್ಟಿಯಾದಾಗ ತುಂಬಾ ತೀವ್ರವಾಗಿ ಮಳೆಯಾಗುತ್ತದೆ. ಭಾರತ ಸಹಿತ ಉಷ್ಣ ವಲಯದಲ್ಲಿ ಕಂಡುಬರುವ ಬಹಳ ಪ್ರಮುಖ ಪ್ರವೃತ್ತಿ ಇದಾಗಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 10 =
Remember me
