| ಮೃತ್ಯುಂಜಯ ಕಪಗಲ್ ಬೆಂಗಳೂರುತಡವಾಗಿ ಪ್ರವೇಶಿಸಿದರೂ ಯಥೇಚ್ಛವಾಗಿ ಸುರಿಯತಲ್ಲ ಎಂದು ನೆಮ್ಮದಿ ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೆ ಮುನಿಸು. ಮಳೆರಾಯನ ಹೊಯ್ದಾಟ ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರೆ, ರಾಜ್ಯ ಸರ್ಕಾರ ಉಭಯ ಸಂಕಟಕ್ಕೀಡಾಗಿದೆ.
ಆಗಸ್ಟ್ ಆರಂಭದಿಂದಲೇ ಮಳೆ ಮಾರುತಗಳು ಮತ್ತೆ ಹಿಂದಕ್ಕೆ ಸರಿದಿವೆ. ವಾರದೊಳಗೆ ಮಳೆ ಬಾರದಿದ್ದರೆ ಮತ್ತೆ ಬಿತ್ತಿದ ಬೆಳೆ ಒಣಗುವ ಭೀತಿ ಅನ್ನದಾತರನ್ನು ಆವರಿಸಿದೆ. ಜಲಾಶಯಗಳಿಗೆ ಒಳಹರಿವು ಕುಸಿದು, ನದಿ-ಹಳ್ಳಗಳು ಸೊರಗಿವೆ. ಭತ್ತ, ಕಬ್ಬು ಬೆಳೆದ ನೀರಾವರಿ ಪ್ರದೇಶಕ್ಕೂ ಚಿಂತೆಯ ಕಾಮೋಡ ಕವಿದಿದೆ.
ಜೋಳ, ತೊಗರಿ, ಮೆಕ್ಕೆಜೋಳ, ಸಜ್ಜೆ, ಊದಲು, ಅವರೆ, ಉದ್ದು, ಹೆಸರು ಮುಂತಾದ ಆಹಾರಧಾನ್ಯ, ಸೂರ್ಯಕಾಂತಿ, ಶೇಂಗಾ, ಹತ್ತಿ ಬೆಳೆ ತೇವಾಂಶದ ಕೊರತೆ ಅನುಭವಿಸುತ್ತಿವೆ. ಅಡಕೆ, ಕಬ್ಬು, ಭತ್ತ ಮತ್ತಿತರ ಬೆಳೆಗಳಿಗೆ ನೀರಿನ ಅಭಾವ, ವಾತಾವರಣದ ಏರುಪೇರಿನಿಂದ ಕೀಟ, ವಿವಿಧ ರೋಗಗಳು ಬಾಧಿಸಲಿವೆ ಎಂಬ ಆತಂಕ ರೈತರನ್ನು ಕಾಡಲಾರಂಭಿಸಿದೆ.
ಕೈಸುಟ್ಟಕೊಂಡ ರೈತ:ಜೂನ್​ನಲ್ಲಿ ಅಲ್ಪಸ್ವಲ್ಪ ಸುರಿದ ಮಳೆಗೆ ಒಣ ಪ್ರದೇಶದ ರೈತರು ಜಮೀನು ಹಸನುಗೊಳಿಸಿ ಜೋಳ, ರಾಗಿ, ಸಜ್ಜೆ ಇನ್ನಿತರ ಬೆಳೆಗಳ ಬಿತ್ತನೆ ಮಾಡಿದ್ದರು. ನಂತರ ಮಳೆ ಸುಳಿಯದೆ ಬಿತ್ತಿದ ಬೆಳೆ ಒಣಗಿ ನಾಶವಾಯಿತು. ನಷ್ಟದ ಹೊರೆ, ಸಾಲದ ಬಾಧೆ ತಾಳಲಾರದೆ ಜೂನ್, ಜುಲೈನಲ್ಲಿ ಹಾವೇರಿ ಜಿಲ್ಲೆ 18 ಸೇರಿ ಒಟ್ಟು 42 ರೈತರು ಆತ್ಮಹತ್ಯೆ ಶರಣಾಗಿದ್ದಾರೆ.
ಜುಲೈ ಮಧ್ಯಭಾಗದಲ್ಲಿ ಸುರಿದ ಮಳೆಗೆ ಖುಷ್ಕಿ, ನೀರಾವರಿ ಪ್ರದೇಶದಲ್ಲಿ ಬಿತ್ತನೆ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದರೂ ಒಣಪ್ರದೇಶಕ್ಕೆ ಕಷ್ಟ ತಪ್ಪಿದ್ದಲ್ಲ ಎನ್ನುವಂತಾಗಿದೆ. ಇದೀಗ ಕಳೆದ ಹತ್ತು ದಿನಗಳಿಂದ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಎರಡನೇ ಬಾರಿ ಬಿತ್ತಿದ ಬೆಳೆಯು ಒಣಗಲಾರಂಭಿಸಿದ್ದು, ಅನ್ನದಾತ ಮತ್ತೆ ಕೈಸುಟ್ಟುಕೊಳ್ಳುವ ಸ್ಥಿತಿ ಎದುರಾಗಿದೆ. ಎರಡನೇ ಬಾರಿ ಬೆಳೆ ನಷ್ಟ ಭಾರ ತಾಳಿಕೊಳ್ಳುವ ಶಕ್ತಿಯಿಲ್ಲದ ರೈತರು ನೆರವಿಗೆ ಸರ್ಕಾರದತ್ತ ಮುಖಮಾಡಿದ್ದಾರೆ.
ಮೀನಮೇಷ:ನೈಋತ್ಯ ಮುಂಗಾರು ರಾಜ್ಯಕ್ಕೆ 10 ದಿನ ತಡವಾಗಿ ಪ್ರವೇಶಿಸಿತು. ಜುಲೈ ಮೊದಲ ವಾರದ ಪರಿಸ್ಥಿತಿ ಅವಲೋಕಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಗೆ ಸರ್ಕಾರ ತಯಾರಿ ನಡೆಸಿತ್ತು. ಕಂದಾಯ ಮಂತ್ರಿ ಕೃಷ್ಣಬೈರೇಗೌಡ ಅಧ್ಯಕ್ಷತೆಯ ಸಚಿವ ಸಂಪುಟದ ಉಪಸಮಿತಿ ಸಭೆ ಸೇರಿ ಕೃಷಿ, ಕಂದಾಯ, ಹವಾಮಾನ ಇಲಾಖೆಗಳ ಜತೆ ಸಮಾಲೋಚಿಸಿತು.
ವಸ್ತುಸ್ಥಿತಿ ಆಧರಿಸಿ 100 ತಾಲೂಕುಗಳನ್ನು ಗುರುತಿಸಿ, ಬರಪೀಡಿತವೆಂದು ಸಾರಲು ಮುಂದಾಗಿತ್ತು. ಈ ನಡುವೆ ಮೋಡ ಬಿತ್ತನೆ ಚಿಂತನೆಯೂ ನಡೆದಿತ್ತು. ಅಷ್ಟರೊಳಗೆ ಧಾರಾಕಾರ ಮಳೆ ಸುರಿದು, ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಉಂಟಾದರೆ, ಉಳಿದೆಡೆ ಭರಪೂರ ಬಿತ್ತನೆ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿತು. ಆದರೆ, ಜುಲೈ ಮೊದಲ ವಾರದ ಪರಿಸ್ಥಿತಿಯೇ ಮರುಕಳಿಸಿದೆ. ಮೋಡ ಕವಿದ ವಾತಾವರಣ, ಅಲ್ಲಲ್ಲಿ ಜಿನುಗು ಮಳೆ ಸದ್ಯಕ್ಕಿರುವ ವ್ಯತ್ಯಾಸವಾಗಿದ್ದು, ಸರ್ಕಾರ ಉಭಯ ಸಂಕಟಕ್ಕೆ ಸಿಲುಕಿದೆ.
ಕೇಂದ್ರದತ್ತ ರಾಜ್ಯ ಸರ್ಕಾರ ಬೊಟ್ಟು:ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ತ್ವರಿತ ಜಾರಿಗೆ ಕಾಂಗ್ರೆಸ್ ಸರ್ಕಾರ ಕಟ್ಟುಬಿದ್ದು, ಮೂರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಐದು ಯೋಜನೆಗಳಿಗೆ ಅಗತ್ಯವಿರುವ 35 ಸಾವಿರ ಕೋಟಿ ರೂ.ಗಳ ಸಂಗ್ರಹಕ್ಕೆ ಒತ್ತು ನೀಡಿ, ಉಳಿದ ಅಭಿವೃದ್ಧಿ ಯೋಜನೆಗಳ ಅನುದಾನಕ್ಕೆ ಕತ್ತರಿ ಪ್ರಯೋಗಿಸಿದೆ. ಈ ನಡುವೆ ಮಳೆ ಹೊಯ್ದಾಟದಿಂದ ತಲೆದೋರಿದ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಕೇಂದ್ರದ ಕಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೊಟ್ಟು ಮಾಡಿದ್ದಾರೆ.
ಬೆಂಗಳೂರು:ಬರಗಾಲಪೀಡಿತ ಪ್ರದೇಶವೆಂದು ಘೋಷಣೆಗೆ ನಿಗದಿತ ಮಾನದಂಡ ಗಳನ್ನು ಬದಲಾವಣೆ ಮಾಡಿ, ತೊಂದರೆಗೆ ಸಿಲುಕಿರುವ ರೈತರಿಗೆ ಸಕಾಲಕ್ಕೆ ನೆರವಾಗಲು ಅನುವು ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ ಮಾಡಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಐದು ಪುಟಗಳ ಪತ್ರ ಬರೆದು, ರಾಜ್ಯದ ವಾಸ್ತವಿಕ ಪರಿಸ್ಥಿತಿ, ರೈತರ ಸಮಸ್ಯೆ ಹಾಗೂ ಸರ್ಕಾರಕ್ಕೆ ಎದುರಾಗಿರುವ ಸವಾಲುಗಳನ್ನು ವಿವರಿಸಿದ್ದಾರೆ. ರಾಜ್ಯಕ್ಕೆ ನೈಋತ್ಯ ಮುಂಗಾರು ತಡವಾಗಿ ಪ್ರವೇಶಿಸಿತು. ನಂತರ ಮಳೆಯಾದರೂ ಸದ್ಯ ಶೇ.34ರಷ್ಟು ಕೊರತೆಯಾಗಲಿದೆ. ಮಳೆ ಮಾರುತಗಳ ಪ್ರವೇಶ ವಿಳಂಬ ಪರಿಗಣಿಸಿದರೆ ಶೇ.56ರಷ್ಟು ಅಭಾವ ಉಂಟಾಗಿದೆ. ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳದಿಂದ ನೈಸಗಿಕ ಉತ್ಪಾತಗಳು ಏರಿಕೆಯಾಗಿದ್ದು, ಕೃಷಿ ನೆಚ್ಚಿಕೊಂಡ ರೈತರು ಹಾಗೂ ಅವಲಂಬಿತ ಕುಟುಂಬಗಳ ಬದುಕು ದುಸ್ತರವಾಗಿದೆ. ಬರಗಾಲ ನಿರ್ವಹಣೆ ಕೈಪಿಡಿ-2020ರ ಪ್ರಕಾರ ಮಾನದಂಡಗಳನ್ನು ಪರಿಷ್ಕರಿಸಿದ್ದರೂ ಸಕಾಲಕ್ಕೆ ನೆರವಿಗೆ ಪೂರಕವಾಗಿಲ್ಲ.
ಮಳೆ ದುರ್ಬಲವಾದ ಪರಿಸ್ಥಿತಿಯಲ್ಲಿ ಬರಪೀಡಿತ ಪ್ರದೇಶ ಘೋಷಣೆ ಜತೆಗೆ ತುರ್ತು ನಿರ್ವಹಣೆ ಕ್ರಮಗಳಿಗೆ ಅವಕಾಶ ಕಲ್ಪಿಸಬೇಕು ಎಂದಿದ್ದಾರೆ. ಮಳೆಯ ವ್ಯಾಪಕತೆ, ಅತಿವೃಷ್ಟಿ ಹಾಗೂ ಅನಾವೃಷ್ಟಿ ವಾಸ್ತವಿಕವಾಗಿ ಗುರುತಿಸಲು ನಿರ್ದಿಷ್ಟ ಪ್ರದೇಶ ಪರಿಗಣನೆ, ಒಣಹವೆಯ ಮರುವ್ಯಾಖ್ಯಾನ, ಪರಿಣಾಮದ ಸೂಚಕಗಳಲ್ಲಿ ಬದಲಾವಣೆ ಮತ್ತಿತರ ಪ್ರಮುಖಾಂಶಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.
ಬೆಳೆ ಸಾಲಗಳನ್ನು ನವೀಕರಿಸಿ ರೈತರಿಗೆ ಹೊಸದಾಗಿ ಹೆಚ್ಚುವರಿ ಸಾಲ ವಿತರಣೆ. ಕಡಿಮೆ ಅವಧಿ, ನೀರು ಬಳಸಿ ಬೆಳೆಯುವ ಬೀಜ ವಿತರಣೆ, ಬೆಳೆಯಲು ಪ್ರೋತ್ಸಾಹ, ಖರೀದಿ ಖಾತರಿ. ಕೃಷಿ ಪೂರಕ ಚಟುವಟಿಕೆಗಳಿಗೆ ಉತ್ತೇಜನ, ಮೇವಿನ ವ್ಯವಸ್ಥೆಗೆ ಸರ್ಕಾರ ಕ್ರಮವಹಿಸಬೇಕು.
| ಕುರುಬೂರು ಶಾಂತಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ
ಪರಿಹಾರಕ್ಕೂ ಸಾಥ್:ಬೆಳೆ ನಷ್ಟಕ್ಕೆ ವಿಧಿಸಿರುವ ನಿಯಮಗಳಲ್ಲೂ ಮಾರ್ಪಾಡು ಅಗತ್ಯವಿದೆ. ಚಾಲ್ತಿ ಕೈಪಿಡಿ ಪ್ರಕಾರ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದ್ದರೆ ಮಾತ್ರ ತೀವ್ರ ಬೆಳೆ ಹಾನಿ ಎಂದು ಪರಿಹಾರಕ್ಕೆ (ಇನ್ಪುಟ್ ಸಬ್ಸಿಡಿ) ಪರಿಗಣಿಸಲಾಗುತ್ತಿದೆ.
ನೈಸರ್ಗಿಕ ವಿಪತ್ತು ನಿರ್ವಹಣೆಯಡಿ ಕೇಂದ್ರ ಗೃಹ ಸಚಿವಾಲಯವು ಶೇ.30ಕ್ಕಿಂತ ಹೆಚ್ಚಿನ ಬೆಳೆ ಹಾನಿಗೀಡಾದರೆ ಪರಿಹಾರ ನೀಡಲು ಸೂಚಿಸುತ್ತದೆ. ಈ ಕಾರಣ ಎನ್​ಡಿಆರ್​ಎಫ್/ಎಸ್​ಡಿಆರ್​ಎಫ್ ಹಾಗೂ ಅನಾವೃಷ್ಟಿ ಕೈಪಿಡಿಯಲ್ಲಿನ ಮಾನದಂಡ ಮರು ವಿನ್ಯಾಸಗೊಳಿಸುವ ಅಗತ್ಯವಿದೆ. ಜತೆಗೆ ಬೆಳೆ ವಿಮೆ ಪರಿಹಾರದಲ್ಲೂ ರೈತರಿಗೆ ನ್ಯಾಯ ಸಿಗುತ್ತಿಲ್ಲ. ನೈಸರ್ಗಿಕ ವಿಕೋಪದಡಿ ವಿತರಿಸಿದ ಬೆಳೆ ನಷ್ಟ ಪರಿಹಾರವನ್ನು ಬೆಳೆ ವಿಮಾ ಪರಿಹಾರಕ್ಕೆ ಜೋಡಿಸಿದರೆ ಈ ಸಮಸ್ಯೆ ಬಗೆಹರಿಯಲಿದ್ದು, ಬೆಳೆ ವಿಮೆ ಕಂಪನಿಗಳಿಗೆ ಈ ಕುರಿತು ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ಕೋರಿದ್ದಾರೆ.
‘ಕರಾಳ ಶನಿವಾರ: 37 ಜನರ ಸಾವು..’ ಎಂದು ಕಿವಿಮಾತು ಹೇಳಿದ ಅಲೋಕ್​ ಕುಮಾರ್​

ವಿಐಪಿ ವಾಹನಗಳಲ್ಲಿನ್ನು ಸೈರನ್ ಬದಲು ಶಂಖನಾದ?; ಕೊಳಲು, ತಬಲಾ ಶಬ್ದ ಅಳವಡಿಕೆಗೆ ಚಿಂತನೆ ಎಂದ ಗಡ್ಕರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + fourteen =
Remember me
