ಬೆಂಗಳೂರು:ವಿಧಾನ ಪರಿಷತ್​ನ ಏಳು ಸ್ಥಾನಗಳ ಚುನಾವಣೆ ಒಂದು ಪ್ರಧಾನ ಘಟ್ಟ ತಲುಪಿದ್ದು, ನಾಮಪತ್ರ ಸಲ್ಲಿಸಿದ ಎಲ್ಲರೂ ಅವಿರೋಧ ಆಯ್ಕೆ ನಿಚ್ಚಳವಾಗಿದೆ. ಇನ್ನು ರಾಜ್ಯಸಭಾ ಚುನಾವಣೆಗೆ ತಯಾರಿ ನಡೆದಿದೆ. ಜೂನ್ 10ರಂದು ಚುನಾವಣೆ ನಿಗದಿಯಾಗಿದ್ದು, ಪಕ್ಷಗಳೊಳಗೆ ಹೊಯ್ದಾಟ ನಡೆದಿದೆ. ವಿಧಾನಸಭಾ ಸದಸ್ಯರ ಮತಗಳ ಆಧಾರದಲ್ಲಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸದ್ಯದ ಬಲಾಬಲದಂತೆ ಬಿಜೆಪಿ ಎರಡು ಸ್ಥಾನ ಸಲೀಸಾಗಿ ಗೆಲ್ಲುವ ಅವಕಾಶವಿದೆ. ಕಾಂಗ್ರೆಸ್ ಒಂದು ಸ್ಥಾನ ಸುಲಭವಾಗಿ ತನ್ನ ತೆಕ್ಕೆಗೆ ಪಡೆಯಬಹುದಾಗಿದ್ದು, ಜೆಡಿಎಸ್​ಗೆ ಒಂದು ಸ್ಥಾನ ಗೆಲ್ಲಲು 13 ಶಾಸಕರ ಕೊರತೆ ಇದೆ. ಹೀಗಾಗಿ ದಳಪತಿಗಳು ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಒಂದು ಪಕ್ಷದ ನೆರವು ಪಡೆದುಕೊಳ್ಳಲೇಬೇಕಾಗುತ್ತದೆ. ಜೆಡಿಎಸ್​ನಿಂದ ಅಂತರ ಕಾಯ್ದುಕೊಳ್ಳುತ್ತಾ ಬಂದಿರುವ ಕಾಂಗ್ರೆಸ್, ನೇರವಾಗಿ ಜೆಡಿಎಸ್​ಗೆ ನೆರವಾಗುವ ಆಲೋಚನೆಯಲ್ಲಿಲ್ಲ, ಪಕ್ಷದ ನಾಯಕರಲ್ಲಿ ಒಮ್ಮತವೂ ಇಲ್ಲ. ಬಿಜೆಪಿ ಮಾತ್ರ ಮುಕ್ತವಾಗಿದ್ದು, ಸೂಕ್ತ ಸಮಯಕ್ಕೆ ಕಾಯುತ್ತಿದೆ.
ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷದ ದೆಹಲಿ ನಾಯಕರು ತಮ್ಮ ರಾಜ್ಯ ಘಟಕಗಳ ಆಶಯಕ್ಕಿಂತ ಭಿನ್ನವಾಗಿ ವೈಯಕ್ತಿಕ ನಿರ್ಣಯಕ್ಕೆ ಮಹತ್ವ ನೀಡಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ. ಯಾವುದೇ ಬಣಗಳು ಅವರು ನಮ್ಮ ಅಭ್ಯರ್ಥಿ, ನಮ್ಮ ಶಿಫಾರಸು ಎಂದು ಮೇಲ್ನೋಟಕ್ಕೆ ಬಿಂಬಿಸುತ್ತಿದ್ದರೂ ವಾಸ್ತವ ಬೇರೆ ಎಂಬುದು ಅವರವರ ಅರಿವಿಗೆ ಬಂದಿದೆ. ಇನ್ನು ರಾಜ್ಯಸಭಾ ಚುನಾವಣೆಯಲ್ಲೂ ಇಂತಹವರು ಆಯ್ಕೆಯಾಗಬಹುದೆಂದು ಹೇಳಲು ಎರಡು ರಾಜ್ಯ ಘಟಕಗಳ ಪ್ರಮುಖರು ಸಿದ್ಧರಿಲ್ಲ.
ಬೋನಸ್ ನಿರೀಕ್ಷೆಯಲ್ಲಿ:ರಾಜ್ಯಸಭೆಯ ನಾಲ್ವರು ಸದಸ್ಯರ ಅವಧಿ ಜೂನ್ 30ಕ್ಕೆ ಕೊನೆಯಾಗುತ್ತಿದೆ, ಈ ಸ್ಥಾನಗಳಿಗೆ ಈಗ ಚುನಾವಣೆ ನಡೆಯುತ್ತಿದೆ. ಈ ನಾಲ್ಕರಲ್ಲಿ ಕಳೆದ ಬಾರಿ ಕಾಂಗ್ರೆಸ್, ಬಿಜೆಪಿ ತಲಾ ಎರಡು ಗೆದ್ದಿತ್ತು. ಈ ಬಾರಿ ಕಾಂಗ್ರೆಸ್​ಗೆ ಒಂದು ಸ್ಥಾನ ಕಡಿತವಾಗಲಿದೆ. ಒಟ್ಟಾರೆ ರಾಜ್ಯಕ್ಕೆ 12 ಸ್ಥಾನಗಳ ರಾಜ್ಯಸಭಾ ಪ್ರತಿನಿಧಿತ್ವ ಇದೆ. ಇದರಲ್ಲಿ 6 ಸ್ಥಾನ ಕಾಂಗ್ರೆಸ್​ನದ್ದೇ ಇತ್ತು. ಐದು ಬಿಜೆಪಿ ಸದಸ್ಯರಿದ್ದರೆ, ಒಬ್ಬರು ಜೆಡಿಎಸ್ ಸದಸ್ಯರಿದ್ದಾರೆ. ಜೂನ್ 10ರ ಚುನಾವಣೆ ಬಳಿಕ ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗಲಿದ್ದು, ಕಾಂಗ್ರೆಸ್ ಸಂಖ್ಯೆ 5ಕ್ಕೆ, ಜೆಡಿಎಸ್ ಬಲ 2ಕ್ಕೆ ಹೆಚ್ಚಿಸಿಕೊಳ್ಳಬೇಕೆಂಬ ಪ್ರಯತ್ನದಲ್ಲಿದೆ.
ಕಳೆದ ಅವಧಿಯಲ್ಲಿ ಆಯ್ಕೆಯಾಗಿದ್ದ ಜೈರಾಮ್ ರಮೇಶ್ ಪುನರಾಯ್ಕೆ ಸಾಧ್ಯತೆ ಹೆಚ್ಚಿದೆ ಎಂದು ರಾಜ್ಯ ನಾಯಕರು ಹೇಳುತ್ತಿದ್ದಾರೆ. ಆದರೆ ಅವರಲ್ಲಿ ಖಚಿತತೆ ಇಲ್ಲ. ಚುನಾವಣೆ ಇರುವ ಕಾರಣ ಪ್ರಮುಖ ಸಮುದಾಯದ ಗಮನ ಸೆಳೆಯಲು ಸ್ಥಳೀಯ ನಾಯಕರಿಗೆ ಅವಕಾಶ ಕೊಡುವ ಸಾಧ್ಯತೆಯೂ ಇದೆ. ರಾಜೀವ್ ಗೌಡ, ಎಸ್.ಆರ್.ಪಾಟೀಲ್​ಗೆ ಅವಕಾಶ ಕೊಡಬೇಕೆಂಬ ಒತ್ತಾಯವೂ ಇದೆ.
ನಿರ್ಮಲಾ ಸೀತಾರಾಮನ್ ಉತ್ತರ ಪ್ರದೇಶದಿಂದ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಕೆ.ಸಿ.ರಾಮಮೂರ್ತಿ ಪುನರಾಯ್ಕೆಯಾಗಬಹುದು. ಒಂದು ಸ್ಥಾನದ ಅಭ್ಯರ್ಥಿ ಆಯ್ಕೆ ರಾಷ್ಟ್ರಮಟ್ಟದಲ್ಲೂ ಸದ್ದಾಗಬೇಕು, ರಾಜ್ಯದಲ್ಲಿ ಪ್ರಮುಖ ಸಮುದಾಯದ ಗಮನ ಸೆಳೆಯುವಂತಿರಬೇಕೆಂಬ ಲೆಕ್ಕಾಚಾರದಲ್ಲಿ ಆಯ್ಕೆ ನಡೆಯುವುದು ಖಚಿತ. ಉದ್ಯಮಿ ಪ್ರಕಾಶ್ ಶೆಟ್ಟಿ, ಪಕ್ಷದ ಉಪಾಧ್ಯಕ್ಷ ನಿರ್ಮಲ್​ಕುಮಾರ್ ಸುರಾನಾ, ಲೆಹರ್ ಸಿಂಗ್ ಹೆಸರು ಶಿಫಾರಸಾಗಿದೆ.
ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಬೇಕಾದಷ್ಟು ಮತಗಳು ಪೂರ್ಣ ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಇತರ ಪಕ್ಷಗಳತ್ತ ಕೈಚಾಚಬೇಕಾಗುತ್ತದೆ. ಸದ್ಯಕ್ಕೆ ಕುಪೇಂದ್ರ ರೆಡ್ಡಿ ಹೆಸರು ಮುಂಚೂಣಿಯಲ್ಲಿದೆ. ಅವರಿಗೆ ಕಾಂಗ್ರೆಸ್​ನ ಹೆಚ್ಚುವರಿ ಮತಗಳು ಸಿಗುತ್ತವೆ ಎಂಬ ಖಾತರಿಯೂ ಇದೆ. ಇವರನ್ನು ಹೊರತುಪಡಿಸಿ ಪ್ರಮುಖ ಉದ್ಯಮಿಯೊಬ್ಬರು ಕಣಕ್ಕಿಳಿಯುವ ಸಾಧ್ಯತೆ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಸಾಧ್ಯತೆ ತೀರಾ ಕಡಿಮೆ.
ಅಭ್ಯರ್ಥಿ ಘೋಷಣೆಗೆ 6 ದಿನ ಅವಕಾಶ:ನಾಮಪತ್ರ ಸಲ್ಲಿಕೆ ಮೇ 24ರಿಂದ ಆರಂಭವಾಗಿದ್ದು, ಕೊನೆ ದಿನ ಮೇ 31. ಇನ್ನುಳಿದ ಆರು ದಿನಗಳೊಳಗೆ ಅಭ್ಯರ್ಥಿ ಅಂತಿಮಗೊಳ್ಳಬೇಕಾಗುತ್ತದೆ. ಕಾಂಗ್ರೆಸ್ ರಾಜ್ಯ ಘಟಕವು ಅಭ್ಯರ್ಥಿ ಆಯ್ಕೆ ವಿವೇಚನೆಯನ್ನು ಹೈಕಮಾಂಡ್​ಗೆ ನೀಡಿದೆ.
ನಾಲ್ಕನೆ ಅಭ್ಯರ್ಥಿ ಕುತೂಹಲ:ಬಿಜೆಪಿ ಎರಡು ಹಾಗೂ ಕಾಂಗ್ರೆಸ್ ಒಂದು ಸ್ಥಾನ ಸುಲಭವಾಗಿ ಗೆಲ್ಲಲಿವೆ. ಆದರೆ ನಾಲ್ಕನೇ ಅಭ್ಯರ್ಥಿ ಯಾರು ಎಂಬುದು ಮಾತ್ರ ಕುತೂಹಲ. ಜೆಡಿಎಸ್​ನ ಅಭ್ಯರ್ಥಿ ಯಾರು ಎಂಬುದರ ಮೇಲೆ ಕಾಂಗ್ರೆಸ್ ಅಥವಾ ಬಿಜೆಪಿ ಹೆಚ್ಚುವರಿ ಮತಗಳು ವರ್ಗಾವಣೆಯಾಗಲಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡೆ ನೋಡಿಕೊಂಡು ಬಿಜೆಪಿ ತನ್ನ ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದೆ. ಜೆಡಿಎಸ್ ಪಕ್ಷದ ಹೆಸರಿನಲ್ಲಿ ಕಣಕ್ಕೆ ಇಳಿಸದೆ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡಲು ಮುಂದಾದರೆ ಅದೇ ಅಭ್ಯರ್ಥಿಯನ್ನು ಬೆಂಬಲಿಸಲು ಬಿಜೆಪಿ ಸಿದ್ಧವಿದೆ. ಬಿಜೆಪಿ ಮೂರನೇ ಸ್ಥಾನ ಗೆಲ್ಲಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ತನ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್​ಗೆ ವರ್ಗಾವಣೆ ಮಾಡುವ ಉದ್ದೇಶ ಹೊಂದಿದೆ.
ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ; ಹತ್ತು ಆರೋಪಿಗಳ ಬಂಧನ: ಈ ಬಗ್ಗೆ ವಾರಗಳ ಹಿಂದೆಯೇ ಗಮನ ಸೆಳೆದಿತ್ತು ವಿಜಯವಾಣಿ

ಕ್ರೂಸರ್ ಅಪಘಾತ ಪ್ರಕರಣ; ಸತ್ತವರ ಸಂಖ್ಯೆ 10ಕ್ಕೆ ಏರಿಕೆ..

Sign in to your account
Please enter an answer in digits:five + twelve =
Remember me
