ಬೆಂಗಳೂರು/ನವದೆಹಲಿ: ಕರ್ನಾಟಕ ನಾಲ್ಕು ಸ್ಥಾನಗಳು ಸೇರಿ ವಿವಿಧ ರಾಜ್ಯಗಳ 18 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಮತದಾನ ನಡೆಯಲಿದೆ. ಚುನಾವಣಾ ಆಯೋಗವು ಸೋಮವಾರ ವೇಳಾಪಟ್ಟಿ ಪ್ರಕಟಿಸಿದ್ದು, ಮಂಗಳವಾರವೇ ಅಧಿಸೂಚನೆ ಪ್ರಕಟವಾಗುವುದು. ನಾಮಪತ್ರ ಸಲ್ಲಿಕೆಗೆ ಜೂನ್ 9 ರಂದು ಕಡೆಯ ದಿನವಾಗಿದ್ದು, 10ರಂದು ನಾಮಪತ್ರ ಪರಿಶೀಲನೆ ನಡೆಯುವುದು. 12ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದ್ದು, 19ರಂದು ಮತದಾನ ನಡೆಯಲಿದೆ. ಬೆಳಗ್ಗೆ 9ರಿಂದ 4 ಗಂಟೆ ವರೆಗೆ ಮತದಾನಕ್ಕೆ ಸಮಯ ನಿಗದಿ ಮಾಡಲಾಗಿದೆ. ಅಂದೇ 5 ಗಂಟೆಗೆ ಮತ ಎಣಿಕೆ ನಡೆಯುವುದು.
ವಿವಿಧ ರಾಜ್ಯಗಳಲ್ಲಿ ಅವಧಿ ಮುಕ್ತಾಯವಾಗಿದ್ದು, ಕರೊನಾ ಹಿನ್ನೆಲೆ ಚುನಾವಣೆ ಮುಂದೂಡಲಾಗಿತ್ತು. ಆಂಧ್ರಪ್ರದೇಶ ಮತ್ತು ಗುಜರಾತ್​ನ ತಲಾ 4, ಮಧ್ಯಪ್ರದೇಶ ಮತ್ತು ರಾಜಸ್ಥಾನದ ತಲಾ 3, ಜಾರ್ಖಂಡ್​ನ 2, ಮೇಘಾಲಯ ಮತ್ತು ಮಣಿಪುರದ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 17 ರಾಜ್ಯಗಳಲ್ಲಿ ಖಾಲಿಯಾಗಲಿರುವ 55 ಸ್ಥಾನಗಳಿಗೆ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಕಳೆದ ಫೆಬ್ರವರಿಯಲ್ಲಿ ಘೋಷಿಸಿತ್ತು. ಇದರಲ್ಲಿ 37 ಅಭ್ಯರ್ಥಿಗಳು ಮಾರ್ಚ್​ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಬಾಕಿ ಉಳಿದಿರುವ ಸ್ಥಾನಗಳಿಗೆ ಈಗ ಚುನಾವಣೆ ನಡೆಯಲಿದೆ. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್​ನ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಸೇರಿ ಹಲವು ಪ್ರಮುಖರು ಚುನಾವಣಾ ಕಣದಲ್ಲಿದ್ದಾರೆ. ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಡಿ.ಕುಪೇಂದ್ರ ರೆಡ್ಡಿ, ಪ್ರಭಾಕರ ಕೋರೆ, ಎಂ.ವಿ.ರಾಜೀವ್ ಗೌಡ, ಬಿ.ಕೆ.ಹರಿಪ್ರಸಾದ್ ಅವರ ಅವಧಿ ಜೂನ್ 25ರಂದು ಕೊನೆಯಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ರಾಜಕೀಯ ಪುನರ್ ಪ್ರವೇಶಕ್ಕೆ ಇದೊಂದು ಅವಕಾಶ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿನಿರ್ಬಂಧಿತ ಪ್ರದೇಶಗಳಿಗೆ ತಹಸೀಲ್ದಾರ್ ಭೇಟಿ
ಕೈನಲ್ಲಿ ಪೈಪೋಟಿ
ರಾಜ್ಯಸಭೆಗೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಬದಲಾದ ರಾಜಕೀಯ ಲೆಕ್ಕಾಚಾರದಂತೆ ಬಿಜೆಪಿಗೆ ಎರಡು ಸ್ಥಾನ ಸಿಗಲಿದ್ದು, ಕಾಂಗ್ರೆಸ್​ಗೆ ಒಂದು ಸ್ಥಾನ ಮಾತ್ರ ಖಚಿತವಾಗಿ ಗೆಲ್ಲಬಹುದು. ಹೀಗಾಗಿ ಈ ಒಂದು ಸ್ಥಾನ ಯಾರಿಗೆ ಎಂಬ ಕುತೂಹಲವಿದೆ. ಎಐಸಿಸಿ ಸಂಪರ್ಕದಲ್ಲಿರುವ ಮತ್ತು ರಾಹುಲ್ ಅತ್ಯಾಪ್ತ ತಂಡದಲ್ಲಿರುವ ರಾಜೀವ್ ಗೌಡ ಮರು ಆಯ್ಕೆ ಬಯಸಿದ್ದಾರೆ. ಇದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಸೋತ ವಿ.ಎಸ್.ಉಗ್ರಪ್ಪ, ಕೆ.ಎಚ್.ಮುನಿಯಪ್ಪ ಕೂಡ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಬಿ.ಕೆ.ಹರಿಪ್ರಸಾದ್ ಕೂಡ ಮರು ಆಯ್ಕೆ ಬಯಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಮಹಾರಾಷ್ಟ್ರದಿಂದ ಆಯ್ಕೆ ಮಾಡಿದಲ್ಲಿ ಈ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಲಿದೆ. ಖರ್ಗೆಯವರೇ ಕರ್ನಾಟಕದಿಂದ ಆಯ್ಕೆ ಎಂದು ಹೈಕಮಾಂಡ್ ನಿರ್ಧರಿಸಿದರೆ ಅವರೇ ಸರ್ವ ಸಮ್ಮತ ಅಭ್ಯರ್ಥಿಯಾಗಲಿದ್ದಾರೆ.
ದೇವೇಗೌಡರ ಕಡೆ ಕಾಂಗ್ರೆಸ್ ಚಿತ್ತ
ಈ ಚುನಾವಣೆಯಲ್ಲಿ ಜೆಡಿಎಸ್ ಒಂದು ಸ್ಥಾನ ಗೆಲ್ಲುವಷ್ಟು ಸದಸ್ಯ ಬಲ ಇಲ್ಲವಾದ್ದರಿಂದ ಕಾಂಗ್ರೆಸ್ ತೀರ್ವನದ ಮೇಲೆ ಪಕ್ಷದ ಅಭ್ಯರ್ಥಿ ಭವಿಷ್ಯ ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಬಲ 34 ಇದ್ದು, ರಾಜ್ಯಸಭೆ ಚುನಾವಣೆಗೆ ಆಯ್ಕೆಯಾಬೇಕಾದರೆ 46 ಶಾಸಕರ ಬಲ ಅಗತ್ಯವಿದೆ. ಕಾಂಗ್ರೆಸ್ 68 ಶಾಸಕರ ಬಲವಿದ್ದು, 22 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಈ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಕೊಡುಕೊಳ್ಳುವಿಕೆ ಆಧಾರದ ಮೇಲೆ ಕೊಡಲು ಕಾಂಗ್ರೆಸ್ ವರಿಷ್ಠರು ಆಲೋಚಿಸಿದ್ದಾರೆ. ಬಿಜೆಪಿಯಲ್ಲಿ ರಾಜ್ಯಸಭೆ ಚುನಾವಣೆ ಬಿರುಗಾಳಿಯನ್ನೇ ಬೀಸಿದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ತಮ್ಮ ಅಸ್ತಿತ್ವ ಪ್ರದರ್ಶನಕ್ಕೆ ಸಜ್ಜಾಗಿವೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ವಿಚಾರದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕೈಕೈ ಮಿಲಾಯಿಸಲಿವೆ ಎಂಬ ಮಾತು ಕೇಳಿಬರುತ್ತಿದೆ. ಈ ಸಂಬಂಧ ಉಭಯ ಪಕ್ಷಗಳ ನಾಯಕರು ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಆದರೆ, ರಾಜ್ಯಸಭೆ ಸ್ಥಾನ ಯಾರಿಗೆ? ವಿಧಾನ ಪರಿಷತ್ ಸ್ಥಾನ ಯಾರಿಗೆ ಎಂಬ ಚೌಕಾಶಿ ಬಾಕಿ ಉಳಿದಿದೆ. ಹಾಗಾಗಿ ಈ ಸ್ಥಾನಗಳ ಹಂಚಿಕೆ ರಾಜಕೀಯ ವಲಯದಲ್ಲಿ ರೆಕ್ಕಪುಕ್ಕ ಕಟ್ಟಿಕೊಂಡು ಹಾರಾಡುತ್ತಿದೆ. ಈ ಎಲ್ಲ ರಾಜಕೀಯ ಮೇಲಾಟಗಳ ನಡುವೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಬೇಕೆಂಬ ಕೂಗೂ ಬಲವಾಗಿ ಕೇಳಿ ಬರುತ್ತಿದೆ.
ಇದನ್ನೂ ಓದಿಮದುವೆಗಳಲ್ಲಿ 250 ಜನ ಭಾಗವಹಿಸುವುದಕ್ಕೆ ಅವಕಾಶ: ಮ್ಯಾರೇಜ್ ಹಾಲ್‌ಗಳಿಂದ ಸಿಎಂ ಮೇಲೆ ಒತ್ತಡ
ಬಿಜೆಪಿಯಲ್ಲಿ ಬಿರುಗಾಳಿ
ರಾಜ್ಯಸಭೆ ಚುನಾವಣೆ ಬಿಜೆಪಿಯಲ್ಲಿ ಸುಂಟರ ಗಾಳಿ ಎಬ್ಬಿಸಿದೆ. ರಾಜ್ಯಸಭಾ ಹಾಲಿ ಸದಸ್ಯ ಪ್ರಭಾಕರ್ ಕೋರೆ ಮರು ಆಯ್ಕೆ ಬಯಸಿದ್ದು, ಇನ್ನೊಂದು ಸ್ಥಾನ ಯಾರಿಗೆಂಬ ಕುತೂಹಲವಿದೆ. ರಮೇಶ್ ಕತ್ತಿ ಅವರು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದು ತಮ್ಮ ವರಸೆ ಈಗಾಗಲೇ ಆರಂಭಿಸಿದ್ದಾರೆ. ಈ ಬೆಳವಣಿಗೆ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರಮೇಶ್ ಕತ್ತಿಯವರನ್ನು ಮನವೊಲಿಸಿ ಸಂಘ ಪರಿವಾರ ಮೂಲದ ಒಬ್ಬರನ್ನು ರಾಜ್ಯಸಭೆಗೆ ಕಳಿಸಬೇಕೆಂಬ ಪ್ರಸ್ತಾಪವೂ ಪಕ್ಷದ ಮುಂದಿದೆ. ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಅಥವಾ ತೇಜಸ್ವಿನಿ ಅನಂತ್ ಕುಮಾರ್ ಅವರು ಎರಡನೇ ಅಭ್ಯರ್ಥಿಯಾದರೂ ಅಚ್ಚರಿ ಪಡಬೇಕಿಲ್ಲ.
ಭಾರತದ ಘನತೆಗೆ ಧಕ್ಕೆ ತರುವುದಿಲ್ಲ ಎಂದ ಚೀನಾ ವಿದೇಶಾಂಗ ಸಚಿವಾಲಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
