ಬೆಂಗಳೂರು:ರಾಜ್ಯಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಬಹುದಾದ ಎರಡು ಸ್ಥಾನಗಳಿಗೆ ಮೂವರ ಹೆಸರನ್ನು ಶಿಫಾರಸು ಮಾಡಿರುವ ರಾಜ್ಯ ಬಿಜೆಪಿ ಅಂತಿಮ ಆಯ್ಕೆಯನ್ನು ಹೈಕಮಾಂಡ್ ನಿರ್ಣಯಕ್ಕೆ ಬಿಟ್ಟಿದೆ. ಶನಿವಾರ ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ 40 ನಿಮಿಷಗಳ ಕೋರ್ ಕಮಿಟಿ ಸಭೆಯಲ್ಲಿ 2 ಸ್ಥಾನಗಳ ಪೈಕಿ ಒಂದಕ್ಕೆ ಪ್ರಭಾಕರ ಕೋರೆ ಅಥವಾ ರಮೇಶ್ ಕತ್ತಿ ಮತ್ತು ಎರಡನೇ ಸ್ಥಾನಕ್ಕೆ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರನ್ನು ಶಿಫಾರಸು ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂಬ ನಿಟ್ಟಿನಲ್ಲೂ ಪರಿಶೀಲಿಸುವುದಾದರೆ ಮಾಜಿ ಶಾಸಕ ನಿರ್ಮಲ ಕುಮಾರ ಸುರಾನ ಮತ್ತು ಕೆಪಿಎಸ್​ಸಿ ಮಾಜಿ ಸದಸ್ಯ ಮಾ.ನಾಗರಾಜ್ ಹೆಸರನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡುವ ನಿರ್ಧಾರ ಕೈಗೊಳ್ಳಲಾಯಿತೆಂದು ತಿಳಿದು ಬಂದಿದೆ.
ಆಯ್ಕೆಗೆ ಕಾರಣ?:ಎರಡು ಸ್ಥಾನಗಳಿಗೆ ಹತ್ತಕ್ಕೂ ಹೆಚ್ಚು ಹೆಸರು ಚರ್ಚೆಗೆ ಬಂದಿತಾದರೂ ಮೂವರನ್ನು ಮಾತ್ರ ಶಿಫಾರಸು ಮಾಡಿ ಉಳಿದದ್ದನ್ನು ಹೈಕಮಾಂಡ್ ವಿವೇಚನೆಗೆ ಬಿಡಲಾಗುತ್ತಿದೆ. ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಪ್ರಭಾಕರ್ ಕೋರೆ ಮತ್ತೊಂದು ಅವಧಿಗೆ ಸದಸ್ಯರಾಗುವ ನಿರೀಕ್ಷೆಯಲ್ಲಿದ್ದಾರೆ. ಕೋರೆ ಅವರಿಂದ ಪ್ರತ್ಯಕ್ಷವಾಗಿ ಪಕ್ಷಕ್ಕೆ ಲಾಭ ಆಗಿದೆ ಎನ್ನುವುದಕ್ಕಿಂತ ಪರೋಕ್ಷವಾಗಿ ಅನುಕೂಲವಾಗಿದೆ. ಆದ್ದರಿಂದ ಅವರ ಹೆಸರನ್ನು ಶಿಫಾರಸು ಮಾಡಬಹುದೆಂಬ ನಿರ್ಧಾರಕ್ಕೆ ಬರಲಾಯಿತು.
ಇದನ್ನೂ ಓದಿ:ಆರ್ಥಿಕ ಬಲಾಢ್ಯ ಚೀನಾ ವಿರುದ್ಧ ಸಿಡಿದೆದ್ದ 8 ರಾಷ್ಟ್ರಗಳ ಸಂಸದರು
ಬಿಜೆಪಿ ಬಂಡಾಯಕ್ಕೆ ಬೆಳಗಾವಿ ರಾಜಕಾರಣವೇ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಕೋರೆ ಅವರೊಂದಿಗೆ ಪೈಪೋಟಿ ನಡೆಸಿದ್ದ ಮಾಜಿ ಸಂಸದ ರಮೇಶ್ ಕತ್ತಿ ಹೆಸರನ್ನೂ ಕೇಂದ್ರಕ್ಕೆ ಕಳುಹಿಸುವ ನಿರ್ಧಾರಕ್ಕೆ ಬರಲಾಯಿತು. ರಮೇಶ್ ಕತ್ತಿ ಪರವಾಗಿ ಬಲವಾದ ಲಾಬಿ ಮಾಡಿದ್ದ ಶಾಸಕ ಉಮೇಶ್ ಕತ್ತಿ ತಮಗೆ ಮಂತ್ರಿ ಸ್ಥಾನವೇ ಬೇಡ, ತಮ್ಮನಿಗೆ ರಾಜ್ಯಸಭೆ ಟಿಕೆಟ್ ನೀಡಿ ಎಂಬ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಒಂದು ಸ್ಥಾನಕ್ಕೆ ಇವರಿಬ್ಬರ ಹೆಸರನ್ನು ಕೇಂದ್ರಕ್ಕೆ ಕಳುಹಿಸುವುದು, ಪಕ್ಷದ ವರಿಷ್ಠರೇ ಅಂತಿಮ ನಿರ್ಧಾರ ಮಾಡಲಿ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಇಬ್ಬರೂ ಒಂದೇ ಜಿಲ್ಲೆ, ಒಂದೇ ಕೋಮಿಗೆ ಸೇರಿದವರಾದ ಕಾರಣ ಹೈಕಮಾಂಡ್ ಯಾರಿಗೆ ಮಣೆ ಹಾಕುವುದೋ ಕಾದು ನೋಡಬೇಕು.
ಪರಿಷತ್ ನಿರ್ಣಯ ಮುಂದಕ್ಕೆ:ವಿಧಾನ ಪರಿಷತ್ ಚುನಾವಣೆಗೆ ಇನ್ನೂ ಸಮಯಾವಕಾಶ ಇರುವುದರಿಂದ ಮುಂದೆ ಇನ್ನೊಂದು ಬಾರಿ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲು ನಿರ್ಣಯಿಸಲಾಗಿದೆ.
ಬದಲಾದರೂ ಆಶ್ಚರ್ಯವಿಲ್ಲ:ಕೋರ್ ಕಮಿಟಿ ಶಿಫಾರಸು ಮಾಡಿರುವ ಹೆಸರುಗಳನ್ನೇ ಕೇಂದ್ರ ಪರಿಗಣಿಸಬೇಕೆಂದೇನೂ ಇಲ್ಲ. ಅಲ್ಲಿ ಬೇರೆ ಅಚ್ಚರಿ ಹೆಸರುಗಳನ್ನು ಕಳುಹಿಸಿಕೊಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಭಾನುವಾರ ಸಂಜೆಯೊಳಗೆ ಕೇಂದ್ರ ಸಮಿತಿ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಕಳುಹಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ:ಮಂಗಳೂರು ಉದ್ಯಮಿ ಕೊಲೆ: ಭಯಾನಕ ಹತ್ಯೆಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ
ಪ್ರಕಾಶ್ ಶೆಟ್ಟಿ ಆಯ್ಕೆ ಅಚ್ಚರಿ:ಅಚ್ಚರಿ ಆಯ್ಕೆಯಾಗಿ ಹೊರಹೊಮ್ಮಿರುವ ಗೋಲ್ಡ್ ಪಿಂಚ್ ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ , ಸತತವಾಗಿ ಪಕ್ಷದ ಸಂಪರ್ಕದಲ್ಲಿದ್ದಾರೆ. ಅಲ್ಲದೆ ಎಲ್ಲ ಪಕ್ಷಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ ಸಹ ಬಿಜೆಪಿ ತತ್ವಗಳಿಗೆ ಹತ್ತಿರವಾಗಿ ದಕ್ಷಿಣ ಕನ್ನಡ ಹಾಗೂ ಬೆಂಗಳೂರಿನಲ್ಲಿ ಪಕ್ಷಕ್ಕೆ ಸಾಕಷ್ಟು ನೆರವಾಗಿದ್ದಾರೆ. ಆದ ಕಾರಣ ಅವರಿಗೆ ಟಿಕೆಟ್ ನೀಡಬೇಕೆಂದು ಸಭೆಯಲ್ಲಿ ಚರ್ಚೆಯಾಯಿತು. ಪ್ರಕಾಶ್ ಶೆಟ್ಟಿ ಪರವಾಗಿ ಕೆಲ ಸಚಿವರು, ಪಕ್ಷದ ಕೆಲ ಪ್ರಭಾವಿ ಮುಖಂಡರು ಒತ್ತಡ ಹಾಕಿದ್ದರು.
3ನೇ ಅಭ್ಯರ್ಥಿ ಇಲ್ಲ:ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್​ನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಣಕ್ಕೆ ಇಳಿಯುತ್ತಿರುವುದರಿಂದ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಬೇಡವೆಂಬ ನಿರ್ಧಾರಕ್ಕೆ ಬರಲಾಗಿದೆ. ಇಬ್ಬರು ಸಹ ಹಿರಿಯ ಮುಖಂಡರಾಗಿದ್ದು ಅವರಿಗೆ ಗೌರವ ನೀಡಬೇಕು. ಅವಿರೋಧ ಆಯ್ಕೆಯಾಗಲಿ ಎಂಬುದು ಕೋರ್ ಕಮಿಟಿಯಲ್ಲಿ ಚರ್ಚೆಗೆ ಬಂದಿದೆ. ಒಂದು ವೇಳೆ ದೇವೇಗೌಡರಲ್ಲದೆ ಬೇರೆಯವರನ್ನು ನಿಲ್ಲಿಸಿದರೆ ಆಗ ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸೋಣವೆಂಬ ನಿರ್ಧಾರಕ್ಕೆ ಬರಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 10 =
Remember me
