ಬೆಂಗಳೂರು:ಮಂಗಳವಾರ ನಡೆಯಲಿರುವ ರಾಜ್ಯಸಭೆ ಚುನಾವಣೆಗೂ ಮುನ್ನ ಶಾಸಕರ ಸಂಶಯಾತ್ಮಕ ನಡವಳಿಕೆ ಹಾಗೂ ಲೋಕಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್​ಗಾಗಿ ಕೊನೆಯ ಹಂತದ ಪೈಪೋಟಿಯಿಂದ ರಾಜಕೀಯ ಮೇಲಾಟ ತೀವ್ರಗೊಂಡಿದೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ಮತದಾನ ನಡೆಯಲಿದ್ದು, ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸುಸ್ಥಿತಿಯಲ್ಲಿದ್ದರೂ ಕೊನೆ ಕ್ಷಣದ ಏರುಪೇರು ತಪ್ಪಿಸಲು ಶಾಸಕರ ಮೇಲೆ ತೀವ್ರ ನಿಗಾ ಇಟ್ಟಿದೆ.
ಇದೇ ವೇಳೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್​ನ ಶಾಸಕರಲ್ಲಿ ಯಾರು ಅಡ್ಡಮತದಾನ ಮಾಡಬಹುದೆಂಬ ಬಿರುಸಿನ ಚರ್ಚೆ ರಾಜಕೀಯ ಪಡಸಾಲೆಯಲ್ಲಿದೆ. ಅದೇ ರೀತಿ ಮತದಾನಕ್ಕೆ ಗೈರಾಗುವ ಅಥವಾ ಗೈರು ಮಾಡಿಸುವ ಹೊಸ ಲೆಕ್ಕಾಚಾರ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿಯೇ ಹತ್ತಾರು ಶಾಸಕರ ಮೇಲೆ ವಿವಿಧ ಕಾರಣಗಳಿಂದ ಅನುಮಾನ ವ್ಯಕ್ತವಾಗುತ್ತಿದೆ. ಕಳೆದ ಒಂದು ವಾರದಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯಸಭೆ ಚುನಾವಣೆ ಮತ ಲೆಕ್ಕಾಚಾರಕ್ಕೆ ಸಮಯ ನೀಡಿದ್ದಾರೆ. ಹಿಂದಿನ ಚುನಾವಣೆಯಲ್ಲಿನ ಬೆಳವಣಿಗೆ, ಮುಂದೆ ಆಗಬಹುದಾದ ಸಾಧ್ಯತೆಗಳ ಬಗ್ಗೆ ಲೆಕ್ಕಾಚಾರಗಳನ್ನು ಹಾಕಿಕೊಂಡು ಪರ್ಯಾಯ ಕ್ರಮಗಳತ್ತಲೂ ಚಿಂತನೆ ನಡೆಸಿದ್ದಾರೆ.
ಜಾತಿ ಗಣತಿ ವರದಿ ಸ್ವೀಕಾರ ಸನ್ನಿಹಿತ?:ರಾಜ್ಯ ರಾಜಕೀಯದಲ್ಲಿ ಸಂಚಲನ ಹುಟ್ಟುಹಾಕಿರುವ ಹಿಂದುಳಿದ ವರ್ಗಗಳ ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕಾರ ಮಾಡುವ ಕಾಲ ಸನ್ನಿಹಿತವಾಗಿದೆ. ಫೆ.29ರಂದು ಆಯೋಗದ ಅವಧಿ ಮುಕ್ತಾಯವಾಗಲಿದೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರಾಗಿರುವ ಆಯೋಗದ ಅವಧಿ ನವೆಂಬರ್​ಗೆ ಕೊನೆಯಾಗಿತ್ತು. ಬಳಿಕ ಸರ್ಕಾರ ಜನವರಿ 31ರವರೆಗೂ ಅವಧಿ ವಿಸ್ತರಿಸಿತ್ತು. ನಂತರ ಫೆ. 29ರ ವರೆಗೂ ಅವಧಿ ವಿಸ್ತರಿಸಲಾಗಿತ್ತು. ಜಾತಿ ಗಣತಿ ವರದಿ ಕೂಡ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮಟ್ಟಿಗೆ ಚುನಾವಣಾ ವಿಷಯವಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸಹ ಜಾತಿ ಗಣತಿ ವರದಿ ಸ್ವೀಕರಿಸುತ್ತೇನೆಂದು ಖಚಿತವಾಗಿ ಹೇಳಿಕೆ ನೀಡಿದ್ದಾರೆ.
ಅಧಿವೇಶನ ಮತ್ತೆ ವಿಸ್ತರಣೆವಿಧಾನ ಮಂಡಲ ಅಧಿವೇಶನ ಬುಧವಾರಕ್ಕೂ ವಿಸ್ತರಣೆಗೊಂಡಿದೆ. ಸುರಪುರ ಶಾಸಕರ ನಿಧನದ ಕಾರಣದಿಂದ ಸೋಮವಾರದ ಕಲಾಪ ಅವರಿಗೆ ಸಂತಾಪ ಸೂಚಿಸಲು ಸೀಮಿತವಾಗಲಿದೆ. ಮಂಗಳವಾರ ರಾಜ್ಯಸಭೆ ಚುನಾವಣೆ ನಡೆಯುವ ಕಾರಣ, ಬುಧವಾರ ಈ ಅಧಿವೇಶನದ ಕೊನೆಯ ದಿನವಾಗಿರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಸಹಜವಾಗಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುವುದು ನಿಶ್ಚಿತ. ಪೂರ್ವನಿಗದಿತ ವೇಳಾಪಟ್ಟಿಯಂತೆ ಫೆ.23ರಂದು ಅಧಿವೇಶನ ಕೊನೆಯಾಗಬೇಕಾಗಿತ್ತು. ಇನ್ನು ಪ್ರತಿಪಕ್ಷ ಬಿಜೆಪಿ ಕೂಡ ಸರ್ಕಾರದ ವಿರುದ್ಧ ಸೆಟೆದುನಿಂತು, ಆಡಳಿತ ಪಕ್ಷದ ರಾಜಕೀಯ ದಾಳಕ್ಕೆ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ. ಸಿಎಂ ಉತ್ತರ ಧಿಕ್ಕರಿಸಿ ರಾಜಭವನ ಚಲೋ ನಡೆಸಲು ಬಯಸಿದ್ದು, ಬುಧವಾರ ರಾಜ್ಯಪಾಲರನ್ನು ಬಿಜೆಪಿ ನಿಯೋಗ ಭೇಟಿ ಮಾಡಿ ದೂರು ನೀಡಲಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಮುಜರಾಯಿ ದೇವಸ್ಥಾನಗಳಿಗೆ ಸಂಬಂಧಿಸಿದ ವಿಧೇಯಕ ವಿಧಾನ ಪರಿಷತ್​ನಲ್ಲಿ ತಿರಸ್ಕೃತಗೊಂಡ ಕಾರಣ ಸರ್ಕಾರಕ್ಕೆ ಮುಜುಗರ ಉಂಟಾಗಿದ್ದು, ಬುಧವಾರ ಪುನಃ ಮಂಡಿಸಿ ಅನುಮೋದನೆ ಪಡೆದು ರಾಜ್ಯಪಾಲರಿಗೆ ಕಳಿಸಲು ಬಯಸಿದೆ.
ಲೋಕಸಮರದ ಕಾವುಲೋಕಸಭೆ ಚುನಾವಣೆಗೆ ಹುರಿಯಾಳುಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್, ಬಿಜೆಪಿಯಲ್ಲಿ ಕೊನೆ ಹಂತದ ತಯಾರಿ ನಡೆದಿದೆ. ಈ ವೇಳೆ ಟಿಕೆಟ್ ಆಕಾಂಕ್ಷಿಗಳು ಬಗೆ ಬಗೆಯಾಗಿ ಕಸರತ್ತು ನಡೆಸಿದ್ದಾರೆ. ರಾಜಕೀಯ ವೈರಿಗಳು ಪ್ರಯತ್ನವನ್ನು ಪುಡಿಗಟ್ಟಲು ಪ್ರಯತ್ನ ನಡೆಸಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಕಾವೇರಿದ ವಾತಾವರಣವಿದೆ. ಮುಖ್ಯವಾಗಿ ಮಂಡ್ಯ, ತುಮಕೂರು ವಿಷಯದಲ್ಲಿ ಪೈಪೋಟಿ ತೀವ್ರವಾಗಿದೆ.
ಬದಲಾದ ನಂಬರ್ ಗೇಮ್ವಿಧಾನಸಭೆಯ 224 ಸದಸ್ಯರಿಗೂ ಮತದಾನದ ಹಕ್ಕಿದೆ. ಪ್ರಸ್ತುತ ಸುರಪುರ ಶಾಸಕ ರಾಜಾವೆಂಕಟಪ್ಪ ನಾಯಕ ನಿಧನದಿಂದ ಕಾಂಗ್ರೆಸ್​ನ ಬಲ ತಗ್ಗಿದೆ. ಮೊದಲ ಪ್ರಾಶಸ್ಱದ ಮತಗಳಲ್ಲೇ ಗೆಲುವು ಸಾಧಿಸಲು ಪ್ರತಿ ಅಭ್ಯರ್ಥಿಗೆ 46 ಮತಗಳ ಅಗತ್ಯವಿದೆ. ಕಣದಲ್ಲಿರುವ ಕಾಂಗ್ರೆಸ್​ನ ಮೂರು ಅಭ್ಯರ್ಥಿಗಳು ಗೆಲ್ಲಬೇಕೆಂದರೆ 138 ಮತಗಳು ಬೇಕಾಗುತ್ತದೆ. ಪ್ರಸ್ತುತ 134 ಶಾಸಕರಿದ್ದು, ನಾಲ್ಕು ಹೆಚ್ಚುವರಿ ಮತಗಳು ಬೇಕು. ಗೌರಿಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಯವರನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ. ಇದೇ ವೇಳೆ ಜೆಡಿಎಸ್​ನಿಂದ ಕಣಕ್ಕಿಳಿದಿರುವ ಶಾಸಕ ಕುಪೇಂದ್ರ ರೆಡ್ಡಿ ಕೂಡ ಈ ಶಾಸಕರ ಮನವೊಲಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್​ನ ಕೆಲವು ಶಾಸಕರ ಸಹಕಾರ ಕೋರಿದ್ದಾರೆ. ಬಿಜೆಪಿಯಿಂದ ದೊರೆಯಬಹುದಾದ ಹೆಚ್ಚುವರಿ 20 ಮತದ ಜತೆಗೆ ಇನ್ನೂ ಏಳು ಮತಗಳಿಗೆ ಕುಪೇಂದ್ರ ರೆಡ್ಡಿ ಸಾಕಷ್ಟು ಬೆವರು ಹರಿಸಿದ್ದಾರೆ. ಬಿಜೆಪಿ ಮಾತ್ರ ತಣ್ಣಗಿದ್ದು, ತನ್ನ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ಗಮನ ನೀಡಿದೆ. ತನ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸುವ ಕಾರ್ಯ ಮಾಡಲಿದೆ.
ಕಾಂಗ್ರೆಸ್​ಗೆ ಡಬಲ್ ಶಾಕ್!ಸುರಪುರ ಶಾಸಕ ವೆಂಕಟಪ್ಪ ನಾಯಕ ಅವರ ನಿಧನ ಕಾಂಗ್ರೆಸ್​ಗೆ ಎರಡು ರೀತಿಯ ಆಘಾತ ತಂದಿದೆ. ಮೂರ್ನಾಲ್ಕು ದಿನಗಳ ಹಿಂದೆ ಡಿ.ಕೆ ಶಿವಕುಮಾರ್, ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಚಂದ್ರಶೇಖರ್, ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಜತೆಗೂಡಿ ಮಣಿಪಾಲ ಆಸ್ಪತ್ರೆಗೆ ಬಂದು ರಾಜಾ ವೆಂಕಟಪ್ಪ ನಾಯಕ ಆರೋಗ್ಯ ವಿಚಾರಿಸಿದ್ದರು. ಅವರು ಐಸಿಯುನಿಂದ ವಾರ್ಡ್​ಗೆ ಶಿಫ್ಟ್ ಆಗಿದ್ದರು. ರಾಜ್ಯಸಭೆ ಮತದಾನದ ವೇಳೆ ಬರುತ್ತೇನೆ ಎಂದು ಕಾಗದದ ಮೇಲೆ ಬರೆದು ತಮ್ಮ ಅನಿಸಿಕೆ ಹೇಳಿದ್ದರು. ಅದೇ ವಿಶ್ವಾಸದಲ್ಲಿ ಕೈ ನಾಯಕರು ವಾಪಸಾಗಿದ್ದರು. ಇನ್ನು ಲೋಕಸಭೆ ಚುನಾವಣೆಗೆ ನಡೆಸಿದ ಸಮೀಕ್ಷೆಯಲ್ಲಿ ರಾಜವೆಂಕಟಪ್ಪ ನಾಯಕ ಅವರನ್ನು ರಾಯಚೂರು ಕ್ಷೇತ್ರದಿಂದ ಕಣಕ್ಕಿಳಿಸಿದರೆ ಬಿಜೆಪಿ ಅಭ್ಯರ್ಥಿಗೆ ಪೈಪೋಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್​ಗೆ ವರದಿ ಬಂದಿತ್ತು. ಈಗ ಅವರ ನಿಧನ ಕೈ ಪಾಳಯಕ್ಕೆ ಶಾಕ್ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಇವರೇ ಮೊದಲ ಅಭ್ಯರ್ಥಿ ಎಂದು ಸರ್ವೆಯಲ್ಲಿ ವ್ಯಕ್ತವಾಗಿತ್ತು. ವಿಧಿಲೀಲೆ ಅವರನ್ನು ನಮ್ಮಿಂದ ದೂರ ಮಾಡಿದೆ ಎಂದು ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಯಾರ ನಡೆ ಕುತೂಹಲ?ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಹಾಗೂ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಶಿವರಾಂ ಹೆಬ್ಬಾರ್ ನಡೆಯನ್ನು ಅವರ ಪಕ್ಷದ ನಾಯಕರೇ ಕುತೂಹಲದಿಂದ ನೋಡುತ್ತಿದ್ದಾರೆ. ಗುರುಮಠಕಲ್ ಕ್ಷೇತ್ರ ಜೆಡಿಎಸ್ ಶಾಸಕ ಶರಣ ಗೌಡ ಕಂದಕೂರು ರಾಜ್ಯಸಭೆ ಚುನಾವಣೆಯ ಮತದಾನದ ಬಗ್ಗೆ ಒಗಟಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಇನ್ನೂ ಮೂರು ಶಾಸಕರ ನಡೆ ಮೇಲೆ ಜೆಡಿಎಸ್​ಗೆ ಗುಮಾನಿ ಇದೆ. ಇನ್ನೊಂದೆಡೆ ಗೆಲುವು ನಮ್ಮದೇ ಎಂದು ಹೇಳುತ್ತಿದ್ದರೂ ಕಾಂಗ್ರೆಸ್ ನಾಯಕರೂ ತಳಮಳದಲ್ಲಿದ್ದಾರೆ. ತಮ್ಮ ಪ್ರತಿ ಶಾಸಕರನ್ನು ಸಂರ್ಪಸಿದ್ದಾರೆ. ಪಕ್ಷೇತರರಿಗೆ ಭರವಸೆಯ ಆಫರ್ ನೀಡಿದ್ದಾರೆ. ಇಷ್ಟರ ನಡುವೆಯೂ 2-3 ಶಾಸಕರು ಮತದಾನದಿಂದ ದೂರ ಉಳಿಯುವ ಸಾಧ್ಯತೆ ಇದೆ.
ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
