ಬೆಂಗಳೂರು:ಇಷ್ಟು ವರ್ಷವೂ ವಿವಿಧ ಸಂದರ್ಭದಲ್ಲಿ ತಮ್ಮ ಮೇಲೆ ಸವಾರಿ ಮಾಡುತ್ತಿದ್ದ ಜೆಡಿಎಸ್​ಗೆ ಸರಿಯಾದ ಪಾಠ ಕಲಿಸಬೇಕೆಂಬ ಉದ್ದೇಶದಿಂದ ರಾಜ್ಯಸಭಾ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ರಾಜ್ಯ ಕಾಂಗ್ರೆಸ್​ನಲ್ಲೀಗ ಕಸಿವಿಸಿ ಶುರುವಾಗಿದೆ. ವಿಧಾನಸಭೆ ಬಲದ ಆಧಾರದಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಬಹುದು. ಆದರೆ, ಎರಡನೇ ಸ್ಥಾನ ಗೆಲ್ಲಲು 20 ಶಾಸಕರ ಕೊರತೆ ಇದೆ. ಎರಡನೇ ಪ್ರಾಶಸ್ತ್ಯ ಮೇಲೆ ಗೆಲ್ಲುವ ಪ್ರಯತ್ನವೂ ಕಷ್ಟಸಾಧ್ಯದ ದಾರಿ. ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮುಸ್ಲಿಂ ಸಮುದಾಯದ ಮತಗಳ ಕ್ರೋಡೀಕರಣದ ಉದ್ದೇಶದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ರಾಜ್ಯಸಭೆ ಚುನಾವಣೆಗೆ ಕಣಕ್ಕಿಳಿಸಿ ಜೆಡಿಎಸ್​ನ ಬಹಿರಂಗ ಬೆಂಬಲ ಕೋರುವುದು ಕಾಂಗ್ರೆಸ್​ನ ತಂತ್ರಗಾರಿಕೆಯಾಗಿತ್ತು. ಆದರೆ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಕಾಂಗ್ರೆಸ್ ಹೈಕಮಾಂಡ್ ಬಳಿ ಬೆಂಬಲ ಕೇಳಿಯೇ ನಾವು ಅಭ್ಯರ್ಥಿ ಹಾಕಿದ್ದೇವೆ ಎಂದು ಆ ಪಕ್ಷದ ನಾಯಕರು ಹೇಳಿಕೆ ನೀಡಿದ್ದು, ರಾಜ್ಯ ಕೈ ನಾಯಕರಿಗೆ ಕಸಿವಿಸಿ ಉಂಟುಮಾಡಿದೆ.
ಅದರಲ್ಲೂ ಎರಡನೇ ಅಭ್ಯರ್ಥಿ ಸೋತರೆ ಯಾರು ಹೊಣೆ ಎಂಬ ಚರ್ಚೆ ಪಕ್ಷದಲ್ಲಿ ಶುರುವಾಗಿದೆ. ಗೆಲುವು ಸಾಧ್ಯವಿಲ್ಲದ ಕಡೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೋತರೆ ಸಮಾಜದಲ್ಲಿ ಬೇರೆ ಸಂದೇಶ ಹೋಗುತ್ತದೆ ಎಂದು ಕೈ ಅಲ್ಪಸಂಖ್ಯಾತ ಮುಖಂಡರೇ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಎರಡನೇ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ನಾಮಪತ್ರ ಹಿಂಪಡೆದರೂ ಅದೂ ಹಿನ್ನೆಡೆಯೇ ಆಗಲಿದೆ ಎಂಬ ವಾದ ಪಕ್ಷದಲ್ಲಿದೆ. ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ತಂತ್ರಗಾರಿಕೆ ಪಕ್ಷದ ನಾಯಕರ ತೀರ್ವನವೋ ಅಥವಾ ಪ್ರಮುಖ ನಾಯಕರ ನಿರ್ಣಯವೋ ಎಂಬ ಬಗ್ಗೆ ಚರ್ಚೆ ನಡೆದಿದೆ. ಈ ತೀರ್ಮಾನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರದ್ದೋ ಅಥವಾ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರದ್ದೋ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಮುನ್ನ ಎರಡನೇ ಅಭ್ಯರ್ಥಿ ಹೂಡಿದಾಗ ತಂತ್ರಗಾರಿಕೆ ಎಂದು ಹೊಗಳಿದವರೇ ಈಗ ತಲೆ ಚಚ್ಚಿಕೊಳ್ಳುತ್ತಿದ್ದಾರೆ.
ಹೈಕಮಾಂಡ್ ಕೆಂಗಣ್ಣು?:ಜೆಡಿಎಸ್​ಗೆ ಪಾಠ ಕಲಿಸಲು ಹೋಗಿ ಬಿಜೆಪಿ ಮೂರನೇ ಅಭ್ಯರ್ಥಿ ಗೆಲುವು ಸಾಧಿಸಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಅಳುಕು ರಾಜ್ಯ ನಾಯಕರಿಗಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಅಡ್ಡ ಮತದಾನ ಆಗದೇ ಇದ್ದರೆ ಬಿಜೆಪಿ ಮೂರನೇ ಅಭ್ಯರ್ಥಿಗೆ ಸಲೀಸೆಂಬ ವಾತಾವರಣ ಇದೆ.
ಹೊಣೆ ಹೊತ್ತ ಜಮೀರ್:ತಮ್ಮ ಪಕ್ಷದ ಎರಡನೇ ಅಭ್ಯರ್ಥಿಗೆ ಹೆಚ್ಚುವರಿ ಮತ ತರಲು ಶಾಸಕ ಜಮೀರ್ ಅಹ್ಮದ್ ‘ಆಪರೇಷನ್ ಹಸ್ತ’ದ ಹೊಣೆ ಹೊತ್ತಿದ್ದಾರೆಂದು ಹೇಳಲಾಗುತ್ತಿದೆ. ಜೆಡಿಎಸ್​ನಲ್ಲಿರುವ ತಮ್ಮ ಹಳೆಯ ಸ್ನೇಹಿತರಲ್ಲಿ ಏಳೆಂಟು ಮಂದಿಯನ್ನಾದರೂ ಸೆಳೆಯಬಹುದೆಂಬ ಗುಸುಗುಸು ಕೇಳಿಬಂದಿದೆ.
ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ 3ನೇ ಅಭ್ಯರ್ಥಿಯೂ ಗೆಲ್ಲಲಿದ್ದಾರೆ. ಕಡಿಮೆ ಸಂಖ್ಯಾ ಬಲ ಇದ್ದ ಪಕ್ಷದವರೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರಿಂದ ನಾವೂ ಒಬ್ಬ ಅಭ್ಯರ್ಥಿಯನ್ನು ಸ್ಪರ್ಧೆಗೆ ನಿಲ್ಲಿಸಿದ್ದೇವೆ. ರಾಜಕೀಯ ಲೆಕ್ಕಾಚಾರ ಈಗ ಹೇಳುವುದಿಲ್ಲ. ಗೆದ್ದ ನಂತರ ನಿಮಗೇ ಗೊತ್ತಾಗಲಿದೆ.| ಪ್ರಲ್ಹಾದ ಜೋಶಿಕೇಂದ್ರ ಸಚಿವ
ಚುನಾವಣೆ ರಣತಂತ್ರದ ಬಗ್ಗೆ ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಸಾಧ್ಯವಿಲ್ಲ. ಫಲಿತಾಂಶ ಬಂದ ನಂತರ ಯಾರು ಅಡ್ಡ ಮತ, ಯಾರು ಉದ್ದ ಮತ ಹಾಕಿದ್ದಾರೆ ಎಂಬುದು ಗೊತ್ತಾಗಲಿದೆ. ನಮ್ಮ ವಿರೋಧಿಗಳು ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳುತ್ತಾರೋ ಇಲ್ಲವೇ ಎಂದು ಪರೀಕ್ಷೆ ಮಾಡಲು ಮೂರನೇ ಅಭ್ಯರ್ಥಿ ಹಾಕಿದ್ದೇವೆ.| ಸಿ.ಟಿ.ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
