ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜಿದ್ದಾಜಿದ್ದಿಯು ಕಮಲಪಡೆಗೆ ಅನಾಯಾಸ ಲಾಭ ತಂದುಕೊಟ್ಟಿದೆ. ನರೇಂದ್ರ ಮೋದಿ ಮಂತ್ರಿ ಮಂಡಲದ ಪ್ರಭಾವಿಗಳಲ್ಲಿ ಒಬ್ಬರಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದಿಂದ ಎರಡನೇ ಬಾರಿ ರಾಜ್ಯಸಭೆ ಪ್ರವೇಶಿಸಿದ್ದಾರೆ. ಚಿತ್ರನಟ ಜಗ್ಗೇಶ್ ಹಾಗೂ ಅದೃಷ್ಟದ ಬೆನ್ನೇರಿದ ಹಾಲಿ ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯಿ ಚೊಚ್ಚಲ ಬಾರಿಗೆ ರಾಜ್ಯಸಭೆ ಮೆಟ್ಟಿಲು ಹತ್ತಿದ್ದಾರೆ. ಈ ಮೂವರ ಗೆಲುವು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಹೊಸ ಚೈತನ್ಯ ತುಂಬಿದೆ. ಅಷ್ಟೇ ಅಲ್ಲ, ಪಕ್ಷದ ರಾಜ್ಯ ನಾಯಕರ ಕಾರ್ಯತತ್ಪರತೆ ವರಿಷ್ಠರ ಸಂತೃಪ್ತಿಗೂ ಪಾತ್ರವಾಗಲಿದೆ.
ವರಿಷ್ಠರ ಮನವೊಲಿಕೆ:ವಿಧಾನಸಭೆಯಲ್ಲಿ ಪಕ್ಷದ ಬಲ ಪ್ರಕಾರ ಇಬ್ಬರನ್ನು ಗೆಲ್ಲಿಸಿದ ಬಳಿಕ 32 ಹೆಚ್ಚುವರಿ ಮತಗಳು ಉಳಿಯಲಿದ್ದರೂ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವರಿಷ್ಠರು ಮನಸ್ಸು ಮಾಡಿದ್ದಿಲ್ಲ. ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಪ್ರಕಟಿಸುವ ಮುನ್ನ ‘ಪಕ್ಷೇತರ’ ಅಭ್ಯರ್ಥಿ ಬೆಂಬಲಿಸುವ ವಿಚಾರವಾಗಿ ಜೆಡಿಎಸ್ ನಾಯಕರಿಗೆ ಸಂದೇಶ ರವಾನಿಸಲಾಗಿತ್ತು. ಆದರೆ ದಳಪತಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜತೆಗೆ ದೇವೇಗೌಡರು ರ್ಚಚಿಸಿದ ಮಾಹಿತಿ ಸಿಕ್ಕಿದ್ದರಿಂದ ಬಿಜೆಪಿ ತಟಸ್ಥ ನಿಲುವು ತಳೆಯಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ನಾಮಪತ್ರ ಸಲ್ಲಿಕೆಗೆ ಇನ್ನೂ ಒಂದು ದಿನ:ಬಾಕಿಯಿರುವಾಗ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕೆ ಇಳಿಸಿದ್ದು ಸ್ಪರ್ಧಾ ಅಖಾಡಕ್ಕೆ ಅನಿರೀಕ್ಷಿತ ತಿರುವು ನೀಡಿತು. ‘ರೊಟ್ಟಿ ಜಾರಿ ತುಪ್ಪ’ಕ್ಕೆ ಬಿತ್ತು ಎಂದು ಭಾವಿಸಿದ ಬಿಜೆಪಿ ರಾಜ್ಯ ನಾಯಕರು ಮೂರನೇ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಬೇಕು ಎಂದು ವರಿಷ್ಠರ ಮನವೊಲಿಸಿದರು. ದೆಹಲಿ ನಾಯಕರು ಎಲ್ಲ ವಿವರ ಸಂಗ್ರಹಿಸಿದ ಬಳಿಕ ಲೆಹರ್ ಸಿಂಗ್ ಸಿರೋಯಿ ಕಣಕ್ಕಿಳಿಸಲು ತೀರ್ವನಿಸಿ, ಕೆಲವು ನಾಯಕರಿಗೆ ಗುರುತರ ಜವಾಬ್ದಾರಿ ಹೊರಿಸಿದರು.
ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಅಥವಾ ಪರಸ್ಪರ ಪೈಪೋಟಿಯನ್ನು ಅವಲಂಬಿಸಿಲ್ಲ ಎಂದು ಪಕ್ಷದ ನಾಯಕರು ಹೇಳಿಕೊಂಡರೂ ಆಂತರಿಕವಾಗಿ ಅಳುಕು ಇದ್ದೇ ಇತ್ತು. ‘ಅಡ್ಡ’ ಮತದಾನದ ವ್ಯತಿರಿಕ್ತ ಪರಿಣಾಮ ತಡೆಯಲೆಂದು ನಿರ್ಮಲಾ ಸೀತಾರಾಮನ್​ಗೆ 46, ಜಗ್ಗೇಶ್​ಗೆ 44 ಹಾಗೂ ಲೆಹರ್ ಸಿಂಗ್​ಗೆ 32 ಮತಗಳೆಂದು ಕೊನೇ ಹಂತದಲ್ಲಿ ಹಂಚಿದರು. ಎರಡೂ ಪಕ್ಷಗಳಿಗೆ ಹೋಲಿಸಿದರೆ ಎರಡನೇ ಪ್ರಾಶಸ್ಱದ ಮತ ಹೆಚ್ಚಿದ್ದರೂ ಮೊದಲ ಪ್ರಾಶಸ್ಱ ಮತದ ಮೌಲ್ಯ ಜಾಸ್ತಿಯಾದ್ದರಿಂದ ಈ ತಂತ್ರ ರೂಪಿಸಿತು. ಜೆಡಿಎಸ್ 32 ಶಾಸಕರು ಒಟ್ಟಾಗಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದರೆ ಮತಮೌಲ್ಯದ ದೃಷ್ಟಿಯಿಂದ ಸಮಸ್ಯೆಯಾದೀತು ಎಂಬ ಕಾರಣಕ್ಕೆ ಜಗ್ಗೇಶ್​ಗೆ 44 ಮತ ಹಾಕುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಮೂಲಗಳು ಹೇಳಿವೆ. ಆದರೆ ಶಾಸಕರೆಲ್ಲರೂ ಮತ ಹಾಕುವವರೆಗೆ ಯಾವುದೇ ಮಸಲತ್ತು, ಕಸರತ್ತುಗಳು ಫಲಿಸದೆ ಬಿಜೆಪಿ ನಿರೀಕ್ಷೆಯಂತೆ ಮೂರನೇ ಸೀಟು ದಕ್ಕಿಸಿಕೊಂಡಿತು.
ರಾಜ್ಯಸಭೆಯ ಚುನಾವಣಾ ಕಣದಲ್ಲಿ ಜೆಡಿಎಸ್ ನಡುವಣ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಸೋತರೂ ಕಾರ್ಯತಂತ್ರದಲ್ಲಿ ಸಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಚುನಾವಣೆಯ ಮೂಲಕ ಜೆಡಿಎಸ್ ಜತೆಗಿನ ಸಂಬಂಧವನ್ನು ಕಾಂಗ್ರೆಸ್ ಪೂರ್ಣವಾಗಿ ಕಡಿದುಕೊಂಡಿದ್ದು, ರಾಷ್ಟ್ರ ರಾಜಕಾರಣಕ್ಕೂ ಇದು ದಿಕ್ಸೂಚಿಯಾಗುವ ಸಾಧ್ಯತೆಗಳಿವೆ. ಜೆಡಿಎಸ್​ನವರು ದೆಹಲಿಮಟ್ಟದಲ್ಲಿ ಲಾಬಿ ಮಾಡಿದರೂ ಕೈ ರಾಜ್ಯ ನಾಯಕರು ವಿಫಲಗೊಳಿಸಿ, ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ಜಾತ್ಯತೀತ ನಿಲುವು ಪರೀಕ್ಷೆಗೊಡ್ಡಿ ಅದರಲ್ಲಿ ಆ ಪಕ್ಷವನ್ನು ಫೇಲ್ ಮಾಡಿತು. ಆದರೆ ಇಕ್ಬಾಲ್ ಅಹ್ಮದ್ ಸರಡಗಿ ಬಳಿಕ ಮನ್ಸೂರ್ ಬಲಿಪಶುವಾದರು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಈ ನಡೆಗೆ ಪಕ್ಷದಲ್ಲಿ ಅಸಮಾಧಾನ ಉಂಟಾಗಿದ್ದು, ಅಲ್ಪ ಸಂಖ್ಯಾತ ನಾಯಕರು ಬೇಸರಗೊಂಡಿದ್ದಾರೆ. ಎರಡನೇ ಅಭ್ಯರ್ಥಿಯನ್ನು ಹಾಕದೇ ಇದ್ದರೆ ಮತಗಳು ಚದುರಿಹೋಗಬಹುದು ಎಂಬ ಲೆಕ್ಕಾಚಾರವು ಮನ್ಸೂರ್ ಅವರನ್ನು ಸ್ಪರ್ಧೆ ಇಳಿಸುವ ಹಿಂದಿನ ಲೆಕ್ಕಾಚಾರವಾಗಿತ್ತು ಎಂದು ಪಕ್ಷದ ಮೂಲಗಳು ಹೇಳಿವೆ.
ಜಾತ್ಯತೀತ ಸಿದ್ಧಾಂತ, ಕೋಮುವಾದಿ ಪಕ್ಷ ದೂರವಿಡಬೇಕೆಂಬ ಧ್ಯೇಯದೊಂದಿಗೆ ಕೊನೆಯ ಕ್ಷಣದವರೆಗೆ ಕಾಂಗ್ರೆಸ್ ಬೆಂಬಲ ಪಡೆಯಲು ಜೆಡಿಎಸ್ ನಡೆಸಿದ ಹೋರಾಟ, ತಂತ್ರಗಳು ವಿಫಲವಾದವು. ದೆಹಲಿ ಕೈ ಕಮಾಂಡ್ ಮೇಲೆ ನಾನಾ ಮಗ್ಗುಲಿನಿಂದ ಹೇರಿದ ಒತ್ತಡ ತಂತ್ರವೂ ಫಲ ಕಾಣಲಿಲ್ಲ. ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಕಳುಹಿಸಿ ಸೋನಿಯಾ ಗಾಂಧಿ ಮನವೊಲಿಸಿದರೂ, ರಾಜ್ಯ ನಾಯಕರ ಆಕ್ಟೋಪಸ್ ಹಿಡಿತದಿಂದ ಜೆಡಿಎಸ್​ನ ಎಲ್ಲ ಪ್ಲಾ್ಯನ್​ಗಳೂ ಫ್ಲಾಪ್ ಆದವು. ಆದರೆ, ಈ ಚುನಾವಣೆಯಲ್ಲಿ ಜೆಡಿಎಸ್ ಒಗ್ಗಟ್ಟು ಕಾಪಾಡಿಕೊಳ್ಳುವಲ್ಲಿ ಬಹುತೇಕ ಯಶಸ್ಸು ಕಂಡಿದೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಜೆಡಿಎಸ್​ನಿಂದ 8-10 ಶಾಸಕರು ಅಡ್ಡ ಮತದಾನ ಮಾಡುತ್ತಾರೆಂಬ ಸುದ್ದಿ ಬಲವಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಶಾಸಕನ್ನು ಹೈಜಾಕ್ ಮಾಡುತ್ತವೆ 2016ರಲ್ಲಿ ಆದ ಗತಿಯೇ ಈ ಚುನಾವಣೆಯಲ್ಲೂ ಆಗುತ್ತದೆ ಎಂದೇ ಹೇಳಲಾಗುತ್ತಿತ್ತು. ಅದಕ್ಕೆ ಪೂರಕವಾಗಿ ಕೆಲವು ಶಾಸಕರು ಕಳ್ಳಾಟ ಶುರು ಮಾಡಿಕೊಂಡಿದ್ದರು. ಈ ಸೂಕ್ಷ್ಮ ಅರಿತ ಕುಮಾರಸ್ವಾಮಿ ಮತ್ತು ದೇವೇಗೌಡರು, ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ಸು ಕಂಡರು. ಸ್ವತಂತ್ರ ಅಭ್ಯರ್ಥಿ ಕಣಕ್ಕಿಳಿಸಿದರೆ ಜಾತ್ಯತೀತ ತತ್ವ, ಸಿದ್ಧಾಂತದ ಬದ್ಧತೆ ಹೆಸರಿನಲ್ಲಿ ಬೆಂಬಲಿಸಲು ಕಾಂಗ್ರೆಸ್ ರಾಜ್ಯ ನಾಯಕರು ಒಲವು ತೋರಿದ್ದರು. ಚಿತ್ರದುರ್ಗ ವಿಧಾನಸಭೆಗೆ ಜೆಡಿಎಸ್​ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಕೆ.ಸಿ.ವೀರೇಂದ್ರ ಅವರನ್ನು ಜೆಡಿಎಸ್​ಗೆ ರಾಜೀನಾಮೆ ಕೊಡಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ, ಕಾಂಗ್ರೆಸ್ ಬೆಂಬಲ ನೀಡುವ ಇಂಗಿತ ವ್ಯಕ್ತಪಡಿಸಿತ್ತು. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕುಪೇಂದ್ರ ರೆಡ್ಡಿ ಕಣಕ್ಕಿಳಿಸಲು ಹಠ ಹಿಡಿದದ್ದೇ ಜೆಡಿಎಸ್-ಕಾಂಗ್ರೆಸ್ ನಡುವಿನ ಬಿರುಕು ಹೆಚ್ಚಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಸಕಾರಾತ್ಮಕ ವಾತಾವರಣ:ಸಚಿವರ ವಿರುದ್ಧ ಒಂದಿಲ್ಲೊಂದು ಆರೋಪಗಳು, ಸರ್ಕಾರದ ವಿರುದ್ಧ ದೂರುಗಳು, ವಿವಾದಗಳು, ಆಂತರಿಕ ಭಿನ್ನಾಭಿಪ್ರಾಯದ ಮಾಹಿತಿ ಪಡೆದು ವರಿಷ್ಠರು ರೋಸಿ ಹೋಗಿದ್ದರು. ಹೊಸ ಯೋಜನೆಗಳು, ಜನಪರ ಕಾರ್ಯಕ್ರಮ ಗಳನ್ನು ಪ್ರಕಟಿಸಿದರೂ ಸರ್ಕಾರದ ವರ್ಚಸ್ಸು ವೃದ್ಧಿಗೆ ಸಾಕಾಗುತ್ತಿಲ್ಲವೆಂಬ ಅಸಹನೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ರಾಜ್ಯಸಭೆ ಮೂರು ಸ್ಥಾನಗಳಲ್ಲಿ ಸಾಧಿಸಿದ ಜಯ ಒಳ್ಳೆಯ ಲಯಕ್ಕೂ ಕಾರಣವಾಗಲಿದೆ. ಉತ್ತಮ ನಡೆ ಎಂಬ ಮೆಚ್ಚುಗೆಗೆ ಪಾತ್ರವಾಗುವ ಖುಷಿಯಲ್ಲಿ ರಾಜ್ಯ ನಾಯಕರಿದ್ದಾರೆ. ನರೇಂದ್ರ ಮೋದಿ ಜೂ.20,21ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಇದೇ ವೇಳೆ ರಾಜ್ಯಸಭೆಯ 3 ಸ್ಥಾನ ಗೆದ್ದು ಭಕ್ಷೀಸು ನೀಡ ಬೇಕೆಂಬ ಬಯಕೆ ಈಡೇರಿದೆ. ಮೋದಿ ಭೇಟಿ ಹೊಸ್ತಿಲಲ್ಲಿ ಪಕ್ಷದ ಪರ ಸಕಾರಾತ್ಮಕ ವಾತಾವರಣ ನೆಲೆಸಿದೆ.

ಆತ್ಮಸಾಕ್ಷಿ ಮತ ಎನ್ನುತ್ತಾರೆ. ಇಬ್ಬರಿಗೂ ಆತ್ಮವೂ ಇಲ್ಲ, ಸಾಕ್ಷಿಯೂ ಇಲ್ಲ. ಎರಡೂ ಡಿವೈಡ್ ಆಗಿದೆ. ನಾವು ಬೇರೆ ಪಕ್ಷದ ಶಾಸಕರನ್ನು ಪುಸಲಾಯಿಸಲ್ಲ. ಯಾರಲ್ಲೂ ಮತ ಕೇಳಲಿಲ್ಲ.
|ಆರ್.ಅಶೋಕ್ಕಂದಾಯ ಸಚಿವ
ಕೋಲಾರ ಶಾಸಕ ಶ್ರೀನಿವಾಸಗೌಡ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್ ಅಡ್ಡ ಮತದಾನ ಮಾಡಿ, ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರಿಗೇನಾದರೂ ಮಾನ ಮರ್ಯಾರೆ ಇದ್ದರೆ ರಾಜೀನಾಮೆ ಕೊಟ್ಟು ಹೊರ ಹೋಗಿ ರಾಜಕಾರಣ ಮಾಡಲಿ. ಇದು ಕೋಲಾರ ಮತ್ತು ಗುಬ್ಬಿ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರಿಗೆ ಮಾಡಿರುವ ಅವಮಾನ. ನಮ್ಮ ಪಕ್ಷದ ಚಿಹ್ನೆಯಿಂದ ಗೆದ್ದು, ಬೇರೆ ಪಕ್ಷದ ಜತೆಗೆ ಒಡನಾಟವಿಟ್ಟುಕೊಂಡು ಯಾವ ನೈತಿಕತೆ ಮೇಲೆ ಜನರ ಮುಂದೆ ಹೋಗುತ್ತಾರೆ. ಆತ್ಮಸಾಕ್ಷಿ ಎಂದರೆ ಇದೇನಾ?
|ಎಚ್.ಡಿ.ಕುಮಾರಸ್ವಾಮಿಮಾಜಿ ಸಿಎಂ
ಮತಪೆಟ್ಟಿಗೆಯಲ್ಲಿ ಖಾಲಿ ಬ್ಯಾಲೇಟ್ ಪೇಪರ್ ಇದ್ದರೆ ನಾನು ಅಸಮರ್ಥ ವ್ಯಕ್ತಿ. ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿಯಲು ಯೋಗ್ಯತೆ ಇಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ನಾನು ಖಾಲಿ ಬ್ಯಾಲೆಟ್ ಹಾಕಿದ್ದರೆ ರಾಜ್ಯದ ಜನರ ಕ್ಷಮೆ ಕೋರಿ ರಾಜಕೀಯದಿಂದಲೇ ನಿವೃತ್ತಿ ಹೊಂದುವೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿಗೆ ಮತ ಹಾಕಿ ಅವರಿಗೆ ತೋರಿಸಿ ಬಂದಿದ್ದೇನೆ.
|ಎಸ್.ಆರ್. ಶ್ರೀನಿವಾಸ್ ಗುಬ್ಬಿಶಾಸಕ
ನಾವು ಯಾರನ್ನೂ ಹೈಜಾಕ್ ಮಾಡಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ. ಕಾಂಗ್ರೆಸ್​ನ ಎಲ್ಲ 69 ಮಂದಿ ಪಕ್ಷಕ್ಕೇ ಮತ ನೀಡಿದ್ದಾರೆ. ಅದು ಸಮಾಧಾನದ ವಿಷಯ. ಬೇರೆ ಪಕ್ಷದ ವಿಚಾರ ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ತಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್​ನವರು ಹೈಜಾಕ್ ಮಾಡಿದ್ದಾರೆ ಎಂದು ಜೆಡಿಎಸ್​ನ ಎಚ್​ಡಿ.ಕುಮಾರಸ್ವಾಮಿ ಆರೋಪಕ್ಕೆ ಉತ್ತರ ನೀಡಿದ ಡಿಕೆಶಿ, ನಾವು ಹೈಜಾಕ್ ಮಾಡಬೇಕು ಅಂತಿದ್ದರೆ ಅರ್ಧ ಡಜನ್ ಶಾಸಕರು ಇದ್ದರು. ನಮಗೆ ಅದರ ಅವಶ್ಯಕತೆ ಇಲ್ಲ. ಬೇರೆಯವರಿಗೆ ಮುಜುಗರ ಮಾಡುವುದು ನಮಗೆ ಬೇಕಿಲ್ಲ ಎಂದರು. ಜೆಡಿಎಸ್​ನ ಎಚ್.ಡಿ.ರೇವಣ್ಣ ನಿಮಗೆ ಮತಪತ್ರ ತೋರಿಸಿದರಂತಲ್ಲ ಎಂಬ ಪ್ರಶ್ನೆಗೆ, ನಾನು ಒಂದು ಪಕ್ಷದ ಮತಗಟ್ಟೆ ಎಜೆಂಟ್ ಆಗಿ ಗೌಪ್ಯ ಮತದಾನ ಪ್ರಕ್ರಿಯೆ ಬಗ್ಗೆ ಮಾತಾಡಲು ಹಕ್ಕಿಲ್ಲ. ಅದು ಸರಿಯೂ ಅಲ್ಲ. ಬೇರೆ ಪಕ್ಷದ ಯಾರೂ ನನಗೆ ಮತಪತ್ರ ತೋರಿಸಿಲ್ಲ ಎಂದರು. ಶ್ರೀನಿವಾಸಗೌಡ ನಮ್ಮ ಉತ್ತಮ ಸ್ನೇಹಿತರು. ಬಹಳ ಬೇಕಾದವರು. ಅಸೆಂಬ್ಲಿಯಲ್ಲಿ ಧರಣಿ ಮಾಡಿದಾಗ ನಮ್ಮ ಜತೆ ಕೂತಿದ್ದರು, ಹೋರಾಟ ಮಾಡಿದ್ದರು. ಲೋಕಲ್ ಬಾಡಿ ಚುನಾವಣೆಯಲ್ಲಿ ನಮಗೇ ಬಹಳ ಸಹಾಯ ಮಾಡಿದ್ದಾರೆ. ಗುರುವಾರ ನನ್ನ ಮನೆಗೂ ಬಂದಿದ್ದರು. ಹಿಂದೆ ಆಫೀಸ್​ಗೂ ಬಂದಿದ್ದರು. ಆದರೆ ಮತದಾನದ ವಿಚಾರದಲ್ಲಿ ಆವರೇನು ಮಾಡಿದ್ದಾರೋ ಗೊತ್ತಿಲ್ಲ ಎಂದು ಡಿಕೆಶಿ ಹೇಳಿದರು.
ದಳಪತಿಗಳ ಒಗ್ಗಟ್ಟು ಪ್ರದರ್ಶನ:ಕೋಲಾರದ ಶ್ರೀನಿವಾಸಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದಾರೆ. ಶ್ರೀನಿವಾಸ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರೆ, ಗುಬ್ಬಿ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಉಳಿದ 30 ಶಾಸಕರು ಕುಪೇಂದ್ರ ರೆಡ್ಡಿಗೆ ಮತ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ಬಿ ಟೀಮ್ ಆರೋಪಕ್ಕೆ ಸಜ್ಜು:ಕಾಂಗ್ರೆಸ್ ನಡೆಯಿಂದಲೇ ಬಿಜೆಪಿ 3ನೇ ಅಭ್ಯರ್ಥಿ ಗೆಲ್ಲಲು ಸಾಧ್ಯವಾಯಿತು. ಬಿಜೆಪಿಗೆ ಸಹಾಯ ಮಾಡಲೆಂದೇ ಕಾಂಗ್ರೆಸ್ ಸಂಖ್ಯಾಬಲವಿಲ್ಲದೆ ಇದ್ದರೂ 2ನೇ ಅಭ್ಯರ್ಥಿ ಕಣಕ್ಕಿಳಿಸಿತು ಎಂಬ ಆರೋಪವನ್ನೇ 2023ರ ಚುನಾವಣೆವರೆಗೆ ಜೀವಂತವಾಗಿಡುವ ತಂತ್ರಗಾರಿಕೆಯನ್ನು ಜೆಡಿಎಸ್ ಮಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದು ಕಾಂಗ್ರೆಸ್ ಡಂಗುರು ಸಾರಿ ದೊಡ್ಡ ನಷ್ಟ ಉಂಟು ಮಾಡಿತ್ತು. ಈಗ ಅದೇ ತಂತ್ರಗಾರಿಕೆಯನ್ನು ಬಳಸಲು ಜೆಡಿಎಸ್ ಮುಂದಾಗಿದೆ.
ವರ್ಷವಿಡೀ ಸಿದ್ದು ಜಪ:ಜೆಡಿಎಸ್ 2023ರ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಪ್ಲಾ್ಯನ್ ಎ ಆದರೆ, ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟುವುದು ಪ್ಲಾನ್ ಬಿ ಆಗಿದೆ. ಪ್ಲಾನ್ ಬಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಕುಮಾರಸ್ವಾಮಿ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭಾ ಚುನಾವಣೆಯಲ್ಲಿ ನಡೆದ ಅರೆಬರೆ ‘ಆಪರೇಷನ್ ಹಸ್ತ’ದ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ವಿಧಾನಸೌಧದಲ್ಲಿ ರೌದ್ರಾವತಾರ ತೋರಿಸಿದರು. ಮತ ಚಲಾವಣೆ ಬಳಿಕ ಮಾಧ್ಯಮದ ಮುಂದೆ ಕಾಣಿಸಿದ ಎಚ್​ಡಿಕೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ರೋಷಾವೇಶ ವ್ಯಕ್ತಪಡಿಸಿದರು. ಕಾಂಗ್ರೆಸ್​ನವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. 2016ರಲ್ಲಿ 8 ಶಾಸಕರ ಕೈಯಲ್ಲಿ ಅಡ್ಡ ಮತ ಹಾಕಿಸಿಕೊಂಡಿದ್ದರು. ಈಗ ಶ್ರೀನಿವಾಸ್ ಗೌಡ ಕೈಯಲ್ಲಿ ಅಡ್ಡ ಮತ ಮಾಡಿಸಿದ್ದಾರೆ, ಗುಬ್ಬಿ ಶಾಸಕರ ಬಣ್ಣವೂ ಬಯಲಾಗಿದೆ. ಸಿದ್ದರಾಮಯ್ಯ ನಮ್ಮ ಶಾಸಕರನ್ನು ಹೈಜಾಕ್ ಮಾಡಿ ಕೀಳು ಮಟ್ಟದ ರಾಜಕಾರಣ ಮಾಡಿದರು. ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಈ ರೀತಿ ಆಟ ಆಡಿದರು. ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ಕಾಂಗ್ರೆಸ್ ಕಚೇರಿಗೆ ಧನ್ಯವಾದ ತಿಳಿಸಿಲು ತೆರಳಿದ್ದರು. ಬಿಜೆಪಿ ಬಿ ಟೀಂ ಯಾವುದು ಎಂಬುದು ಈಗ ಗೊತ್ತಾಗಿದೆ. ಈಶ್ವರಪ್ಪ ಅವರು ಸಿದ್ದರಾಮಯ್ಯ ನಮ್ಮನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಬಣ್ಣ ಬಯಲಾಗಿದೆ ಎಂದು ಸಿಟ್ಟು ಹೊರಹಾಕಿದಾಗ ಎಚ್​ಡಿಕೆ ಮುಖದಲ್ಲಿ ರೋಷ ಎದ್ದುಕಾಣಿಸುತ್ತಿತ್ತು. ಸಿದ್ದರಾಮಯ್ಯ ಅಲ್ಪಸಂಖ್ಯಾತ ಅಭ್ಯರ್ಥಿ ಹೆಸರಿನಲ್ಲಿ ಅನುಕಂಪ ಗಿಟ್ಟಿಸಲು ಹೋಗಿ, ಖೆಡ್ಡಾಗೆ ಬಿದ್ದಿದ್ದಾರೆ. ಇನ್ನೊಂದು ನಾಚಿಕೆಗೇಡಿನ ವಿಷಯ. ಇವರೆಲ್ಲ ನಕಲಿ ಜಾತ್ಯತೀತರು ಎಂದು ಛೇಡಿಸಿದರು. ನಮ್ಮ ಶಾಸಕ ಶ್ರೀನಿವಾಸ್ ಗೌಡಗೆ ರಮೇಶ್​ಕುಮಾರ್ ಬ್ರೖೆನ್ ವಾಶ್ ಮಾಡಿದ್ದಾರೆ. ಇದು ಹೆಸರಿಗೆ ಮಾತ್ರ ಪಕ್ಷಾಂತರ ನಿಷೇಧ, ವಿಪ್​ಗೆ ಬೆಲೆ ಇಲ್ಲ, ಈ ನಿಯಮ ಯಾವುದೇ ಉಪಯೋಗಕ್ಕೂ ಬರುವುದಿಲ್ಲ ಎಂದು ಕಿಡಿಕಾರಿದರು.
ರೇವಣ್ಣಗೆ ಕ್ಲೀನ್ ಚಿಟ್:ರಾಜ್ಯಸಭಾ ಚುನಾವಣೆ ನಿಯಮದ ಪ್ರಕಾರ, ಪ್ರತಿ ಶಾಸಕ ಮತದಾನ ಮಾಡಿದ ನಂತರ ತಮ್ಮಪಕ್ಷದ ಏಜೆಂಟ್​ಗೆ ಮತಪತ್ರ ತೋರಿಸಬೇಕಾಗುತ್ತದೆ. ಎಚ್.ಡಿ.ರೇವಣ್ಣ ಮತ ಚಲಾಯಿಸಿದ ಬಳಿಕ ಡಿ.ಕೆ.ಶಿವಕುಮಾರ್​ಗೆ ತೋರಿಸಿದ್ದಾರೆ. ಏಜೆಂಟ್ ಸ್ಥಾನದಲ್ಲಿದ್ದ ಪುಟ್ಟರಾಜು ಕಡೆಗೂ ಮತಪತ್ರ ತೋರಿಸಿದ್ದಾರೆ. ಡಿಕೆಶಿಗೆ ಮತಪತ್ರ ತೋರಿಸಿದ್ದು ನಿಯಮ ಉಲ್ಲಂಘನೆಯಾಗುತ್ತದೆ. ಹೀಗಾಗಿ ರೇವಣ್ಣ ಮತ ಅಸಿಂಧುಗೊಳಿಸಿ ಎಂದು ಬಿಜೆಪಿ ಚುನಾವಣಾಧಿಕಾರಿಗೆ ದೂರಿತು. ಕೊನೆಗೆ ವಿಡಿಯೋ ರೆಕಾರ್ಡಿಂಗ್ ಪರಿಶೀಲಿಸಿ ಯಾವುದೇ ತಪ್ಪು ನಡೆದಿಲ್ಲ ಎಂದು ರೇವಣ್ಣಗೆ ಕ್ಲೀನ್ ಚಿಟ್ ನೀಡಲಾಯಿತು.
ಹಿಂಬಾಲಿಸಿದ ರೇವಣ್ಣ, ಓಡಿದ ಗುಬ್ಬಿ ಶಾಸಕ:ಬೆಳಗ್ಗೆ 9.15ರ ಸುಮಾರಿಗೆ ಮತದಾನಕ್ಕೆ ಬಂದ ಗುಬ್ಬಿ ಶಾಸಕ ಶ್ರೀನಿವಾಸ್ (ವಾಸು) ಮತದಾನ ಮಾಡಿ ಏಜೆಂಟರಿಗೆ ಸರಿಯಾಗಿ ಪ್ರದರ್ಶಿಸದೆ ವೋಟರ್ ಬಾಕ್ಸ್​ಗೆ ತುರುಕಿ ಅಲ್ಲಿಂದ ಕಾಲ್ಕಿತ್ತ ಅವರನ್ನು ಎಚ್.ಡಿ.ರೇವಣ್ಣ ಕೋಪದಿಂದ ಬೆನ್ನಟ್ಟಿದ ಪ್ರಸಂಗ ವಿಧಾನಸೌಧದಲ್ಲಿ ನಡೆಯಿತು. ಮತದಾನ ಪ್ರಕ್ರಿಯೆ ಮುಗಿಸಿ ವೇಗವಾಗಿ ಹೆಜ್ಜೆ ಹಾಕಿದ ವಾಸು ಹಿಂದೆಯೇ ರೇವಣ್ಣ ಕಾರಿಡಾರ್​ನಲ್ಲಿ ಧಾವಿಸಿ ಬಂದರು. ಇದನ್ನು ಗಮನಿಸಿದ ವಾಸು ಅಷ್ಟೇ ವೇಗದಲ್ಲಿ ಮೊದಲ ಮಹಡಿಯಿಂದ ಕೆಳಗೆ ಹೊರಟು ಹೋದರು.
ಕೋಲಾರ:ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಹಾಕಿದ ಶಾಸಕ ಕೆ.ಶ್ರೀನಿವಾಸಗೌಡ ನೈತಿಕ ಹೊಣೆ ಹೊತ್ತು ಕೂಡಲೇ ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಶ್ರೀನಿವಾಸಗೌಡರ ನಿವಾಸದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಚೇರಿಯಲ್ಲೊಮ್ಮೆ ಮತದಾನ:ಶಾಸಕಾಂಗ ಪಕ್ಷದ ಸಭೆಯಲ್ಲಿ ಅಣಕ ಮತದಾನ ಮಾಡಿಸಿದ್ದ ಬಿಜೆಪಿ, ಶುಕ್ರವಾರ ಮತದಾನಕ್ಕೂ ಮುನ್ನ ಮತ್ತೊಮ್ಮೆ ತನ್ನ ಶಾಸಕರಿಗೆ ಮತದಾನದ ತರಬೇತಿ ನೀಡಿತು. ರಾಜ್ಯಸಭೆ, ವಿಧಾನ ಪರಿಷತ್ ಚುಣಾವಣೆಯಲ್ಲಿ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಮತ ಅಸಿಂಧು ಆಗುವ ಪ್ರಮೇಯ ಹೆಚ್ಚಿರುತ್ತದೆ. ಈ ಕಾರಣಕ್ಕೆ ಮಾದರಿ ಮತಪತ್ರವನ್ನು ಶಾಸಕರಿಗೆ ನೀಡಿ, ಅವರು ಯಾರಿಗೆ ಮತ ಹಾಕಬೇಕೆಂದು ಸೂಚಿಸಿ, ಮತವನ್ನೂ ಹಾಕಿಸಿದ ಬಳಿಕ ಮತದಾನ ಕೇಂದ್ರಕ್ಕೆ ಕಳಿಸಿಕೊಟ್ಟರು.
ರಮೇಶ ಪ್ರತ್ಯೇಕ್ಷ:ಸಿ ಡಿ ಪ್ರಕರಣದ ತರುವಾಯ ವಿಧಾನಸೌಧದತ್ತ ಮುಖ ಮಾಡದ ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗಮಿಸಿ, ಮತದಾನ ಮಾಡುವ ಮೂಲಕ ಒಗ್ಗಟ್ಟಿನ ಮುದ್ರೆಯೊತ್ತಿದರು.
ಆಡಳಿತ ಪಕ್ಷ ಕೈ ಬಿಡದ ಪಕ್ಷೇತರ, ಬಿಎಸ್ಪಿ:ಸರ್ಕಾರದ ಜತೆ ಗುರುತಿಸಿಕೊಂಡಿರುವ ಪಕ್ಷೇತರ ಶಾಸಕ ನಾಗೇಶ್ ಅವರನ್ನು ಸೆಳೆಯಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನ ಫಲ ಕೊಡದೆ ಹೋಯಿತು. ನಾಗೇಶ್ ಅವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜತೆ ಮತದಾನಕ್ಕೆ ಆಗಮಿಸಿದರು. ಇವರೊಂದಿಗೆ ಬಿಎಸ್​ಪಿ ಶಾಸಕ ಎನ್.ಮಹೇಶ್ ಕೂಡ ಇದ್ದರು. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರತಾಳು ಹಾಲಪ್ಪ ಅಲ್ಲಿಂದಲೇ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದರು. ತಿರುಪತಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದ ಯಲಹಂಕ ಶಾಸಕ ವಿಶ್ವನಾಥ್ ಶುಕ್ರವಾರ ಬೆಳಗ್ಗೆಯಷ್ಟೇ ಬೆಂಗಳೂರಿಗೆ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡರು. ವೈಯಕ್ತಿಕ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದ ಸತೀಶ್ ರೆಡ್ಡಿ ಚುನಾವಣೆ ಹಿನ್ನೆಲೆಯಲ್ಲಿ ವಾಪಸಾಗಿ ಮತದಾನ ವ್ಯರ್ಥ ಮಾಡಿಕೊಳ್ಳಲಿಲ್ಲ. ಸಿಡಿ ಪ್ರಕರಣದಿಂದ ಮುಜುಗರಕ್ಕೊಳಗಾಗಿ ವಿಧಾನಸೌಧದಿಂದ ದೂರವೇ ಉಳಿದಿದ್ದ ರಮೇಶ್ ಜಾರಕಿಹೊಳಿ ಕೂಡ ಮತದಾನದ ಹಕ್ಕು ಚಲಾವಣೆ ತಪ್ಪಿಸಿಕೊಳ್ಳಲಿಲ್ಲ.
ಕಾವೇರಿದ ವಾತಾವರಣ:ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಮತದಾನಕ್ಕೆ ಬಂದಾಗ ಕಾವೇರಿದ ವಾತಾವರಣ ನಿರ್ಮಾಣ ವಾಗಿತ್ತು. ಅವರು ಕಾಂಗ್ರೆಸ್​ಗೆ ಮತ ಹಾಕುತ್ತಾರೆಂಬುದು ತಿಳಿದಿದ್ದರಿಂದ ಜೆಡಿಎಸ್​ನ ಚುನಾವಣೆ ಏಜೆಂಟ್​ಗೆ ಕಸಿವಿಸಿಯುಂಟಾಗಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ನಸೀರ್ ಅಹ್ಮದ್ ಜತೆ ಮತದಾನ ಕೇಂದ್ರಕ್ಕೆ ಬಂದಿದ್ದ ಶ್ರೀನಿವಾಸ ಗೌಡ, ಮತ ಚಲಾಯಿಸಿ ಜೆಡಿಎಸ್ ಏಜೆಂಟ್​ಗೆ ತೋರಿಸಿ ಮುಜುಗರ ಉಂಟುಮಾಡಿದರು. ಈ ವೇಳೆ ಮಾತುಗಳು ಅದಲು ಬದಲಾದವೆಂದು ಮೂಲಗಳು ತಿಳಿಸಿವೆ. ಬಳಿಕ ಅವರು ಮತ್ತೆ ಸಿದ್ದರಾಮಯ್ಯರನ್ನು ಭೇಟಿ ಮಾಡಿ ವಿಧಾನಸೌಧದರಿಂದ ತೆರಳಿದರು. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ನನಗೆ ಮತ ನೀಡುವಂತೆ ಜೆಡಿಎಸ್​ನವರು ಯಾರೂ ಕೇಳಲೇ ಇಲ್ಲ ಎಂದರು.
ಮೊದಲ ಅಭ್ಯರ್ಥಿಗಳಿಗೆ ಆದ್ಯತೆ:ಬಿಜೆಪಿಯು ತನ್ನ ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್​ಗೆ ಮೊದಲು ಆದ್ಯತೆ ಮೇಲೆ ಮತದಾನ ಮಾಡಿಸಿತು. ಬೆಳಗ್ಗೆ ಮತದಾನ ಆರಂಭವಾದ ಮುಕ್ಕಾಲು ತಾಸಿನೊಳಗೆ ಬಿಜೆಪಿಯಿಂದ 52 ಮತದಾನ ಆಗಿದ್ದು, ನಿರ್ಮಲಾಗೆ ಅಗತ್ಯವಾದ 46 ಮೊದಲ ಪ್ರಾಶಸ್ತ್ಯ ಮತ ಹಾಕಿಸಲಾಗಿತ್ತು. ಬಿಜೆಪಿಯ ಮೊದಲೆರಡು ಅಭ್ಯರ್ಥಿಗಳಿಗೆ ಮತದಾನ ಆರಂಭವಾದ ಒಂದೂವರೆ ತಾಸಿನಲ್ಲೇ ಅಗತ್ಯ ಮತ ಲಭಿಸಿತ್ತು.
ಅಸಲಿಯತ್ತು ಪರೀಕ್ಷೆಗೆ ಘಟಾನುಘಟಿ ನಾಯಕರು:ಶಾಸಕರು ಪಕ್ಷದ ವಿಪ್​ನಂತೆ ಮತ ಹಾಕುತ್ತಿದ್ದಾರೋ ಇಲ್ಲವೋ ಎಂದು ನೋಡಲು 3 ಪಕ್ಷದ ಪ್ರಮುಖ ನಾಯಕರು ಮತದಾನ ಕೇಂದ್ರದಲ್ಲಿ ವಿರಾಜ ಮಾನರಾಗಿದ್ದರು. ಕಾಂಗ್ರೆಸ್ ಪರ ಡಿ.ಕೆ.ಶಿವಕುಮಾರ್, ಬಿಜೆಪಿಯಿಂದ ಸಿ.ಟಿ.ರವಿ, ಜೆಡಿಎಸ್​ನಿಂದ ಎಚ್.ಡಿ.ರೇವಣ್ಣ ತಮಗಾಗಿ ರೂಪಿಸಿದ್ದ ಕ್ಯಾಬಿನ್ ನೊಳಗೆ ಕುಳಿತು ಮತಪತ್ರ ಪರಿಶೀಲಿಸಿದರು. ಅಡ್ಡ ಮತದಾನ ತಡೆಯುವ ಉದ್ದೇಶದಿಂದ ಬಿಜೆಪಿ, ಕಾಂಗ್ರೆಸ್ ತನ್ನ ಶಾಸಕರಿಗೆ ಸ್ಪಷ್ಟ ಎಚ್ಚರಿಕೆ ನೀಡಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
