ಬೆಂಗಳೂರು:ರಾಜ್ಯ ಸರ್ಕಾರ ಪ್ರತಿ ವರ್ಷ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, 65 ಸಾಧಕರನ್ನು ಪ್ರಶಸ್ತಿಗೆ ಗುರುತಿಸಲಾಗಿದೆ. ಅದರಲ್ಲೂ ಮಾಗಿದ ಎಲೆಮರೆ ಸಾಧಕರಿಗೆೆ ಆದ್ಯತೆ ನೀಡಿರುವುದು ಈ ಬಾರಿಯ ವಿಶೇಷ. ಸುಪ್ರೀಂಕೋರ್ಟ್ ವಕೀಲ ಕೆ.ಎನ್.ಭಟ್, ವಿಜ್ಞಾನಿ ಪ್ರೊ.ಉಡುಪಿ ಶ್ರೀನಿವಾಸ, ಕಬಡ್ಡಿ ಆಟಗಾರ್ತಿ ಉಷಾರಾಣಿ ಮುಂತಾದವರು ಪುರಸ್ಕೃತರ ಪಟ್ಟಿಯಲ್ಲಿದ್ದಾರೆ. ಧರ್ಮಸ್ಥಳದ ಧಮೋತ್ಥಾನ ಟ್ರಸ್ಟ್, ಬಳ್ಳಾರಿ ದೇವದಾಸಿ ಸ್ವಾವಲಂಬನ ಕೇಂದ್ರ ಸೇರಿ ಐದು ಸಂಸ್ಥೆಗಳಿಗೆ ಪ್ರಶಸ್ತಿ ಸಂದಿದೆ.
ಈ ಬಾರಿ ಅರ್ಜಿ ಹಾಕದ ಶೇ.30 ಮಂದಿಗೆ ಪ್ರಶಸ್ತಿ ಲಭಿಸಿರುವುದು ಅಚ್ಚರಿಯೇ ಸರಿ. ಸಾಮಾಜಿಕ ನ್ಯಾಯ ಪರಿಪಾಲನೆ, ಪ್ರತಿ ಜಿಲ್ಲೆಗೂ ಆದ್ಯತೆ, 60 ವರ್ಷಕ್ಕೆ ಮೀರಿದವರನ್ನೇ ಆಯ್ಕೆ ಮಾಡುವುದು ಸೇರಿದಂತೆ ಆದಷ್ಟು ಗೊಂದಲ ಮೂಡದಂತೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಪಟ್ಟಿ ಸಿದ್ಧಪಡಿಸುವಲ್ಲಿ ಆಯ್ಕೆ ಸಮಿತಿ ಹರಸಾಹಸಪಟ್ಟು, ತಕ್ಕಮಟ್ಟಿಗೆ ಯಶಸಾಧಿಸಿದೆ.
ಜತೆಗೆ ಸಮಾಜದಲ್ಲಿ ಯುವಕರನ್ನು ಜೋಡಿಸಿ ಕೆಲಸ ಮಾಡುತ್ತಿರುವ ಸಂಘಟನೆಗಳನ್ನು ಗುರುತಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಆ ಸಂಘಟನೆಗಳಿಗೆ ಇನ್ನೊಂದಷ್ಟು ಹೊಣೆಗಾರಿಕೆ ಹೆಚ್ಚಿಸಲಾಗಿದೆ. ಪ್ರಶಸ್ತಿಗಾಗಿ ಒಟ್ಟು 1788 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಬಹುಪಾಲು ಬೆಂಗಳೂರಿನಿಂದಲೇ ಬಂದಿತ್ತು, ಇದನ್ನು 65ಕ್ಕೆ ಇಳಿಸಲಾಗಿದೆ. ಈಗ ಆಯ್ಕೆಯಾದವರ ಪೈಕಿ ಶೇ.30 ಹೆಸರನ್ನು ಸರ್ಕಾರ ತಾನೇ ಹುಡುಕಿ, ಶೋಧಿಸಿ, ಸೋಸಿ ಅಚ್ಚರಿ ಮೂಡಿಸಿದೆ. ಹಾಗೆಯೇ, ಜಾತಿ ಸಮೀಕರಣಕ್ಕೆ ಒತ್ತು ನೀಡಿ ಹಳಿತಪ್ಪದಂತೆ ಎಚ್ಚರಿಕೆ ವಹಿಸಲಾಗಿದೆ.
ಪ್ರತಿವರ್ಷ ರಾಜ್ಯೋತ್ಸವ ಪಟ್ಟಿ ಪ್ರಕಟವಾಗುತ್ತಿದ್ದಂತೆ ಒಂದಷ್ಟು ಅಸಮಾಧಾನದ ಕಿಡಿಹೊತ್ತಿಕೊಳ್ಳುತ್ತಿತ್ತು, ಪ್ರಾದೇಶಿಕ ಅಸಮಾನತೆ, ಜಿಲ್ಲಾ ಪ್ರಾತಿನಿಧ್ಯದ ಕೊರತೆ ಬಗ್ಗೆ ಟೀಕೆ ಕೇಳಿ ಬರುತ್ತಿತ್ತು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ನ್ಯಾಯಾಲಯ ಸರ್ಕಾರದಿಂದ ಮಾರ್ಗಸೂಚಿ ಪಡೆದು, ಅದರ ಪ್ರಕಾರವೇ ನಡೆಯುವಂತೆ ಚೌಕಟ್ಟು ರೂಪಿಸಿಕೊಟ್ಟಿದ್ದು ಅದರಂತೆಯೇ ಪಾಲನೆಯಾಗಿರುವುದು ಕಂಡುಬಂದಿದೆ.
ಪ್ರತಿಭಾಸಂಪನ್ನರಾದವರನ್ನು ಪ್ರಾದೇಶಿಕ, ಸಾಮಾಜಿಕ, ಹಾಗೂ ಮಹಿಳಾ ನ್ಯಾಯದೊಡನೆ ಪಾರದರ್ಶಕವಾಗಿ ಆಯ್ಕೆ ಮಾಡಬೇಕೆಂಬ ಸಂದೇಶ ಸಮಿತಿಗೆ ಸರ್ಕಾರದ ಕಡೆಯಿಂದ ಪದೇ ಪದೆ ಇತ್ತೆಂಬುದು ವಿಶೇಷ. ಒಟ್ಟು ಮೂವತ್ತು ಜಿಲ್ಲೆಗಳಲ್ಲಿ ಇಪ್ಪತ್ತೆಂಟು ಕ್ಷೇತ್ರದಿಂದ ಅರ್ಹರನ್ನು ಸ್ವೀಕೃತ ಅರ್ಜಿಗಳಲ್ಲಿ ಹಾಗೂ ಅರ್ಜಿ ಹಾಕದಿದ್ದರೂ ಪರಿಗಣಿಸಲೇಬೇಕಾದ ಪ್ರತಿಭಾವಂತರನ್ನು ಹುಡುಕಲು ಸಮಿತಿ ರಚಿಸಲಾಗಿತ್ತು.
ಅಂತಿಮವಾಗಿ ಅಂದುಕೊಂಡಂತೆ ಸಾಮಾಜಿಕ ನ್ಯಾಯ, ಜಿಲ್ಲಾ ಪ್ರಾತಿನಿಧ್ಯ, ಕ್ಷೇತ್ರವಾರು ಪ್ರಾತಿನಿಧ್ಯಕ್ಕೆ ಸಮಾನ ಅವಕಾಶ ನೀಡಲಾಗಿದೆ. ಕೃಷಿ-3 , ಕ್ರೀಡೆ-2, ಚಲನಚಿತ್ರ-2, ಚಿತ್ರಕಲೆ-1, ಜನಪದ -3, ನ್ಯಾಯಾಂಗ-2, ನೃತ್ಯ -1, ಪರಿಸರ-2, ಬಯಲಾಟ-2, ಮಾಧ್ಯಮ-2, ಯಕ್ಷಗಾನ-2, ಯೋಗ-1, ರಂಗಭೂಮಿ-3, ವಿಜ್ಞಾನ-ತಂತ್ರಜ್ಞಾನ-2, ವೈದ್ಯಕೀಯ-4, ಶಿಕ್ಷಣ -6, ಶಿಲ್ಪಕಲೆ-1, ಸಂಕೀರ್ಣ- 4, ಸಂಗೀತ -5, ಸಂಘ-ಸಂಸ್ಥೆ-5, ಸಮಾಜ ಸೇವೆ-4, ಸಹಕಾರ-1, ಸಾಹಿತ್ಯ-5, ಹೊರನಾಡ ಕನ್ನಡಿಗ -2, ವಿಶೇಷ ಚೇತನ -2 ಸೇರಿದಂತೆ 65 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಿಲ್ಲಾವಾರು ಗಮನಿಸಿದರೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ 5, ಬೆಂಗಳೂರು ನಗರಕ್ಕೆ 7, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗಕ್ಕೆ ತಲಾ ಮೂರು ಪ್ರಶಸ್ತಿ ಸಂದಿವೆ. ಉಳಿದಂತೆ ಯಾವುದೇ ಜಿಲ್ಲೆಗಳೂ ಪ್ರಶಸ್ತಿಯಿಂದ ವಂಚಿತವಾಗದಂತೆ ನೋಡಿಕೊಳ್ಳಲಾಗಿದೆ.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ 65ನೇ ರಾಜ್ಯೋತ್ಸವ ಪ್ರಯುಕ್ತ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪಟ್ಟಿ ಪ್ರಕಟಿಸಿದರು. ಅರ್ಜಿ ಸಲ್ಲಿಸದ ಸಾಧಕರನ್ನೂ ಪರಿಗಣಿಸಲಾಗಿದೆ, ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯ ಸಲ್ಲಿಸುವಾಗ ಕೆಲವು ಸಾಧಕರಿಗೆ ಪ್ರಶಸ್ತಿ ಸಿಗದಿರಬಹುದು. ಅರ್ಹತೆ ಜತೆ ಸಾಮಾಜಿಕ ನ್ಯಾಯದಡಿ, ವೈವಿಧ್ಯತೆ, ಎಲ್ಲಾ ಸಮುದಾಯದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದ್ದು, ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಪರಿಗಣಿಸಲಾಗಿದೆ ಎಂದು ವಿವರಿಸಿದರು.
ವಿಶೇಷ ಸಾಧನೆ ಮಾಡಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಅಧಿಕೃತ ಪ್ರಶಸ್ತಿಯನ್ನು ಪಡೆದವರನ್ನು ಹೊರತುಪಡಿಸಿ ಉಳಿದವರಿಗೆ ವಯೋಮಿತಿ 60 ಅನ್ನು ಮೀರಿರಬೇಕು ಎಂಬ ನಿಯಮ ಹಾಕಿಕೊಳ್ಳಲಾಗಿತ್ತು. ಕ್ರೀಡೆ ಹೊರತುಪಡಿಸಿ ಉಳಿದವರಿಗೆ 60ರ ವಯೋಮಿತಿ ದಾಟಿದೆ ಎಂದು ದೃಢಪಡಿಸಿಕೊಂಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಸಲಹಾ ಸಮಿತಿ ಸದಸ್ಯರಾದ ಡಾ.ವಾಮನಾಚಾರ್ಯ, ಸಾಹಿತಿ ದೊಡ್ಡರಂಗೇಗೌಡ, ಇಲಾಖೆಯ ಕಾರ್ಯದರ್ಶಿ ರಶ್ಮಿ ಮಹೇಶ್, ನಿರ್ದೇಶಕ ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸಂಘ ಪರಿವಾರಕ್ಕೆ ಸೇರಿದ ಯುವ ಬ್ರಿಗೇಡ್​ಗೆ ಏಕೆ ಪ್ರಶಸ್ತಿ ನೀಡಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿ.ಟಿ.ರವಿ, ಸಮಾಜದಲ್ಲಿ ಕೆಲಸ ಮಾಡುತ್ತಿರುವ, ಅರ್ಹತೆ ಇರುವವರನ್ನು ಏಕೆ ಪರಿಗಣಿಸಬಾರದು ಎಂದು ಮರುಪ್ರಶ್ನೆ ಹಾಕಿದರು. ಯುವ ಬ್ರಿಗೇಡ್ ನಾಡಿನ ಕಲ್ಯಾಣಿಗಳ ಪುನರುಜ್ಜೀವನ, ಪರಿಸರ, ನಾಡು ನುಡಿ ಸಾಧಕರನ್ನು ಗುರುತಿಸಿ ರೆಲ್ಲೋಪ್ಲೆಕ್ (ಮಾಹಿತಿ ಫಲಕ) ಹಾಕುವ ಮೂಲಕ ಸ್ಮಾರಕ ಗುರುತಿಸುವ ಕೆಲಸ ಮಾಡುತ್ತಿದೆ. ಆರ್​ಎಸ್​ಎಸ್ ಹಿನ್ನೆಲೆ ಇರುವವರಿಗೆ ಕೊಡಬಾರದೆಂದು ನಿಯಮದಲ್ಲಿದೆಯೇ? ನಿಯಮದಲ್ಲಿ ಅರ್ಹತೆ ಪರಿಗಣಿಸಬೇಕು ಎಂದಿದೆ. ನಾವು ಅರ್ಹತೆ ಪರಿಗಣಿಸಿದ್ದೇವೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಿದ್ದು ಅವಿಸ್ಮರಣೀಯ ಅನುಭವ. ಕರ್ನಾಟಕ ರಾಜ್ಯದ ರತ್ನಗರ್ಭದ ಪ್ರತಿಭಾ ಸಂಪತ್ತನ್ನು ಕಂಡು ಬೆರಗಾದೆ. 360 ಡಿಗ್ರಿಯಿಂದ ಪ್ರತಿಭಾವಂತರನ್ನು ಹುಡುಕುವ ಜವಾಬ್ದಾರಿ ನಮ್ಮ ಸಮಿತಿಗೆ ಮಾರ್ಗದರ್ಶನ ಹಾಗೂ ಆದೇಶವಾಗಿತ್ತು. ನಾವೇ ಸಿದ್ಧಪಡಿಸಿದ ಹೆಸರುಗಳನ್ನು ಕೈ ಬಿಡುವಾಗ ಒಂದು ರೀತಿಯ ಸಂಕಟ ಅನುಭವಿಸಿದ್ದನ್ನೂ ಮರೆಯಲಾಗದು. ಯಾವ ಜಿಲ್ಲೆಗೂ ಸಮುದಾಯಗಳಿಗೂ ಕ್ಷೇತ್ರಗಳಿಗೂ ಅತಿಯಾಗದಂತೆ ಕೈತಪ್ಪಿ ಹೋಗದಂತೆ ನೋಡಿಕೊಳ್ಳ ಬೇಕೆಂದು ಸಿಎಂ ಸಚಿವರು ಆಗಾಗ ಎಚ್ಚರಿಸುತ್ತಿದ್ದರು. ಪ್ರಶಸ್ತಿ ಪ್ರಕಟವಾದ ಬಳಿಕ ನಾಡು ಸಂಭ್ರಮಿಸುವುದನ್ನು ಕಂಡಾಗ ಆಗುವ ಸಮಾಧಾನ ಅವರ್ಣನೀಯ.
| ಡಾ.ಬಿ.ವಿ.ವಸಂತಕುಮಾರ್ಸದಸ್ಯ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ
ಉಪ ಚುನಾವಣೆ ಹಿನ್ನೆಲೆಯಲ್ಲಿ ನ.1ರ ಬದಲು ನ.7ರಂದು ಪ್ರಶಸ್ತಿ ಪ್ರದಾನ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಸಭಾಂಗಣದೊಳಗೆ ಪುರಸ್ಕೃತರು, ಅತಿಥಿಗಳು ಸೇರಿ 200 ಮಂದಿಗಷ್ಟೇ ಅವಕಾಶವಿರುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 10 =
Remember me
