ಶ್ರೀರಾಮಕೃಷ್ಣಪರಮಹಂಸರು ಕ್ಷುಧಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿ ದಂಪತಿಯ ಪುತ್ರರಾಗಿ 1836ರ ಫೆಬ್ರವರಿ 18ರಂದು ಕಲ್ಕತ್ತಾದ ಹೂಗ್ಲಿ ಜಿಲ್ಲೆಯ ಕಾಮಕಪುರ ಎಂಬಲ್ಲಿ ಜನಿಸಿದರು. (ಫಾಲ್ಗುಣ ಮಾಸದ ಶುಕ್ಲಪಕ್ಷದ ಬಿದಿಗೆ) ಗಯೆಯ ಗಧಾಧರೇಶ್ವರನ ಕೃಪೆಯಿಂದ ಜನಿಸಿದ್ದರಿಂದ ಮಗುವಿಗೆ ‘ಗಧಾಧರ’ನೆಂದು ನಾಮಕರಣ ಮಾಡಿದರು. 6ನೇ ವರ್ಷದಲ್ಲೇ ಎಲ್ಲ ದೇವತೆಗಳ ಸ್ತೋತ್ರಗಳು, ರಾಮಾಯಣ ಮತ್ತು ಮಹಾ ಭಾರತದ ಕಥೆಗಳನ್ನು ಹೇಳುತ್ತಿದ್ದರು. ಓದುವ ಸಮಯದಲ್ಲಿ ದೇವರ ನಾಟಕಗಳನ್ನು ಆಡುವುದು, ಧ್ಯಾನ ಇತ್ಯಾದಿಗಳನ್ನು ಮಾಡುತ್ತಿದ್ದರು. ನಂತರ ಶಾಲೆಗೆ ಹೊಗುವುದು ತಪ್ಪೇ ಹೋಯಿತು. ಪಕ್ಷಿಗಳು ಮತ್ತು ಪ್ರಕೃತಿಯ ದೃಶ್ಯಗಳನ್ನು ಕಂಡಾಗ ಸಮಾಧಿಸ್ಥಿತಿಗೆ ಹೋಗುತ್ತಿದ್ದರು.
ರಾಣಿ ರಸಮಣಿ ಕಲ್ಕತ್ತೆಯಲ್ಲಿ ಕಾಳಿ ದೇವಸ್ಥಾನವನ್ನು ಕಟ್ಟಿಸಿದರು. ಅಲ್ಲಿ ರಾಮಕೃಷ್ಣರನ್ನು ಪೂಜಾರಿಯಾಗಿ ನೇಮಿಸಿದಳು. ಒಂದು ದಿನ ಪರಮಹಂಸರು ಪೂಜೆ ಮಾಡುತ್ತಿದ್ದಾಗ ಒಂದು ಸಂದೇಹ ಬಂದಿತು. ನಿಜವಾಗಿಯೂ ಈ ಶಿಲಾಮೂರ್ತಿಯಲ್ಲಿ ಶಕ್ತಿಯಿದೆಯೇ ಅಥವಾ ಬರೀ ಕಲ್ಲೇ ಎಂದು. ಈ ದೇವಿಯನ್ನು ಪ್ರತ್ಯಕ್ಷವಾಗಿ ಕಾಣಲೇ ಬೇಕು. ಅವಳೊಂದಿಗೆ ಮಾತನಾಡಲೇಬೇಕೆಂಬ ಹಂಬಲದಿಂದ ದೇವಿಯ ಮುಂದೆ ಕಣ್ಣೀರು ಹಾಕುತ್ತ ಗೋಳಾಡುತ್ತಿದ್ದರು.
ದೇವಿಯನ್ನು ಪಡೆಯದಿದ್ದರೆ ಈ ಬಾಳು ವ್ಯರ್ಥವೆಂದು ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಗೆ ಅರ್ಪಿಸಲು ಸಿದ್ಧರಾದಾಗ ದೇವಿ ಅವರಿಗೆ ದರ್ಶನ ನೀಡಿದಳು. ಆಗ ಅವರ ಮನಸ್ಸು ಸಚ್ಚಿದಾನಂದ ಸ್ವರೂಪದಲ್ಲಿ ತಲ್ಲೀನವಾಯಿತು. ಅಲ್ಲಿಂದ ಅವರ ಜೀವನಕ್ರಮ ಮತ್ತು ಪೂಜಾವಿಧಾನವೇ ಬದಲಾಯಿತು. ಶ್ರೀರಾಮಕೃಷ್ಣರು ಹಿರಿಯ-ಕಿರಿಯ, ಪುರುಷ-ಸ್ತ್ರೀ, ಪಾಮರ, ಮೇಲು-ಕೀಳುಗಳೆಂಬ ಭಾವನೆಗಳಿಲ್ಲದೆ ಎಲ್ಲರಿಗೂ ಅತ್ಯಂತ ಗಹನವಾದ ತತ್ತ್ವವಿಚಾರವಾಗಲಿ, ಅಧ್ಯಾತ್ಮ ವಿಚಾರವಾಗಲಿ ಅವುಗಳನ್ನೆಲ್ಲ ದೃಷ್ಟಾಂತ ಸಾಮ್ಯ ನಿದರ್ಶನಗಳ ಮೂಲಕ ವಿವರಿಸುತ್ತಿದ್ದರು. ಸನಾತನ ಸತ್ಯಗಳು ನಿತ್ಯ ಮತ್ತು ಅವುಗಳ ಸಾಕ್ಷಾತ್ಕಾರವೇ ಮನುಷ್ಯನ ಜೀವನದ ಪರಮಗುರಿಯಾಗಿರಬೇಕೆಂದು ಬೋಧಿಸಿದರು. ಕಲಿಯುಗದಲ್ಲಿ ‘ಸತ್ಯವೇ ತಪಸ್ಸು’ ಎಂದು ನುಡಿಯುತ್ತಿದ್ದರು.
ರಾಮಕೃಷ್ಣರ 23ನೇ ವಯಸ್ಸಿನಲ್ಲಿ ಶಾರದಾದೇವಿಯೊಂದಿಗೆ ವಿವಾಹವಾಯಿತು. ಆಗ ಶಾರದಾದೇವಿಗೆ ಕೇವಲ 5 ವರ್ಷ. ಇಡೀ ಸ್ತ್ರೀಕುಲವನ್ನೇ ದೇವಿದೃಷ್ಟಿಯಿಂದ ನೋಡುತ್ತಿದ್ದ ಪರಮಹಂಸರು ಧರ್ಮಪತ್ನಿಯನ್ನು ಸಹ ದೇವಿದೃಷ್ಟಿಯಲ್ಲಿ ಕಂಡು ಅವರನ್ನು ಪೀಠದಲ್ಲಿ ಕೂಡಿಸಿ ಷೋಡಷ ಪೂಜೆಯನ್ನು ಮಾಡಿದರು. ಒಂದು ದಿನ ಗಂಗಾನದಿ ತೀರದಲ್ಲಿ ಕುಳಿತು, ಒಂದು ಕೈಯಲ್ಲಿ ಕಾಸನ್ನು(ಹಣ) ಇನ್ನೊಂದು ಕೈಯಲ್ಲಿ ಮಣ್ಣನ್ನು ಹಿಡಿದು ‘ನನ್ನ ದೃಷ್ಟಿಯಲ್ಲಿ ಇವೆರಡೂ ಒಂದೇ’ ಎಂದು ಭಾವಿಸಿ ನದಿಗೆ ಹಾಕಿದ್ದರು. ಅಂದಿನಿಂದ ರಾಮಕೃಷ್ಣರು ಒಂದು ಕಾಸನ್ನೂ ಮುಟ್ಟುತ್ತಿರಲಿಲ್ಲ. ಬ್ರಾಹ್ಮಣ ಎಂಬ ಅಹಂಕಾರ ಇರಬಾರದು ಎಂದು ಕೆಲವು ಸಮಯ ಚಾಂಡಾಲನ ಮನೆಯಲ್ಲಿ ಕಸ ಗುಡಿಸಿದ್ದರು. ಎಲ್ಲ ಸಿದ್ಧಿಗಳನ್ನು ಸಿದ್ಧಿಸಿಕೊಂಡಿದ್ದರೂ ಅದನ್ನು ತಾವು ಮಾತ್ರ ಅನುಭವಿಸಿದರೆ ಸಾಲದೆಂದು 16 ಜನ ಶಿಷ್ಯರಿಗೆ ಹಂಚಿದರು. ಅವರಲ್ಲಿ ಮುಖ್ಯರಾದವರು ಸ್ವಾಮಿ ವಿವೇಕಾನಂದರು, ಸ್ವಾಮಿ ಬ್ರಹ್ಮಾನಂದರು ಮತ್ತು ಸ್ವಾಮಿ ರಾಮಕೃಷ್ಣಾನಂದರು. 1886 ಆಗಸ್ಟ್ 16ರಂದು ರಾಮಕೃಷ್ಣರು ದೇಹತ್ಯಾಗ ಮಾಡಿದರು. ರಾಮಕೃಷ್ಣರ ಆದರ್ಶ ಮತ್ತು ತತ್ತ್ವವನ್ನು ಸ್ವಾಮಿ ವಿವೇಕಾನಂದರು ಭಾರತ ಮಾತ್ರವಲ್ಲದೆ ಹೊರದೇಶಗಳಲ್ಲೂ ಸಾರಿದರು.
| ಮಂಡಗದ್ದೆ ಪ್ರಕಾಶಬಾಬು ಕೆ.ಆರ್
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಹಿಂದೂ ಪಂಚಾಂಗದ ಪ್ರಕಾರ ಶ್ರೀರಾಮಕೃಷ್ಣ ಪರಮಹಂಸರ 185ನೇ ಜಯಂತಿ ಆಚರಣೆ ಇಂದು ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಮಠದಲ್ಲಿ ನಡೆಯಲಿದೆ. ತನ್ನಿಮಿತ್ತ ವಿಶೇಷ ಪೂಜೆ, ಹೋಮ, ಭಜನೆ ಮತ್ತು ಸಂಜೆ ಸ್ವಾಮಿ ಹರ್ಷಾನಂದರ ಪ್ರವಚನ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
