ಕಲುಷಿತ ನೀರೇ ಜೀವಾಮೃತ ರಸ್ತೆಯಿಲ್ಲ, ಕಾಡುಪ್ರಾಣಿಗಳ ಆತಂಕ ಆಡಳಿತಗಾರರ ನಿರ್ಲಕ್ಷ್ಯಕ್ಕೆ ಸಾಕ್ಷಿ
ಗಂಗಾಧರ್ ಬೈರಾಪಟ್ಟಣ ರಾಮನಗರಕಾಡು ಪ್ರಾಣಿಗಳು ಕುಡಿಯಲು ಅಸಹ್ಯ ಪಡುವಂತಹ ನೀರೇ ಇವರ ಜೀವಾಮೃತ… ಸೂರ್ಯ ಕಣ್ಣು ಬಿಡಲಿಲ್ಲ ಅಂದರೆ ಇವರ ಪಾಲಿಗೆ ಸೀಮೆಎಣ್ಣೆ ದೀಪಗಳೇ ಬೆಳಕು… ಕೊಂಚ ಎಚ್ಚರ ತಪ್ಪಿದರೂ ಕಾಡುಪ್ರಾಣಿಗಳು ಇವರ ಜೀವವನ್ನೇ ನುಂಗಿ ಬಿಡುವ ಆತಂಕ… ಇಂತಹ ಕಷ್ಟ ಹಾಗೂ ಹೀನ ಬದುಕನ್ನು ನಾಗರಿಕ ಸಮಾಜದಲ್ಲಿ ನಡೆಸುತ್ತಿದ್ದಾರೆ ಎಂದರೆ ಯಾರೂ ನಂಬುವುದಿಲ್ಲ.
ಆದರೆ, ಇದು ನಂಬಲೇ ಬೇಕಾದ ಸತ್ಯ. ಬೆಂಗಳೂರು ನಿಮಾತೃ ಕೆಂಪೇಗೌಡರ ತವರು ನೆಲ ಎಂದ ಕರೆಯಲ್ಪಡುವ ಮಾಗಡಿ ಪಟ್ಟಣದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಊಜಿಗಲ್ಲು ಎನ್ನುವ ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಆಧುನಿಕ ಸಮಾಜ ತಲೆತಗ್ಗಿಸುವಂತೆ ಇರುಳಿಗರು ಜೀವನ ನಡೆಸುತ್ತಿದ್ದಾರೆ.
ಹೊಸ ಬದುಕು ನರಕಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊಜಿಗಲ್ಲು ಗ್ರಾಮದಿಂದ ಸುಮಾರು 2 ಕಿ.ಮೀ. ಸಾಗಿದರೆ ಕವಡಗಲ್ಲು ಬೆಟ್ಟವಿದೆ. ಇಲ್ಲಿ 8 ಇರುಳಿಗ ಕುಟುಂಬಗಳ ಜೀವನ ನಡೆಸುತ್ತಿವೆ. ಹರಿದು ಹೋದ ಟಾರ್ಪಾಲ್, ಪ್ಲಾಸ್ಟಿಕ್ ಹೊದಿಕೆಗಳನ್ನು ಹೊದ್ದಿಸಿಕೊಂಡ, ತೆಂಗಿನ ಗರಿಯಿಂದ ನಿರ್ಮಿಸಿದ ಶೆಡ್‌ಗಳೇ ಇವರ ವಸತಿ. ಕಳೆದ 20 ವರ್ಷಗಳ ಹಿಂದೆ ವಿವಿಧ ಕಡೆಗಳಿಂದ ಬಂದು ಇಲ್ಲಿ ನೆಲೆಸಿರುವ ಇವರು, ಇಲ್ಲಿಯೇ ಇರುವ ಗೋಮಾಳ ಜಮೀನಿನಲ್ಲಿ ಕೃಷಿ, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಹ ಇಲ್ಲ ಎಂದರೆ ಆಶ್ಚರ್ಯ ಪಡಬೇಕಿಲ್ಲ.
ಗಲೀಜು ನೀರೇ ಜೀವಜಲಕವಡಗಲ್ಲು ಬೆಟ್ಟಕ್ಕೆ ರಸ್ತೆಯೇ ಇಲ್ಲ. ಇನ್ನು ಕುಡಿಯುವ ನೀರಿನ ಮಾತು ಬಲು ದೂರ. ಪ್ರತಿದಿನ ಬೆಟ್ಟದ ತಪ್ಪಲಿನಲ್ಲಿ ಇರುವ ಸಣ್ಣ ಗುಂಡಿಯಲ್ಲಿ ಸಂಗ್ರಹವಾಗಿರುವ ಕೆಸರು ತುಂಬಿದ ಮಳೆಯ ನೀರನ್ನೇ ಬಿಂದಿಗೆಯಲ್ಲಿ ತುಂಬಿಕೊಂಡು ಮೇಲಕ್ಕೆ ಹೋಗಬೇಕು. ಇದೇ ನೀರನ್ನು ಕಾಯಿಸಿಕೊಂಡು, ಸೋಸಿ ಕುಡಿಯಬೇಕು. ಒಂದು ಗುಂಡಿಯಲ್ಲಿ ನೀರು ಮುಗಿದರೆ ಮತ್ತಷ್ಟು ದೂರದಲ್ಲಿರುವ ಕೆರೆಗೆ ಹೋಗಿಯೇ ನೀರು ತರಬೇಕು. ಸ್ನಾನ ಮಾಡಬೇಕೆಂದರೆ ಬೆಟ್ಟದಿಂದ ಇಳಿಯಲೇಬೇಕು. ನೀರು ಸಿಗುವ ಸ್ಥಳದ ಪಕ್ಕದಲ್ಲಿಯೇ ಒಲೆ ಹಾಕಿಕೊಂಡು ನೀರು ಕಾಯಿಸಿ ಹೆಂಗಸರು – ಮಕ್ಕಳು ಬಯಲಿನಲ್ಲಿಯೇ ಸ್ನಾನ ಮಾಡಿ ಮತ್ತೆ ಗೂಡು ಸೇರಿಕೊಳ್ಳಬೇಕಾದ ಶೋಚನೀಯ ಸ್ಥಿತಿ ಇದೆ. ಇನ್ನು ಇತ್ತೀಚೆಗೆ ಸೋಲಾರ್ ಲೈಟ್‌ಗಳನ್ನು ನೀಡಲಾಗಿದೆಯಾದರೂ, ಮಳೆಗಾಲದಲ್ಲಿ ಇವುಗಳ ಬಳಕೆ ಕಷ್ಟ.
ಬೇರೆಡೆಗೆ ಹೋಗಲ್ಲಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಇಲ್ಲಿಗೆ ಬಂದು ನೆಲೆ ನಿಂತ ಇರುಳಿಗರಿಗೆ ಬೇರೆಡೆ ಹೋಗಲು ಆಗುತ್ತಿಲ್ಲ. ಇರುವ ಗೋಮಾಳದ ಜಮೀನಿನಲ್ಲಿಯೇ ಕೃಷಿ, ಊಜಿಗಲ್ಲು ಗ್ರಾಮದವರಿಗೆ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಇವರು ಮತ್ತೆಲ್ಲಿ ಹೋಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನು ಮಕ್ಕಳನ್ನು ಓದಿಸಲೇಬೇಕು ಎಂದಾದರೆ ದೂರದ ಸಂಬಂಧಿಗಳ ಮನೆಗೆ ಕಳಿಸಿ ಓದಿಸುತ್ತಾರೆ ಎನ್ನುವುದು ಬಿಟ್ಟರೆ ಉಳಿದ ಮಕ್ಕಳಿಗೆ ಶಿಕ್ಷಣವೂ ಇಲ್ಲ.
ಪ್ರಯತ್ನಗಳು ಫಲ ನೀಡಲಿಲ್ಲಸ್ಥಳೀಯವಾಗಿ ಬೆಟ್ಟಕ್ಕೆ ರಸ್ತೆ ನಿರ್ಮಾಣ, ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡುವ ಪ್ರಯತ್ನಗಳು ನಡೆದಿವೆ. ಆದರೆ ಇಲ್ಲಿಗೆ ಬೋರ್‌ವೆಲ್ ಲಾರಿ ಹೋಗಲು ಸಾಧ್ಯವಿಲ್ಲದ ಕಾರಣ, ಕೆಸರು ತುಂಬಿದ ಹೊಂಡದ ಕಲುಷಿತ ನೀರೇ ಇವರಿಗೆ ಗತಿಯಾಗಿದೆ. ಇಲ್ಲಿ ರಸ್ತೆ ನಿರ್ಮಾಣಕ್ಕೆ ನರೇಗಾ ಅಡಿಯಲ್ಲಿ ಹಣ ಮೀಸಲಿರಿಸಲಾಗಿದೆ. ಕೆಲಸ ಮಾತ್ರ ಅರ್ಧಕ್ಕೆ ನಿಂತಿದೆ.
ಅಧಿಕಾರಿಗಳು ಕಣ್ತೆರೆಯಬೇಕಿದೆನಾಗರಿಕ ಸಮಾಜದ ಎಲ್ಲ ಸೌಲಭ್ಯಗಳಿಂದಲೂ ಬಹುತೇಕ ವಂಚಿತರಾಗಿಯೇ ಇರುವ ಊಜಿಗಲ್ಲು ಗ್ರಾಮದ ಕವಡಗಲ್ಲು ಬೆಟ್ಟದ ಇರುಳಿಗರಿಗೆ ಹೊಸ ಬದುಕು ಕಟ್ಟಿಕೊಡುವ ಕೆಲಸವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಿದೆ. ರಸ್ತೆ, ಕುಡಿಯುವ ನೀರು ಸೇರಿ ಇತರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಕಲ್ಯಾ ಗ್ರಾಪಂನಿಂದ 20 ಲಕ್ಷ ರೂ. ಮೌಲ್ಯದ ಕ್ರಿಯಾ ಯೋಜನೆಯನ್ನು ಜಿಪಂಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ಕೂಡಲೇ ಅನುಮೋದಿಸಿ ಕೆಲಸ ಕೈಗೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಇದರ ಜೊತೆಗೆ ಗುಡಿಸಲಲ್ಲಿ ವಾಸ ಮಾಡುತ್ತಿರುವ ಇವರಿಗೆ ಮನೆ ಕಟ್ಟಿಸಿಕೊಡುವ ಜತೆಗೆ, ಅಗತ್ಯ ಮೂಲಸೌಲಭ್ಯ ಒದಗಿಸಿಕೊಡಬೇಕಿದೆ.
ಕಳೆದ 20 ವರ್ಷಗಳಿಂದ ಇಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಮತ್ತೆಲ್ಲಿ ಹೋಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ?. ನಮಗೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಒಂದಿಷ್ಟು ಸೌಲಭ್ಯ ನೀಡಿದರೆ ಬದುಕಿಕೊಳ್ಳುತ್ತೇವೆ.ಪುಟ್ಟಮಾದು, ಕವಡಗಲ್ಲು ಬೆಟ್ಟದ ಇರುಳಿಗ—
ಈಗಾಗಲೇ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾ ಪಂಚಾಯಿತಿಗೆ 20 ಲಕ್ಷ ರೂ. ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಇರುಳಿಗರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.ಅರುಣ್, ಕಲ್ಯಾ ಗ್ರಾಪಂ ಮಾಜಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 18 =
Remember me
