ಬೆಂಗಳೂರು:ದೇಶದ ಕೋಟ್ಯಾಂತರ ಜನರ ಬಹುದಿನಗಳ ನಿರೀಕ್ಷೆ ಸಾಕಾರಗೊಂಡ ಕ್ಷಣ. ಅತ್ತ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ. ಇತ್ತ ಬೆಂಗಳೂರಿನ ಮೂಲೆ ಮೂಲೆಗಳಲ್ಲೂ ರಾಮೋತ್ಸವದ ಸಂಭ್ರಮ ಮನೆಮಾಡಿತ್ತು. ರಾತ್ರಿಯಿಂದಲೇ ನಗರದಲ್ಲಿ ರಾಮೋತ್ಸವದ ಸಡಗರ ಏರುಗತಿಯಲ್ಲಿ ಸಾಗಿತ್ತು. ನಗರದ ಗಲ್ಲಿಗಲ್ಲಿಗಳೂ ಕೇಸರಿಮಯವಾಗಿ ಕಂಗೊಳಿಸುತ್ತಿದ್ದವು. ದೊಡ್ಡ ದೊಡ್ಡ ಸರ್ಕಲ್‌ಗಳಲ್ಲಿ ಶ್ರೀರಾಮನ ಬೃಹತ್ ಕಟೌಟ್‌ಗಳು, ಕೇಸರಿ ಬಂಟಿಂಗ್ಸ್ ಮತ್ತು ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಇನ್ನೂ ಕೆಲವೆಡೆ ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ರಾಮನ ಮೂರ್ತಿಗಳನ್ನು ಸ್ಥಾಪಿಸಿ ರಾಮನ ಭಜನೆ, ಕೀರ್ತನೆ, ಪ್ರಸಾದ ವಿನಿಯೋಗ ಹಮ್ಮಿಕೊಂಡಿದ್ದರು.
ಸಾಮಾನ್ಯವಾಗಿ ಶ್ರೀರಾಮನವಮಿಯಂದು ಮಾಡುವಂತೆ ಎಲ್ಲೆಡೆ ಪಾನಕ, ಮಜ್ಜಿಗೆ, ಕೋಸಂಬರಿ, ಪುಳಿಯೊಗರೆ ಇತ್ಯಾದಿ ಪ್ರಸಾದ ವಿತರಣೆ ಭರದಿಂದ ನಡೆಯಿತು. ಪ್ರಮುಖ ರಸ್ತೆಯ 100-200 ಮೀಟರ್ ದೂರಕ್ಕೂ ಪ್ರತ್ಯೇಕ ಪೆಂಡಾಲ್‌ಗಳನ್ನು ಹಾಕಿರಾಮನ ಫ್ಲೆಕ್ಸ್‌ಗಳನ್ನು ಅಳವಡಿಸಿ ಪೂಜೆ ಸಲ್ಲಿಸಲಾಯಿತು. ಧ್ವನಿವರ್ಧಕಗಳ ಮೂಲಕ ರಾಮನ ಗೀತಗಾಯನ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸುವ ದೃಶ್ಯ ಸಾಮಾನ್ಯವಾಗಿತ್ತು.
ಪ್ರತಿ ಮನೆಯ ಮುಂದೆ ಬೆಳಗ್ಗೆ ಜೈಶ್ರೀರಾಮ ಎಂಬ ಬರವಣಿಗೆಯೊಂದಿಗೆ ಶ್ರೀರಾಮನ ರಂಗೋಲಿ ಹಾಕಿ ಸಂಭ್ರಮಿಸಿದ ಮಹಿಳೆಯರು ಸಂಜೆ ಮನೆಯ ಮುಂದೆ ದೀಪಗಳನ್ನು ಬೆಳಗಿಸಿ ಶ್ರೀರಾಮಜ್ಯೋತಿ ಅಭಿಯಾನವನ್ನು ಯಶಸ್ವಿಗೊಳಿಸಿದರು. ಒಂದೆಡೆ ಚಿಕ್ಕಮಕ್ಕಳಿಗೆ ಹಾಕಿದ್ದ ಬಾಲರಾಮ, ಹನುಮ, ಸೀತಾ ಮತ್ತಿತರ ವೇಷಭೂಷಣಗಳು ಗಮನ ಸೆಳೆದರೆ; ಮತ್ತೊಂದೆಡೆ ರಸ್ತೆಗಳಲ್ಲಿ ರಾಮ, ಹನುಮನ ವೇಷಧಾರಿಗಳ ಓಡಾಟ ವಾಹನ ಸವಾರರ ಗಮನ ಸೆಳೆಯುತ್ತಿತ್ತು. ವಿವಿಧ ಸಂಘಸಂಸ್ಥೆಗಳು ನಗರದ ವಿವಿಧೆಡೆಗಳಲ್ಲಿ ಬೃಹತ್ ಎಲ್‌ಇಡಿ ಪರದೆಯನ್ನು ಅಳವಡಿಸಿ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದವು.
ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೂಡಾ ತಮ್ಮ ತಮ್ಮ ನಾಯಕರ ಭಾವಚಿತ್ರದೊಂದಿಗೆ ಶ್ರೀರಾಮೋತ್ಸವಕ್ಕೆ ಶುಭಕೋರುವ ಫ್ಲೆಕ್ಸ್‌ಗಳು ನಗರದ ತುಂಬೆಲ್ಲಾ ರಾರಾಜಿಸುತ್ತಿವೆ. ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ರಾಮೋತ್ಸವದಲ್ಲಿ ಶ್ರೀರಾಮ ತಾರಕ ಮಂತ್ರ ಜಪ ಮತ್ತು ರಾಮಾಯಕ ಪಾರಾಯಣ ನಡೆಸಲಾಯಿತು. ಸಿರಿಕಲಾಮೇಳದ ವತಿಯಿಂದ ಕಮಲಾನಗರದಲ್ಲಿ ಸಂಜೆ ಶ್ರೀರಾಮ ದರ್ಶನ ವಿಶೇಷ ಯಕ್ಷಗಾನ ಪ್ರದರ್ಶನ ನಡೆಯಿತು.
ದೇವಾಲಯಗಳಲ್ಲಿ ವಿಶೇಷ ಪೂಜೆ:ಅಯೋಧ್ಯೆಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯು ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿ ನಗರದ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಹೋಮ-ಹವನಗಳನ್ನು ನಡೆಸಲಾಯಿತು. ಮುಜರಾಯಿ ಇಲಾಖೆಯ ಅಧೀನಕ್ಕೊಳಪಡುವ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸುವಂತೆ ಸಚಿವರು ಸೂಚನೆ ನೀಡಿದ್ದು, ಅದರಂತೆ ದಿನಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅದರಲ್ಲೂ ವಿಶೇಷವಾಗಿ ರಾಮ ಮತ್ತು ಹನುಮಂತನ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಜನ ದೇವರ ದರ್ಶನಕ್ಕೆ ಆಗಮಿಸುತ್ತಿದ್ದರು. ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಪ್ರಸಿದ್ದ ವೀರಾಂಜನೇಯ ದೇವಾಲಯದಲ್ಲಿ ಸಾವಿರಾರು ಮಹಿಳೆಯರು ಪೂರ್ಣಕುಂಭ ಹೊತ್ತು ತಂದು ದೇವರಿಗೆ ಅಭಿಷೇಕ ಮಾಡಿದರು. ಜಯನಗರದ 4ನೇ ಬ್ಲಾಕ್‌ನಲ್ಲಿರುವ ವಿನಾಯಕ ದೇವಾಲಯ, ರಾಗಿಗುಡ್ಡದ ಆಂಜನೇಯ ದೇವಾಲಯ, ಹನುಮಂತನಗರದ ರಾಮಾಂಜನೇಯ ದೇವಾಲಯ, ವಿಜಯನಗರದ ಮಾರುತಿ ಮಂದಿರ, ರಾಜಾಜಿನಗರದ ರಾಮಮಂದಿರ, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಾಲಯ, ಬ್ಯಾಟರಾಯನಪುರದ ಶ್ರೀಕೋದಂಡರಾಮಸ್ವಾಮಿ ದೇವಸ್ಥಾನ, ಉಲ್ಲಾಳ ಉಪನಗರದ ಶ್ರೀ ವರಸಿದ್ಧಿ ವಿನಾಯಕ ದೇವಾಲಯ, ಕೆ.ಆರ್.ಮಾರುಕಟ್ಟೆ ಬಳಿ ಇರುವ ಕೋಟೆ ಆಂಜನೇಯ ಮತ್ತು ಮಿಂಟೋ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಬನಶಂಕರಿ ದೇವಾಲಯದಲ್ಲಿ ಪರಿವಾರ ಶ್ರೀರಾಮಚಂದ್ರ ದೇವರಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ರಾಮತಾರಕ ಹೋಮ, ಪ್ರಾಕಾರ ಉತ್ಸವ, ಸಂಜೆ ದೀಪೋತ್ಸವವನ್ನು ನಡೆಸಲಾಯಿತು.
ಶ್ರೀರಾಮನಾಮ ತಾರಕ ಹೋಮ:ಜಯನಗರದ 4ನೇ ‘ಟಿ’ ಬ್ಲಾಕ್‌ನಲ್ಲಿರುವ ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿಯಲ್ಲಿ ವಿಜಯವಾಣಿ ಸಹಯೋಗದೊಂದಿಗೆ ಸೋಮವಾರ ಶ್ರೀರಾಮ ಜಪ ಹಾಗೂ ಶ್ರೀರಾಮನಾಮ ತಾರಕ ಹೋಮವನ್ನು ಆಯೋಜಿಸಲಾಗಿತ್ತು.
ಹೋಮದಲ್ಲಿ ಸಾಕಷ್ಟು ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರಾಮಾಯಣದ ಸುಂದರ ಕಾಂಡ ಪಾರಾಯಣ, ರಾಮನಾಮ ಭಜನೆ, ಶ್ರೀರಾಮನಿಗೆ ಪಂಚಾಮೃತ ಅಭಿಷೇಕ ದೀಪೋತ್ಸವ ನಡೆಸಲಾಯಿತು. ಸಂಜೆ ಆರ್.ಕೆ.ಪದ್ಮನಾಭ ತಂಡದವರಿಂದ ಶ್ರೀರಾಮ ಕೀರ್ತನೆ, ಡಾ.ರಕ್ಷಾ ಕಾರ್ತಿಕ ತಂಡದಿಂದ ಭರತನಾಟ್ಯ, ಎಚ್.ಸಿ.ವೇಣುಗೋಪಾಲ್ ತಂಡದಿಂದ ಸಾಮೂಹಿಕ ವೇಣುವಾದನ ನಡೆಯಿತು.
ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ನೇರಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿಯ ಅಧ್ಯಕ್ಷ ಎಸ್.ಆರ್.ನರಸಿಂಹನ್, ಕಾರ್ಯದರ್ಶಿ ಕೆ.ಎಸ್.ಬಾಲಸುಬ್ರಹ್ಮಣ್ಯ ಮತ್ತಿತರರಿದ್ದರು.
ಖಾಸಗಿ ಸಂಸ್ಥೆ,ಸರ್ಕಾರಿ ಕಚೇರಿ,ಹೈಕೋರ್ಟ್‌ನಲ್ಲೂ ರಾಮಜಪ:ರಜೆ ನೀಡಬೇಕೆಂಬ ಸಾರ್ವಜನಿಕರ ಆಗ್ರಹಕ್ಕೆ ರಾಜ್ಯ ಸರ್ಕಾರ ಮಣಿಯದ ಹಿನ್ನೆಲೆಯಲ್ಲಿ ಕಚೇರಿಗಳಿಗೆ ಬಂದಿದ್ದ ನೌಕರರು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಕೆಲವು ಖಾಸಗಿ ಸಂಸ್ಥೆಗಳಲ್ಲಿ ಶ್ರೀರಾಮನ ೆಟೋ ಇಟ್ಟು ಪೂಜೆ ಸಲ್ಲಿಸಿ ರಾಮಭಕ್ತಿ ಮೆರೆದಿದ್ದರು.
ವಿಶೇಷವೆಂಬಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ರಾಮೋತ್ಸವದ ಆಚರಣೆ ಕಳೆಗಟ್ಟಿತ್ತು. ಬೆಂಗಳೂರು ವಕೀಲರ ಸಂಘವು ಹೈಕೋರ್ಟ್ ಆವರಣದಲ್ಲಿ ವಿಶೇಷ ಪೂಜೆ ನೆರವೇರಿಸಿ ಮೇಲುಕೋಟೆಯಿಂದ ಕರೆಸಿದ್ದ ಬಾಣಸಿಗರಿಂದ ಸುಮಾರು 2 ಸಾವಿರಕ್ಕೂ ಅಧಿಕ ಜನರಿಗೆ ಪುಳಿಯೊಗರೆ, ಪಾನಕ, ಮಜ್ಜಿಗೆ, ಕೋಸಂಬರಿ, ಪೊಂಗಲ್ ಪ್ರಸಾದವನ್ನು ವಿತರಿಸಿದರು. ಹೈಕೋರ್ಟ್‌ನ ವಿವಿಧ ವಿಭಾಗಗಳಲ್ಲಿ ರಾಮೋತ್ಸವವನ್ನು ಆಚರಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
