ಮುಂಬೈ: ಹಳ್ಳಿಯಲ್ಲಿ ಹುಟ್ಟಿ ಎತ್ತರೆತ್ತರಕ್ಕೆ ಬೆಳೆದರೂ ನೆಲದ ಋಣವನ್ನು ಮರೆಯದೇ ಎಷ್ಟೋ ಜನರಿಗೆ ಸಹಾಯ ಹಸ್ತವನ್ನು ಚಾಚುತ್ತಿರುವ ರವಿ ಶೆಟ್ಟಿ ಅವರ ಸಾಧನೆ ಹಾಗೂ ಕಠಿಣ ಪರಿಶ್ರಮ, ದುಡಿಮೆಯ ಮೂಲಕ ದೇಶ ವಿದೇಶದಲ್ಲಿ ಹೆಸರುವಾಸಿಯಾಗಿರುವ ಇವರ ಜೀವನದ ಕ್ರಮದ ಕುರಿತು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಪೂರ್ಣಿಮಾ ಶೆಟ್ಟಿ ಅವರು ಹೊರತಂದಿರುವ ರವಿತೇಜ ಕೃತಿಯ ಇಂದು ಪುತ್ತೂರಿನಲ್ಲಿ ಲೋಕಾರ್ಪಣೆಗೊಂಡಿತು.
ರವಿತೇಜ ಕೃತಿಯ ಮೂಲಕ ಪೂರ್ಣಿಮಾ ಶೆಟ್ಟಿ ಅವರು ರವಿ ಅವರ ಜೀವನ ಚರಿತ್ರೆಯನ್ನು ಬಹುರೂಪಿ ವಿಧಾನದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರು ಸಾಕಷ್ಟು ಅಧ್ಯಯನವನ್ನು ನಡೆಸಿ ಈ ಕೃತಿಯನ್ನು ರಚಿಸಿದ್ದಾರೆ. ರವಿ ಶೆಟ್ಟಿ ಅವರ ಆರು ದಶಕಗಳ ಜೀವಿತಾವಧಿಯ ಕಥನವನ್ನು ಇಲ್ಲಿ ಬಿಂಬಿಸಿದ್ದಾರೆ. ಈ ಕೃತಿ ಜೀವನಚರಿತ್ರೆ, ಆತ್ಮಕಥನ ಮತ್ತು ಬಹುರೂಪಿ ಮನಸ್ಸುಗಳ ಸಂಚಯ ಕೋಶ. ಈ ನಿಟ್ಟಿನಲ್ಲಿ ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮೂಲಕ ಇಂತಹ ಸಾಧಕರ ಸಾಧನೆಗಳನ್ನು ಗುರುತಿಸಿ ಕೃತಿ ರೂಪದಲ್ಲಿ ಹೊರತರುತ್ತಿರುವುದು ಸ್ತುತ್ಯರ್ಹ. ಕೃತಿಯನ್ನು ಹೊರತರುವಲ್ಲಿ ಶ್ರಮಿಸಿದ ಕೃತಿಕಾರರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಮತ್ತು ಮಿಥಾಲಿ ಪ್ರಸನ್ನ ರೈ ಅವರ ಪ್ರಯತ್ನ ಶ್ಲಾಘನೀಯ ಎಂದು ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ.ಬಿ. ಎ. ವಿವೇಕ್ ರೈ ನುಡಿದರು.
ಕೃತಿಗಳನ್ನು ಪರಿಚಯಿಸಿದ ಸಾಹಿತಿ ಡಾ| ನರೇಂದ್ರ ರೈ ದೇರ್ಲ ಅವರು ರವಿ ಶೆಟ್ಟಿ ಅವರು ಸ್ವ ಪ್ರಯತ್ನದಿಂದ ಮೇಲೆ ಬಂದವರು. ಅವರು ಲಾಭದ ಉದ್ಧೇಶದಿಂದ ಸಮಾಜ ಸೇವೆಯಲ್ಲಿ ತೊಡಗಿಲ್ಲ. ಮೌಲ್ಯದ ಉದ್ದೇಶದಿಂದ ಅವರು ಮಾಡಿದ ಎಲ್ಲ ಸಾರ್ಥಕ ಸಾಧನೆಗಳ ದಾಖಲಾತಿ ಈ ಕೃತಿಯ ವೈಶಿಷ್ಟ್ಯ. ರವಿತೇಜ ಕೃತಿ ನಾಗರಿಕತೆಯನ್ನು ತಲುಪುವಾಗ ಸಹಜವಾಗಿ ದತ್ತವಾದಂತಹ ರೈತ ಗುಣದ ಅಂಶಗಳು ಇಲ್ಲಿವೆ. ಈ ಪುಸ್ತಕದೊಳಗೆ ಸಾಮಾನ್ಯರಿಂದ ಹಿಡಿದು ಭಿನ್ನ ಕ್ಷೇತ್ರಗಳ ಸಾಧಕರಿದ್ದಾರೆ. ಸಮಾಜಸೇವಕ, ಸಾಂಘಿಕ ಶಕ್ತಿ, ಸುಸಂಸ್ಕೃತ ವ್ಯಕ್ತಿಯ ಜೀವನಗಾಥೆ ಇಲ್ಲಿ ಅಪೂರ್ವವಾಗಿ ದಾಖಲಾಗಿದೆ. ರವಿತೇಜ ಕೃತಿ ಅತ್ಯಮೂಲ್ಯವಾಗಿದ್ದು, ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ನುಡಿದರು.
ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ರವಿತೇಜ ಕೃತಿಯ ಅಕಸ್ಮಿಕ ಹುಟ್ಟಿಗೆ ಕಾರಣವಾದ ಹಿನ್ನೆಲೆಯನ್ನು ವಿವರಿಸುತ್ತಾ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡರು. ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್. ಉಪಾಧ್ಯ ಹಾಗೂ ಐಲೇಸಾ ತಂಡದವರು ಕೃತಿ ಬೆಳಕು ಕಾಣುವಲ್ಲಿ ಹಂತ ಹಂತವಾಗಿ ಸಹಕರಿಸಿದ್ದಾರೆ. ಇದು ಕನ್ನಡ ವಿಭಾಗದ 86 ಮತ್ತು 87ನೆಯ ಪ್ರಕಟಣೆಯಾಗಿದೆ. ಕನ್ನಡ ವಿಭಾಗವು ಭಾಷೆ, ಸಾಹಿತ್ಯ, ಸಂಸ್ಕøತಿಯ ಏಳ್ಗೆಗಾಗಿ ಸದಾ ಶ್ರಮಿಸುತ್ತಿದೆ. ಗುರುಗಳಾದ ಡಾ| ಜಿ. ಎನ್. ಉಪಾಧ್ಯ ಅವರು ತಮ್ಮ ಶಿಷ್ಯಂದಿರ ಬೆಳವಣಿಗೆಯಲ್ಲಿ ಸದಾ ಮುತುವರ್ಜಿ ವಹಿಸುವ ಗುಣವನ್ನು ಹೊಂದಿರುವುದಿರಂದಲೇ ಇಂದು ಮುಂಬೈಯಲ್ಲಿ ಮಹತ್ವದ ಕೃತಿಗಳು ಬೆಳಕು ಕಾಣುತ್ತಿವೆ. ರವಿತೇಜ ಇದು ವ್ಯಕ್ತಿಯ ಆರಾಧನೆಯ ಪ್ರವೃತ್ತಿಯಿಂದ ಹುಟ್ಟಿದ್ದಲ್ಲ. ಉದ್ಯಮಿ, ಸಂಘಟಕ, ಸಮಾಜಸೇವಕ ರವಿ ಶೆಟ್ಟಿ ಉದಾರತೆ, ಸಮಾಜಮುಖಿ ಚಿಂತನೆಗಳು, ನಡೆ-ನುಡಿಗಳು ಮಾರ್ಗದರ್ಶಿಯಾಗಿರಲಿ ಎಂಬ ಮನೋವೃತ್ತಿಯಿಂದ ರಚಿಸಲಾಗಿದೆ. ಅವರ ಸಿದ್ಧಿ-ಸಾಧನೆಗಳನ್ನು, ಜೀವನದ ಯೆಶೋಗಾಥೆಯನ್ನು ಈ ಕೃತಿಯಲ್ಲಿ ಪಡಿಮೂಡಿಸಲಾಗಿದೆ ಎಂದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಘಟಕರು, ಉದ್ಯಮಿ ಸರ್ವೋತ್ತಮ ಶೆಟ್ಟಿ ಅವರು ಡಾ| ರವಿ ಶೆಟ್ಟಿ ಮೂಡಂಬೈಲು ಅವರು ಇಂಗ್ಲೀಷ್‍ಗೆ ಅನುವಾದಿಸಿದ 101 ಸುಭಾಷಿತಗಳು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಕತಾರ್, ಓಮನ್, ಯು.ಎ.ಇ ಯಂತಹ ಆರು ದೇಶಗಳಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಅಂದರೆ ಅದು ರವಿ ಶೆಟ್ಟಿ ಅವರದು. ಯಾಕೆಂದರೆ ಅವರು ಮಾಡುವ ಯಾವ ಕೆಲಸದಲ್ಲಿಯೂ ಸ್ವಾರ್ಥವಿರುವುದಿಲ್ಲ. ಅಲ್ಲಿ ಇರುವುದು ಪ್ರೀತಿ ಮಾತ್ರ. ತಾಯಿಯನ್ನು ಅಪಾರವಾಗಿ ಪ್ರೀತಿಸುವ, ಗೌರವಿಸುವ ರವಿ ಶೆಟ್ಟಿ ಅವರು ಎಲ್ಲ ವಿಷಯದಲ್ಲಿಯೂ ಮಾದರಿಯಾಗಿದ್ದಾರೆ. ಅರಬ್ ರಾಷ್ಟ್ಯದಲ್ಲೂ ತುಳು, ಕನ್ನಡವನ್ನು ಬೆಳೆಸುವಲ್ಲಿ ಅವರ ಪಾತ್ರ ಮಹತ್ತರವಾಗಿದೆ. ಅರಬ್ ರಾಷ್ಟ್ರದಲ್ಲಿ ಬಂಟ ಬಾಂಧವರನ್ನು , ತುಳು-ಕನ್ನಡಿಗರನ್ನು ಒಗ್ಗೂಡಿಸಿದ ಶ್ರೇಯಸ್ಸು ಅವರಿಗಿದೆ. ಅವರ ದಾನ-ಧರ್ಮಗಳಿಂದ ಇಂದು ಊರಿನ ಅದೆಷ್ಟೋ ದೈವಸ್ಥಾನ, ಮಂದಿರ, ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯನ್ನು ಕಂಡಿವೆ. ನೆಲೆಯಿಲ್ಲದವರ ಬಾಳಿಗೆ ಬೆಳಕಾದ ಅವರ ಸಾಧನೆಯನ್ನು ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಗುರುತಿಸಿರುವುದಕ್ಕೆ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರನ್ನು , ಪೂರ್ಣಿಮಾ ಶೆಟ್ಟಿ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದು ರವಿ ಶೆಟ್ಟಿ ಅವರ ಸಾಧನೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು, ಸಣ್ಣ ಹಳ್ಳಿಯಿಂದ ಹೋದ ರವಿ ಶೆಟ್ಟಿ ಅವರು ಪ್ರಚಾರಕ್ಕಾಗಿ ಏನನ್ನೂ ಮಾಡಿದವರಲ್ಲ. ದೇವಸ್ಥಾನಗಳ ಜೀರ್ಣೋದ್ಧಾರವನ್ನು ಮಾಡುವುದರ ಮೂಲಕ, ಅನೇಕ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಮುಖೇನ ಜನಮಾನಸದಲ್ಲಿ ಪ್ರೀತಿಗೆ ಪಾತ್ರರಾಗಿದ್ದಾರೆ. ಉದ್ಯಮದ ಮೂಲಕ 2000 ಕ್ಕೂ ಅಧಿಕ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಅವರ ಸಾಧನೆಗೆ ಪದ್ಮಭೂಷಣ, ಪದ್ಮಶ್ರೀ ಒಲಿದು ಬರಲಿ ಎಂದು ಹಾರೈಸಿದರು. ಅವರ ಸಾಧನೆಗಳನ್ನು ಚಿತ್ರಿಸುವ ಕೆಲಸ ಮಾಡಿದ ಪೂರ್ಣಿಮಾ ಶೆಟ್ಟಿ ಹಾಗೂ ಮಿಥಾಲಿ ರೈ ಅವರ ಕೆಲಸ ಅರ್ಥಪೂರ್ಣವಾಗಿದೆ ಎಂದು ನುಡಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ತುಕರಾಮ ಪೂಜಾರಿ ಅವರು ಮಾತನಾಡಿ, ಒಬ್ಬ ವ್ಯಕ್ತಿ ನಮ್ಮ ಹೃದಯದಲ್ಲಿ ಸ್ಥಾನ ಪಡೆದುಕೊಳ್ಳ ಬೇಕಾದರೆ ಅವರ ವ್ಯಕ್ತಿತ್ವ ಆ ರೀತಿಯದ್ದಾಗಿರಬೇಕು. ನಾನು ಕಂಡು ಕೊಂಡ ಹಾಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸಾಧನೆ ಮಾಡಿರುವ ರವಿ ಶೆಟ್ಟಿ ಅವರ ವ್ಯಕ್ತಿತ್ವ ಅಂತಹದು ಎಂದು ಭಾವಿಸುತ್ತೇನೆ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಅವರು ಮಾತನಾಡಿ, ರವಿ ಶೆಟ್ಟಿ ಅವರಿಗೆ ಎಳವೆಯಿಂದಲೇ ಕನ್ನಡದ ಬಗ್ಗೆ ವಿಶೇಷ ಅಭಿಮಾನ. ಅವರು ಕಲಿಕೆಯಲ್ಲಿಯೂ ಮುಂದು, ಆಟೋಟದಲ್ಲಿಯೂ ಮುಂದೆ ಇದ್ದವರು. ಇಂದಿನ ದಿನಗಳಲ್ಲಿ ಅವರು ಬೆಳೆದ ರೀತಿ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಅವರೆಷ್ಟು ಎತ್ತರಕ್ಕೇರಿದರೂ ತನ್ನ ಗುರುಗಳ ಮೇಲೆ ಇಟ್ಟಿರುವ ಅನನ್ಯ ಭಕ್ತಿಗೆ ಮೆಚ್ಚಲೇ ಬೇಕು. ಒಬ್ಬ ಒಳ್ಳೆಯ ಶಿಷ್ಯ ಸಿಗುವುದೂ ಧನ್ಯತೆಯ ಭಾವವನ್ನು ಮೂಡಿಸಿದೆ. ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯದಿಂದ ಅವರ ಸಾಧನೆಯ ಕೃತಿ ಬೆಳಕು ಕಂಡಿರುವುದು ಅಭಿನಂದನೀಯ ಎಂದರು.
ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯದ ಗೌರವವನ್ನು ಸ್ವೀಕರಿಸಿ ಮಾತನಾಡಿದ ರವಿ ಶೆಟ್ಟಿ ಅವರು ಕನ್ನಡ ವಿಭಾಗ ಮುಂಬೈ ವಿವಿ ನನ್ನನ್ನು ಗುರುತಿಸಿ ರವಿತೇಜ ಕೃತಿಯನ್ನು ಪ್ರಕಟಿಸಿರುವುದು ನನ್ನ ಸೌಭಾಗ್ಯ. ಗಳಿಸಿದ ಅಲ್ಪಾಂಶವನ್ನು ಸಮಾಜಕ್ಕಾಗಿ ವಿನಿಯೋಗಿಸಬೇಕೆಂದು ತಿಳಿದುಕೊಂಡು ಅದರಂತೆ ನಡೆದವನು ನಾನು. ಈ ಸಂದರ್ಭದಲ್ಲಿ ನನ್ನ ಮನೆಯವರು, ಸ್ನೇಹಿತರು, ಹಿತೈಷಿಗಳ ಪೆÇ್ರೀತ್ಸಾಹ ನನಗೆ ಶ್ರೀರಕ್ಷೆಯಾಗಿದೆ. ಕತಾರ್ ನನ್ನ ಕರ್ಮಭೂಮಿಯಾಗಿದ್ದು ಅಲ್ಲಿನವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಈ ಕೃತಿಯನ್ನು ರಚಿಸಿದ ಡಾ.ಪೂರ್ಣಿಮಾ ಶೆಟ್ಟಿ ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಅದರಂತೆ ಮಿಥಾಲಿ ರೈ ಅವರ ಶ್ರಮವನ್ನು ಎಂದಿಗೂ ಮರೆಯಲಾಗದು. ಇವರಿಬ್ಬರಿಗೂ ನಾನು ಆಭಾರಿಯಾಗಿದ್ದೇನೆ. ಎಲ್ಲ ರೀತಿಯ ಸಹಕಾರವನ್ನು ನೀಡಿದ ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರಿಗೆ ನಾನು ಋಣಿಯಾಗಿದ್ದೇನೆ. ಪೆÇ್ರ. ವಿವೇಕ್ ರೈ ಅವರ ಸಹಕಾರ, ಸಲಹೆ ನನಗೆ ಮಾರ್ಗದರ್ಶಿಯಾಗಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಗೌರವ ಇದೇ ರೀತಿಯಲ್ಲಿರಲಿ ಎಂದು ನುಡಿದರು.ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಅವರಿಗೆ ಕೃತಿಯ ಮೊದಲ ಪ್ರತಿಯನ್ನಿತ್ತು ಗೌರವಿಸಲಾಯಿತು. ಹಾಗೂ ರವಿತೇಜ ಕನ್ನಡ ಕೃತಿಕಾರಾದ ಡಾ| ಪೂರ್ಣಿಮಾ ಎಸ್. ಶೆಟ್ಟಿ ಮತ್ತು ಇಂಗ್ಲೀಷ್ ಅನುವಾದಕಿ, ನಿವೃತ್ತ ಪ್ರಾಂಶುಪಾಲೆ ಮಿಥಾಲಿ ಪ್ರಸನ್ನ ರೈ ಅವರನ್ನು ಗೌರವಿಸಲಾಯಿತು. ಕನ್ನಡ ವಿಭಾಗ ಮುಂಬೈ ವಿವಿಯಿಂದ ಡಾ| ರವಿ ಶೆಟ್ಟಿ ಮೂಡಂಬೈಲು ಅವರನ್ನು ಅಭಿನಂದಿಸಲಾಯಿತು. ಐಲೇಸಾ ತಂಡದ ಸಾರಥಿ, ಪ್ರಸಿದ್ಧ ಗಾಯಕ ಡಾ| ರಮೇಶ್ಚಂದ್ರ ತಂಡದವರಿಂದ ಗಾನ ಸೌರಭ ನಡೆಯಿತು.
ಮೂರು ಕೃತಿಗಳನ್ನು ಗಾಯಕ ರಮೇಶ್ಚಂದ್ರ ಅವರ ಪ್ರಾರ್ಥನೆ, ಚೆಂಡೆವಾದನದೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ತರಲಾಯಿತು. ವೇದಿಕೆಯಲ್ಲಿ ಡಾ| ರವಿ ಶೆಟ್ಟಿ ಅವರ ತಾಯಿ ಸರೋಜಿನಿ ಶೆಟ್ಟಿ, ಪತ್ನಿ ಜ್ಯೋತಿ ಶೆಟ್ಟಿ ಅವರು ಉಪಸ್ಥಿತರಿದ್ದರು. ಐಲೇಸಾದ ಕವಿ ಶಾಂತಾರಾಮ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ರವಿ ಶೆಟ್ಟಿ ಅವರ ಧರ್ಮಪತ್ನಿ ಜ್ಯೋತಿ ಶೆಟ್ಟಿ ಅವರು ಅತಿಥಿಗಳನ್ನು ಹೂಗುಚ್ಛ ನೀಡಿ ಗೌರವಿಸಿದರು. ಮಿಥಾಲಿ ಪ್ರಸನ್ನ ರೈ ಅವರು ತಮ್ಮ ಅನುವಾದಿತ ಕೃತಿಯ ಬಗ್ಗೆ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಐ ಲೇಸಾ ಸಂಸ್ಥೆಯ ಮುಂಬೈ ರೂವಾರಿ, ಡಬ್ಬಿಂಗ್ ಕಲಾವಿದ ಸುರೇಂದ್ರ ಮಾರ್ನಾಡ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ದೇಶ, ವಿದೇಶದ ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − one =
Remember me
