ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ತವರು ಜಿಲ್ಲೆ ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ಕೆಲ ದಿನಗಳಿಂದ ಕನ್ನಡ ಹಾಗೂ ಮರಾಠಿ ಕಾರ್ಯಕರ್ತರ ನಡುವೆ ಉದ್ವಿಗ್ನತೆಗೆ ಕಾರಣವಾಗಿದ್ದ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರ ಶುಕ್ರವಾರ ಸಂಘರ್ಷ ಹಾಗೂ ಸಂಧಾನದ ಬಳಿಕ ಸುಖಾಂತ್ಯ ಕಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆಯಂತೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಎಡಿಜಿಪಿ ಅಮರ್ ಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.
ಶುಕ್ರವಾರ ಸಂಜೆ ಕನ್ನಡ ಸಂಘಟನೆಗಳ 25 ಮುಖಂಡರು, ಎಂಇಎಸ್, ಶಿವಸೇನೆಯ 25 ಮಂದಿ ಹಾಗೂ ಸ್ಥಳೀಯ ಮುಖಂಡರೊಂದಿಗೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಪೀರನವಾಡಿಯಲ್ಲಿ ಗುರುವಾರ ರಾತ್ರೋರಾತ್ರಿ ಪ್ರತಿಷ್ಠಾಪನೆಗೊಂಡ ರಾಯಣ್ಣನ ಪ್ರತಿಮೆ ಯಥಾಸ್ಥಿತಿ ಕಾಪಾಡಲು ಹಾಗೂ ಆ ವೃತ್ತಕ್ಕೆ ಛತ್ರಪತಿ ಶಿವಾಜಿ ಹೆಸರು ನಾಮಕರಣ ಮಾಡಲು ಒಮ್ಮತಕ್ಕೆ ಬರಲಾಯಿತು. ಸರ್ಕಾರ ಈ ಕುರಿತು ನೋಟಿಫಿಕೇಷನ್ ಹೊರಡಿಸಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಪೀರನವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-4ಎ ಕ್ರಾಸ್​ನಲ್ಲಿ ಗುರುವಾರ ಮಧ್ಯರಾತ್ರಿ ಕನ್ನಡಪರ ಸಂಘಟನೆಗಳು ಹಾಗೂ ರಾಯಣ್ಣನ ಅಭಿಮಾನಿಗಳು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಶುಕ್ರವಾರ ಬೆಳಗ್ಗೆ ಮರಾಠಾ ಸಮಾಜದವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದರು. ಅದೇ ಸ್ಥಳದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನೂ ಪ್ರತಿಷ್ಠಾಪಿಸಲು ಕೆಲ ಯುವಕರು ಯತ್ನಿಸಿದರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.
ರಾಯಣ್ಣ ಪ್ರತಿಮೆ ವಿರುದ್ಧ ಮರಾಠಾ ಸಂಘಟನೆಗಳು ಪ್ರತಿಭಟನೆಗೆ ಮುಂದಾದರೆ, ಕನ್ನಡ ಸಂಘಟನೆಗಳು ಬೈಕ್ ರ‍್ಯಾಲಿ ಮೂಲಕ ಸಂಭ್ರಮ ಆಚರಿಸಲು ಮುಂದಾದರು. ಪರಿಸ್ಥಿತಿ ಕೈಮೀರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಪ್ರಹಾರ ನಡೆಸಿ, ಜನರನ್ನು ಚದುರಿಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಏನಿದು ವಿವಾದ ?:ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಜನ್ಮದಿನವಾದ ಆಗಸ್ಟ್ 15ರಂದು ಅಭಿಮಾನಿಗಳು ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದರು. ಆದರೆ, ಅದನ್ನು ತೆರವುಗೊಳಿಸಲಾಗಿತ್ತು. ಹೀಗಾಗಿ ಕನ್ನಡ ಮತ್ತು ಮರಾಠಿ ಸಂಘಟನೆಗಳ ನಡುವೆ ಗಲಾಟೆ, ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ರಾಯಣ್ಣ ಪ್ರತಿಮೆ ಮರು ಪ್ರತಿಷ್ಠಾಪಿಸುವಂತೆ ಸ್ವಯಂಪ್ರೇರಣೆಯಿಂದ ಗುರುವಾರ ‘ಬೆಳಗಾವಿ ಚಲೋ’ ರ‍್ಯಾಲಿ ನಡೆದಿತ್ತು. ಸ್ಥಳೀಯ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಿಂದ ಬೃಹತ್ ರ‍್ಯಾಲಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ನೀಡಲಾಗಿತ್ತು. ಆಗಸ್ಟ್ 30ರ ಒಳಗೆ ಪೀರನವಾಡಿಯಲ್ಲಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಗಡುವು ನೀಡಲಾಗಿತ್ತು.
ರಾಜಕಾರಣಿಗಳ ಸ್ವಾರ್ಥ ಆರೋಪ:ರಾಯಣ್ಣ ಪ್ರತಿಮೆಗೆ ನಮ್ಮ ವಿರೋಧ ಇಲ್ಲ. ಆದರೆ, ಶಿವಾಜಿ ಮಹಾರಾಜರ ಮೂರ್ತಿಗೆ ನಿಗದಿಪಡಿಸಿದ ಸ್ಥಳದಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವುದಕ್ಕೆ ವಿರೋಧವಿದೆ ಎಂದು ಮರಾಠಾ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ. ಈಗಾಗಲೇ ಈ ಕ್ರಾಸ್​ಗೆ ‘ಶಿವಾಜಿ ಚೌಕ್’ ಪೀರನವಾಡಿ ಎಂದು ನಾಮಕರಣ ಮಾಡಲಾಗಿದೆ. ಆದರೂ ಕೆಲ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಸ್ವಾರ್ಥ ಸಾಧನೆಗೆ ಗಲಾಟೆ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.
ಪ್ರತಿಷ್ಠಾಪನೆ ಸಮರ್ಥನೆ:ಪೀರನವಾಡಿ ರಾಷ್ಟ್ರೀಯ ಹೆದ್ದಾರಿ-4ಎ ಕ್ರಾಸ್​ನಲ್ಲಿಯೇ ರಾಯಣ್ಣ ಮೂರ್ತಿ ಸ್ಥಾಪನೆ ಆಗಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನಾವೇ ಗುರುವಾರ ಮಧ್ಯರಾತ್ರಿ ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ರಾಯಣ್ಣ ಅಭಿಮಾನಿಗಳು ತಿಳಿಸಿದ್ದಾರೆ.
150 ಜನರ ವಿರುದ್ಧ ಪ್ರಕರಣ:ಮೂರ್ತಿ ಪ್ರತಿಷ್ಠಾಪನೆ ಬಳಿಕ ಪೀರನವಾಡಿಯಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ. ರಾಯಣ್ಣ ಪ್ರತಿಮೆ ಜಾಗದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದಡಿ ಕನ್ನಡ ಸಂಘಟನೆಗಳು ಹಾಗೂ ಮರಾಠಾ ಸಮುದಾಯದ 150ಕ್ಕೂ ಹೆಚ್ಚು ಜನರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಯಣ್ಣ ಪ್ರತಿಮೆ ವಿವಾದ ವಿಚಾರವಾಗಿ ಅಧಿಕಾರಿಗಳ ಜತೆ ಈಗಾಗಲೇ ರ್ಚಚಿಸಿ, ಸೂಚನೆ ಕೊಟ್ಟಿದ್ದೇನೆ. ಈಗ ಪರಿಸ್ಥಿತಿ ಶಾಂತವಾಗಿದೆ. ಮರಾಠಿಗರು, ಕನ್ನಡಿಗರು ಎಂದು ಯಾವುದೇ ಭೇದಭಾವಕ್ಕೆ ಅವಕಾಶ ಕೊಡುವುದಿಲ್ಲ.– ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ.
ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ದೇಶದ ಆಸ್ತಿ. ಅವರನ್ನು ಜಾತಿಗೆ ಸೀಮಿತ ಮಾಡುವುದಿಲ್ಲ. ರಾಯಣ್ಣ ಅಭಿಮಾನಿಗಳ ಮೇಲೆ ಚಪ್ಪಲಿ ಎಸೆದಿದ್ದಾರೆ ಎನ್ನುವುದು ಸುಳ್ಳು. ಪೀರನವಾಡಿಯಲ್ಲಿ ಪರಿಸ್ಥಿತಿ ಸದ್ಯ ಹತೋಟಿಯಲ್ಲಿದೆ.| ರಮೇಶ ಜಾರಕಿಹೊಳಿ, ಉಸ್ತುವಾರಿ ಸಚಿವ, ಬೆಳಗಾವಿ
ಫ್ಯೂಯೆಲ್ ಇಕಾನಮಿಯ ಸ್ಟೈಲಿಶ್​ ಕಿಯಾ ಸೋನೆಟ್​ ಬುಕ್ಕಿಂಗ್ ಶುರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × one =
Remember me
