ಬೆಂಗಳೂರು:ಸರ್ಕಾರ ಬದಲಾಯಿತೆಂದು ಬರೋಬ್ಬರಿ 50 ಸಾವಿರ ಉದ್ಯೋಕಾಂಕ್ಷಿಗಳು ಮತ್ತೆ ಪರೀಕ್ಷೆ ಬರೆಯಬೇಕಾದ ವಿಚಿತ್ರ ಪ್ರಸಂಗವೊಂದು ನಡೆದಿದ್ದು, ಲೋಕೋಪಯೋಗಿ ಸಚಿವರ ಒಣ ಹಠ ಈಗ ಚರ್ಚೆಗೆ ಗ್ರಾಸವಾಗಿದೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ನೇಮಕ ವಿಚಾರದಲ್ಲಿ ಮೈತ್ರಿ ಸರ್ಕಾರದ ತೀರ್ವನವನ್ನು ಬದಲಾದ ಸರ್ಕಾರ ತಡೆ ಹಿಡಿದು, ಹೊಸದಾಗಿ ನೇಮಕ ಪ್ರಕ್ರಿಯೆ ಆರಂಭಿಸಿದೆ. ಹಿಂದಿನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಹಾಲಿ ಸಚಿವರು ಹೇಳಿದರೂ, ಅದರ ತನಿಖೆ ಮಾತ್ರ ನಡೆಸಿಲ್ಲ, ಯಾರ ಮೇಲೂ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂಬುದು ಸೋಜಿಗ ಸಂಗತಿ.
570 ಸಹಾಯಕ ಅಭಿಯಂತರ, 300 ಕಿರಿಯ ಅಭಿಯಂತರ ಹುದ್ದೆಗೆ ವಿಶೇಷ ನೇರ ನೇಮಕಕ್ಕೆ 2019ರ ಮಾರ್ಚ್​ನಲ್ಲಿ ಅರ್ಜಿ ಕರೆಯಲಾಗಿತ್ತು. 2019 ಜೂನ್ 22ರಿಂದ 24ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆಯೂ ನಡೆಯಿತು. ಸಾವಿರಾರು ಅಭ್ಯರ್ಥಿಗಳು ಶುಲ್ಕ ತೆತ್ತರು. ಬರೋಬ್ಬರಿ 50 ಸಾವಿರ ಮಂದಿ ಪರೀಕ್ಷೆಯನ್ನೂ ಎದುರಿಸಿದ್ದರು. ಇಷ್ಟರಲ್ಲಿ ರಾಜಕೀಯ ಬೆಳವಣಿಗೆಯಿಂದ ಸರ್ಕಾರ ಬದಲಾಯಿತು. ಹೊಸ ಸಚಿವರು ಬರುತ್ತಿದ್ದಂತೆ ಅಕ್ರಮದ ನೆಪವೊಡ್ಡಿ ನೇಮಕಾತಿ ಪ್ರಕ್ರಿಯೆಗೆ ತಡೆಯೊಡ್ಡಿದರು. 2019ರ ಅಕ್ಟೋಬರ್​ನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಹಳೆಯ ಪರೀಕ್ಷೆ ರದ್ದು ಮಾಡಿ, ಕೆಪಿಎಸ್​ಸಿಗೆ ಮರುಪರೀಕ್ಷೆ ನಡೆಸಲು ಆದೇಶಿಸುವ ತೀರ್ಮಾನ ಮಾಡಿದರು. ಈ ನಡುವೆ ಆಕಾಂಕ್ಷಿಗಳೆಲ್ಲ ಮುಖ್ಯಮಂತ್ರಿ ಭೇಟಿ ಮಾಡಿ, ಹಳೆಯ ಪರೀಕ್ಷೆಯನ್ನೇ ಪರಿಗಣಿಸುವಂತೆ ಮನವಿ ಮಾಡಿದರು. ಆದರೆ, ಹಠಕ್ಕೆ ಬಿದ್ದ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಮ್ಮ ನಿಲುವಿಗೆ ಅಂಟಿಕೊಂಡರು. ತಾಳ್ಮೆಕೆಟ್ಟ ಅಭ್ಯರ್ಥಿ ಗಳು ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ‘ಬಾಬರ್ ಫರ್ವನು ಹೊರಡಿಸಿದಂತೆ ಈ ರೀತಿ ಆದೇಶ ಮಾಡುತ್ತೀರಿ’ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಕೆಎಟಿಗೆ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಹೇಳಿ ಕಳಿಸಿದರು. ಕೆಎಟಿ ಡಿ.19ರಂದು ಸರ್ಕಾರದ ತೀರ್ವನಕ್ಕೆ ತಡೆಯಾಜ್ಞೆ ನೀಡಿತು. ಈ ನಡುವೆ ಅಡ್ಡ ದಾರಿ ಹಿಡಿದ ಸರ್ಕಾರ, ಹಳೇ ನೇಮಕ ಆದೇಶವನ್ನೇ ತಡೆಹಿಡಿದು 2020 ಫೆ.10ರಂದು ಹೊಸದಾಗಿ ಕರಡು ಪ್ರಕಟಿಸಿದೆ. ಹಳೇ ಹುದ್ದೆ ಸಂಖ್ಯೆ ಜತೆ 55 ಹುದ್ದೆ ಹೆಚ್ಚಿಸಿ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿಕೊಂಡಿದೆ. ಇದಕ್ಕೆ 350ಕ್ಕೂ ಹೆಚ್ಚು ಮಂದಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಮಾತ್ರ ಹಠಕ್ಕೆ ಬಿದ್ದು, ಕೆಪಿಎಸ್​ಸಿ ಮೂಲಕ ಹೊಸದಾಗಿ ನೇಮಕ ಪ್ರಕ್ರಿಯೆ ನಡೆಸಿಯೇ ತೀರಬೇಕೆಂದು ಹೊರಟಿದೆ.
ಏಕೀ ತೀರ್ಮಾನ?:ಇಷ್ಟೊಂದು ಹುದ್ದೆ ನೇಮಕದ ಕ್ರೆಡಿಟ್ ನಿಕಟಪೂರ್ವ ಸಚಿವ ಎಚ್.ಡಿ.ರೇವಣ್ಣ ಪಾಲಾಗುತ್ತದೆಂಬ ಕಾರಣಕ್ಕೆ ಈ ಸರ್ಕಾರ ಹೀಗೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕೆಪಿಎಸ್​ಸಿ ಪರಿಸ್ಥಿತಿ ಯಾವ ರೀತಿ ಇದೆ ಎಂದು ಗೊತ್ತಿದ್ದೂ ಮತ್ತೆ ಅದೇ ಸಂಸ್ಥೆಗೆ ಪರೀಕ್ಷೆ ನಡೆಸುವ ಜವಾಬ್ದಾರಿ ವಹಿಸಿದ್ದಕ್ಕೆ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಕೆಪಿಎಸ್​ಸಿ ಅರ್ಜಿ ಕರೆಯುವುದು ಯಾವಾಗ? ಪರೀಕ್ಷೆ ನಡೆಸುವುದು ಯಾವಾಗ? ಎಂಬುದು ಅನಿಶ್ಚಿತತೆ ಯಾಗಿದೆ ಎಂದು ಆಕಾಂಕ್ಷಿಗಳು ಕಳವಳ ವ್ಯಕ್ತಪಡಿಸುತ್ತಾರೆ.
ಸಚಿವರಿಗೆ ಪಂಚ ಪ್ರಶ್ನೆಗಳು
1. ಕೆಇಎ ನಡೆಸಿದ ಪರೀಕ್ಷೆಯಲ್ಲಿ ಅಕ್ರಮವಾಗಿತ್ತೇ? ಹಾಗಿದ್ದರೆ, ಯಾರ ಮೇಲೆ ಕ್ರಮ ಕೈಗೊಂಡಿದ್ದೀರಿ?
2. ಸಿಇಟಿ ನಡೆಸುವ ಕೆಇಎ ಪರೀಕ್ಷಾ ವ್ಯವಸ್ಥೆ ದೇಶಕ್ಕೆ ಮಾದರಿ, ಅದರ ಮೇಲೆ ನಿಮ್ಮ ಅನುಮಾನವೇ?
3. 50 ಸಾವಿರ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಕಟ್ಟಿದ್ದಾರೆ. ಅವರ ಶುಲ್ಕ ಹಿಂತಿರುಗಿಸಲಾಗುತ್ತದೆಯೇ?
4. ಅಕ್ರಮ ನಡೆದಿದೆ ಎಂದು ಹೇಳಿ ಕೈಕಟ್ಟಿ ಕುಳಿತುಕೊಂಡರೆ ಜವಾಬ್ದಾರಿಯಿಂದ ನುಣುಚಿಕೊಂಡಂತಲ್ಲವೇ?
5. ನೇಮಕದಲ್ಲಿ ನಿಮ್ಮ ಅತ್ಯಾಸಕ್ತಿಯಿಂದ ವಿಶೇಷ ನೇಮಕದ ಉದ್ದೇಶವೇ ಹಳ್ಳ ಹಿಡಿದಂತಾಯಿತಲ್ಲವೇ?
ಸರ್ಕಾರ ಈ ಹಿಂದೆ ನಡೆಸಿದ ಪರೀಕ್ಷೆಯಂತೇ ನೇಮಕ ಮಾಡಿಕೊಳ್ಳಲಿ. ಹೆಚ್ಚುವರಿ 50 ಹುದ್ದೆಗೆ ಪ್ರತ್ಯೇಕ ನೇಮಕ ಮಾಡಲಿ. ನಮ್ಮ ಶ್ರಮವನ್ನು ನಷ್ಟ ಮಾಡುವುದು ಎಷ್ಟು ಸರಿ?
| ನೊಂದ ಅಭ್ಯರ್ಥಿ
| ಶ್ರೀಕಾಂತ್ ಭಟ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 4 =
Remember me
