ಬೆಂಗಳೂರು:ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ರೂಪಾಯಿ ಬಿಟ್ ಕಾಯಿನ್ ಪ್ರಕರಣವೂ ಸೇರಿ ಹಿಂದಿನ ಸರ್ಕಾರದ ಹಲವು ಹಗರಣಗಳ ತನಿಖೆಗೆ ಸರ್ಕಾರ ಎಸ್​ಐಟಿ ರಚನೆ ಸೇರಿ ಕಾನೂನಾತ್ಮಕ ಆದೇಶಗಳನ್ನು ಸೋಮವಾರ ಹೊರಡಿಸಿದೆ. 545 ಎಸ್​ಐ ನೇಮಕಾತಿ ಹಗರಣ, ನಾಲ್ಕು ವೈದ್ಯ ಕಾಲೇಜು ನಿರ್ಮಾಣ ಕಾಮಗಾರಿ, ನೀರಾವರಿ ಯೋಜನೆಗಳಲ್ಲಿ ಅಕ್ರಮ ಮತ್ತು ಶೇ.40 ಕಮಿಷನ್ ಆರೋಪಗಳು ತನಿಖೆಗೆ ಒಳಗಾಗಲಿವೆ.
ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಭಾಗಿಯಾಗಿರುವ ಬಿಟ್ ಕಾಯಿನ್ ಪ್ರಕರಣದ ಮರುತನಿಖೆಗೆ ಸಿಐಡಿ ಎಡಿಜಿಪಿ ಮನೀಶ್ ಖರ್ಭೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಲಾಗಿದೆ.
ಡಿಐಜಿ ಡಾ.ಕೆ.ವಂಶಿಕೃಷ್ಣ, ಡಿಸಿಪಿ ಅನೂಪ್ ಶೆಟ್ಟಿ ಹಾಗೂ ಎಸ್​ಪಿ ಶರತ್ ಈ ತಂಡದಲ್ಲಿದ್ದಾರೆ. ಈ ಪ್ರಕರಣದಲ್ಲಿ ಹಲವು ರಾಜಕಾರಣಿಗಳು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇಷ್ಟು ದಿನ ನಿರಾಳವಾಗಿದ್ದವರಿಗೆ ಈಗ ಮತ್ತೆ ನಡುಕ ಶುರುವಾಗಿದೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಜಾಲಗಳು ಭಾಗಿಯಾರುವ ಸಾಧ್ಯತೆಗಳಿವೆ. ಆರೋಪಿಗಳು ಸೈಬರ್ ವಿಷಯಗಳ ಪರಿಣತರಾಗಿದ್ದು, ಬಿಟ್ ಕಾಯಿನ್ ಮತ್ತು ಡಾರ್ಕ್ ನೆಟ್​ಗಳಲ್ಲಿ ವ್ಯವಹಾರ ಮಾಡಿರುವ ಮಾಹಿತಿ ಇದೆ.
ಈ ಎಲ್ಲ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲು ವಿಸõತ ತನಿಖೆ ನಡೆಸಬೇಕಿದೆ. ಹೀಗಾಗಿ ಹೆಚ್ಚಿನ ತಾಂತ್ರಿಕ ಪರಿಣತಿ ಇರುವ ವಿಶೇಷ ತನಿಖಾ ತಂಡದ ಅವಶ್ಯಕತೆ ಇರುವುದರಿಂದ ಸಿಐಡಿ ಅಧೀನದಲ್ಲಿ ಎಸ್​ಐಟಿಯನ್ನು ರಚಿಸುವುದು ಸೂಕ್ತ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಪ್ರಕರಣವನ್ನು ಈ ಹಿಂದೆ ಸಿಸಿಬಿ ತನಿಖೆ ಮಾಡಿತ್ತು. ತನಿಖೆಯಲ್ಲಿ ಹಗರಣ ಸಾಬೀತಾಗಿತ್ತು. ಪ್ರಕರಣದಲ್ಲಿ ಹಲವು ಬಿಜೆಪಿ ನಾಯಕರ ಕೈವಾಡವಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿ ಉನ್ನತಮಟ್ಟದ ತನಿಖೆಗೆ ಆಗ್ರಹಿಸಿತ್ತು.
ಆರೋಪಿಗಳು 2019ರಲ್ಲಿ ರಾಜ್ಯ ಸರ್ಕಾರದ ಇ-ಪೋರ್ಟಲ್ ಮತ್ತು ವೆಬ್​ಸೈಟ್ ಅನ್ನು ಹ್ಯಾಕ್ ಮಾಡಿ 11.5 ಕೋಟಿ ರೂ. ದೋಚಿದ್ದರು. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಏನಿದು ಪ್ರಕರಣ?:2020ರಲ್ಲಿ ಬಿಟ್ ಕಾಯಿನ್ ಹಗರಣ ಸಂಬಂಧ ಬೆಂಗಳೂರಿನ ಕಾಟನ್​ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶ್ರೀಕಿ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಮತ್ತು ಜಾಲತಾಣ ಹ್ಯಾಕ್ ಮಾಡಿ 46 ಕೋಟಿ ರೂ. ದೋಚಿದ್ದ ಸಂಗತಿ ತನಿಖೆಯಲ್ಲಿ ಪತ್ತೆಯಾಗಿತ್ತು. ಜತೆಗೆ, ಶ್ರೀಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದ ಬಿಟ್ ಕಾಯಿನ್ ದಂಧೆ ಬೆಳಕಿಗೆ ಬಂದಿತ್ತು. ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಸಿಸಿಬಿ ಪೊಲೀಸರು ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರೆಂದು ದೂರು ಕೇಳಿಬಂದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಸಿಐಡಿ ಪೊಲೀಸರು ತನಿಖೆ ನಡೆಸಿದ್ದರು.
ಎಫ್​ಎಸ್​ಎಲ್ ಪರಿಶೀಲನೆಗೆ ಒಪ್ಪಿಸಿರಲಿಲ್ಲ:ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಶ್ರೀಕಿ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ವಿಚಾರ ಬಳಿಕ ಗೊತ್ತಾಗಿತ್ತು. ಶ್ರೀಕಿ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ 14 ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿ 1.44 ಕೋಟಿ ರೂ.ಗಳನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದರು. ಬಿಟ್ ಕಾಯಿನ್ ವರ್ಗಾವಣೆಗೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಿರುವುದು ಈ ವೇಳೆ ಗೊತ್ತಾಗಿತ್ತು. ಯಾರು, ಹೇಗೆ, ಯಾವಾಗ ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬುದರ ಪತ್ತೆಗೆ ವಿಧಿವಿಜ್ಞಾನ ತಜ್ಞರಿಂದ ವಿಶ್ಲೇಷಣೆ ನಡೆಸುವ ಅಗತ್ಯವಿದೆ ಎಂದು ಸಿಐಡಿ ಘಟಕದ ಅಧಿಕಾರಿಗಳು ಆಗ ವರದಿ ಕೊಟ್ಟಿದ್ದರು. ಆದರೆ, ವಿಧಿವಿಜ್ಞಾನ ತಜ್ಞರಿಗೆ ಪ್ರಕರಣವನ್ನು ಕೊಡಲೇ ಇಲ್ಲ.
ಪೊಲೀಸ್ ಕಮಿಷನರ್ ಪತ್ರ:ಬಿಟ್ ಕಾಯಿನ್ ಹಗರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ವಿಶೇಷ ತಂಡ ರಚಿಸಿ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಸಿಐಡಿ ಡಿಜಿಪಿ ಎಂ.ಎ.ಸಲೀಂ ಅವರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಪತ್ರ ಬರೆದಿದ್ದರು.
ಬಿಟ್ ಕಾಯಿನ್ ಪ್ರಕರಣ ಮರು ತನಿಖೆಗೆ ಅದೇಶಿಸಿದ್ದೇವೆ. ಸಿಐಡಿ ಅಧೀನದಲ್ಲಿ ಎಸ್​ಐಟಿ ರಚಿಸಲಾಗಿದೆ. ಆದರೆ, ತನಿಖೆ ನಿಗದಿತ ಸಮಯದಲ್ಲಿ ಮುಗಿಯಲಿದೆ ಎಂದು ಹೇಳಲು ಬರುವುದಿಲ್ಲ. ಮರು ತನಿಖೆಯ ಮೂಲಕ ಅದರ ಸತ್ಯಾಂಶ ಹೊರಗೆ ತರಲು ಆದೇಶ ಮಾಡಿದ್ದೇವೆ.
| ಡಾ. ಜಿ. ಪರಮೇಶ್ವರ್ ಗೃಹ ಸಚಿವ
ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ವಹಿಸಿದ್ದು ಒಳ್ಳೆಯದಾಯಿತು. ಯಾವುದೇ ರೂಪದಲ್ಲಿ ಆಗಲಿ ತನಿಖೆ ಮಾಡಲಿ.
| ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ನೀರಾವರಿಗೂ ಬಿಟ್​ಕಾಯಿನ್ ಲಿಂಕ್:ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದಿರುವ ನೀರಾವರಿ ಯೋಜನೆಗೂ ಮತ್ತು ಬಿಟ್ ಕಾಯಿನ್ ಹಗರಣಕ್ಕೂ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ಅದಕ್ಕಾಗಿ ಬಿಟ್ ಕಾಯಿನ್ ಜತೆಗೆ ನೀರಾವರಿ ಯೋಜನೆಗಳಲ್ಲಿ ನಡೆದಿರುವ ಅಕ್ರಮದ ಬಗ್ಗೆಯೂ ತನಿಖೆ ನಡೆಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
545 ಎಸ್​ಐ ನೇಮಕಾತಿ ಕೈಬಿಟ್ಟ ಆರೋಪಗಳ ತನಿಖೆ:545 ಪಿಎಸ್​ಐ ನೇಮಕಾತಿ ಹಗರಣ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈಗಾಗಲೇ ಸಿಐಡಿ ಅಧಿಕಾರಿಗಳ ತಂಡ ಎಸ್​ಐ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸಿ ಕೋರ್ಟ್​ಗೆ ಆರೋಪಪಟ್ಟಿ ಸಹ ಸಲ್ಲಿಸಿದೆ. ಇದರಲ್ಲಿ ಕೆಲ ಆರೋಪಗಳನ್ನು ಕೈಬಿಡಲಾಗಿತ್ತು. ಇದರ ತನಿಖೆಗೆ ಸೂಚಿಸಲಾಗಿದೆ. ಇದಲ್ಲದೆ, ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ಬಂಧಿತ ಎಡಿಜಿಪಿ ಅಮೃತ್ ಪೌಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೂ ಗ್ರೀನ್ ಸಿಗ್ನಲ್ ತೋರಿದೆ.
4 ಮೆಡಿಕಲ್ ಕಾಲೇಜು ಹಗರಣ:ರಾಜ್ಯದ ವಿವಿಧೆಡೆ ನಿರ್ವಿುಸಿರುವ ನಾಲ್ಕು ಸರ್ಕಾರಿ ಮೆಡಿಕಲ್ ಕಾಲೇಜುಗಳ ಕಾಮಗಾರಿಗೆ ಟೆಂಡರ್ ಕರೆಯದೆ ಹೆಚ್ಚುವರಿಯಾಗಿ 700 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳ ಒಳಗೊಂಡ ಸಮಿತಿ ರಚನೆಯಾಗಿದೆ.
ಶೇ.40 ಕಮಿಷನ್ ತನಿಖೆಗೆ ಅಸ್ತು:ಗುತ್ತಿಗೆದಾರರು ಮಾಡಿದ್ದ ಶೇ.40 ಕಮಿಷನ್ ಆರೋಪ ಸಂಬಂಧ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಮಂಗಳವಾರ ವಿಶೇಷ ತನಿಖಾ ತಂಡ ರಚನೆ ಆಗುವ ಎಲ್ಲ ಲಕ್ಷಣಗಳಿವೆ.
ಪಕ್ಷದ ಕಚೇರಿಯಲ್ಲಿ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ಮುಖಂಡ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
