| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಹಳ್ಳಿಗಳಲ್ಲಿ ನಾನಾ ರೀತಿಯ ಕಸರತ್ತು ನಡೆಯುತ್ತಿವೆ. ಈಗಾಗಲೇ ರಂಗೇರಿರುವ ಗ್ರಾಪಂ ಅಖಾಡಕ್ಕೆ ರಿಯಲ್ ಎಸ್ಟೇಟ್ ಉದ್ಯಮವೂ ಕಾಲಿಟ್ಟಿದ್ದು, ಉದ್ಯಮಿಗಳು ತಮ್ಮ ಪರ ಒಲವು ಹೊಂದಿರುವ ಅಭ್ಯರ್ಥಿಗಳ ಗೆಲುವಿಗೆ ಹಣದ ಹೊಳೆ ಹರಿಸುತ್ತಿದ್ದಾರೆ.
ರಾಜ್ಯದ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ರುದ್ರಭೂಮಿ, ಗಾಯರಾಣ ಸೇರಿ ವಿವಿಧ ಇಲಾಖೆಗೆ ಸೇರಿದ ಸುಮಾರು 12,345 ಹೆಕ್ಟೇರ್ ಸರ್ಕಾರಿ ಭೂಮಿ ಇದೆ. ಈ ಸರ್ಕಾರಿ ಭೂಮಿ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಕೋಟ್ಯಂತ ರೂ.ಬೆಲೆ ಇದೆ. ಸಮರ್ಪಕ ನಿರ್ವಹಣೆ, ಸಂರಕ್ಷಣೆ ಮಾಡದಿರುವ ಹಿನ್ನೆಲೆಯಲ್ಲಿ ಭೂಮಿ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಕೆಲವರು ರಾಜಕೀಯ ಅಧಿಕಾರ ಬಳಸಿಕೊಂಡು ತಮ್ಮ ಹೆಸರಿನಲ್ಲಿ 2 ರಿಂದ 5 ಎಕರೆ ಜಮೀನು ನೋಂದಣಿ ಮಾಡಿಕೊಂಡಿದ್ದಾರೆ. ಕೆಲವರು ನಕಲಿ ದಾಖಲೆ ಸೃಷ್ಟಿಸಿ ಬಡಾವಣೆ ನಿರ್ವಿುಸಿ ಮಾರಾಟ ಮಾಡುತ್ತಿದ್ದಾರೆ. ಅದಕ್ಕೆ ಗ್ರಾಪಂ, ತಾಪಂ, ಜಿಪಂ ಹಾಗೂ ಜಿಲ್ಲಾಡಳಿತದ ಕಚೇರಿಯ ಕೆಲ ಸಿಬ್ಬಂದಿ ಕೈ ಜೋಡಿಸಿದ್ದಾರೆ ಎಂಬ ಆರೋಪಗಳಿವೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ಜರುಗುತ್ತಿರುವ 5,762 ಗ್ರಾಪಂಗಳ ವ್ಯಾಪ್ತಿಯ ಸುಮಾರು 300ಕ್ಕೂ ಅಧಿಕ ಹಳ್ಳಿಗಳು ಮಹಾನಗರ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಹೊಂದಿಕೊಂಡಿವೆ. ಅಲ್ಲದೆ, ಸಾವಿರಕ್ಕೂ ಅಧಿಕ ಹಳ್ಳಿಗಳು ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಹಾಗೂ ಸಕ್ಕರೆ ಕಾರ್ಖಾನೆ ಸೇರಿ ವಿವಿಧ ಕೈಗಾರಿಕೆಗಳ ಸಮೀಪದಲ್ಲಿವೆ. ಇಂತಹ ಗ್ರಾಮದ ಕೃಷಿ ಜಮೀನುಗಳಲ್ಲಿ ಬಡಾವಣೆ ಸೇರಿ ಇನ್ನಿತರ ವಾಣಿಜ್ಯ ಚಟುವಟಿಕೆಗಳಿಗೆ ಕೋಟ್ಯಂತರ ರೂ.ಹೂಡಿಕೆ ಮಾಡಲಾಗುತ್ತಿದೆ. ಆದರೆ, ಗ್ರಾಪಂ ಆಡಳಿತ ಮಂಡಳಿಗಳು ತಕರಾರು ತೆಗೆದು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ವ್ಯವಹಾರ ಕುದುರುತ್ತಿಲ್ಲ. ಹಾಗಾಗಿ ತಮಗೆ ಅನುಕೂಲ ಮಾಡಿಕೊಡುವ ಅಭ್ಯರ್ಥಿಗಳನ್ನು ಗ್ರಾಪಂ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಹವಣಿಸುತ್ತಿದ್ದಾರೆ.
ಹೂಡಿಕೆ ಸಮಸ್ಯೆ ನಿವಾರಣೆಗೆ ತಂತ್ರ
ನಗರ, ಹೆದ್ದಾರಿ ಹಾಗೂ ಕಾರ್ಖಾನೆಗಳ ಪಕ್ಕದಲ್ಲಿರುವ ಹಳ್ಳಿಗಳಲ್ಲಿ ವ್ಯಾಪಾರಿಗಳು, ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ಜಮೀನುಗಳ ಮೇಲೆ ಕೋಟ್ಯಂತರ ರೂ. ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಗ್ರಾಪಂ ಅಧ್ಯಕ್ಷ, ಸದಸ್ಯರು ಅಕ್ರಮ ಬಡಾವಣೆಗಳ ನಿರ್ವಣಕ್ಕೆ ಮತ್ತು ವಿವಿಧ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಆರ್ಥಿಕ ಬಲಾಢ್ಯರು ತಮ್ಮ ಆಪ್ತರನ್ನು ನಿಲ್ಲಿಸಿ ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬೆಳಗಾವಿ ತಾಲೂಕಿನ ಗ್ರಾಪಂ ಮಾಜಿ ಸದಸ್ಯರಾದ ರಾಹುಲ್ ಕೆ.ಅನಗೋಳಕರ್, ರಮೇಶ ಎಸ್.ಗೌಡರ್, ರಾಜು ನಾಯಕ್ ದೂರಿದ್ದಾರೆ.
ಮುಂದುವರಿದ ವಾಮಾಚಾರ
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಸಬಾ ಹೋಬಳಿ ಹುಲ್ಲಂಗಾಲ ಗ್ರಾಮದ ಮತಗಟ್ಟೆ ಕೇಂದ್ರದ ಪ್ರವೇಶ ದ್ವಾರದಲ್ಲಿ ಭಾನುವಾರ ರಾತ್ರಿ ದುಷ್ಕರ್ವಿುಗಳು ವಾಮಾಚಾರ ನಡೆಸಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಅಪರಿಚಿತರು ಭಾನುವಾರ ಮಧ್ಯರಾತ್ರಿ ಮತದಾರರ ಮನೆಮನೆಯ ಎದುರಿಗೆ ಕುಂಕುಮ ಎರಚಿ, ಮಂತ್ರಿಸಿದ ಅಕ್ಕಿಕಾಳು ಹಾಕಿಹೋಗಿರುವ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗೆದ್ದರೆ ಜಾತಿಗೊಂದು ಸ್ಮಶಾನ ಎಂದವನ ವಿರುದ್ಧ ಕೇಸ್
ಕೋಲಾರ: ಗ್ರಾಪಂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ತಾವು ಗೆದ್ದಲ್ಲಿ ಜಾತಿಗೊಂದು ಸ್ಮಶಾನ ಮಾಡಿಕೊಡುವುದಾಗಿ ಬಾಂಡ್ ಪೇಪರ್ ಮೇಲೆ ಸಹಿ ಮಾಡಿ ಮತದಾರರ ಓಲೈಕೆಗೆ ಪ್ರಯತ್ನಿಸಿರುವುದಲ್ಲದೆ ಭರ್ಜರಿ ಉಡುಗೊರೆ ನೀಡಿರುವುದು ವಿವಾದಕ್ಕೆ ಗ್ರಾಸವಾಗಿದೆ. ನರಸಾಪುರ ಗ್ರಾಪಂ ಅಭ್ಯರ್ಥಿ ಸುಮನ್ ಚಂದ್ರು ಮೇಲೆ ಆರೋಪ ಕೇಳಿಬಂದಿದ್ದು, ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಪಂ ಮಾಜಿ ಅಧ್ಯಕ್ಷೆ ಶೈಲಾ ಬಸವರಾಜ್ ಎಂಬುವವರ ಪುತ್ರ ಅಭ್ಯರ್ಥಿಯಾಗಿದ್ದು, ಹೇಗಾದರೂ ಮಾಡಿ ಗೆಲ್ಲಬೇಕೆಂಬ ಹಠದಿಂದ ಮತದಾರರಿಗೆ ಒಂದು ಜತೆ ಬೆಳ್ಳಿ ದೀಪ, ಸೀರೆ, ತಿರುಪತಿ ಲಡ್ಡು ಹಾಗೂ 1000 ರೂ. ಕೊಟ್ಟು ದೇವರ ಮೇಲೆ ಆಣೆ ಮಾಡಿಸಿಕೊಂಡಿದ್ದಾರೆಂದು ಎದುರಾಳಿ ಅಭ್ಯರ್ಥಿಗಳು ದೂರಿದ್ದಾರೆ.
ಚುನಾವಣೆಗೆ ಮುನ್ನವೇ ಬ್ಯಾಲೆಟ್ ಪೇಪರ್ ಬಹಿರಂಗ?
ಬೆಳಗಾವಿ: ಪ್ರಥಮ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮುನ್ನಾದಿನವೇ ಬ್ಯಾಲೆಟ್ ಪೇಪರ್ ಬಹಿರಂಗಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಜಿಲ್ಲೆಯಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿದೆ. ಬೆಳಗಾವಿ ತಾಲೂಕಿನ ದೇಸೂರ ಗ್ರಾಪಂ ವ್ಯಾಪ್ತಿಯ ವಾರ್ಡ್ ನಂ.1ರ ಬ್ಯಾಲೆಟ್ ಪೇಪರ್ ಜಾಲತಾಣಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಹರಿದಾಡುತ್ತಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಮತ್ತು ಚುನಾವಣೆಯ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಿದ್ದಾರೆ. ಬ್ಯಾಲೆಟ್ ಪತ್ರಿಕೆ ಬಹಿರಂಗವಾಗಿಲ್ಲ. ಯಾರೂ ಅನುಮಾನ ಪಡುವುದು ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘೊಷಣೆ ಸಂಘರ್ಷ
ಉಪ್ಪಳ: ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಮತ್ತು ಮುಸ್ಲಿಂ ಲೀಗ್ ಸದಸ್ಯರ ಘೊಷಣೆ ಸಂಘರ್ಷ ಸೃಷ್ಟಿಸಿತು. ಬಿಜೆಪಿ ಬೆಂಬಲಿತರು ಪ್ರಮಾಣವಚನ ಸ್ವೀಕರಿಸುತ್ತಿರುವಂತೆ ಕಾರ್ಯಕರ್ತರು ಜೈ ಶ್ರೀರಾಮ್ ಘೊಷಣೆಗಳನ್ನು ಕೂಗಿದರು. ಇದನ್ನು ಪ್ರತಿಭಟಿಸಿ ಯೂತ್​ಲೀಗ್ ಕಾರ್ಯಕರ್ತರು ಅಲ್ಲಾಹು ಅಕ್ಬರ್ ಘೊಷಣೆ ಕೂಗಿದರು. ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪೊಲೀಸರು ಮಧ್ಯಪ್ರವೇಶಿಸಿದರು. ಇನ್ನೊಂದೆಡೆ ಪಾಲಕ್ಕಾಡ್ ಪುರಸಭೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೊಷಣೆಗಳನ್ನು ಕೂಗಿದ್ದರು. ಎಲ್​ಡಿಎಫ್ ಸದಸ್ಯರು ರಾಷ್ಟ್ರಧ್ವಜ ಎತ್ತಿ ಹಿಡಿದು ಜಾತ್ಯತೀತತೆಯನ್ನು ರಕ್ಷಿಸುವ ಘೊಷಣೆಯೊಂದಿಗೆ ತಮ್ಮನ್ನು ಸಮರ್ಥಿಸಿಕೊಂಡರು. ರ‍್ಯಾಲಿ ವೇಳೆ ಸಂಘರ್ಷ ನಡೆದು ಹಲವರು ಗಾಯಗೊಂಡಿದ್ದಾರೆ.
ದುಡಿಯುವ ವರ್ಗದವರಿಗೆ ಜೈ
ಯಾದಗಿರಿ: ಕರೊನಾ ಸಂಕಷ್ಟದಲ್ಲೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬೆವರು ಹರಿಸಿ ದುಡಿದು ಬದುಕು ಕಟ್ಟಿಕೊಳ್ಳುತ್ತಿದ್ದ ಕೂಲಿಕಾರರು ಈಗ ಅಧಿಕಾರದ ಗದ್ದುಗೆ ಏರಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯ 80 ಮನರೇಗಾ ಕೂಲಿಕಾರರು ಸ್ಪರ್ಧಿಸಿದ್ದಾರೆ. ಮೊದಲ ಹಂತದಲ್ಲಿ ಶಹಾಪುರ ತಾಲೂಕಿನ ಐವರು ಕೂಲಿಕಾರರು ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ತಾವೂ ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 8 =
Remember me
