ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ?|ಕಸದೊಳಗೆ ಕಸವಾಗಿ ಹೋಹನಲೆ ನೀನು?||ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು|ಮಿಸುಕದಿರು ಮಣ್ಣಿನಲಿ-ಮಂಕುತಿಮ್ಮ||654||
ಹೆಸರು ಹೆಸರೆಂದು ನೀನು ಬಸವಳಿವುದೇಕೆ? ನೀನು ಕಸದಲ್ಲಿ ಕಸವಾಗಿ ಹೋಗುವವನಲ್ಲವೇನು? ನೆಲದಲ್ಲಿರುವ ಮರೆವು ಎನ್ನು ವುದು ನನ್ನನ್ನು ಮುಸುಕಲಿ ಅಂದರೆ ಎಲ್ಲರೂ ಮರೆತು ಬಿಡಲಿ ಎಂದು ಬೇಡು. ಮಣ್ಣಿನಲ್ಲಿ ಮಿಸುಕಾಡದೆ ಇದ್ದುಬಿಡು ಎನ್ನುತ್ತದೆ ಈ ಕಗ್ಗ.
ಪರೋಪಕಾರ, ಸಮಾಜ ಸೇವೆ, ಮಾನವೀಯ ಮೌಲ್ಯಗಳನ್ನು ಜೀವನಾದರ್ಶವಾಗಿ ಇರಿಸಿಕೊಂಡ ಹಲವರು ಸಮಾಜದಲ್ಲಿದ್ದಾರೆ. ಇವರಲ್ಲಿ ಸ್ವಲ್ಪವೂ ಸ್ವಾರ್ಥಾಪೇಕ್ಷೆ ಇಲ್ಲ ಎನ್ನುವ ಹಾಗಿಲ್ಲ, ಪ್ರಯೋಜನವನ್ನು ಪಡೆಯುವ ಉದ್ದೇಶದಿಂದ ಸ್ಪಂದಿಸುವವರೆ ಹೆಚ್ಚು. ಕೊನೆಯ ಪಕ್ಷ ಮಾಡಿದ ಉಪಕಾರಕ್ಕೆ, ಸಮಾಜಸೇವೆಗೆ ಪ್ರತಿಯಾಗಿ ಗುರುತಿಸುವ, ಸನ್ಮಾನ, ಪ್ರಶಂಸೆಗಳನ್ನು ಪಡೆಯುವ ಬಯಕೆಯಾದರೂ ಇರುತ್ತದೆ. ನಾನು ಮಾಡಿದೆ, ನನ್ನಿಂದಲೇ ಆಯಿತು ಎನ್ನುವುದನ್ನು ನೆನಪಿಸಿಕೊಳ್ಳುತ್ತಾ ಇತರರ ಹೊಗಳಿಕೆಗೆ ಹಂಬಲಿಸುವವರು ಹಲವರು.
ಐತಿಹಾಸಿಕ ಸ್ಮಾರಕಗಳು, ಅದ್ಭುತ ನಿರ್ವಿುತಿಗಳು, ಅತ್ಯುತ್ತಮ ಕೃತಿಗಳು ಗತ ವೈಭವಕ್ಕೆ, ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿ ಹೇಳುತ್ತವೆ. ಅದರೆ ಅದಕ್ಕೆ ಕಾರಣರಾದವರೆಲ್ಲರ ಹೆಸರು ವಿವರಗಳು ಜನಮಾನಸದಲ್ಲಿ ಉಳಿದಿವೆಯೇ? ಸ್ವಾತಂತ್ರ್ಯ ಹೋರಾಟಗಾರರು, ಅದಕ್ಕಿಂತಲೂ ಹಿಂದೆ ಇದ್ದ ಮಹನೀಯರು, ಅವರ ಜೀವನಕ್ರಮಗಳು ಈ ಕಾಲದ ಮಕ್ಕಳಿಗೆ ಅಪ್ರಸ್ತುತವೆನ್ನಿಸಿರುವುದು ವಿಷಾದನೀಯ ಸತ್ಯ. ಸ್ಪಷ್ಟತೆ ಇಲ್ಲದ ಇತಿಹಾಸ ಮತ್ತು ಊಹೆಗೂ ನಿಲುಕದಷ್ಟು ಬದಲಾದ ಲೋಕ ಜೀವನವು ಎಳೆಯರಲ್ಲಿ ಹಳೆಯದರ ಬಗೆಗೆ ಗೊಂದಲ ಹುಟ್ಟಿಸುತ್ತವೆ. ಆದರೆ ಆ ಮಹನೀಯರು ಬಿತ್ತಿದ ಮಾನವೀಯ ಮೌಲ್ಯಗಳು, ಸತ್ತ್ವಯುತವಾದ ಉನ್ನತ ಆದರ್ಶಗಳು ಎಲ್ಲಾ ಕಾಲದಲ್ಲೂ ಮಾನ್ಯತೆಯನ್ನು ಪಡೆದಿವೆ.
ಒಬ್ಬ ವ್ಯಕ್ತಿಯ ಕುಟುಂಬದೊಳಗೆಯೇ ಮೂರು ತಲೆಮಾರುಗಳ ಹಿಂದಿನ ಹಿರಿಯರ ವಿವರಗಳು ಸಿಗುವುದು ವಿರಳ. ಊರಿನ ಮತ್ತು ಸಮಾಜದ ಶ್ರೇಯೋಭಿವೃದ್ಧಿಗೆ ಕಾರಣರಾದವರು ಕೆಲವು ಕಾಲ ಶಿಲಾಫಲಕದಲ್ಲೋ, ಪುಸ್ತಕದಲ್ಲೋ, ರಸ್ತೆಯ ಹೆಸರಾಗಿಯೋ, ಪ್ರತಿಮೆಯಾಗಿಯೋ ನೆನಪಿನಲ್ಲುಳಿಯುತ್ತಾರೆ. ಕಾಲ ಸರಿದಂತೆ ಹಳೆಯದೆಲ್ಲದಕ್ಕೂ ಹೊಸ ರಂಗು ಬಳಿಯಲಾಗುತ್ತದೆ. ಮರೆವಿನ ಮುಸುಕು ಎಲ್ಲವನ್ನೂ ಮರೆಯಾಗಿಸಿಬಿಡುತ್ತದೆ. ಸಾಧನೆ, ಸಂಪಾದನೆ ಗಳೆಷ್ಟಿದ್ದರೂ ವ್ಯಕ್ತಿಯ ನೆನಪು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಹೀಗಿದ್ದರೂ ಜನರು ಹೆಸರಿಗಾಗಿ ಹಪಹಪಿಸುವುದನ್ನು ಬಿಡಲೊಲ್ಲರು. ಕತ್ತೆಯ ಮೇಲೆ ಕುಳಿತು ಹೋಗಿಯಾದರೂ ಕೀರ್ತಿವಂತರಾಗಬೇಕು ಎಂದು ಬಯಸುವ ಎಡಬಿಡಂಗಿಗಳ ಸಂಖ್ಯೆ ಅಧಿಕವಿದೆ. ಮನುಷ್ಯನನ್ನು ತೀವ್ರವಾಗಿ ಕಾಡುವ ಕಾಮನೆಗಳಲ್ಲಿ ಕೀರ್ತಿಯ ಬಯಕೆಯೂ ಒಂದು. ಎಲ್ಲವನ್ನೂ ಶ್ರಮಪಡದೆ ಸುಲಭದಲ್ಲಿ ಶೀಘ್ರವಾಗಿ ಪಡೆಯಬೇಕು ಎನ್ನುವ ಮನೋಧರ್ಮವು ಪಿಡುಗಿನಂತೆ ವ್ಯಾಪಿಸಿರುವುದರಿಂದ ಪರಸ್ಪರ ಬರಿದೆ ಹೊಗಳುವ, ಪ್ರಶಸ್ತಿ ಸನ್ಮಾನಗಳಿಂದ ಗೌರವಿಸುವ, ಪ್ರಾಮುಖ್ಯತೆಗಾಗಿ ಪರದಾಡುವ ನಾಟಕಗಳು ಹೆಚ್ಚಾಗಿವೆ.
ಕಸದಲ್ಲಿ ಕಸವಾಗಿ ಹೋಗುವ ದೇಹದಲ್ಲಿ ಅಳಿಯದುಳಿಯುವ ಒಂದು ಆತ್ಮವಿದೆ. ಆತ್ಮದ ಯಾತ್ರೆಗೆ ಒಂದು ಸಾಧನವಾಗಿಯಷ್ಟೇ ಶರೀರವಿದೆ. ವಿಧಿ ವಿಧಿಸಿದ ಅವಧಿಯು ತೀರಿದಂದು ಆತ್ಮವು ಶರೀರವ ನ್ನೊಗೆದು ಹೊರಟುಬಿಡುತ್ತದೆ. ಆತ್ಮವಿಲ್ಲದ ಪಾರ್ಥಿವ ಶರೀರವನ್ನು ಹೆಸರು, ಅಧಿಕಾರ, ವಂಶ, ಬಿರುದಾವಳಿಗಳಿಂದ ಗುರುತಿಸುವುದಿಲ್ಲ. ಜೀವವಿರದ ದೇಹವು ಮಣ್ಣಿ್ಣನಲ್ಲಿ ಮಣ್ಣಾಗಿ ಸೇರಿಹೋಗುತ್ತದೆ. ಹಾಗೆಂದು ಜೀವನವು ಕ್ಷಣಿಕವೆಂದು ವಿಷಾದದಿಂದ ವಿರಕ್ತಿಯನ್ನು ನಟಿಸುತ್ತಾ ಬಾಳುವುದಲ್ಲ. ಇರುವಷ್ಟು ಕಾಲ ಆತ್ಮವನ್ನು ವಂಚಿಸದೆ, ತನುಮನಗಳ ಸೌಖ್ಯವನ್ನು ಕಾಪಾಡುತ್ತಾ ಸಜ್ಜನರಾಗಿ ಬಾಳಬೇಕು.
ಜೀವನದ ಅನುಭವ ಮತ್ತು ಅಧ್ಯಯನಗಳಿಂದ ಅರಿವನ್ನು ಪಡೆದಿರುವ ಧೀಮಂತರು ಹೆಸರಿಗಾಗಿ ಯಾವ ಕೆಲಸವನ್ನೂ ಮಾಡಲಾರರು. ಆತ್ಮ ಸಂತೋಷಕ್ಕಾಗಿ ಕ್ರಿಯಾಶೀಲರಾದವರಿಗೆ ಲೌಕಿಕದ ಕೀರ್ತಿ, ಸನ್ಮಾನ, ಪ್ರಶಂಸೆಗಳು ಬೇಕೆನಿಸುವುದಿಲ್ಲ. ಬದಲಾಗಿ ಅವುಗಳು ಮುಜುಗರವನ್ನುಂಟು ಮಾಡಬಹುದು.
ಬದುಕಿನಲ್ಲಿ ಪಡೆವ ಭಾಗ್ಯಗಳೆಲ್ಲವೂ ದೇವರ ಅನುಗ್ರಹ, ಮಾಡಲು ಸಾಧ್ಯವಾಗುವ ಸತ್ಕಾರ್ಯಗಳು ದೇವರಿಗೆ ಅರ್ಪಿತ. ಬದುಕನ್ನು ಸಾರ್ಥಕ ಕ್ಷಣಗಳೊಂದಿಗೆ ಸುಂದರವಾಗಿಸುವುದೆ ದೇವರಿಗೆ ತೋರುವ ಕೃತಜ್ಞತೆ ಎಂಬ ಭಾವದಲ್ಲಿ ಬಾಳಬೇಕು. ಆಗ ಕೀರ್ತಿಯ ಮೋಹ, ಪ್ರತಿಫಲದ ನಿರೀಕ್ಷೆಗಳು ಇರಲಾರವು. ಸಾವಿನ ನಂತರವೂ ಹೆಸರುಳಿಯಬೇಕು ಎನ್ನುವ ಹಂಬಲವು ಕ್ಷಯಿಸಿ, ಲೋಕದ ಮರೆವು ತನ್ನನ್ನು ಆವರಿಸಲಿ, ಜಗವು ಮರೆತುಬಿಡಲಿ ಎನ್ನುವಂತೆ ನಿರ್ಮಮ ಭಾವದಿಂದ ಬಾಳಲು ಸಾಧ್ಯವಿದೆ. ಜಗದಗಲಿಕೆಗೆ ಕಾರಣವಾಗುವ ಸಾವು ಕೂಡಾ ಭಯ ಹುಟ್ಟಿಸುವುದಿಲ್ಲ, ಕೊರಗುವಂತೆ ಮಾಡುವುದಿಲ್ಲ. ನಾನು ಎಂಬ ಅಹಂಭಾವವು ನೀಗಿ, ಲೋಕ ಮೋಹವು ಕ್ಷಯಿಸಿದರೆ ಸತ್ಯದ ಸಾಕ್ಷಾತ್ಕಾರವಾಗುತ್ತದೆ.
ಹುಬ್ಬಳ್ಳಿ: ಹಿಂದು ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಕೊಲೆ ಬೆದರಿಕೆ, ಆರೋಪಿ ವಶಕ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
