ಆರ್​. ಶಂಕರ್​ ರಾಜೀನಾಮೆ
ಪಕ್ಷ ತೊರೆಯಲು ಸವದಿ ನಿರ್ಧಾರ
ದೆಹಲಿಯಲ್ಲಿ ಶೆಟ್ಟರ್​ ಸಂಧಾನ
ಬಿಎಸ್​ವೈಗೆ ಅತೃಪ್ತಿ ಶಮನದ ಹೊಣೆ
ಬಿಜೆಪಿಗೆ ಬಂಡಾಯದ ಬಿಸಿ, ಸ್ಪರ್ಧೆಯ ಸೆಡ್ಡು– ವಿಧಾನ ಪರಿಷತ್​ ಸದಸ್ಯತ್ವಕ್ಕೆ ಶಂಕರ್​ ರಾಜೀನಾಮೆ, ಸವದಿ ನಿರ್ಧಾರ– ಅಭ್ಯರ್ಥಿಗಳ ಆಯ್ಕೆಯ ಮಾನದಂಡವೇ ದ್ವಂದ್ವವೆಂಬ ಆಕ್ರೋಶ— ಅತೃಪ್ತಿ ತಣಿಸುವ ಸವಾಲು, ಮನವೊಲಿಕೆಗೆ ಮುಂದಾದ ನಾಯಕರು
ಬೆಂಗಳೂರು:ತಳಸ್ತರದಿಂದ ದೆಹಲಿ ತನಕ ಸಮೀಕ್ಷೆ, ಅಭಿಪ್ರಾಯ ಸಂಗ್ರಹ, ಮ್ಯಾರಥಾನ್​ ಸಭೆಗಳ ಬಳಿಕ ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿ ವಿರುದ್ಧ ಬಂಡಾಯ ಭುಗಿಲೆದ್ದಿದ್ದು, ಆಡಳಿತ ಪಕ್ಷ ಒತ್ತಡದ ಒಳಸುಳಿಗೆ ಸಿಲುಕಿದೆ.
ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಅಂತಿಮ ತೀರ್ಮಾನ ಕೈಗೊಂಡಿದೆ. ಆದರೂ ಟಿಕೆಟ್​ ವಂಚಿತರು ರಾಜ್ಯ ನಾಯಕರ ವಿರುದ್ಧ ಬೆಂಕಿಯುಂಡೆಯಾಗಿದ್ದಾರೆ. ದೆಹಲಿಯ ಕೆಲ ನಾಯಕರು “ಪಿಕ್​ ಅಂಡ್​ ಚೂಸ್​’ ನೀತಿ ಅನುಸರಿಸಿದ್ದಾರೆ ಎಂಬ ಅನುಮಾನ ಹಿರಿಯ ಮುಖಂಡರನ್ನು ಬಾಧಿಸುತ್ತಿದ್ದು, ಇದ್ಯಾವ ರೀತಿ ರಣತಂತ್ರವೆಂದು ತಿಳಿಯದು ಎಂಬ ಅಸಹನೆ ಹೊರಹಾಕಿದ್ದಾರೆ.
ನಿಗಿನಿಗಿಯಾಗಿರುವ ಬಂಡಾಯವು ವರಿಷ್ಠರ ವಿರುದ್ಧವೇ ಸೆಡ್ಡು ಹೊಡೆಯುವ ಹಂತಕ್ಕೆ ತಲುಪಿದ್ದು, ಕೆಲವರು ತೊಡೆತಟ್ಟಿ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.
ವಿಧಾನ ಪರಿಷತ್​ ಸದಸ್ಯತ್ವಕ್ಕೆ ಆರ್​.ಶಂಕರ್​ ರಾಜೀನಾಮೆ ನೀಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಮಾಜಿ ಡಿಸಿಎಂ ಲಕ್ಷ$್ಮಣ ಸವದಿ ಪಕ್ಷದ ಪ್ರಾಥಮಿಕ ಮತ್ತು ವಿಧಾನ ಪರಿಷತ್​ ಸದಸ್ಯತ್ವಕ್ಕೂ ರಾಜೀನಾಮೆ ತೀರ್ಮಾನ ಘೋಷಿಸಿದ್ದಾರೆ. ಶಾಸಕರಾದ ಗೂಳಿಹಟ್ಟಿ ಶೇಖರ್​ (ಹೊಸದುರ್ಗ), ರಾಮಣ್ಣ ಲಮಾಣಿ (ಶಿರಹಟ್ಟಿ) ತಮ್ಮ ತಾಕತ್ತು ಏನೆಂಬುದನ್ನು ಕಮಲಪಡೆ ನಾಯಕರಿಗೆ ತೋರಿಸುವ ಸವಾಲೆಸೆದಿದ್ದಾರೆ.
ತಳಮಟ್ಟದಲ್ಲಿ 25 ಸಾವಿರ ಸಕ್ರಿಯ ಕಾರ್ಯಕರ್ತರ ಮತದಾನದ ಬಲ ಪರೀೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಹೀಗೆ ನಾಲ್ಕು ಹಂತದಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಪಕ್ಷ ವಿವರಣೆ ನೀಡಿದೆ. ಮೊದಲ ಪಟ್ಟಿಯಲ್ಲಿನ ಅಭ್ಯರ್ಥಿಗಳ ಹೆಸರುಗಳ ಮೇಲೆ ಕಣ್ಣಾಡಿಸಿದರೆ ಆಯ್ಕೆಗೆ ಅನುಸರಿಸಿದ ಮಾನದಂಡವೇ ದ್ವಂದ್ವ, ಗೊಂದಲಮಯವಾಗಿದೆ ಎಂದು ಟಿಕೆಟ್​ ವಂಚಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರ ಅಭಿಪ್ರಾಯವೇ ಮುಖ್ಯವಾಗಿದ್ದರೆ ಆನೇಕಲ್​ನಲ್ಲಿ ಹಣವುಳ್ಳ, ಬೇಲೂರಿನಲ್ಲಿ ನಿರಂತರ ಸೋತ, ಬ್ಯಾಟರಾಯನಪುರದಲ್ಲಿ ಪ್ರಭಾವಿಗೆ ಮಣೆ ಹಾಕುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ, ಜಿಲ್ಲಾ ಕೋರ್​ ಕಮಿಟಿಗಳ ಜತೆಗೆ ಚರ್ಚೆ, ಸಮೀಾ ವರದಿ ಎನ್ನುವುದೆಲ್ಲ ತೋರಿಕೆಯ ತಂತ್ರಗಾರಿಕೆಗಳು ಎಂದು ಅಸಮಾಧಾನಿತರು ಕಿಡಿಕಾರಿದ್ದಾರೆ.
ಈಶ್ವರಪ್ಪ, ಜಗದೀಶ ಶೆಟ್ಟರ್​ಗೆ ರಾಜಕೀಯ ನಿವೃತ್ತಿಗೆ ಸೂಚಿಸಲಾಗಿದೆ. ಆದರೆ, 70ರ ವಯೋಮಿತಿ ದಾಟಿದ ಹಲವರಿಗೆ ಮಣೆ ಹಾಕಿದ್ದಾರೆ. ಭ್ರಷ್ಟಾಚಾರ, ಗಂಭೀರ ಆರೋಪ ಪ್ರಕರಣವುಳ್ಳವರನ್ನು ಪರಿಗಣಿಸುವುದಿಲ್ಲ ಎಂದಾಗಿದ್ದರೆ, ರವಿಸುಬ್ರಮಣ್ಯ, ಉದಯ್​ ಗರುಡಾಚಾರ್​, ಬಸವರಾಜ ದಡೇಸುಗೂರು, ರೌಡಿ ಪಟ್ಟಿಯಲ್ಲಿರುವ ಮಣಿಕಂಠ ರಾಥೋಡ್​ಗೆ ಅವಕಾಶ ಸಿಕ್ಕಿದ್ಹೇಗೆ? ಎಂದು ಅಸಮಾಧಾನಿತರು ಪ್ರಶ್ನಿಸುತ್ತಿದ್ದಾರೆ.
ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೊಬೈಲ್​ನಲ್ಲಿ ಸಂಪರ್ಕಿಸಿ, ಬೆಳವಣಿಗೆ ಮಾಹಿತಿ ಪಡೆದುಕೊಂಡಿದ್ದು, ಅಸಮಾಧಾನ ಶಮನಕ್ಕೆ ಸಲಹೆ ನೀಡಿದ್ದಾರೆ. ಬಿಎಸ್​ವೈ, ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ಮತ್ತಿತರ ನಾಯಕರು ಪೂರ್ವ ನಿರ್ಧಾರದ ಪ್ರಕಾರ ರಾಜಿಸಂಧಾನದ ಕಸರತ್ತಿಗೆ ಕೈಹಾಕಿದ್ದಾರೆ.
ಟಿಕೆಟ್​ ವಂಚಿತ ಕೆಲವರೊಂದಿಗೆ ಬಿಎಸ್​ವೈ ಸಂಪರ್ಕಿಸಿ ಮನವೊಲಿಸಿದ್ದಾರೆ. ದುಡುಕಿನ ನಿರ್ಧಾರ ಕೈಗೊಂಡು, ರಾಜಕೀಯ ಭವಿಷ್ಯ ಹಾಳುಮಾಡಿಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರಲಿವೆ ಎಂದು ತಿಳಿ ಹೇಳಿದ್ದಾರೆ ಎನ್ನಲಾಗಿದೆ. ಅತೃಪ್ತರ ಸಾಲಿಗೆ ಶಾಸಕರು, ಪ್ರಭಾವಿ ಮುಖಂಡರು ಸೇರಿರುವ ಕಾರಣ ಸರಿಪಡಿಸುವುದು ದೊಡ್ಡ ಸವಾಲಾಗುವ ಸಾಧ್ಯತೆಗಳಿವೆ. ತ್ವರಿತವಾಗಿ ಬಂಡಾಯ ಶಮನ ಮಾಡದಿದ್ದರೆ ಅಧಿಕೃತ ಅಭ್ಯರ್ಥಿಗೆ ಮುಳುಗು ನೀರು ತರುವ ಆತಂಕವೂ ಪಕ್ಷದೊಳಗೆ ಮನೆ ಮಾಡಿದೆ.
ಟಿಕೆಟ್​ ವಂಚಿತರಾದವರು ಹಲವು ದಾರಿ ಹಿಡಿದಿದ್ದಾರೆ. ಸಚಿವ ಎಸ್​. ಅಂಗಾರ ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ತಟಸ್ಥವಾಗುಳಿಯುವುದಾಗಿ ಹೇಳಿದ್ದಾರೆ. ಮಾಜಿ ಡಿಸಿಎಂ ಲಕ್ಷ$್ಮಣ ಸವದಿ ಮುಂದಿನ ನಡೆಯ ಬಗ್ಗೆ ಶುಕ್ರವಾರ ತೀರ್ಮಾನ ಪ್ರಕಟಿಸಲಿದ್ದಾರೆ.
ರಾಣೆಬೆನ್ನೂರಿನಲ್ಲಿ ಆರ್​. ಶಂಕರ್​, ಶಿರಹಟ್ಟಿಯಲ್ಲಿ ಶಾಸಕ ರಾಮಣ್ಣ ಲಮಾಣಿ ಪಕ್ಷೇತರರಾಗಿ ಸ್ಪರ್ಧೆ, ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್​ ಸ್ವತಂತ್ರ ಅಥವಾ ಜನಾರ್ದನ ರೆಡ್ಡಿ ಪಕ್ಷ, ಬಸವನಗುಡಿಯ ಕಟ್ಟೆ ಸತ್ಯ ಸ್ವತಂತ್ರ ಉಮೇದುವಾರರಾಗಿ ಕಣಕ್ಕೆ ಇಳಿಯಲಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧೆ ಉತ್ಸಾಹದಲ್ಲಿದ್ದ ತವನಪ್ಪ ಅಷ್ಟಗಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ನಾಗಶ್ರೀ ಪ್ರತಾಪ್​, ಬ್ಯಾಟರಾಯನಪುರದಲ್ಲಿ ಮುನೀಂದ್ರಕುಮಾರ್​ಗೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಡ ಹೇರಿದ್ದು, ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಜಯನಗರ ಟಿಕೆಟ್​ ವಂಚಿತರಾದ ಎನ್​.ಆರ್​. ರಮೇಶ್​ ಬೆಂಬಲಿಗರ ಜತೆಗೆ ಸಮಾಲೋಚನೆ ಮಾಡಿದ್ದು, ಮುಂದಿನ ನಿರ್ಧಾರದ ಬಗ್ಗೆ ಚಿಂತನೆ ನಡೆಸಿದ್ದಾರೆ. ಉಡುಪಿ ಶಾಸಕ ರುಪತಿ ಭಟ್​ ಟಿಕೆಟ್​ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ.
ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಟಿಕೆಟ್​ ಸಿಗದ ಕಾರಣಕ್ಕೆ ಬೇಸರಿಸಿಕೊಂಡ ಕೆಲವರನ್ನು ಕರೆದು ಮಾತನಾಡುವೆ. ಒಂದಿಬ್ಬರು ಅತೃಪ್ತರು ಪಕ್ಷ ತೊರೆದು ಹೋದರೆ ಯಾವುದೇ ಪರಿಣಾಮ ಬೀರುವುದಿಲ್ಲ.– ಬಿ.ಎಸ್​. ಯಡಿಯೂರಪ್ಪ, ಮಾಜಿ ಸಿಎಂ
ಗೆಲುವಿನ ಸಾಧ್ಯತೆಯಿರುವೆಡೆ ಬಂಡಾಯ ಸಹಜ. ನಮ್ಮದು ಕೇಡರ್​ ಬೇಸ್ಡ್​ ಪಾರ್ಟಿ. ಅತ್ಯಂತ ವ್ಯವಸ್ಥಿತ, ಪ್ರಜಾತಾಂತ್ರಿಕವಾಗಿ ಅಭ್ಯರ್ಥಿಗಳ ಆಯ್ಕೆಯಾಗಿದೆ. ಯಾರನ್ನೂ ಕಡೆಗಣಿಸಿಲ್ಲ. ಸಿಟ್ಟು, ಸೆಡವು ಹೊಂದಿದವರ ಮನವೊಲಿಸಲು ಪ್ರಯತ್ನಿಸಲಾಗುವುದು.– ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೂ ಹೋಗುವುದಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ, ತಟಸ್ಥನಾಗಿರುವೆ.– ಎಸ್​.ಅಂಗಾರ, ಸಚಿವ
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವೆ. ಕ್ಷೇತ್ರದ ಜನರ ಜತೆಗೆ ಚರ್ಚಿಸಿ ಶುಕ್ರವಾರ ಮುಂದಿನ ನಡೆ ಘೋಷಿಸುವೆ. ಪಕ್ಷವನ್ನು ತಾಯಿ ಸ್ಥಾನದಲ್ಲಿರಿಸಿದ್ದೆ, ವಿಷ ಕೊಡುವುದಿಲ್ಲ ಎಂದುಕೊಂಡಿದ್ದೆ. ತಾಯಿ ಕೂಡ ಭ್ರಷ್ಟಳಾಗಿದ್ದಾಳೆ ಎನ್ನುವುದು ನನ್ನ ಭಾವನೆ.– ಲಕ್ಷ್ಮಣ ಸವದಿ, ಮಾಜಿ ಡಿಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
