| ಮೃತ್ಯುಂಜಯ ಕಪಗಲ್ ಬೆಂಗಳೂರು
ಹೊರಗೆ ಪ್ರಧಾನಿ ನರೇಂದ್ರ ಮೋದಿ ಅಲೆ, ಒಳಗೆ ಅಸಹನೆ, ಬಂಡಾಯದ ಬೇಗುದಿಗೆ ಬಸವಳಿದಿದ್ದ ರಾಜ್ಯ ಬಿಜೆಪಿ ನಾಯಕರು ಬಹುಪಾಲು ನಿರಾಳರಾಗಿದ್ದಾರೆ.
ಕಳೆದ ವಾರ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೈಯಲ್ಲಿ ದುಗುಡದ ವರದಿ, ಅಸಮಾಧಾನದ ನಿಗಿನಿಗಿ ಮಾಹಿತಿಯಿತ್ತು. ‘ಮೋದಿಗಾಗಿ ಕೆಲಸ ಮಾಡಿ’ ಎಂಬ ಟಾಸ್ಕ್ ನೀಡಿ, ಎಲ್ಲರಿಗೂ ಖಡಕ್ ಪಾಠ ಮಾಡಿದ ಷಾ ದೆಹಲಿಗೆ ಹೋದ ಬಳಿಕ ವಸ್ತುಸ್ಥಿತಿ ಸಮೀಕ್ಷಾ ವರದಿಗೆ ಸೂಚಿಸಿದ್ದರು. ಬಂಡಾಯ, ಅಸಮಾಧಾನ ಭುಗಿಲೆದ್ದ ಕ್ಷೇತ್ರಗಳಲ್ಲಿ ಬಂಡಾಯ ಶಮನ, ಪರಿಸ್ಥಿತಿ ತಿಳಿಯಾಗುತ್ತಿದೆ ಎಂಬ ಆಂತರಿಕ ತಂಡದ ವರದಿಯು ವರಿಷ್ಠರಿಗೆ ಸಮಾಧಾನ ತಂದಿದೆ.
ಇನ್ನಷ್ಟು ಸುಧಾರಣೆ ಅಪೇಕ್ಷೆ:‘ನೀಡ್ಸ್ ಇಂಪ್ರೂವ್​ವೆುಂಟ್’ ಎನ್ನುವುದು ಇದೇ ವರದಿಯ ಮತ್ತೊಂದು ಮಹತ್ವದ ಅಂಶವಾಗಿದೆ. ಅಂದರೆ ಆಂತರಿಕವಾಗಿ ಸುಧಾರಣೆ, ರಣಕಣದ ದೃಷ್ಟಿಯಿಂದ ಮೋದಿ, ಯೋಗಿ, ಷಾ, ಬಿಎಸ್​ವೈ ಪ್ರಚಾರದ ಅಗತ್ಯ ಎನ್ನುವುದು ‘ನೀಡ್ಸ್ ಇಂಪ್ರೂವ್​ವೆುಂಟ್’ ಸಾರವೆಂದು ಮೂಲಗಳು ಅರ್ಥೈಸಿವೆ.
ಆಯ್ಕೆಯಾದ ಅಭ್ಯರ್ಥಿಗಳು ಸಮರ್ಥರಲ್ಲ, ಸರಿಯಾಗಿಲ್ಲವೆಂಬ ಅಪಸ್ವರ ವೈಯಕ್ತಿಕ ನೆಲೆಯಲ್ಲಿ ಬಂದಿತ್ತೇ ವಿನಃ ಸಂಘಟನೆ ಅಥವಾ ಪಕ್ಷದ ಅಭ್ಯರ್ಥಿ ಸೋಲು-ಗೆಲುವಿನ ವಿಚಾರವಾಗಿ ಅಲ್ಲವೆಂಬ ಅಂಶವೂ ವರದಿಯಲ್ಲಿ ಅಡಕವಾಗಿದೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜಿ ಸಂಧಾನ, ಅದಕ್ಕೆ ಪೂರಕವಾಗಿ ಅಮಿತ್ ಷಾ ಶಿಸ್ತಿನ ಪಾಠ, ಮೋದಿ ಚುನಾವಣೆಯಿದು ಎನ್ನುವ ಒಂದಂಶದ ಸೂತ್ರ ನಿಧಾನಕ್ಕೆ ವರ್ಕೌಟ್ ಆಗುತ್ತಿದೆ.
ಕೆಲವು ಕ್ಷೇತ್ರಗಳಲ್ಲಿ ಪರಿಸ್ಥಿತಿ ಸುಧಾರಿಸಿಲ್ಲವೆಂಬ ಮಾಹಿತಿ ಅರಿತು, ದೆಹಲಿಯಿಂದ ಮತ್ತೆ ಖಡಕ್ ಸೂಚನೆ ರವಾನಿಸಿದ ಬಳಿಕ ಎಲ್ಲ ಹಂತದ ಮುಖಂಡರು ಸೀದಾ ಆಗಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು. ಮುನಿದ ಮುಖಂಡರ ಮನವೊಲಿಕೆಗೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮುಂದಾಗಿರುವುದು ತುಮಕೂರು ಕ್ಷೇತ್ರದ ಗಮನಾರ್ಹ ಬೆಳವಣಿಗೆಯಾಗಿದೆ. ಜಿಪಂ ಮಾಜಿ ಸದಸ್ಯ ಮಲ್ಲೇಶ್ ಜತೆಗೆ ರ್ಚಚಿಸಿ ವಿ.ಸೋಮಣ್ಣ ಪರ ಕೆಲಸ ಮಾಡಲು ಸಲಹೆ ನೀಡಿದ್ದಾರೆ ಎಂದು ತಿಳಿದಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತೋರಿಕೆಗೆ ಹೊಂದಾಣಿಕೆಯಾಗಿದೆ ಎಂದು ವರಿಷ್ಠರಿಗೆ ಗೊತ್ತಾಗಿದೆ. ಈ ವರ್ತನೆ ಸಹಿಸಲ್ಲವೆಂಬ ಎಚ್ಚರಿಕೆ ಸಂದೇಶ ಕಳುಹಿಸಿದ್ದು, ಕ್ಷೇತ್ರ ಕಾರ್ಯದ ಮೇಲೆ ತಂಡವೊಂದು ನಿಗಾವಹಿಸಿದೆ ಎಂದು ಮೂಲಗಳು ಹೇಳಿವೆ.
‘ನೆಮ್ಮದಿಯ ನಿಟ್ಟುಸಿರು:ಜೆಡಿಎಸ್​ಗೆ ಬಿಟ್ಟುಕೊಟ್ಟ ಮೂರು ಕ್ಷೇತ್ರಗಳಲ್ಲಿ ಬಹುಬೇಗನೆ ರಾಜ್ಯ ನಾಯಕರ ಮಟ್ಟದಲ್ಲಿ ಸಮನ್ವಯ ಸಾಧಿಸಿರುವುದು ದೆಹಲಿ ನಾಯಕರಿಗೆ ಸಂತೃಪ್ತಿ ತಂದಿದೆ. ಟಿಕೆಟ್​ಗಳ ಹಂಚಿಕೆ ನಂತರದ ವಸ್ತುಸ್ಥಿತಿ ವರದಿಯನ್ನು ಯಡಿಯೂರಪ್ಪ, ವಿಜಯೇಂದ್ರ ವರಿಷ್ಠರಿಗೆ ರವಾನಿಸಿದ್ದರು. ದೆಹಲಿ ನಾಯಕರು ತಮ್ಮದೇ ಮೂಲದಿಂದ ತರಿಸಿಕೊಂಡ ವರದಿಯೊಂದಿಗೆ ತಾಳೆಹಾಕಿದ್ದರು. ಅಮಿತ್ ಷಾ ಬಂದು ಹೋದ ನಂತರದ ಪರಿಸ್ಥಿತಿ ಬಗ್ಗೆಯೂ ಬಿಎಸ್​ವೈ, ಬಿವೈವಿ ಕಾಲಕಾಲಕ್ಕೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಜತೆಗೆ ದೆಹಲಿ ನಾಯಕರು ತಮ್ಮದೇ ಆದ ತಂಡದಿಂದ ವರದಿ ತರಿಸಿಕೊಂಡು ನಿಗದಿತ ಸಾಧನೆಗೆ ಬೇಕಾದ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಕೋಲಾರ ಮತ್ತು ಹಾಸನ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದ ಸಮನ್ವಯ ಸಾಧಿಸುವುದು ಒಂದೆರಡು ಕ್ಷೇತ್ರಗಳಲ್ಲಿ ಬಾಕಿಯಿದ್ದು, ಅದನ್ನೂ ಸರಿದೂಗಿಸಲು ಉಭಯ ಪಕ್ಷಗಳ ನಾಯಕರು ಶ್ರಮಿಸುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗಿದ್ದು, ಸಂಸದೆ ಸುಮಲತಾ ಬಿಜೆಪಿಗೆ ಸೇರಿದ ನಂತರ ಪ್ರಚಾರ ಕಾರ್ಯಕ್ರಮ ವೇಳಾಪಟ್ಟಿಗೆ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.
‘ಸಂದಭೋಚಿತ’ ನಿರ್ಧಾರದ ಚಿಂತನೆ:ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್, ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪ ವಿಚಾರದಲ್ಲಿ ವರಿಷ್ಠರು ‘ಸಂದಭೋಚಿತ’ ನಿರ್ಧಾರ ತೆಗೆದುಕೊಳ್ಳುವ ಚಿಂತನೆ ನಡೆಸಿದ್ದಾರೆ. ತಕ್ಷಣಕ್ಕೆ ಕ್ರಮಕೈಗೊಂಡರೆ ಮೂವರೂ ಸ್ವತಂತ್ರರಾಗಿ ಬಿಡುತ್ತಾರೆ. ಪಕ್ಷದಲ್ಲೇ ಇದ್ದರೆ ಅವರನ್ನು ಅಳುಕು (ಬಿಜೆಪಿಯಲ್ಲಿದ್ದುಕೊಂಡು ವಿರುದ್ಧವಾಗಿ ಕೆಲಸ) ಬಾಧಿಸುತ್ತಲೇ ಇರುತ್ತದೆ. ಮೂವರ ವಿಷಯದಲ್ಲಿ ವಿಳಂಬ ನಿಲುವು ನಾಯಕತ್ವ ದುರ್ಬಲ ಇಲ್ಲವೇ ಪ್ರಬಲವೆಂದು ಮೇಲ್ನೋಟಕ್ಕೆ ರ್ತಸಬಹುದು. ಈ ನಡೆಯ ಹಿಂದೆಯೂ ಚುನಾವಣೆ ತಂತ್ರಗಾರಿಕೆಯಿದು, ಎಲ್ಲ ಬೆಳವಣಿಗೆ ಮೇಲೆ ಪಕ್ಷ ನಿಗಾವಹಿಸಿದೆ. ಪಕ್ಷದ ಅಭ್ಯರ್ಥಿಗೆ ಅನುಕೂಲವಾಗುವ ‘ಸಂದಭೋಚಿತ’ ನಿರ್ಧಾರ ಹೊರ ಬೀಳಲಿದೆ.
ಏ.15ರಿಂದ ಕಾರ್ಯಾಚರಣೆ:ಬೂತ್ ಮತ್ತು ಮಂಡಲಮಟ್ಟದಲ್ಲಿ ಪಕ್ಷದ ಸಂಘಟನಾತ್ಮಕ ಸಭೆಗಳನ್ನು ನಡೆಸಲಾಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಲ್ಲಿ ಏ.15ರಿಂದ ಎಲ್ಲ ಹಂತದ ಮುಖಂಡರು ಕ್ಷೇತ್ರ ಕಾರ್ಯಾಚರಣೆಗೆ ಇಳಿಯಲಿದ್ದಾರೆ.ಮನೆ ಮನೆಗೆ ಭೇಟಿ, ಯಾವ ತಂಡದಲ್ಲಿ ಯಾರು ಇತ್ಯಾದಿ ಒಳಗೊಂಡು ಪ್ರಚಾರ ಕಾರ್ಯಕ್ರಮದ ನೀಲಿನಕ್ಷೆ ಸಿದ್ಧವಾಗಿದೆ. ಅದರಂತೆಯೇ ಎಲ್ಲರೂ ತೊಡಗಿಕೊಂಡು ದೊಡ್ಡಮಟ್ಟದ ಅಲೆ ಎಬ್ಬಿಸಲಿದ್ದಾರೆ.
ಅದೆಲ್ಲಕ್ಕಿಂತ ಮುಖ್ಯವಾಗಿ ಏ.15 ರಿಂದ 17ರವರೆಗೆ ನಡೆಯಲಿರುವ ಮನೆ ಮನೆ ಪ್ರಚಾರದ ವರದಿ, ವಿಡಿಯೋ, ಫೋಟೊ ಸಹಿತ ನಮೋ ಮತ್ತು ಸರಳ್ ಆಪ್​ನಲ್ಲಿ ಅಪ್​ಲೋಡ್ ಆಗಲಿದೆ. ದೆಹಲಿ ನಾಯಕರ ಗಮನಿಸುತ್ತಾರೆ ಎನ್ನುವುದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಗೊತ್ತಿದೆ ಎಂದು ಮೂಲಗಳು ತಿಳಿಸಿವೆ.
ಎಲೆಕ್ಷನ್ ಬಳಿಕ ಬಿಜೆಪಿಯಲ್ಲಿ ಜೆಡಿಎಸ್ ವಿಲೀನ: ಕಲಬುರಗಿ:ಎಲೆಕ್ಷನ್ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದು ಬೀಳುತ್ತದೆ ಇಲ್ಲವೆ ಬಿಜೆಪಿಯವರು ಅವರನ್ನು ಓಡಿಸುತ್ತಾರೆ. ಇಲ್ಲವಾದ್ರೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಕಿಚಾಯಿಸಿದರು. ಒಂದು ವರ್ಷದಲ್ಲಿ ರಾಜಕೀಯ ಬದಲಾವಣೆ ಆಗುತ್ತದೆ ಎಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರೇ ಭವಿಷ್ಯ ನುಡಿದಿದ್ದಾರೆ. ಇನ್ನು ಹೇಳುವುದೇನಿದೆ? ಬಿಜೆಪಿಯಲ್ಲಿ ವಿಲೀನಗೊಂಡು ಜೆಡಿಎಸ್ ಮುಂದಿನ ವರ್ಷ ಇರುವುದಿಲ್ಲ. ಕಲ್ಯಾಣ ಕರ್ನಾಟಕದ ಎಲ್ಲ ಸ್ಥಾನ ಗೆಲ್ಲುವ ಶಕ್ತಿ ನಮ್ಮಲ್ಲಿದೆ ಎಂದರು.

ಬೆಂಗಳೂರು:ಲೋಕಸಭೆ ಚುನಾವಣೆಗೆ ಹಣಾಹಣಿ ಕಣ ಸಿದ್ಧವಾದ ಕ್ಷೇತ್ರಗಳಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ಪ್ರವಾಸ, ಪ್ರಚಾರ ಕಾರ್ಯಕ್ರಮಗಳು ತರ್ಕಬದ್ಧ ಸೂತ್ರದಲ್ಲಿ ರೂಪು ಗೊಂಡಿರುತ್ತವೆ. ಪ್ರತಿಯೊಂದು ಕ್ಷೇತ್ರದ ಪ್ರಚಾರ ಪೂರ್ವ, ನಂತರದ ವರದಿ ಸಲ್ಲಿಕೆಯಾಗುತ್ತದೆ. ಮುಖ್ಯವಾಗಿ ಅಭ್ಯರ್ಥಿ ಕೋರಿಕೆ, ‘ಪ್ರಭಾವ ಬೀರುವ’ ಮಾಹಿತಿ ಆಧಾರದಲ್ಲಿ ಕಾರ್ಯಕ್ರಮದ ರೂಪರೇಷೆ ಅಂತಿಮವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಏ.14ರ ಕಾರ್ಯಕ್ರಮ ಪದೇಪದೆ ಮಾರ್ಪಾಟಿಗೂ ಇದೇ ಸೂತ್ರ ಕಾರಣವಾಗಿದೆ. ಅಳೆದೂ ತೂಗಿ ಮೋದಿಯವರ ಎರಡನೇ ಸುತ್ತಿನ ರಾಜ್ಯ ಪ್ರವಾಸ ಫೈನಲ್ ಮಾಡಲಾಗಿದೆ. ಮೈಸೂರಿನಲ್ಲಿ ಏ.14ರ ಸಂಜೆ 4ಕ್ಕೆ ಆಯೋಜಿಸಿರುವ ಸಮಾವೇಶದಲ್ಲಿ ಮೋದಿ ಜತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವೇದಿಕೆ ಹಂಚಿಕೊಳ್ಳಲಿದ್ದು, ಸಂಸದೆ ಸುಮಲತಾ ಅಂಬರೀಷ್​ಗೂ ಆಹ್ವಾನ ನೀಡುವ ಸಾಧ್ಯತೆಗಳಿವೆ. ಅದೇ ದಿನ ಸಂಜೆ 6ಕ್ಕೆ ಮಂಗಳೂರಿನಲ್ಲಿ ಮೋದಿ ರೋಡ್ ನಡೆಸಿ, ಅಭ್ಯರ್ಥಿ ಪರವಾಗಿ ಮತಬೇಟೆಗೆ ಇಳಿಯಲಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದಂತೆ ಕ್ಷೇತ್ರದ ಅಭ್ಯರ್ಥಿ ಬದಲಾಗಿದ್ದಾರೆ ಎಂಬ ಸ್ಪಷ್ಟ ಸಂದೇಶ ನೀಡಲಿದ್ದಾರೆ.
ಏ.21, 22ರಂದು ಯೋಗಿ ಪ್ರವಾಸ:ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಾತ್ಪೂರ್ತಿಕ ವೇಳಾಪಟ್ಟಿ ಪ್ರಕಾರ ಏ.21, 22ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಒಕ್ಕಲಿಗ ಬಾಹುಳ್ಯದ ಕ್ಷೇತ್ರಗಳಲ್ಲಿ ಹೆಚ್ಚು ಪ್ರಚಾರ ಮಾಡಲಿದ್ದಾರೆ. ಮೋದಿ, ಯೋಗಿ ಆದಿತ್ಯನಾಥ್ ಪ್ರವಾಸ, ಪ್ರಚಾರ ಕೈಗೊಂಡ ಕ್ಷೇತ್ರಗಳನ್ನು ಹೊರತುಪಡಿಸಿ ಅಮಿತ್ ಷಾ ಪ್ರಚಾರದ ಸ್ಥಳಗಳು ಅಂತಿಮವಾಗಲಿವೆ. ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜತೆಗೆ ರಣವ್ಯೂಹದ ಪ್ರಗತಿ ಪರಾಮರ್ಶೆ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಿರುವ ಕಾರಣ ಅಮಿತ್ ಷಾ ಮತ್ತೆ ಎರಡು ದಿನ ರಾಜ್ಯದಲ್ಲಿ ಬಿಡಾರ ಹೂಡುವ ನಿರೀಕ್ಷೆಯಿದೆ.
ರಾಷ್ಟ್ರ ನಾಯಕರ ಪ್ರವಾಸ ಸರದಿ:ಮೊದಲ ಹಂತದ 14 ಕ್ಷೇತ್ರಗಳ ಪ್ರಚಾರ ಕಾರ್ಯಕ್ರಮ ಗಳಿಗೆ ಪಕ್ಷದ ರಾಷ್ಟ್ರೀಯ ನಾಯಕರ ಪ್ರವಾಸ ಮತ್ತು ಪ್ರಚಾರ ಸಭೆಗಳ ಸರದಿ ಗೊತ್ತುಪಡಿಸಲಾಗಿದೆ. ಕೇಂದ್ರ ಸಚಿವರಾದ ಅಮಿತ್ ಷಾ, ಎಸ್.ಜೈಶಂಕರ್, ರಾಜನಾಥ್ ಸಿಂಗ್, ಮೀನಾಕ್ಷಿ ಲೇಖಿ, ನಿತಿನ್ ಗಡ್ಕರಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಗೋವಾ ಸಿಎಂ ಪ್ರಮೋದ ಸಾವಂತ್ ಇತರ ನಾಯಕರು ಈ ಪಟ್ಟಿಯಲ್ಲಿದ್ದಾರೆ. ಮೋದಿಯವರು ಏ.19 ಅಥವಾ 20ರಂದು ತುಮಕೂರು ಮತ್ತು ಬೆಂಗಳೂರು ಭಾಗದಲ್ಲಿ ಮೊದಲ ಹಂತದ ಕೊನೇ ಸುತ್ತಿನ ಪ್ರಚಾರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಆಂತರಿಕ ಸಮಸ್ಯೆ:ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರದಲ್ಲಿ ಆಂತರಿಕ ತಿಕ್ಕಾಟ
ಓರೆಕೋರೆ:ಕೋಲಾರ ಮತ್ತು ಹಾಸನ ಕ್ಷೇತ್ರಗಳಲ್ಲಿ ಸಮನ್ವಯ ತಳಮಟ್ಟಕ್ಕೆ ವಿಸ್ತರಣೆಯಲ್ಲಿ ವ್ಯತ್ಯಾಸ
ಬಗೆಹರಿಯದ ಬಿಕ್ಕಟ್ಟು:ಉತ್ತರಕನ್ನಡ, ರಾಯಚೂರು, ಬೆಳಗಾವಿ ಕ್ಷೇತ್ರಗಳಲ್ಲಿ ಎಲ್ಲರೂ ಒಂದಾಗಿಲ್ಲ.
ಬೆರೆಯಲು ಹಿಂಜರಿಕೆ:ಬೀದರ್, ರಾಯಚೂರು ಸೇರಿ ಜೆಡಿಎಸ್ ಶಕ್ತಿಯಿರುವ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಮುಖಂಡರ ಮಧ್ಯೆ ಬೆಸುಗೆಯಾಗಿಲ್ಲ
ಪಂಜಾಬ್ ಪ್ರಾಂತ್ಯದ ಪೊಲೀಸರ ಮೇಲೆ ಪಾಕ್ ಸೇನೆಯಿಂದ ಹಲ್ಲೆ! ಅಷ್ಟಕ್ಕೂ ಆಗಿದ್ದೇನು..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
