ಬೆಂಗಳೂರು:ಹಿಂದುಳಿದ ವರ್ಗಗಳ ಮೀಸಲು ಬುಟ್ಟಿಗೆ ಕೈಹಾಕದೆ ಪರಿಶಿಷ್ಟ ಜಾತಿ, ಪಂಗಡಗಳ ಪ್ರಮಾಣವನ್ನು ತಕ್ಷಣಕ್ಕೆ ಕ್ರಮವಾಗಿ ಶೇ.2 ಹಾಗೂ ಶೇ.4 ಹೆಚ್ಚಳ ಮಾಡಬೇಕು ಮತ್ತು 2020ರ ಜನಸಂಖ್ಯೆ ಪರಿಗಣಿಸಿದರೆ ಎಸ್ಸಿಗೆ ಶೇ.5 ಹಾಗೂ ಎಸ್ಟಿಗೆ ಶೇ.4.5 ಮೀಸಲಾತಿ ಏರಿಸಬೇಕು ಎಂದು ನ್ಯಾ. ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಶಿಫಾರಸು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ಭೇಟಿಯಾದ ನ್ಯಾ. ನಾಗಮೋಹನ ದಾಸ್ ಆಯೋಗ 8 ತಿಂಗಳ ಕಾಲ ಅಧ್ಯಯನ ನಡೆಸಿ ತಯಾರಿಸಿದ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿತು. ಲಾಕ್​ಡೌನ್ ಕಾರಣವೊಡ್ಡಿ ಗಡುವು ವಿಸ್ತರಣೆಗೆ ಕೇಳದೆ, ಸರ್ಕಾರ ನಿಗದಿಪಡಿಸಿದ ಕಾಲಮಿತಿಯೊಳಗೆ ಆಯೋಗ ತನ್ನ ಹೊಣೆಗಾರಿಕೆ ನಿರ್ವಹಿಸಿದೆ.
ಶಿಕ್ಷಣ ಹಾಗೂ ಉದ್ಯೋಗದಲ್ಲಿ ಎಸ್ಸಿಗೆ ಮೀಸಲು ಪ್ರಮಾಣವನ್ನು ಹಾಲಿ ಶೇ.15 ರಿಂದ 17ಕ್ಕೆ ಮತ್ತು ಎಸ್ಟಿಗೆ ಶೇ.3 ರಿಂದ 7ಕ್ಕೆ ಹೆಚ್ಚಿಸಬೇಕು. ಜತೆಗೆ 2020ರ ಜನಸಂಖ್ಯೆ ಪರಿಗಣಿಸಿ, ಎಸ್ಸಿಗೆ ಶೇ.20 ಮತ್ತು ಎಸ್ಟಿಗೆ ಶೇ.7.5ಕ್ಕೆ ಮೀಸಲು ಪ್ರಮಾಣ ಏರಿಸಬೇಕು ಎನ್ನುವುದು ವರದಿಯ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ.
ಮೀಸಲು ಸೌಲಭ್ಯ ವಂಚಿತ, ನಿರ್ಲಕ್ಷಿತ ಸಮುದಾಯಗಳಾದ ಆದಿವಾಸಿ, ಅಲೆಮಾರಿ ಹಾಗೂ ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ 4 ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿರುವುದಾಗಿ ಮೂಲಗಳು ಹೇಳಿವೆ.
ಹಿಂದುಳಿದ ವರ್ಗಗಳ ಶೇ.27ರ ಮೀಸಲು ರಕ್ಷಿಸಿಕೊಂಡು ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸುವುದಕ್ಕಾಗಿ ಒಟ್ಟಾರೆ ಮೀಸಲು ಪ್ರಮಾಣ ಶೇ.50ರ ಗಡಿ ದಾಟುವುದಕ್ಕೂ ಸಂವಿಧಾನಬದ್ಧ ಅವಕಾಶಗಳಿವೆ ಎಂದು ವರದಿ ಸರ್ಕಾರಕ್ಕೆ ಸ್ಪಷ್ಟ ದಿಕ್ಸೂಚಿ ತೋರಿಸಿಕೊಟ್ಟಿದೆ. ಇದಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್​ನ 40 ತೀರ್ಪಗಳ ಪರಾಮರ್ಶೆ, ಉತ್ತರಾಖಂಡ, ಜಾರ್ಖಂಡ್, ಮಹಾರಾಷ್ಟ್ರ ಹಾಗೂ ತಮಿಳುನಾಡು ಸರ್ಕಾರಗಳ ನಿರ್ಧಾರಗಳ ಸಹಿತ ಹಲವಾರು ನಿದರ್ಶನಗಳು, ಅಗತ್ಯ ದಾಖಲೆಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಆಯೋಗವು ಕ್ಷೇತ್ರ ಕಾರ್ಯ, ವಿಭಾಗೀಯ ಸಮಾಲೋಚನಾ ಸಭೆಗಳು, 46 ವಿವಿಧ ಸಮುದಾಯಗಳ ಜತೆಗೆ ಸಂಪರ್ಕ ಸಭೆಗಳು, 852 ಲಿಖಿತ ಅಹವಾಲು, ವಿವಿಧ ಕ್ಷೇತ್ರಗಳ ತಜ್ಞರು, 47 ವಿವಿಧ ಸರ್ಕಾರಿ ಸಂಸ್ಥೆಗಳಿಂದ ಮಾಹಿತಿ ಹಾಗೂ ದತ್ತಾಂಶ ಸಂಗ್ರಹಿಸಿ, 169 ರಾಜ್ಯ ಹಾಗೂ ರಾಷ್ಟ್ರಮಟ್ಟದ ಲೇಖಕರ ಪುಸ್ತಕಗಳನ್ನು ಅವಲೋಕಿಸಿ ಸ್ಥೂಲ ವರದಿಯನ್ನು ಸಿದ್ಧಪಡಿದೆ.
ವರದಿ ಸಲ್ಲಿಕೆ ವೇಳೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ, ಆಯೋಗದ ಸದಸ್ಯ ಕಾರ್ಯದರ್ಶಿ ಸಾಬೀರ್ ಅಹಮದ್ ಮುಲ್ಲಾ, ತಜ್ಞರ ಸಮಿತಿ ಸದಸ್ಯರಾದ ಆರ್ಥಿಕ ತಜ್ಞ ಡಾ.ಟಿ.ಆರ್.ಚಂದ್ರಶೇಖರ್, ವಕೀಲ ಎನ್.ಅನಂತನಾಯಕ್, ಹಿರಿಯ ಲೇಖಕಿ ಡಾ. ಕೆ.ಆರ್. ಸಂಧ್ಯಾರೆಡ್ಡಿ ಹಾಗೂ ಸಮಾಜಶಾಸ್ತ್ರ ತಜ್ಞ ಬಿ.ರಾಜಶೇಖರ ಮೂರ್ತಿ ಇದ್ದರು.
ಗೌಪ್ಯ ಸಮಾಲೋಚನೆ
ನ್ಯಾ. ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ಆಯೋಗದ ವರದಿ ಸಲ್ಲಿಕೆ ಪ್ರಕ್ರಿಯೆಯನ್ನು ಅತ್ಯಂತ ಗೌಪ್ಯವಾಗಿ ನಿರ್ವಹಿಸಲಾಯಿತು. ವರದಿ ಸ್ವೀಕರಿಸಿದ ಸಿಎಂ, ಜಸ್ಟಿಸ್ ದಾಸ್ ಜತೆ ವಿಚಾರ ವಿನಿಮಯ ನಡೆಸಿದರು. ಮೀಸಲು ಪ್ರಮಾಣ ಹೆಚ್ಚಳಕ್ಕಾಗಿ ಎರಡೂ ಸಮುದಾಯಗಳಿಂದ ಒತ್ತಡವಿತ್ತು. ಕಡಿಮೆ ಕಾಲಾವಧಿಯಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗಿದೆ. ಶೀಘ್ರ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಪರಿಶೀಲಿಸಲಾಗುವುದು ಎಂಬ ಭರವಸೆ ಸಿಎಂ ನೀಡಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮೀಸಲಾತಿ ಪ್ರಮಾಣ
ಪರಿಶಿಷ್ಟ ಜಾತಿ ಶೇ. 15
ಪರಿಶಿಷ್ಟ ಪಂಗಡ ಶೇ. 3
ಹಿಂದುಳಿದ ವರ್ಗಗಳು ಶೇ. 32
ಹಿಂದುಳಿದ ವರ್ಗದಲ್ಲಿ ಯಾವ ವರ್ಗಕ್ಕೆ ಎಷ್ಟು
ಕ್ಯಾಟಗರಿ 1 ಶೇ. 4
ಕ್ಯಾಟಗರಿ 2(ಎ) ಶೇ. 15
ಕ್ಯಾಟಗರಿ 2(ಬಿ) ಶೇ.4
ಕ್ಯಾಟಗರಿ 3 (ಎ) ಶೇ. 4
ಕ್ಯಾಟಗರಿ 3(ಬಿ) ಶೇ.5
ಅಮೆರಿಕಕ್ಕೂ ರಫ್ತಾಗಿದೆ ಜಾತಿ ವ್ಯವಸ್ಥೆಯ ಕರಾಳ ಮುಖ; ದಲಿತನ ವಿರುದ್ಧದ ದೌರ್ಜನ್ಯಕ್ಕೆ ಕಂಪನಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 15 =
Remember me
