| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಸಾರ್ವಜನಿಕರು ತಮ್ಮ ಆಸ್ತಿಯನ್ನು ತಮಗೆ ಅನುಕೂಲದ ಯಾವುದೇ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.
ಬೆಂಗಳೂರಿನಲ್ಲಿರುವ ಐದು ಸಬ್ ರಿಜಿಸ್ಟ್ರಾರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ 2015ರಲ್ಲಿ ಜಾರಿಗೆ ತಂದ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಕಾರ್ಯ ಆಗಿರಲಿಲ್ಲ. ಇದೀಗ ಸರ್ಕಾರ ಅತಿಶೀಘ್ರದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಿದೆ. ಇದರಿಂದ ಆಸ್ತಿಗಳ ನೋಂದಣಿ ಕಾರ್ಯ ಸರಳವಾಗಲಿದೆ ಎಂದೇ ಸರ್ಕಾರ ವಿಶ್ವಾಸ ಹೊಂದಿದೆ.
ನೋಂದಣಿಯಲ್ಲಿ ಶೇ.70ರಷ್ಟು ಬೆಂಗಳೂರಿನಲ್ಲಿಯೇ ಆಗುತ್ತಿದೆ. ಉಳಿದ ಶೇ.30ರಷ್ಟು ನೋಂದಣಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆಗುತ್ತಿದೆ. ಆದರೂ, ಅಲ್ಲಿ ಸೇವೆ ಪಡೆಯಲು ಬರುವವರಿಗೆ ಸುಲಭ ವ್ಯವಸ್ಥೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ವರ್ಷಕ್ಕೆ ಅಂದಾಜು 25 ಲಕ್ಷ ನೋಂದಣಿಯಾಗುತ್ತವೆ. ಸರ್ಕಾರ ಈ ವರ್ಷ 25 ಸಾವಿರ ಕೋಟಿ ರೂ.ಗಳ ತೆರಿಗೆ ಸಂಗ್ರಹಣೆ ಗುರಿ ನಿಗದಿ ಮಾಡಿದ್ದು, ಸಾಧನೆಯಾಗುವ ನಿಟ್ಟಿನಲ್ಲಿ ವ್ಯವಸ್ಥೆ ಇದೆ.
ಪ್ರಾಯೋಗಿಕ ಜಾರಿ: ಬೆಂಗಳೂರು ನಗರದಲ್ಲಿ ಜಾರಿಗೆ ಬಂದಿರುವ ಈ ವ್ಯವಸ್ಥೆ ತಕ್ಷಣಕ್ಕೆ ಉಳಿದ 30 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಆರಂಭವಾಗುವುದಿಲ್ಲ. ಬದಲಾಗಿ ಪ್ರಾಯೋಗಿಕವಾಗಿ ತುಮಕೂರು ಮತ್ತು ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುತ್ತದೆ. ಅಲ್ಲಿ ಒಂದೆರಡು ತಿಂಗಳು ವ್ಯವಸ್ಥೆ ಗಮನಿಸಿದ ನಂತರ ಉಳಿದ ಜಿಲ್ಲೆಗಳಲ್ಲಿಯೂ ಅನುಷ್ಠಾನ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಯಶಸ್ವಿ:ಬೆಂಗಳೂರಿನಲ್ಲಿ ಜಯನಗರ, ಶಿವಾಜಿನಗರ, ಬಸವನಗುಡಿ, ಗಾಂಧಿನಗರ ಹಾಗೂ ರಾಜಾಜಿನಗರ ಸಬ್ ರಿಜಿಸ್ಟ್ರಾರ್ ಜಿಲ್ಲೆಗಳಿವೆ. ಅವುಗಳ ವ್ಯಾಪ್ತಿಯಲ್ಲಿ 43 ಸಬ್ ರಿಜಿಸ್ಟ್ರಾರ್ ಕಚೇರಿಗಳಿವೆ. ಯಾರು ಎಲ್ಲಿಂದ ಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಅದು ಎಲ್ಲ ರೀತಿಯ ಪರೀಕ್ಷೆಗಳಲ್ಲಿಯೂ ಯಶಸ್ವಿಯಾಗಿ ನಡೆಯುತ್ತಿದೆ. ಎರಡನೇ ಹಂತದಲ್ಲಿ ರಾಜ್ಯಾದ್ಯಂತ 42 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಬೇಕೆಂದು ಸರ್ಕಾರ ಯೋಜನೆ ರೂಪಿಸಿತ್ತು. ಆದರೆ, ಬೇರೆ ಬೇರೆ ಕಾರಣಗಳಿಗೆ ಸಾಧ್ಯವಾಗಿರಲಿಲ್ಲ.
ಕಾನೂನು ತಿದ್ದುಪಡಿ ಚರ್ಚೆ:ಎಲ್ಲಿಂದ ಬೇಕಾದರೂ ಆಸ್ತಿ ನೋಂದಣಿ ವ್ಯವಸ್ಥೆ ಜಾರಿಗೆ ತರಲು ನೋಂದಣಿ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆಯೇ ಎಂಬ ಬಗ್ಗೆಯೂ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಆದರೆ, ಅಂತಿಮವಾಗಿ ಅಧಿಕಾರಿಗಳು ಕಾನೂನು ತಿದ್ದುಪಡಿಯ ಅಗತ್ಯವಿಲ್ಲ, ಇರುವ ಕಾನೂನಿನಲ್ಲಿಯೇ ಅವಕಾಶಗಳಿವೆ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಕಂದಾಯ ಇಲಾಖೆಯ ಮೂಲಗಳು ಹೇಳಿವೆ.
ವ್ಯವಸ್ಥೆ ಹೇಗೆ?:ಮೊದಲಿಗೆ ಆಯಾ ಜಿಲ್ಲೆಯ ವ್ಯಾಪ್ತಿಯ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಬಹುದು. ಮುಂದಿನ ವಿಸ್ತರಣೆ ಸಂದರ್ಭದಲ್ಲಿ ಯಾರು ಯಾವುದೇ ಜಿಲ್ಲೆಯಿಂದ ಬೇಕಾದರೂ ನೋಂದಣಿ ಮಾಡಿಸಬಹುದಾದ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಅದಕ್ಕೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಅಧಿಕಾರಿಗಳಿಗೂ ಆಸಕ್ತಿಯೇ ಇಲ್ಲ:ಕೆಲಸ ಕಡಿಮೆ ಇರುವ ಕಚೇರಿಗಳಿಗೆ ಹೋಗಲು ಸಬ್ ರಿಜಿಸ್ಟ್ರಾರ್​ಗಳು ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಅನೇಕ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಬ್ ರಿಜಿಸ್ಟ್ರಾರ್​ಗಳಿಲ್ಲ, ಬದಲಾಗಿ ಕೆಳಹಂತದ ಸಿಬ್ಬಂದಿ ಪ್ರಭಾರ ಸೇವೆಯಲ್ಲಿರುವ ಉದಾಹರಣೆಗಳಿವೆ. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕುವ ಉದ್ದೇಶವನ್ನು ಸರ್ಕಾರ ಹೊಂದಿದೆ. ನೋಂದಣಿಗಳು ಹೆಚ್ಚಿಗೆ ನಡೆಯುತ್ತವೆ ಎಂದರೆ ಅಂತಹ ಕಡೆಗೆ ಹೋಗಲು ಅಧಿಕಾರಿಗಳು ಆಸಕ್ತಿ ತೋರಿಸುತ್ತಾರೆ ಎಂಬುದು ಸರ್ಕಾರದಲ್ಲಿರುವ ಅಭಿಪ್ರಾಯವಾಗಿದೆ.
ತೆರಿಗೆ ಸಂಗ್ರಹ ಹೆಚ್ಚಳವಿಲ್ಲ:ಎಲ್ಲಿಂದ ಬೇಕಾದರೂ ಆಸ್ತಿ ನೋಂದಣಿ ವ್ಯವಸ್ಥೆ ಜಾರಿಗೆ ತರುವುದರಿಂದ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳವೇನೂ ಆಗುವುದಿಲ್ಲ. ಬದಲಾಗಿ ಜನರಿಗೆ ಸುಲಭ ಮತ್ತು ಶೀಘ್ರದಲ್ಲಿ ಸೇವೆ ಲಭ್ಯವಾಗುತ್ತದೆ. ತೆರಿಗೆ ಸಂಗ್ರಹಣೆಯ ನಿಗದಿತ ಗುರಿ ಸಾಧನೆಯಾದರೂ ಬದಲಾವಣೆ ಏನೂ ಆಗುವುದಿಲ್ಲ. ಸರ್ಕಾರ ಈ ಆರ್ಥಿಕ ವರ್ಷಕ್ಕೆ 25 ಸಾವಿರ ಕೋಟಿ ರೂ.ಗಳ ನಿಗದಿ ಮಾಡಿದ್ದು ಅಷ್ಟು ಸಾಧನೆಯಾಗಲಿದೆ ಎಂದು ಮೂಲಗಳು ವಿಶ್ವಾಸ ವ್ಯಕ್ತಪಡಿಸುತ್ತವೆ.
ಉದ್ದೇಶವೇನು?:ಆಸ್ತಿ ನೋಂದಣಿಯಲ್ಲಿ ಈ ಹೊಸ ವ್ಯವಸ್ಥೆ ತರುತ್ತಿರುವುದು ಜನರಿಗೆ ತ್ವರಿತವಾಗಿ ಸೇವೆ ನೀಡಬೇಕೆಂಬ ಉದ್ದೇಶವನ್ನು ಹೊಂದಿದೆ. ಕೆಲವು ನೋಂದಣಾಧಿಕಾರಿ ಕಚೇರಿಯಲ್ಲಿ ದಿನಕ್ಕೆ 70 ರಿಂದ 80 ನೋಂದಣಿಯಾದರೆ, ಉಳಿದ ಕೆಲವು ಕಡೆಗಳಲ್ಲಿ ದಿನಕ್ಕೆ 20 ನೋಂದಣಿಯೂ ಆಗುತ್ತಿಲ್ಲ. ಹೆಚ್ಚು ನೋಂದಣಿಯಾಗುವ ಕಚೇರಿಗಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿದರೆ ಜನರ ಕಾಯುವ ಸಮಯ ಉಳಿತಾಯವಾಗುತ್ತದೆ. ಎಲ್ಲ ಕಚೇರಿಗಳಿಗೂ ಕೆಲಸದ ಸಮಾನ ಹಂಚಿಕೆಯಾಗುತ್ತದೆ. ಜನ ಆರಾಮವಾಗಿ ದಾಖಲೆಗಳೊಂದಿಗೆ ಹೋಗಿ ನೋಂದಣಿ ಮಾಡಿಸಿಕೊಂಡು ಬರಬಹುದಾಗಿದೆ.
ಆಸ್ತಿ ನೋಂದಣಿಯಲ್ಲಿ ಇನ್ನಷ್ಟು ಸರಳತೆಯನ್ನು ತರಲು ಮುಂದಾಗಿದ್ದೇವೆ. ಬೆಂಗಳೂರಿನಲ್ಲಿ ಯಾವುದೇ ದೂರುಗಳು ಇಲ್ಲದೇ ಎಲ್ಲಿಂದ ಬೇಕಾದರೂ ನೋಂದಣಿ ಅತ್ಯುತ್ತಮವಾಗಿ ನಡೆಯುತ್ತಿದೆ. ರಾಜ್ಯಾದ್ಯಂತ ಜಾರಿಗೆ ತರಲು ಪ್ರಾಯೋಗಿ ಕವಾಗಿ 2 ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದೇವೆ. ನಂತರ ಎಲ್ಲ ಕಡೆ ಏಕಕಾಲಕ್ಕೆ ವಿಸ್ತರಣೆ ಮಾಡುತ್ತೇವೆ.
| ಕೃಷ್ಣ ಬೈರೇಗೌಡ ಕಂದಾಯ ಸಚಿವ

ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + one =
Remember me
