| ಜಗನ್ ರಮೇಶ್ ಬೆಂಗಳೂರು
ಮೆಟ್ರೋ ರೈಲು ನಿಲ್ದಾಣದಲ್ಲಿ ತಾಂತ್ರಿಕ ದೋಷದ ಕಾರಣದ ಸ್ವಯಂಚಾಲಿತ ಬಾಗಿಲಿಗೆ ಸಿಲುಕಿ ಗಾಯಗೊಂಡಿದ್ದ ಪ್ರಯಾಣಿಕರೊಬ್ಬರಿಗೆ 40 ಸಾವಿರ ರೂ. ಪರಿಹಾರ ನೀಡುವಂತೆ ಬಿಎಂಆರ್​ಸಿಎಲ್​ಗೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಪ್ರಯಾಣಿಕರ ಸುರಕ್ಷತೆಗೆ ಒತ್ತು ಕೊಡುವುದು ನಿಗಮದ ಕರ್ತವ್ಯ ಎಂದು ಹೇಳಿದೆ.
ಕೆ.ಪಿ. ಅಯ್ಯಪ್ಪ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿದೆಯಾದರೂ ಸಿಬ್ಬಂದಿ ನಿರ್ಲಕ್ಷ ದಿಂದಲೇ ದೂರುದಾರರು ತೊಂದರೆಗೀಡಾಗಿದ್ದಾರೆ ಎಂಬ ತೀರ್ವನಕ್ಕೆ ಬಂದಿದೆ.
ದೂರುದಾರಿಗಾದ ಅನನುಕೂಲಕ್ಕೆ ಪರಿಹಾರವಾಗಿ 10 ಸಾವಿರ ರೂ., 5 ಸಾವಿರ ರೂ. ವೈದ್ಯಕೀಯ ವೆಚ್ಚ ಹಾಗೂ 5 ಸಾವಿರ ರೂ. ವ್ಯಾಜ್ಯ ವೆಚ್ಚವನ್ನು ಪಾವತಿಸಬೇಕು. ಚಿಕಿತ್ಸೆಯ ಸಂದರ್ಭದಲ್ಲಿ ಕೆಲಸ ಮಾಡಲಾಗದೆ ಅವರು ಅನುಭವಿಸಿರುವ ಆರ್ಥಿಕ ನಷ್ಟಕ್ಕೆ ದಿನಕ್ಕೆ 1 ಸಾವಿರದಂತೆ ಒಟ್ಙ್ಟು 20 ದಿನಗಳ ಅವಧಿಗೆ ಹಣ ಪಾವತಿಸಬೇಕು ಎಂದು ಬಿಎಂಆರ್​ಸಿಎಲ್​ಗೆ ನಿರ್ದೇಶಿಸಿದೆ.
ನಡೆದಿದ್ದೇನು?:2018ರ ಫೆ.23ರಂದು ಅಯ್ಯಪ್ಪ ಹೊಸಹಳ್ಳಿಯ ಬಾಲಗಂಗಾಧರಸ್ವಾಮಿ ಮೆಟ್ರೋ ನಿಲ್ದಾಣದ ಆಟೊಮ್ಯಾಟಿಕ್ ಫೇರ್ ಕಲೆಕ್ಷನ್ (ಎಎಫ್​ಸಿ) ಗೇಟ್ ಮೂಲಕ ಪ್ಲಾಟ್​ಫಾರಂಗೆ ಹೋಗುತ್ತಿದ್ದರು. ತಮ್ಮ ಪರ್ಸ್ ಒಳಗಿದ್ದ ಮೆಟ್ರೋ
ಸ್ಮಾರ್ಟ್ ಕಾರ್ಡ್ ಅನ್ನು ಗೇಟ್ ಬಳಿ ಇದ್ದ ಸೆನ್ಸರ್ ಮೇಲಿಟ್ಟಿದ್ದರು. ಆದರೆ, ಗೇಟ್ ತೆರೆದುಕೊಂಡಿರಲಿಲ್ಲ. ಕಾರ್ಡನ್ನು ಪರ್ಸ್​ನಿಂದ ಹೊರತೆಗೆದು ಬಳಸಿದಾಗ ಗೇಟ್ ತೆರೆದುಕೊಂಡಿತ್ತು. ಅದರ ಮೂಲಕ ಹಾದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಗೇಟ್​ಗಳು ಮುಚ್ಚಿಕೊಂಡಿದ್ದವು. ಅವುಗಳ ಮಧ್ಯೆ ಸಿಲುಕಿದ ಅಯ್ಯಪ್ಪ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು.
ಆಸ್ಪತ್ರೆಗೆ ತೆರಳಿದ ಅಯ್ಯಪ್ಪ ವೈದ್ಯರ ಸಲಹೆ ಮೇರೆಗೆ ಎಕ್ಸ್​ರೇ ಮಾಡಿಸಿದ್ದರು. ಅದರಲ್ಲಿ ಪಾದದ ಮೂಳೆಯಲ್ಲಿ ಬಿರುಕು ಬಿಟ್ಟಿರುವುದು ಕಂಡುಬಂದಿತ್ತು. ಚಿಕಿತ್ಸೆ ಪಡೆದ ಅವರು ಘಟನೆ ಕುರಿತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಆದರೆ, ಅಲ್ಲಿಂದ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ ಎಂದು ಆಕ್ಷೇಪಿಸಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಮೆಟ್ರೋ ನಿಲ್ದಾಣದ ತಾಂತ್ರಿಕ ವಿಭಾಗದ ಸಿಬ್ಬಂದಿಯ ನಿರ್ಲಕ್ಷದಿಂದಲೇ ಅವಘಡ ಸಂಭವಿಸಿದೆ. ಇದರಿಂದ, ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿ ನಷ್ಟ ಅನುಭವಿಸಿದ್ದು, ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೋರಿದ್ದರು.
ದೂರುದಾರರದ್ದೇ ನಿರ್ಲಕ್ಷವೆಂದ ಮೆಟ್ರೋ:ಘಟನೆ ದಿನದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕೋರ್ಟ್​ಗೆ ಸಲ್ಲಿಸಿದ್ದ ಬಿಎಂಆರ್​ಸಿಎಲ್, ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟೆಕ್ನಾಲಜಿ (ಆರ್​ಎಫ್​ಐಡಿ) ಹೊಂದಿರುವ ಸ್ಮಾರ್ಟ್ ಕಾರ್ಡ್ ಪರ್ಸ್ ಒಳಗಿದ್ದರೂ ಕೆಲಸ ಮಾಡುತ್ತದೆ. ಆದರೆ, ಮಧ್ಯೆ ಯಾವುದಾದರೂ ಲೋಹದಂಥ ವಸ್ತುಗಳಿದ್ದರೆ ಕಾರ್ಯ ನಿರ್ವಹಿಸುವುದಿಲ್ಲ. ಗೇಟ್ ತೆರೆದುಕೊಳ್ಳದಿದ್ದಾಗ ದೂರುದಾರರು ಪರ್ಸ್​ನಿಂದ ಕಾರ್ಡ್ ತೆಗೆದು ಬಳಸಿದ್ದಾರೆ. ಒಳ ಹೋಗಲು ಮುಂದಾಗುತ್ತಿದ್ದಂತೆಯೇ ಕೆಂಪು ದೀಪದ ಸಿಗ್ನಲ್ ತೋರಿಸಿದ್ದು, ಒಳ ಪ್ರವೇಶಿಸದಂತೆ ಧ್ವನಿ ಸಂದೇಶದ ಮೂಲಕ ಎಚ್ಚರಿಕೆ ನೀಡಿದೆ. ದೂರುದಾರರು ಆ ಎಚ್ಚರಿಕೆ ಲೆಕ್ಕಿಸದೆ ಒಳಪ್ರವೇಶಿಸಿದ್ದರಿಂದಲೇ ಅವಘಡ ಸಂಭವಿಸಿದೆ. ದೂರುದಾರರ ನಿರ್ಲಕ್ಷದಿಂದ ಘಟನೆ ಸಂಭವಿಸಿದೆಯೇ ಹೊರತು ಸಿಬ್ಬಂದಿಯ ನಿರ್ಲಕ್ಷ ಅಥವಾ ತಾಂತ್ರಿಕ ದೋಷದಿಂದಲ್ಲ. ಮೇಲಾಗಿ ಗೇಟ್ ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಮಾನವರ ಪಾತ್ರವೇನೂ ಇರುವುದಿಲ್ಲ ಎಂದು ತಿಳಿಸಿತ್ತು.
ಕೋರ್ಟ್ ಹೇಳಿದ್ದೇನು?
ಸಿಸಿ ಕ್ಯಾಮರಾ ದೃಶ್ಯಾವಳಿ ಗಮನಿಸಿದರೆ ಅಯ್ಯಪ್ಪ ಅವರ ಅಕ್ಕಪಕ್ಕದ ಲೇನ್​ಗಳಲ್ಲಿದ್ದ ಗೇಟ್​ಗಳಲ್ಲಿ ಇತರ ಪ್ರಯಾಣಿಕರು ಹಾದು ಹೋಗುವ ಸಂದರ್ಭದಲ್ಲಿ ಸಾಕಷ್ಟು ಸಮಯ ತೆರೆದುಕೊಂಡಿವೆ. ಆದರೆ, ದೂರುದಾರರು ಹಾದು ಹೋಗ ಬೇಕಿದ್ದ ಗೇಟ್ ಇದ್ದಕ್ಕಿದ್ದ ಹಾಗೆ ಮುಚ್ಚಿಕೊಂಡಿವೆ. ಇದು ಸಂಪೂರ್ಣ ಯಾಂತ್ರೀಕೃತ ವ್ಯವಸ್ಥೆಯಾಗಿದ್ದು, ಮಾನವರ ಪಾತ್ರವಿಲ್ಲ ಎಂದು ಬಿಎಂಆರ್​ಸಿಎಲ್ ಹೇಳಿದೆ. ಗೇಟ್ ಮಧ್ಯೆ ಸಿಲುಕಿದಾಗ ಅಲ್ಲಿಯೇ ಇದ್ದ ಸಿಬ್ಬಂದಿ ಗುಂಡಿ ಒತ್ತಿ ಅದನ್ನು ಸ್ಥಗಿತಗೊಳಿಸಿದ್ದಾರೆ. ಇದನ್ನು ಗಮನಿಸಿದರೆ ತಾಂತ್ರಿಕ ವ್ಯವಸ್ಥೆಯಲ್ಲಿಯೂ ಮನುಷ್ಯನ ಪಾತ್ರ ಇದ್ದೇ ಇರುತ್ತದೆ. ತಂತ್ರಜ್ಞಾನದ ನೆಪ ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಮೇಲಾಗಿ ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸುವುದು ಬಿಎಂಆರ್​ಸಿಎಲ್ ಕರ್ತವ್ಯವಾಗಿದೆ. ಆದ್ದರಿಂದ, ದೂರುದಾರಿಗೆ ಪರಿಹಾರ ನೀಡುವುದು ಸೂಕ್ತ ಎಂದು ಕೋರ್ಟ್ ಹೇಳಿದೆ. ದೂರುದಾರರು ತಾವು ಯಾವ ಕೆಲಸ ಮಾಡುತ್ತಿದ್ದಾರೆ, ತಮ್ಮ ವೇತನವೆಷ್ಟು, ಎಷ್ಟು ದಿನದ ಆದಾಯ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಪೂರಕ ದಾಖಲೆ ಒದಗಿಸಿಲ್ಲವಾದ್ದರಿಂದ ಗಾಯ ವಾಸಿಯಾಗಲು 20 ದಿನಗಳ ಅವಧಿ ಪರಿಗಣಿಸಿ ಪ್ರತಿ ದಿನಕ್ಕೆ 1 ಸಾವಿರ ರೂ. ನಂತೆ ಆರ್ಥಿಕ ಪರಿಹಾರ ಒದಗಿಸಬೇಕು ಎಂದು ಹೇಳಿದೆ.
ಸಮಯದ ಅಂತರ ಹೆಚ್ಚಿಸಿ
ಭವಿಷ್ಯದಲ್ಲಿ ಇಂಥ ಅನಾಹುತ ತಡೆಯಲು ಇನ್ನು ಮುಂದೆ ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲಿ ಮತ್ತಷ್ಟು ಎಚ್ಚರ ವಹಿಸಬೇಕು. ಗೇಟ್ ತೆರೆದುಕೊಳ್ಳುವ ಹಾಗೂ ಮುಚ್ಚಿಕೊಳ್ಳುವ ಸಮಯದ ಅಂತರವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಬಿಎಂಆರ್​ಸಿಎಲ್​ಗೆ ನ್ಯಾಯಾಲಯ ನಿರ್ದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − two =
Remember me
