| ಪಿ.ಕೆ. ರವಿಕುಮಾರ್, ಮೈಸೂರು
ಕಾನೂನಿನ ಸಂಘರ್ಷಕ್ಕೆ ಒಳಗಾಗಿ ರಿಮ್ಯಾಂಡ್ ಹೋಮ್ ಸೇರುವ ಮಕ್ಕಳ ವಿಚಾರಣೆ 4 ತಿಂಗಳಲ್ಲಿ ಮುಗಿಸಬೇಕೆಂಬ ಬಾಲನ್ಯಾಯ ಕಾಯ್ದೆ- 2015ರ ನಿಯಮಕ್ಕೆ ಗ್ರಹಣ ಕವಿದಿದೆ. ಹೀಗಾಗಿ ಸಣ್ಣಪುಟ್ಟ ಪ್ರಕರಣಗಳಲ್ಲೂ ವರ್ಷಾನುಗಟ್ಟಲೆ ವಿಚಾರಣೆಯೇ ಮುಗಿಯದೆ ಸಾವಿರಾರು ಮಕ್ಕಳು ಪರಿವೀಕ್ಷಣಾಲಯಗಳಲ್ಲಿ ಕೊಳೆಯುವಂತಹ ಸ್ಥಿತಿ ನಿರ್ವಣವಾಗಿದೆ.
ವಿಳಂಬಕ್ಕೆ ಕಾರಣ?:ಮಕ್ಕಳ ವಯಸ್ಸಿನ ದಾಖಲಾತಿ ಕೊರತೆ, ಸಕಾಲದಲ್ಲಿ ಸಾಕ್ಷಿಗಳನ್ನು ಹಾಜರು ಪಡಿಸಲು ಸಾಧ್ಯವಾಗದಿರುವುದು, ಸಿಬ್ಬಂದಿ ಕೊರತೆ, ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳ ಸಂಖ್ಯೆ ಹೆಚ್ಚಳ, ವಾರಂಟ್ ಮತ್ತು ಸಮನ್ಸ್​ಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಸರಿಯಾದ ಸಮಯಕ್ಕೆ ವಿಚಾರಣೆ ನಡೆಯುತ್ತಿಲ್ಲ. ಅದರಿಂದಾಗಿ ಬಾಲನ್ಯಾಯ ಮಂಡಳಿಗಳು ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿಣಾಮ, ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ವರ್ಷಗಟ್ಟಲೆ ಅನವಶ್ಯಕವಾಗಿ ಪರಿವೀಕ್ಷಣಾಲಯಗಳಲ್ಲೇ ಉಳಿಯುವಂತಾಗಿದೆ. ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ (ಸಿಎಸ್​ಎಸ್​ಇಐಪಿ) ಇತ್ತೀಚೆಗೆ ನಡೆಸಿದ ಅಧ್ಯಯನದ ವರದಿ ಈ ಸಮಸ್ಯೆ ಕುರಿತು ಬೆಳಕು ಚೆಲ್ಲಿದೆ.
ಅಪರಾಧಕ್ಕೆ ಬಳಕೆ:ದೆಹಲಿ, ಬೆಂಗಳೂರಿನಂಥ ಬೃಹತ್ ನಗರಗಳಲ್ಲಿ ಅಪರಾಧ ಮಾಫಿಯಾಗಳೇ ಇಂತಹ ಮಕ್ಕಳಿಗೆ ಜಾಮೀನು ನೀಡಿ ಅದೇ ಮಕ್ಕಳನ್ನು ಪುನಃ ಅಪರಾಧಕ್ಕೆ ಬಳಸಿಕೊಳ್ಳುತ್ತಿರುವ ಆತಂಕಕಾರಿ ಅಂಶಗಳು ಅಧ್ಯಯನದಿಂದ ತಿಳಿದುಬಂದಿದೆ. ಸಣ್ಣಪುಟ್ಟ ತಪ್ಪು ಮಾಡಿದ ಮಕ್ಕಳು ರಿಮ್ಯಾಂಡ್ ಹೋಂಗಳಲ್ಲಿ ಘೊರ ಅಪರಾಧ ಕೃತ್ಯ ಎಸಗಿದ ಮಕ್ಕಳೊಂದಿಗೆ ಬೆರೆತು ಸಮಸ್ಯೆ ದೊಡ್ಡದಾಗುತ್ತಿದೆ. ಇಂತಹ ಮಕ್ಕಳು ಹೊರ ಜಗತ್ತಿಗೆ ಮರಳಿದ ಬಳಿಕ ಮತ್ತಷ್ಟು ದೊಡ್ಡ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ.
ವರದಿಯಲ್ಲೇನಿದೆ?:ಪರಿವೀಕ್ಷಣಾಲಯಗಳಲ್ಲಿರುವ ಮಕ್ಕಳು ಆತಂಕ ಮತ್ತು ಖಿನ್ನತೆ (ಶೇ.39), ಆತ್ಮಹತ್ಯೆ ಪ್ರವೃತ್ತಿ (ಶೇ.19), ಸನ್ನಡತೆ ಕೊರತೆ (ಶೇ.31), ಹಿಂಸಾ ಪ್ರವೃತ್ತಿ (ಶೇ. 6), ನ್ಯೂರೋಸಿಸ್ (ಶೇ.8), ಕೀಳರಿಮೆ (ಶೇ.10), ಆಕ್ರಮಣಕಾರಿ ನಡತೆ (ಶೇ.34), ಹೊಂದಾಣಿಕೆ ಕೊರತೆ (ಶೇ.38) ಮುಂತಾದ ಮಾನಸಿಕ ರೋಗಗಳಿಗೆ ಒಳಗಾಗಿರುವುದು ಅಧ್ಯಯನದ ವೇಳೆ ಕಂಡುಬಂದಿದೆ. ಹೆಚ್ಚಿನ ರಿಮ್ಯಾಂಡ್ ಹೋಂಗಳು ಸೂಕ್ತ ತರಬೇತಿ ಹೊಂದಿದ ಆಪ್ತ ಸಮಾಲೋಚಕರ ಕೊರತೆ ಎದುರಿಸುತ್ತಿವೆ.
ಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕು
ಮಕ್ಕಳು ಪರಿವೀಕ್ಷಣಾಲಯ ದಲ್ಲೇ ಬಂಧಿ ಆಗುತ್ತಿರುವು ದರಿಂದ ಶಿಕ್ಷಣ ಅರ್ಧಕ್ಕೆ ಮೊಟಕಾಗುತ್ತಿದೆ. ಯಾವುದೋ ಕಾರಣಕ್ಕೆ ಜೈಲು ಸೇರುವ ಪ್ರತಿಭಾವಂತ ಮಕ್ಕಳು ಅಪರಾಧ ಜಗತ್ತಿನ ಹಾದಿ ತುಳಿಯುವಂತಾಗಿದೆ.
ಎಷ್ಟು ಪ್ರಕರಣ ಬಾಕಿ ಇವೆ?
ಮಕ್ಕಳ ರಕ್ಷಣಾ ನಿರ್ದೇಶ ನಾಲಯದ ಅಂಕಿ-ಅಂಶ ಪ್ರಕಾರ ಕರ್ನಾಟಕದಲ್ಲಿ 2022ರ ಏ.1ಕ್ಕೆ 3,438 ಪ್ರಕರಣಗಳು ಬಾಕಿ ಉಳಿದಿದ್ದವು. 2022-23ನೇ ಸಾಲಿನಲ್ಲಿ 2979 ಹೊಸ ಪ್ರಕರಣ ದಾಖಲಾಗಿವೆ. ಇದಕ್ಕೂ ಮುನ್ನ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಒಟ್ಟಾರೆ 6,417 ಪ್ರಕರಣ ವಿಚಾರಣೆಗೆ ಬಂದಿವೆ. 2022-23ನೇ ಸಾಲಿನಲ್ಲಿ 4,149 ಪ್ರಕರಣ ಇತ್ಯರ್ಥಪಡಿಸಲಾಗಿದೆ.
ಮೂಲಸೌಕರ್ಯ ಕೊರತೆ
ರಾಜ್ಯಾದ್ಯಂತ ಪರಿವೀಕ್ಷಣಾಲಯಗಳಲ್ಲಿ ಸಮಯಕ್ಕೆ ಸರಿಯಾಗಿ ವಿಚಾರಣೆ ನಡೆಯದೇ ಇರುವುದರಿಂದ ಬಹಳ ವರ್ಷಗಳಿಂದ ಮಕ್ಕಳು ಇಲ್ಲೇ ಕೊಳೆಯುವಂತಾಗಿದೆ. ಇದರಿಂದ ಸಣ್ಣಪುಟ್ಟ ತಪ್ಪು ಮಾಡಿದ ಮಕ್ಕಳು ಸಹ ಗಂಭೀರ ಅಪರಾಧದ ಆರೋಪ ಇರುವ ಮಕ್ಕಳೊಂದಿಗೆ ಬೆರೆತು ಅಪರಾಧದ ಕಡೆ ಮತ್ತಷ್ಟು ಸೆಳೆಯಲ್ಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
| ಡಾ. ಡಿ.ಸಿ.ನಂಜುಂಡ ಸಹ ಪ್ರಾಧ್ಯಾಪಕ, ಸಿಎಸ್​ಎಸ್​ಇಐಪಿ ಕೇಂದ್ರ, ಮೈಸೂರು ವಿವಿ
ಪರಿವೀಕ್ಷಣಾಲಯದಲ್ಲಿನ ಮಕ್ಕಳ ವಿಚಾರಣೆಯನ್ನು ಬಾಲ ನ್ಯಾಯ ಕಾಯ್ದೆ-2015ರ ಪ್ರಕಾರ 4 ತಿಂಗಳೊಳಗೆ ಮುಗಿಸಬೇಕು. ಪಿಕ್​ಪಾಕೆಟ್​ನಂತಹ ಸಣ್ಣಪುಟ್ಟ ಪ್ರಕರಣ ಬೇಗ ಇತ್ಯರ್ಥಗೊಳ್ಳುತ್ತದೆ. ಆದರೆ ಪೋಕ್ಸೋದಂತಹ ಕೆಲ ಗಂಭೀರ ಪ್ರಕರಣದ ವಿಚಾರಣೆಗೆ ನಿಗದಿತ ಅವಧಿ ಸಾಲುವುದಿಲ್ಲ. ಹೀಗಾಗಿ ಪ್ರಕರಣದ ತೀವ್ರತೆ ಆಧಾರದ ಮೇಲೆ ವಿಚಾರಣೆಗೆ ಸಮಯ ಹಿಡಿಯುತ್ತದೆ.
| ಈ. ಧನಂಜಯ ಎಲಿಯೂರು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ಮೈಸೂರು ಜಿಲ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
