ನಮ್ಮ ಒಳಗೊಂದು ಜಗತ್ತು ಇದೆ ಎಂಬುದನ್ನು ಮರೆಯುವಷ್ಟರ ಮಟ್ಟಿಗೆ ಬಾಹ್ಯಪ್ರಪಂಚದಲ್ಲಿ ಮುಳುಗಿದ್ದೇವೆ. ಹಾಗಾಗಿಯೇ, ತುಂಬ ಜನರಿಗೆ ಬದುಕು ಬೋರ್ ಎನಿಸುತ್ತಿದೆ, ಭಾರ ಎನಿಸುತ್ತಿದೆ. ಏನೋ ಮಿಸ್ಸಿಂಗ್ ಎಂಬ ಕೊರತೆ ಕಾಡುತ್ತಿದೆ. ಬದುಕಿನಲ್ಲಿ ಭಾವನೆಗಳ ಬಡತನ ಎಷ್ಟು ತೀವ್ರವಾಗಿ ಕಾಡುತ್ತದೆ ಎಂಬುದು ತಡವಾಗಿ ಅರಿವಿಗೆ ಬರುತ್ತಿದೆ.
ಜೀವನದ ಬಗೆಗಿನ ಜಿಜ್ಞಾಸೆಗಳು ಅನಂತ. ಮೊನ್ನೆ ಹಿರಿಯರೊಬ್ಬರು ಲೋಕಾಭಿರಾಮವಾಗಿ ಮಾತನಾಡುತ್ತ ಹೇಳಿದ ಮಾತು, ಹೌದಲ್ವ ಅಂತೆನಿಸಿ, ಚಿಂತನೆಗೆ ಹಚ್ಚಿತು.
‘‘ಜೀವನ ಎಂಬ ಚಲನಚಿತ್ರಕ್ಕೆ ‘ಒನ್ಸ್​ಮೋರ್’ ಇಲ್ಲ. ಬದುಕನ್ನು ಒಂದು ಸಾರಿ ಜೀವಿಸಿಬಿಡಬೇಕಷ್ಟೇ. ಜೀವನದ ಮಧುರವಾದ, ಬೇಕುಬೇಕಾದ ಕ್ಷಣಗಳನ್ನು ಇಲ್ಲಿ ಡೌನ್​ಲೋಡ್ ಮಾಡಲು ಸಾಧ್ಯವಿಲ್ಲ. ಹಾಗೆಯೇ, ಬೇಡವಾದ ಕ್ಷಣಗಳನ್ನು ಡಿಲೀಟ್ ಕೂಡ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಜೀವನ ದಿನವೂ ಅದೇ ಅದೇ ಆಗಿರುವ ರಿಯಾಲಿಟಿ ಶೋ ಅಲ್ಲ. ಹಾಗಾಗಿ, ಮನಸ್ಸುಪೂರ್ತಿ ಜೀವಿಸಿ. ಎಲ್ಲರೊಂದಿಗೆ ಪ್ರೇಮ, ಗೌರವದಿಂದ ವ್ಯವಹರಿಸಿ. ಏಕೆಂದರೆ, ಈ ಜೀವನ ಎಂಬ ಚಲನಚಿತ್ರ ಮತ್ತೊಮ್ಮೆ ಬರೋದಿಲ್ಲ/ಪ್ರಸಾರವಾಗುವುದಿಲ್ಲ’ ಅಂತ.
ನಿಜ, ಆದರೆ, ನಮ್ಮಲ್ಲಿ ಎಷ್ಟೋ ಜನ ಬದುಕಲು ಆರಂಭಿಸುವುದೇ ತಡವಾಗಿ! ಏಕೆಂದರೆ, ನಮ್ಮ ಸುಖ, ಸಂತೋಷ, ನೆಮ್ಮದಿ ಎಲ್ಲೋ ಹೊರಜಗತ್ತಿನಲ್ಲಿದೆ ಅಂತ ಭಾವಿಸಿ, ಅದನ್ನು ಹುಡುಕುತ್ತ ಹೊರಡುತ್ತೇವೆ. ಅದು ಸಿಗದಿದ್ದಾಗ ಗೋಳಾಡುತ್ತ, ಸಿಕ್ಕರೂ ತಾನು ಹುಡುಕುತ್ತಿದ್ದದ್ದು ಇದಲ್ಲ ಎಂದು ಗೊತ್ತಾಗುವ ಹೊತ್ತಿಗೆ ಜೀವನ ಎಂಬ ಪಯಣದಲ್ಲಿ ತುಂಬ ದೂರ ಬಂದು ಬಸವಳಿದಿರುತ್ತೇವೆ. ಹಿಂದೆ ತಿರುಗಿ ಹೋಗಲು ಸಾಧ್ಯವಿಲ್ಲ. ಮುಂದೆ ಯಾವ ನಿಲ್ದಾಣ, ಯಾವ ಗಮ್ಯವಿದೆ ಎಂಬುದೂ ಗೊತ್ತಿಲ್ಲ. ಆಗಲೇ ಏನೋ ಕಳೆದುಹೋದ ಭಾವ ಮನಸ್ಸನ್ನು ಆವರಿಸಿ, ಅದೇದುಃಖವಾಗಿ, ಚಿಂತೆಯ ಗೂಡು ಕಟ್ಟಿ, ಖಿನ್ನತೆ ಎಂಬ ಹಕ್ಕಿ ವಾಸಿಸಲಾರಂಭಿಸುತ್ತದೆ.
ಸಹಜವಾಗಿಯೇ ಕೇಳಿ ನೋಡಿ. (ಏನು ಮಾಡೋದು, ಇತ್ತೀಚಿನ ದಿನಗಳಲ್ಲಿ ಹೀಗೆ ಕುಶಲೋಪರಿ ಕೇಳುವುದು ಕೂಡ ವಿರಳವಾಗಿ ಹೋಗಿದೆ. ಆದರೂ, ಒಮ್ಮೆ ಪ್ರಯತ್ನಿಸಿ ನಿಮ್ಮ ಆಪ್ತರನ್ನೋ, ಬೇಕಾದವರನ್ನೋ ಕೇಳಿ ನೋಡಿ.) ‘ಎಲ್ಲ ಹೇಗೆ ನಡೀತಾ ಇದೆ?’ ಅಂತ. ಮೊದಲಿಗೆ ಬಹುತೇಕರು, ‘ನನಗೇನು ಕಮ್ಮಿ? ಉದ್ಯೋಗ, ಸಂಬಳ, ಕುಟುಂಬ ಎಲ್ಲ ಇದೆ. ಜೀವನ ಅದರ ಪಾಡಿಗೆ ನಡೀತಾ ಇದೆ…’ ಎನ್ನುವಾಗಲೇ ಸ್ವರ ಕ್ಷೀಣಿಸುತ್ತೆ, ಮೌನ ಆವರಿಸಿಕೊಳ್ಳುತ್ತೆ, ಕಣ್ಣುಗಳು ತುಂಬಿಕೊಳ್ಳುತ್ತವೆ. ಸ್ವಲ್ಪ ತಡೆದು, ‘ಆದರೂ, ಬ್ರೋ, ಜೀವನದಲ್ಲಿ ಏನೋ ಮಿಸ್ಸಿಂಗ್ ಅಂತ ಅನಿಸ್ತಿದೆ. ಇದಕ್ಕಾಗಿ ನಾವು ಇಷ್ಟೊಂದು ಸ್ಟ್ರಗಲ್ ಮಾಡಿದ್ದಾ, ನಮಗೆ ಬೇಕಾಗಿದ್ದು ಇದೆಯಾ? ಅಂತ ಅನಿಸ್ತಿದೆ. ಆದರೆ, ಅದೇನು ಮಿಸ್ಸಿಂಗ್ ಅಂತ ಗೊತ್ತಾಗ್ತಿಲ್ಲ’ ಅಂತ ವಿಷಾದದ ನಗೆ ಬೀರುತ್ತಾರೆ.
ಹೌದು, ಬದುಕು ಯಾವುದೋ ಒಂದು ನಿಲ್ದಾಣಕ್ಕೆ ಬಂದು ನಿಂತಾಗ ಹೀಗೆ ಅನಿಸಲೇ ಬೇಕು. ಅಷ್ಟಕ್ಕೂ, ತಪು್ಪ ಬದುಕಿನದ್ದಲ್ಲ, ನಮ್ಮದೇ. ಬಾಹ್ಯಪ್ರಪಂಚದಲ್ಲೇ ನಮಗೆ ಬೇಕಾಗಿರೋದು ಎಲ್ಲ ಸಿಗುತ್ತದೆ, ಅದುವೇ ‘ಸುಖ’ ಎಂದು ಯಾವಾಗ ಭಾವಿಸಿದೆವೋ, ಅಲ್ಲಿಂದ ನಾವು ನಮ್ಮ ಭಾವನೆಗಳಿಗೇ ನಾಟ್ ರೀಚೆಬಲ್ ಆದೆವು. ಯಾವಾಗ ಭಾವನೆಗಳೊಂದಿಗಿನ ಸಂಪರ್ಕ ಕಡಿತಗೊಂಡಿತೋ ಆವಾಗಿನಿಂದ ನಮ್ಮ ಆಂತರ್ಯದ ಜಗತ್ತು ಕತ್ತಲೆಯ ಕೂಪವಾಯಿತು, ನಾವೇ ಹುಡುಕಿಕೊಳ್ಳಬೇಕಾದ ದ್ವೀಪವಾಯಿತು. ನಮ್ಮ ಒಳಗೊಂದು ಜಗತ್ತಿದೆ, ಅದು ನಮಗೆ ನೈತಿಕವಾಗಿ ನಡೆಯಲು ಪ್ರೇರಣೆ ನೀಡುತ್ತದೆ, ಆಧ್ಯಾತ್ಮಿಕ ಉತ್ಕರ್ಷ ಸಾಧಿಸಲು ಬೆಳಕು ನೀಡುತ್ತದೆ, ಬದುಕು ಬೋರ್ ಆದಾಗ ಸಾಂತ್ವನಿಸುತ್ತದೆ ಎಂಬುದನ್ನು ಬಾಹ್ಯಪ್ರಪಂಚದ ಜಗಮಗ ಮರೆಸಿಬಿಟ್ಟಿತು. ಭೌತಿಕ ಸೌಲಭ್ಯಗಳು, ಹೊರಗಿನ ಥಳುಕುಬಳುಕು ನೋಡಲಷ್ಟೇ ಚೆಂದ, ಅದು ಮನಸ್ಸಿನ ಗಾಯಕ್ಕೆ ಮುಲಾಮು ಹಚ್ಚದು. ಪರಿಣಾಮ, ಈ ಗಾಯ ವಾಸಿಯಾಗದೆ ಮನುಷ್ಯ ಒಳಗಿಂದ ಕುಸಿಯುತ್ತ ಹೋಗುತ್ತಾನೆ. ಬದುಕು ಹೆಚ್ಚು ಬೋರ್ ಎನಿಸುವುದು ಇದೇ ಹಂತದಲ್ಲಿ.
ನಮ್ಮಲ್ಲಿ ತುಂಬ ಹಳೆಯ ಜೋಕ್​ನ್ನು ಮದುವೆ ನಿಶ್ಚಯ ಆಗಿರುವ ಹುಡುಗರಿಗೆ ಈಗಲೂ ಹೇಳುವುದುಂಟು. ‘ಈಗಲೇ ಬೇಕಿದ್ದರೆ ಜಗತ್ತನ್ನು ಬದಲಿಸಿ ಬಿಡಿ. ಮದುವೆಯಾದ ಮೇಲೆ ಟಿವಿ ರಿಮೋಟ್ ಬದಲಿಸುವ ಸ್ವಾತಂತ್ರ್ಯವೂ ನಿಮಗಿರುವುದಿಲ್ಲ’ ಎಂದು. ಅಂದರೆ, ನಾವು ಮನೆಯ ಟಿವಿ ರಿಮೋಟನ್ನೇ ಇನ್ನೊಬ್ಬರ ಕೈಗೆ ಕೊಡಲು ಒಪು್ಪವುದಿಲ್ಲ, ಯಾಕೆ ಬೇಕು ಅಂತ ತಕರಾರು ತೆಗೆಯುತ್ತೇವೆ. ಆದರೆ, ಒಮ್ಮೆ ಯೋಚಿಸಿ ನೋಡಿ ಅಥವಾ ಕಣ್ಣು ಮುಚ್ಚಿ ಚಿಂತನೆ ಮಾಡಿ, ಒಂದು ಪಟ್ಟಿ ತಯಾರಿಸಿ- ನಮ್ಮ ಮನಸ್ಸಿನ ರಿಮೋಟ್​ನ್ನು ಎಷ್ಟು ಜನರ ಕೈಗೆ ಕೊಟ್ಟಿದ್ದೇವೆ ಎಂದು. ಅಂದರೆ ಯಾರೋ ಆಡಿದ ಒಂದು ಶಬ್ದ, ಯಾರೋ ತೋರಿದ ಒಂದು ವರ್ತನೆ ಮನಸ್ಸಿನಲ್ಲಿ ಕೋಲಾಹಲ ಎಬ್ಬಿಸಿಬಿಡುತ್ತದೆ. ಎಂಥ ಕೋಲಾಹಲವೆಂದರೆ ಬೇಸರ, ಕೋಪ, ಹತಾಶೆ, ಅಸಹಾಯಕತೆ, ಅಸೂಯೆ, ದ್ವೇಷ ಹೀಗೆ ಯಾವುದೆಲ್ಲ ಮನುಷ್ಯನ ಅಂತರಂಗವನ್ನು ಪ್ರವೇಶಿಸಬಾರದೋ ಅದೆಲ್ಲವೂ ಠಿಕಾಣಿ ಹೂಡಿ, ‘ಯಾರಿಗೆ ಬೇಕು ಈ ಲೋಕ?’ ಎಂಬ ವಿಷಾದಭಾವ ಆವರಿಸಿಕೊಳ್ಳುತ್ತದೆ. ಈಗ ಸಿದ್ಧಪಡಿಸಿಕೊಂಡಿರುವ ಪಟ್ಟಿಯತ್ತ ಒಮ್ಮೆ ನೋಡಿ. ಆಫೀಸಿನ ಬಾಸ್/ಮ್ಯಾನೇಜರ್, ಸಹೋದ್ಯೋಗಿ, ಹೆಂಡತಿ/ಗಂಡ, ಗೆಳೆಯ/ಗೆಳತಿ ಅಬ್ಬಬ್ಬಾ ಎಷ್ಟು ಜನರ ಬಳಿ ನಮ್ಮ ಮನಸ್ಸಿನ ರಿಮೋಟ್ ಇದೆ. ಒಬ್ಬರ ಬಳಿ ಬಿಟ್ಟು! ಅದು ನಾವೇ! ಹೌದು, ನಮ್ಮ ಬಳಿ ಇರಬೇಕಾದ ಈ ಮನಸ್ಸಿನ ರಿಮೋಟ್​ನ್ನು ಎಲ್ಲರ ಬಳಿಗೆ ಕೊಟ್ಟು, ನಾವು ಸಂತೋಷದ ಪಾಸ್​ವರ್ಡ್​ಗಾಗಿ ತಡಕಾಡುತ್ತಿದ್ದೇವೆ. ‘ವಾಟ್ ಇಸ್ ರಿಯಲ್ ಹ್ಯಾಪಿನಸ್’? ಎಂದು ಗೂಗಲಣ್ಣನನ್ನು ಕೇಳುತ್ತಿದ್ದೇವೆ.
ಬಾಸ್ ಖುಷಿಯಾದರೆ ನಮಗೆ ಖುಷಿ, ಬಾಸ್ ಬೈದರೆ ಬೇಜಾರು, ಗಂಡ/ಹೆಂಡತಿ ಮುನಿಸಿಕೊಂಡರೆ ಮತ್ತೆ ಬೇಜಾರು. ಗೆಳೆಯ/ಗೆಳತಿ ಮಾತು ಬಿಟ್ಟರೆ ಕೊರಗು… ಹೀಗೆ ನಮ್ಮ ಖುಷಿ, ನಮ್ಮ ಬೇಜಾರು ಎಲ್ಲವೂ ಬೇರೆಯವರ ಮೇಲೆ ಅವಲಂಬಿತವಾಗುತ್ತಿರುವುದರಿಂದಲೇ ಮನಸ್ಸು ಗದ್ದಲದ ಗಾಂಧಿಬಜಾರ್ ಆಗಿಬಿಟ್ಟಿದೆ. ಇದಕ್ಕೆಲ್ಲ ಕಾರಣ, ಅದುವೇ ನಮ್ಮ ಖುಷಿ ಹೊರಗಡೆ ಇದೆ ಅಂತ ನಂಬಿರುವುದು. ವಾಸ್ತವದಲ್ಲಿ, ಯಾಂತ್ರಿಕತೆ ಮೇಲೆ ಅವಲಂಬಿತವಾದಷ್ಟು ಮನುಷ್ಯ ಸೊರಗುತ್ತಿದ್ದಾನೆ, ಕೊರಗುತ್ತಿದ್ದಾನೆ, ನರಳುತ್ತಿದ್ದಾನೆ. ಕೃತಕ ಬುದ್ಧಿಮತ್ತೆ ಏನೇನೋ ಮಾಡುತ್ತೆ ಅಂತಾರೆ. ಆದರೆ, ಕೃತಕ ಬುದ್ಧಿಮತ್ತೆ ಭಾವನೆಗಳನ್ನು ಸೃಷ್ಟಿಸಲಾರದು, ಮನಸ್ಸುಗಳನ್ನು ಅರಳಿಸಲಾಗದು. ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕೃತಕತೆಗೆ ತನ್ನದೇ ಆದ ಚೌಕಟ್ಟಿದೆ. ಮೊಬೈಲ್ ಫೋನ್ ಬಂದ ಮೇಲೆ ಮಾತುಗಳು ಅರಳಿ, ಮನುಷ್ಯ ಸಹಜ ಸಂಬಂಧಗಳು, ಬಾಂಧವ್ಯಗಳು ಇನ್ನಷ್ಟು ಗಟ್ಟಿಗೊಳ್ಳಬೇಕಿತ್ತು. ಆದರೆ, ಇಂದು ಮೊಬೈಲ್ ಫೋನ್ ಮಾತುಗಳನ್ನೇ ಕಸಿದುಕೊಂಡಿದೆ. ಜನರು ಪರಸ್ಪರ ಎದುರಾದರೂ, ಮೊಬೈಲ್ ಫೋನ್​ನಲ್ಲಿ ಮುಳುಗಿರುತ್ತಾರೆ ಹೊರತು ಅಲ್ಲಿ ಮಾತಿನ ಮಂಟಪ ಏರ್ಪಡುವುದೇ ಇಲ್ಲ. ದಿನಗಳೆದಂತೆ ನಾವು ಮುಗ್ಧತೆ, ಸರಳತೆ, ಸಹಜತೆ ಎಲ್ಲ ಕಳೆದುಕೊಳ್ಳುತ್ತ ಸಾಗುತ್ತಿದ್ದೇವೆ. ಇದೇ ಜೀವನದ ನಿಜವಾದ ಮಿಸ್ಸಿಂಗ್.
ಹಿಂದೆಲ್ಲ ಬದುಕು ಎಷ್ಟು ಸರಳವಾಗಿತ್ತು…್ಞಸಂಜೆಗಳಲ್ಲಿ ಟಿವಿಯ ಬಾಯಿ ಬಂದ್ ಆಗಿರುತ್ತಿತ್ತು. ಮನಸ್ಸುಗಳ ಮಾತುಗಳು ಮನೆಯೆದುರಿನ ಜಗುಲಿಯಲ್ಲೋ, ಉದ್ಯಾನದ ಬೆಂಚಿನಲ್ಲೋ ಅರಳುತ್ತಿದ್ದವು. ಅದು ಬರೀ ಮಾತುಗಳ ವಿನಿಮಯ ಆಗಿರಲಿಲ್ಲ, ಭಾವನೆಗಳ ವಿನಿಮಯವೂ ಆಗಿರುತ್ತಿತ್ತು. ಹಾಗಾಗಿಯೇ ಈ ಸಂಜೆಯ ಮಾತಿನ ಮಂಟಪಗಳು ಇಂದಿನ ‘ಕೌನ್ಸೆಲಿಂಗ್’ ಕೇಂದ್ರಗಳಂತಿದ್ದವು. ಈಗ, ಸಂಬಂಧ, ಬಾಂಧವ್ಯಕ್ಕೆ ಅಂಟಿಕೊಂಡಿರುವ ಸ್ವಾರ್ಥದ ಪೊರೆ ಅಂತರಂಗವನ್ನು ಕಲುಷಿತಗೊಳಿಸುತ್ತಿದೆ.
್ಞಪ್ರತಿಯೊಂದರ ಬಗ್ಗೆ ಕುತೂಹಲವಿತ್ತು, ಕೌತುಕವಿತ್ತು, ಒಳ್ಳೆಯದನ್ನು ಪ್ರಶಂಸಿಸುವ ಮುಕ್ತಗುಣವಿತ್ತು. ನಮ್ಮವರು ಎಂಬ ಆಪ್ತತೆಯಿತ್ತು. ಸಂಬಂಧಗಳಿಗೆ ಬೆಲೆ ಇತ್ತು. ಲ್ಯಾಂಡ್​ಲೈನ್ ಫೋನ್​ಗಳು ಬಂದಾಗ ನಮ್ಮವರ ದನಿ ಕೇಳಿ, ಪುಳಕವಾಗಿ, ಕಣ್ಣುಗಳು ನಮಗೆ ಗೊತ್ತಿಲ್ಲದಂತೆ ತೇವಗೊಳ್ಳುತ್ತಿದ್ದವು. ಅಪ್ಪ/ಅಮ್ಮ, ಅಜ್ಜ/ಅಜ್ಜಿ ಅಥವಾ ಹಿರಿಯರು ಬರೆಯುತ್ತಿದ್ದ ಪತ್ರಗಳು ಅಕ್ಷರಗಳ ಒಣಸಾಲುಗಳಾಗಿರಲಿಲ್ಲ. ಅವು ಜೀವನಪಾಠವನ್ನು, ಜೀವನಮೌಲ್ಯಗಳನ್ನು ಒದಗಿಸುತ್ತಿದ್ದವು. ಈಗ ಹಿರಿಯರು ಹೇಳುವುದೆಲ್ಲ ಧಿಕ್ಕರಿಸುವುದೇ ‘ಫ್ಯಾಶನ್’ ಆಗಿಬಿಟ್ಟಿದೆ.
್ಞಹಬ್ಬಗಳ ಗಮ್ಮತ್ತೇ ಬೇರೆ. ಎಲ್ಲರೂ ಒಂದೆ ಕಡೆ ಸೇರಿ, ಹೊಸ ಬಟ್ಟೆ ತೊಟ್ಟು, ಸಿಹಿ ತಿಂದು, ಒಳಿತಾಗಲಿ ಎಂದು ಹಾರೈಸುವ ಹೃದಯಗಳು ಬಾಂಧವ್ಯದ ಪಥವನ್ನು ಸುಂದರಗೊಳಿಸುತ್ತಿದ್ದವು. ಸಾಗಿಬಂದ ದಿನಗಳನ್ನು ನೆನಪಿಸುತ್ತಿದ್ದವು. ಅದ್ದೂರಿತನಕ್ಕೆ ಸೀಮಿತಗೊಂಡಿರುವ ಇಂದಿನ ಹಬ್ಬಗಳಲ್ಲಿ ಭಾವನೆಗಳ ಸಡಗರವೇ ಇಲ್ಲ. ಇಂದು ಹಬ್ಬ/ಹುಟ್ಟುಹಬ್ಬ ಯಾವುದೇ ಇರಲಿ ‘ಶುಭಾಶಯ’ ವಾಟ್ಸ್​ಆಪ್​ಗೆ ಸೀಮಿತ.
್ಞನಗಲು ಕ್ಲಬ್​ಗಳಿಗೆ ಸೇರುವ, ಮಾತಾಡಲು ಕೌನ್ಸೆಲಿಂಗ್ ಕೇಂದ್ರಕ್ಕೆ ಹೋಗುವ, ಗೆಳೆಯರನ್ನು ಆನ್​ಲೈನ್​ನಲ್ಲಿ ಹುಡುಕುವ ಅವಶ್ಯಕತೆ ಇರಲಿಲ್ಲ. ನಿಸ್ವಾರ್ಥ ಪ್ರೇಮ ಮತ್ತು ವಾತ್ಸಲ್ಯ ಎಂಥ ಸಮಾಧಾನ ಕೊಡುತ್ತಿತ್ತು. ಇಂದು ಜನರು ತಮ್ಮ ಕೆಲಸವಿಲ್ಲದೆ ಇತರರಿಗೆ ‘ಹಾಯ್’ ಅಂತಲೂ ಹೇಳುವುದಿಲ್ಲ. ಯಾರಿಗಾದರೂ ಮಾತಾಡಿಸಲು ‘ಸ್ಟೇಟಸ್’ ಅಡ್ಡಿ! ್ಞಅಫ್ಘಾನಿಸ್ತಾನ, ಪಾಕಿಸ್ತಾನ, ಅಮೆರಿಕ, ಇಸ್ರೇಲ್ ಬಗ್ಗೆ ಗಂಟೆಗಟ್ಟಲೇ ಚರ್ಚೆ ಮಾಡುತ್ತೇವೆ. ಆದರೆ, ನಮ್ಮವರ ಕಷ್ಟ-ಸುಖ ಕೇಳಲು, ಹಿತೈಷಿಗಳೊಂದಿಗೆ ನಾಲ್ಕು ಮಾತಾಡಲು ಈಗಿನವರಿಗೆ ಪುರುಸೋತ್ತಿಲ್ಲ. ಕೇಳಿಸಿಕೊಳ್ಳುವುದು ಮತ್ತು ಸ್ಪಂದಿಸುವುದು ಮನುಷ್ಯನ ಸಹಜ ಸ್ವಭಾವ ಎಂಬುದೂ ಮರೆತುಹೋಗಿದೆ.
ಇಷ್ಟೆಲ್ಲ ಬದಲಾಗು ಅಂತ ಬದುಕು ನಮಗೆ ಹೇಳಿತೆ? ಇಲ್ಲ, ನಾವೇ ಬದುಕನ್ನು ಹಾಗೆ ಬದಲಿಸಿಕೊಂಡೆವು. ಎಲ್ಲೆಲ್ಲೂ ಕೃತಕತೆಯ ವಿಜೃಂಭಣೆ. ದಿನಗಳೆದಂತೆ ಇದು ಹೆಚ್ಚುತ್ತಿದೆ. ಮತ್ತೊಂದು ಕಡೆ, ಎಚ್ಚೆತ್ತುಕೊಂಡವರು ನಾವು ಸಾಗಬೇಕಾದ ಪಥ ಬೇರೆಯೇ ಇದೆ ಅಂತ ನಿಧಾನಕ್ಕೆ ಪರಿವರ್ತನೆಯತ್ತ ಹೊರಳಿದ್ದಾರೆ. ಅಧ್ಯಾತ್ಮದ ಹಸಿವು ಹೆಚ್ಚುತ್ತಿರುವುದು ಅದಕ್ಕೆ. ಅಧ್ಯಾತ್ಮ ಎಂದಿಗೂ ಸ್ವಾರ್ಥ ಕಲಿಸುವುದಿಲ್ಲ; ಬದಲಿಗೆ ಎಲ್ಲರನ್ನೂ ಪ್ರೀತಿಸುವುದನ್ನು ಕಲಿಸುತ್ತದೆ. ಅಧ್ಯಾತ್ಮ ಕೃತಜ್ಞತೆಯನ್ನು ಹೇಳಿಕೊಡುತ್ತದೆ ಹೊರತು ಕೃತಘ್ನತೆಯನ್ನಲ್ಲ. ಅಧ್ಯಾತ್ಮ ಬದುಕಲು ಕಲಿಸುತ್ತದೆ ಹೊರತು, ಜೀವನದ ಹಾದಿಯಿಂದ ವಿಮುಖತೆಯನ್ನಲ್ಲ. ಅಷ್ಟಕ್ಕೂ, ಅಧ್ಯಾತ್ಮ ಎಂಬುದು ಈ ನೆಲದ ಜೀವನಪದ್ಧತಿ. ಸಾಧುಸಂತರ ಪ್ರವಚನ ಪೆಂಡಾಲ್​ಗಳು, ‘ಪ್ರೇರಣಾದಾಯಕ ಮಾತುಗಾರರ ಸೆಮಿನಾರ್’ಗಳು ಇಂದು ತುಂಬಿತುಳುಕುತ್ತಿವೆ. ಏಕೆಂದರೆ, ಅವರೆಲ್ಲ ಬದುಕಿನ ಬಗ್ಗೆ ಮಾತನಾಡುತ್ತಿದ್ದಾರೆ, ನಿರ್ವಂಚನೆಯಿಂದ, ಖುಷಿಯಿಂದ ಬದುಕಿ ಎನ್ನುತ್ತ, ಜನರ ಮನಸ್ಸುಗಳನ್ನು ಸಕಾರಾತ್ಮಕವಾಗಿ ಬದಲಿಸುತ್ತಿದ್ದಾರೆ.
ಅಷ್ಟಕ್ಕೂ, ಖುಷಿ ಎಂದರೇನು? ಹೇಗೆ ಅದನ್ನು ಕಂಡುಕೊಳ್ಳುವುದು ಎಂಬ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸುತ್ತದೆ. ಅದಕ್ಕೆ, ಅಧ್ಯಾತ್ಮ ಚಿಂತಕಿ ಬ್ರಹ್ಮಕುಮಾರಿ ಶಿವಾನಿ ಸುಂದರ ಮಾತುಗಳಲ್ಲಿ ಹೇಳುತ್ತಾರೆ. ‘ಖುಷಿ ನಮ್ಮ ಫೋನಿನಲ್ಲಿ ಇಲ್ಲ, ಖುಷಿ ಕಾರಿನಲ್ಲಿ ಇಲ್ಲ, ದುಬಾರಿ ವಸ್ತುಗಳಲ್ಲೂ ಇಲ್ಲ. ಹೊರಗಿನ ಜಗತ್ತಲ್ಲಿ ನೀವು ಖುಷಿ ಹುಡುಕಿದಷ್ಟು ಅದು ಮರೀಚಿಕೆಯಾಗುತ್ತ ಹೋಗುತ್ತದೆ. ಹಾಗಾಗಿ, ‘ಖುಷಿ’ ಎಂಬುದು ನಮ್ಮ ಸಂಸ್ಕಾರವಾಗಬೇಕು. ಖುಷಿಯಿಂದ ಬದುಕುವುದು ನಮ್ಮ ಹಕ್ಕು, ಕರ್ತವ್ಯ. ಮನಸ್ಸನ್ನು ಆಗಾಗ ಸ್ವಚ್ಛಗೊಳಿಸೋಣ, ಖುಷಿಯಾಗಿರೋಣ’. ಅದಕ್ಕಾಗಿಯೇ ಖುಷಿಯ ಪಾಸ್​ವರ್ಡ್​ನ್ನು ರಿಸೆಟ್ ಮಾಡಿಕೊಳ್ಳಬೇಕಿದೆ, ಅಂತರಂಗದೊಂದಿಗೆ ಕನೆಕ್ಟ್ ಆಗಬೇಕಿದೆ.
ನಮ್ಮ ಸುತ್ತಮುತ್ತಲೂ ದುಃಖ. ನೋವು, ನರಳಾಟ, ಸಂಕಟ, ಹತಾಶೆ ಎಲ್ಲವೂ ಇದೆ. ಆದರೆ, ಇದಷ್ಟೇ ಜಗತ್ತಲ್ಲ. ನಮ್ಮ ಸುತ್ತಲೂ ಒಳ್ಳೆಯತನ, ಸಕಾರಾತ್ಮಕತೆ, ಸಂತೋಷ, ಮಾನವೀಯತೆ, ಬಂಧುತ್ವ, ನೈತಿಕತೆ, ಪ್ರೇಮವೂ ಇದೆ. ಮನಸ್ಸನ್ನು ಅನ್​ಲಾಕ್ ಮಾಡಿ, ಮನಸ್ಸಿನ ರಿಮೋಟ್​ನ್ನು ನಮ್ಮ ಬಳಿಯೇ ಇರಿಸಿಕೊಂಡರೆ ಈ ಉತ್ತಮ ಮೌಲ್ಯಗಳೆಲ್ಲ ವ್ಯಕ್ತಿತ್ವದ ಭಾಗವಾಗುತ್ತವೆ, ಭೂಷಣಗಳಾಗುತ್ತವೆ. ಭಾವನೆಗಳಿಗೆ, ಮಾತಿಗೆ, ಅಕ್ಷರಗಳಿಗೆ ಶಕ್ತಿ ಇದೆ. ಇದೆಲ್ಲವೂ ಒಡಮೂಡಿದಾಗ ಅಂತರಂಗದ ಸೌಂದರ್ಯ ಹೆಚ್ಚುತ್ತದೆ, ಖುಷಿ ಸಂಸ್ಕಾರವಾಗುತ್ತದೆ. ಹಾಗಾಗಿಯೇ, ಬದುಕನ್ನು ಹೊಸದಾಗಿ ನೋಡೋಣ. ತಡವಾಗಿದ್ದರೂ ಸರಿ, ಹೊಸದಾಗಿ ಬದುಕೋಣ. ಏಕೆಂದರೆ, ಬದುಕಿನ ಕೊನೆಯಲ್ಲಿ ನಮ್ಮ ಹೃದಯದ ಖಜಾನೆಯಲ್ಲಿ ನೆನಪುಗಳಾಗಿ ಉಳಿಯಬೇಕಾದ್ದು ಸಾರ್ಥಕತೆ, ಧನ್ಯತೆಯೇ ಹೊರತು, ಬೇಸರ, ವಿಷಾದಗಳಲ್ಲ. ನಡಿಾವು ಎಷ್ಟು ನೆಮ್ಮದಿಯಿಂದ ಬದುಕಿದೆವು, ಇತರರ ಜೀವನದಲ್ಲಿ ಒಂದಿಷ್ಟು ಖುಷಿಯನ್ನು ತಂದೆವಾ ಎಂಬ ಲೆಕ್ಕಾಚಾರವಷ್ಟೇ ಬದುಕಿನ ಗಣಿತವನ್ನು ಸರಿಯಾಗಿಸುತ್ತದೆ.
ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರು ಹೇಳುತ್ತಿದ್ದರು: ‘ಬಾಳ್ವೆ ಇರುವುದು ಕಲಿಯುವುದಕ್ಕೆ. ಕಲಿತು ತಿದ್ದುಕೊಳ್ಳುವುದಕ್ಕೆ. ತಿದ್ದಿ ತೃಪ್ತಿ ಪಡುವುಕ್ಕೆ. ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿ ಬೆಳೆಯುವುದಕ್ಕಾಗಿ’.
ಹೊರಗಡೆ ಶ್ರಾವಣದ ಮಳೆ ಸುರಿಯುತ್ತಿದೆ. ಎಲ್ಲ ಕಲ್ಮಶಗಳನ್ನು ತೊಳೆಯುವ ಅದು ನಮ್ಮ ಮನಸ್ಸುಗಳನ್ನೂ ತೊಳೆಯಲಿ. ಒಳ್ಳೆತನ ಚಿಗುರಲಿ, ಹರಡಲಿ, ವ್ಯಾಪಿಸಿಕೊಳ್ಳಲಿ. ಅಷ್ಟೇ ಸಾಕು ಮನಸ್ಸು, ಬದುಕು ನಂದನವಾಗಲು!
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)
ಗೋವಾ: ಪಾಕಿಸ್ತಾನ ಮೂಲದ ಕ್ರಿಶ್ಚಿಯನ್‌ಗೆ ಮೊದಲ ಸಿಎಎ ಪೌರತ್ವ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 2 =
Remember me
