| ರಾಜಗುರು ಬಿ.ಎಸ್.ದ್ವಾರಕಾನಾಥ್
ಗಣಪತಿಯನ್ನು ವಿಘ್ನ ವಿನಾಶಕ, ಪ್ರಥಮ ಪೂಜಿತ, ಗಣಗಳಿಗೆ ಅಧಿಪತಿ ಇತ್ಯಾದಿಯಾಗಿ ಕರೆಯುತ್ತಾರೆ. ಆದರೆ ಮನುಷ್ಯ ತನ್ನೆಲ್ಲ ವಿಘ್ನಗಳನ್ನು ನಿವಾರಣೆ ಮಾಡಿಕೊಂಡು ಬದುಕಿನಲ್ಲಿ ಸಂತಸವನ್ನು ಕಾಣಬೇಕೆಂದರೆ ವಿನಾಯಕನ ಮೊರೆ ಹೋಗಲೇಬೇಕು. ಅಂತಹ ವಿನಾಯಕನ ಪೂಜೆಗೆ ಪರಮಶ್ರೇಷ್ಠವಾದ ದಿನವೇ ಭಾದ್ರಪದ ಚೌತಿ.
ಮಹಾಗೌರಿ ಭಾದ್ರಪದ ತದಿಗೆಯಂದು ಭೂಲೋಕಕ್ಕೆ ಬಂದು ಭಕ್ತರ ಪೂಜೆಯನ್ನು ಸ್ವೀಕರಿಸಿದರೆ; ತಾಯಿಯ ಹಾದಿಯನ್ನೇ ಅನುಸರಿಸಿ ಗೌರಿಪುತ್ರ ಗಜಾನನ ಭಾದ್ರಪದ ಚೌತಿಯಂದು ಬರುತ್ತಾನೆ. ವರ್ಷದ 12 ತಿಂಗಳೂ ಚೌತಿ ಬರುತ್ತದೆ. ಅದನ್ನು ವರಚೌತಿ ಎಂತಲೂ ಹಾಗೂ ಸಂಕಷ್ಟಹರ ಚತುರ್ಥಿ ಎಂತಲೂ ಕರೆಯುತ್ತಾರೆ. ಆ ಎಲ್ಲ ಚೌತಿಗಳಿಗಿಂತ ಭಾದ್ರಪದ ಚೌತಿ ಗಣಪತಿಯ ಪೂಜೆಗೆ ಬಹು ಶ್ರೇಷ್ಠವಾದ ದಿನ.
ಗಣಪತಿಗೆ ಗರಿಕೆಯನ್ನು ಅರ್ಪಿಸಿ, ಕಡ್ಲೆಬೆಲ್ಲವನ್ನು ನೈವೇದ್ಯ ಮಾಡಿದರೆ ಪ್ರಸನ್ನನಾಗುತ್ತಾನೆ. ದೇಶಾದ್ಯಂತ ಉತ್ಸವದ ರೂಪದಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ವಿಶೇಷವಾಗಿ ಗೋಪಾಲಕೃಷ್ಣ ಗೋಖಲೆ ಹಾಗೂ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಸಂಘಟಿಸಲು ಸಾರ್ವಜನಿಕ ಗಣಪತಿ ಉತ್ಸವದ ಪರಿಕಲ್ಪನೆಯನ್ನು ಜಾರಿಗೆ ತಂದರು. ಆವರೆಗೆ ಮನೆಯಲ್ಲಿ ಪೂಜೆಗೊಳ್ಳುತ್ತಿದ್ದ ಗಣನಾಯಕ ನಂತರ ರಸ್ತೆ, ಗಲ್ಲಿ, ಮೈದಾನ ಹೀಗೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಪೂಜೆಗೊಳ್ಳಲು ಆರಂಭಿಸಿದ. ಈ ಸಂಪ್ರದಾಯ ಮಹಾರಾಷ್ಟ್ರದಲ್ಲಿ ತುಸು ಹೆಚ್ಚೇ ಎಂದು ಹೇಳಬಹುದು.
ಸಾಮಾನ್ಯವಾಗಿ ಬೇರೆ ಬೇರೆ ಸಂಪ್ರದಾಯಸ್ಥರು ತಾವು ಪೂಜಿಸುವ ದೇವರುಗಳನ್ನು ಮಾತ್ರ ಪೂಜಿಸುತ್ತಾರೆ. ಆದರೆ ಗಣಪತಿಯನ್ನು ಪೂಜಿಸದವರು ಯಾರೂ ಇಲ್ಲ ಎಂದೇ ಹೇಳಬಹುದು. ಸರ್ವಜನಾಂಗದವರು ಕೂಡ ಗಣಪತಿಯನ್ನು ಪೂಜಿಸುತ್ತಾರೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಗಣಪತಿ ಆರಾಧನೆಯ ಉದಾಹರಣೆಗಳಿವೆ.
ಪೂಜಾ ನಿಯಮ, ನೈವೇದ್ಯ:ಭಾದ್ರಪದ ಚೌತಿಯನ್ನು ವರಸಿದ್ಧ ವಿನಾಯಕ ವ್ರತ ಎಂಬುದಾಗಿ ಕರೆಯುತ್ತಾರೆ. ಈ ಕಾರಣದಿಂದ ಗಣಪತಿ ಹಬ್ಬವನ್ನು ಕ್ರಮಬದ್ಧವಾಗಿ ಆಚರಿಸಿದರೆ ಬೇಡಿದ ಇಷ್ಟಾರ್ಥಗಳನ್ನು ಸಿದ್ಧಿವಿನಾಯಕ ಈಡೇರಿಸುತ್ತಾನೆ ಎಂದು ಸೂತ ಪುರಾಣಿಕರು ವಿವರಿಸಿದ್ದಾರೆ. ಮಧ್ಯಾಹ್ನ ಬರುವ ಚೌತಿಯನ್ನು ಪರಿಗಣಿಸಿ ಗಣಪತಿ ಪೂಜೆ ಮಾಡಬೇಕು. ಮೃತ್ತಿಕೆ (ಮಣ್ಣು), ಬೆಳ್ಳಿ, ಬಂಗಾರ, ಕಂಚು, ಹಿತ್ತಾಳೆಯ ಗಣಪತಿ ಪೂಜಿಸುವುದು ಶ್ರೇಷ್ಠ. ಈ ಹಿಂದೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಪೂಜಿಸುವ ಗಣಪತಿಯನ್ನು ಜೇಡಿ ಮಣ್ಣಿಗೆ ಪಂಚತೀರ್ಥವನ್ನು ಬೆರೆಸಿ ತಾವೇ ತಯಾರಿಸುತ್ತಿದ್ದರು. ಅದೂ ಅಲ್ಲದೆ ಚೌತಿಯಂದು ಗಣೇಶನನ್ನು ಜಲವಿಸರ್ಜನೆ ಮಾಡಬೇಕೆಂಬ ಶಾಸ್ತ್ರ ಇರುವುದರಿಂದ ಕೆಮಿಕಲ್​ರಹಿತ, ಬಣ್ಣರಹಿತ ಮಣ್ಣಿನ ಗಣಪತಿಯನ್ನು ಪೂಜಿಸುವು ಒಳಿತು. ಇದರಿಂದ ಪರಿಸರ ಹಾನಿಯನ್ನು ತಪ್ಪಿಸಬಹುದು.
ಗಣಪತಿ ಪೂಜೆಗೆ ಎಷ್ಟು ಪ್ರಾಧಾನ್ಯ ಇದೆಯೋ ಅದಕ್ಕಿಂತಲೂ ನೈವೇದ್ಯಕ್ಕೆ ಹೆಚ್ಚು ಪ್ರಾಧಾನ್ಯ ಇದೆ. ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ 21 ಭಕ್ಷ್ಯಗಳನ್ನು ನೈವೇದ್ಯ ಮಾಡಬೇಕು. ಮೋದಕ, ಕಡುಬು, ಚಕ್ಕುಲಿ, ರವೆಉಂಡೆ, ಕಡ್ಲೆ ಉಂಡೆ ಹಾಗೂ ವಿಶೇಷವಾಗಿ ಅಕ್ಕಿ ಕಡುಬು ತುಪ್ಪ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ನೈವೇದ್ಯ ಮಾಡಬೇಕು.
‘ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ನಮಃ’ ಎಂಬ ಮೂಲಮಂತ್ರವನ್ನು ಹೇಳಿ ಗಣಪತಿಯನ್ನು ಪೂಜಿಸಬೇಕು. ಅದೇ ದಿನ ಅಥವಾ ಮೂರು, ಐದು, ಒಂಬತ್ತು, ಹನ್ನೊಂದು, ಹದಿಮೂರು ಅಥವಾ ಇಪ್ಪತ್ತೊಂದು ದಿನ ಇಟ್ಟು ಪೂಜಿಸಿ ನೀರಿನಲ್ಲಿ ಗಣಪತಿಯನ್ನು ವಿಸರ್ಜಿಸಬೇಕು.
ಭಾದ್ರಪದ ಚೌತಿಯಂದು ಯಾವುದೇ ಕಾರಣಕ್ಕೂ ಚಂದ್ರನನ್ನು ನೋಡಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಮನಸ್ಕಾರಕನಾಗಿದ್ದು, ಚಂದ್ರನ ದರ್ಶನವು ಮನಸ್ಸಿನ ಮೇಲೆ ನಕಾರಾತ್ಮ ಪರಿಣಾಮ ಬೀರುತ್ತದೆ. ಗಣಪತಿಯಿಂದ ಶಾಪಕ್ಕೊಳಗಾದ ಚಂದ್ರನ ದರ್ಶನದಿಂದ ಸ್ತ್ರೀಶಾಪ, ಅವಮಾನ, ಆರೋಪಗಳನ್ನು ಎದುರಿಸಬೇಕಾಗುತ್ತದೆ. ಭಗವತ್​ಸ್ವರೂಪನಾದ ಶ್ರೀಕೃಷ್ಣನು ಕೂಡ ಚೌತಿ ಚಂದ್ರನ ದರ್ಶನದಿಂದ ಶಮಂತಕ ಮಣಿಯನ್ನು ಅಪಹರಿಸಿದ ಆರೋಪಕ್ಕೆ ಗುರಿಯಾದ ಕತೆ ಪ್ರಚಲಿತದಲ್ಲಿದೆ.
ಗಣಪತಿಯ ಕುರಿತ ಪೌರಾಣಿಕ ಕತೆ:ಹಿಂದೂ ಶಾಸ್ತ್ರ-ಪುರಾಣಗಳ ಪ್ರಕಾರ ಗಣಪತಿಗೆ ಪ್ರಥಮ ಪೂಜೆಯ ಹೆಗ್ಗಳಿಕೆ. ಇದು ಕೇವಲ ಶಾಸ್ತ್ರವಲ್ಲ ಬದಲಾಗಿ ಜಗತ್ತಿನ ಪ್ರತಿ ಮಕ್ಕಳ ಮೊದಲ ಗುರುವಾಗಿರುವ ತಾಯಿಯ ಮಾತನ್ನು ಪರಿಪಾಲಿಸುವವನಿಗೆ ಜಗತ್ತಿನಲ್ಲಿ ಮೊದಲ ಆದ್ಯತೆ ಸಿಗುತ್ತದೆ ಎಂಬ ಸಂದೇಶ ಕೂಡ ಇದೆ. ಪಾರ್ವತಿಯು ಸ್ನಾನಕ್ಕೆ ಹೋಗುವಾಗ ಗಣಪತಿಯನ್ನು ಕಾವಲಿಗೆ ನಿಲ್ಲಿಸಿ ಯಾರನ್ನೂ ಬಿಡದಂತೆ ಕಟ್ಟಪ್ಪಣೆ ಮಾಡುತ್ತಾಳೆ. ಮಾತೃವಾಕ್ಯವನ್ನು ಪರಿಪಾಲಿಸುವ ಗಣಪತಿ ಸಾಕ್ಷಾತ್ ಶಿವನೇ ಬಂದರೂ ಬಿಡದೆ ಶಿವನ ಕೋಪಕ್ಕೆ ತುತ್ತಾಗಿ ಹತನಾಗುತ್ತಾನೆ. ನಂತರ ಪಾರ್ವತಿಯ ಕೋರಿಕೆಯಂತೆ ಉತ್ತರಕ್ಕೆ ತಲೆ ಹಾಕಿ ಮಲಗಿದ್ದ ಆನೆಯ ತಲೆಯನ್ನು ಜೋಡಿಸಿ ಮರುಜೀವ ನೀಡಿದ ಶಿವನು, ಮಾತೃವಾಕ್ಯ ಪರಿಪಾಲಿಸಿದ ಗಣಪತಿಗೆ ಪ್ರಥಮ ಪೂಜೆಯ ಸ್ಥಾನವನ್ನು ನೀಡುತ್ತಾನೆ.
ರಣರಾಕ್ಷಸ ರಾವಣನ ಕೈಯಲ್ಲಿದ್ದ ಆತ್ಮಲಿಂಗವನ್ನು ಬಹುಬುದ್ಧಿವಂತಿಕೆಯಿಂದ ರಕ್ಷಿಸಿ ಲೋಕಕಲ್ಯಾಣವನ್ನು ಮಾಡಿದ ಗಣಪತಿಗೆ, ಮುಂದಾಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಕ್ಕಾಗಿ ದೇವಾನುದೇವತೆಗಳು ಪ್ರಶಂಸಿಸಿದ್ದಾರೆ.
ಪ್ರಸಿದ್ದ ಗಣಪತಿ ಕ್ಷೇತ್ರಗಳು:ಗಣಪತಿ ವಿದ್ಯೆಗೆ ಅಧಿಪತಿ, ನ್ಯಾಯಶಾಸ್ತ್ರದ ನಿಯಾಮಕ. ಈತನ ಕರುಣೆಯಿಂದಲೇ ಸರ್ವ ಜ್ಞಾನ ಲಭಿಸಬೇಕು; ಶಾಸನಗಳು ರಚನೆ ಯಾಬೇಕು. ಇಂತಹ ಗಣಪತಿಯ ಅನೇಕ ಕ್ಷೇತ್ರಗಳು ಕರ್ನಾಟಕದಲ್ಲಿವೆ. ಪ್ರಾಚೀನ ಮತ್ತು ಪವಿತ್ರ ಇಡಗುಂಜಿ ಮಹಾಗಣಪತಿ. ಕುಂಬಾಸಿಯ ಆನೆಗುಡ್ಡೆ ಗಣಪತಿ, ಹಟ್ಟಿಯಂಗಡಿ ಗಣಪತಿ, ಬೆಂಗಳೂರಿನ ಬಸವನ ಗುಡಿ ದೊಡ್ಡ ಗಣಪತಿ, ಕೋಲಾರದ ಕುರುಡುಮಲೆ ಗಣಪತಿ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಅನೇಕ ಗಣಪತಿ ಕ್ಷೇತ್ರಗಳಿವೆ. ರಾಜ್ಯವನ್ನಾಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾನೂನಿನ ತೊಡಕಿನ ಕಾರಣಕ್ಕೆ ವಿವಿಧ ವಿಘ್ನಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರು ಕೂಡ ಕಳೆದ ಅವಧಿಯಲ್ಲಿದ್ದ ಸ್ವಸಾಮರ್ಥ್ಯ ಕಳೆದುಕೊಂಡಿದ್ದು, ದಿಟ್ಟ ನಿರ್ಧಾರಕ್ಕೆ ಹಿಂಜರಿಯುತ್ತಿದ್ದಾರೆ. ಈ ಈರ್ವರು ನಾಯಕರು ಕೂಡ ವಿಘ್ನ ನಿವಾರಣೆಗೆ, ಉತ್ತಮ ಶಾಸನ ರಚನೆಗೆ ಇಡಗುಂಜಿಯ ಮಹಾಗಣಪತಿ ದರ್ಶನ ಮಾಡಬೇಕು. ಹಾಗೂ ರಾಜ್ಯದ ಮಹಾಕ್ಷೇತ್ರವಾಗಿರುವ ಗೋಕರ್ಣ ದಲ್ಲಿರುವ ಆತ್ಮಲಿಂಗ ಸ್ಥಾಪನೆಗೆ ಗಜಮುಖನೇ ಕಾರಣನಾಗಿದ್ದು, ಅಲ್ಲಿನ ಪೂಜೆ-ಪರಂಪರೆಗೆ ಧಕ್ಕೆಯಾದರೆ ನಾಡಿಗೆ ಶ್ರೇಯಸ್ಸಾಗುವುದಿಲ್ಲ. ಈ ಬಗ್ಗೆ ಆಡಳಿತ ನಡೆಸುವವರು ಗಂಭೀರವಾಗಿ ಗಮನ ಹರಿಸಬೇಕು.
ಕರ್ನಾಟಕ ವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷ; ಸೆರೆ ಹಿಡಿಯುವಂತೆ ವಿದ್ಯಾರ್ಥಿಗಳು ಮನವಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + 8 =
Remember me
