ಮಾನ್ಯ ಆರೋಗ್ಯ ಸಚಿವರಾದಡಾ|| ಕೆ ಸುಧಾಕರ್ ರವರು ಮೊನ್ನೆ ಒಂದು ಸುತ್ತೋಲೆಯನ್ನು ಹೊರಡಿಸಿದ್ದರು. ಬೌರಿಂಗ್ ಹಾಗೂ ಲೇಡಿ ಕರ್ಜನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಹೆಸರನ್ನು ಶ್ರೀಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಎಂದು ಮರುನಾಮಕರಣ ಮಾಡುವುದು ಸುತ್ತೊಲೆಯ ಸಾರಾಂಶ. ಅಜಾತ ಶತ್ರು ಹಾಗೂ ದೇಶಕಂಡ ಮುತ್ಸದಿ ರಾಜಕಾರಣಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ವಿರೋಧ ಪಕ್ಷಗಳಿಂದಲೂ ಅಪಾರ ಗೌರವ ಮನ್ನಣೆ ಗಳಿಸಿದ್ದ ವಾಜಪೇಯಿ ಅವರಮೇಲೆ ನಮಗೆಲ್ಲರಿಗೆ ಅಪಾರ ಗೌರವವಿದೆ. ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವ ಬೌರಿಂಗ್ ಹೆಸರಿನಲ್ಲಿರುವ ಏಕೈಕ ಬೌರಿಂಗ್ ಆಸ್ಪತ್ರೆಯ ಹೆಸರನ್ನು ಮರುನಾಮಕರಣ ಮಾಡುವ ಅಗತ್ಯವಾದರೂ ಏನು ಎಂಬುದೇ ಪ್ರಶ್ನೆ.
ಬೌರಿಂಗ್ ಬ್ರಿಟಿಷ್ ಕಮಿಷನರ್ ಆದರೂ ಅವರು ಮೈಸೂರು ಸಂಸ್ಥಾನಕ್ಕೆ ನೀಡಿದ ಕೊಡುಗೆ ಅಪಾರ. ಈ ಸಂದರ್ಭದಲ್ಲಿಮೈಸೂರು ಸಂಸ್ಥಾನಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಲೇಬೇಕು. 1862 ರಲ್ಲಿ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡು 1869 ವರೆಗೆ ಅಂದರೆ 8 ವರ್ಷ ಸೇವೆ ಸಲ್ಲಿಸಿದರು. ನುರಿತ ಆಡಳಿತಧಿಕಾರಿ ಹಾಗೂ ದೂರದೃಷ್ಠಿಹೊಂದಿದ್ದ ಬೌರಿಂಗ್, ಮೈಸೂರು ರಾಜ್ಯಕಂಡ ದಕ್ಷ ಬ್ರಿಟಿಷ್ ಚಿಫ್ ಕಮಿಷನರ್‍ಗಳೊಬ್ಬರು. ಸರ್ಕಾರಿ ಕಛೇರಿಯಲ್ಲಿ ಮರಾಠರೇ ಹೆಚ್ಚಾಗಿ, ಕನ್ನಡವನ್ನು ತಾತ್ಸಾರ ಮನೋಭಾವದಿಂದ ಕಾಣುತ್ತಿದ್ದ ಕಾಲದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಬೇಕೆಂದು ಆದೇಶಹೊರಡಿಸಿದ್ದು ಬೌರಿಂಗ್‍ರವರು. ಇವರ ಕಾಲದಲ್ಲಿ ಹಲವಾರು ಗ್ರಂಥಗಳು ಕನ್ನಡದಲ್ಲಿ ಮುದ್ರಣವಾದವು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಶಿವಾಜಿ ನಗರದಲ್ಲಿ ಆಸ್ಪತ್ರೆ ನಿರ್ಮಿಸಿದರು. ಇಂದು ಶಿವಾಜಿ ನಗರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಆಸ್ಪತ್ರೆಯೇ ಲೇಡಿ ಕರ್ಜನ್ ಆ್ಯಂಡ್ ಬೌರಿಂಗ್ ಆಸ್ಪತ್ರೆ. ಬೆಂಗಳೂರಿನ ಕ್ಷಿಪ್ರ ಅಭಿವೃದ್ಧಿಯನ್ನು ಬೌರಿಂಗ್ ಮೊದಲೇ ಮನಗಂಡಿದ್ದರು. ನಗರದ ಜನತೆಗೆ ಕುಡಿಯುನ ನೀರಿನ ಕೊರತೆ ಉದ್ಬವಿಸಿದಂತಾಗಲು ಹೆಸರಘಟ್ಟ ಜಲಾಶಯದಿಂಧ ಕುಡಿಯುವ ನೀರು ತರಲು ಶ್ರಮಿಸಿದರು. ಇದು ಅವರ ದೂರದೃಷ್ಠಿಗೆ ಮತ್ತೊಂದು ಸಾಕ್ಷಿ.
ಸರ್ಕಾರಿ ಕಛೇರಿಗಳು ಒಂದೆಡೆ ಕೇಂದ್ರಿಕೃತವಾಗಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬುದನ್ನು ಮನಗಂಡಿದ್ದರು. ಅದರ ಭಾಗವಾಗಿ ಅಠಾರಾ ಕಛೇರಿ (ಇಂದಿನ ಹೈಕೊರ್ಟ್) ಕಟ್ಟಿಸಿದರು. ಬೌರಿಂಗ್ ಅವರ ಮತ್ತೊಂದು ಸಾಧನೆಯೆಂದರೆ ಕಾನೂನುಬದ್ಧವಾದ, ನಿಯಮಿತವಾದ ಪೊಲೀಸ್ ಇಲಾಖೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದು. ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ಕಂದಾಚಾರ ಇಲಾಖೆಯೊಂದಿತ್ತು. ಟಪಾಲು ಹಂಚುವುದು, ಕಳ್ಳರನ್ನು ಹಿಡಿಯುವುದು, ನಾಡಿನ ರಕ್ಷಣೆ ಮೊದಲಾದ ಕೆಲಸಗಳನ್ನು ಈ ಇಲಾಖೆ ನಡೆಸುತ್ತಿತ್ತು. ಈ ಕಂದಾಚಾರ ಇಲಾಖೆಯವರಿಗೆ ಪ್ರತ್ಯೆಕ ಇಲಾಖೆಯನ್ನು ಸ್ಥಾಪಿಸಿ ಅದಕ್ಕೆ ಪೊಲೀಸ್ ಇಲಾಖೆಯೆಂದು ಬೌರಿಂಗ್ ಅವರು ನಾಮಕರಣ ಮಾಡಿದರು. ಪೊಲೀಸರು ದೇಶರಕ್ಷಣೆ, ಪ್ರಜೆಗಳ ರಕ್ಷಣೆ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಯ, ಕಳ್ಳತನ ತಡೆ ಹಾಗೂ ಅಪರಾಧಿಗಳ ಪತ್ತೆ ಮಾಡುವ ಕೆಲಸಗಳು ಮಾತ್ರ ಮಾಡಬೇಕೆಂದು ವಿಧೇಯಕವನ್ನು ಜಾರಿಗೊಳಿಸಿದರು.
ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂಬುದನ್ನರಿತಿದ್ದ ಬೌರಿಂಗ್, ಮೈಸೂರು ಸಂಸ್ಥಾನದಲ್ಲಿ ಶಾಲೆಗಳನ್ನು ತೆರೆದರು. ಎಲ್ಲಾ ವರ್ಗದ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಸರ್ಕಾರದಿಂದ ಪ್ರಚಾರ ಸಭೆಗಳನ್ನು, ಭಾಷಣಗಳನ್ನು ಏರ್ಪಡಿಸಿ ಜನರಲ್ಲಿ ಶಿಕ್ಷಣ ಮಹತ್ವದ ಅರಿವನ್ನು ಮೂಡಿಸಿದರು. ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಮುನಿಸಿಪಾಲಿಟಿಗಳು ಸ್ಥಾಪಿಸಿದರು. ಅರಣ್ಯದ ಮಹತ್ವವನ್ನು ಅರಿತಿದ್ದ ಬೌರಿಂ ಅರಣ್ಯ ರಕ್ಷಣೆ ಹಾಗೂ ಅರಣ್ಯಾಭಿವೃದ್ಧಿಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿದರು. ಈಗ ನಾವೆಲ್ಲ ಓಡಾಡುತ್ತಿರುವ ನೂರಾರು ಮೈಲುಗಳ ರಸ್ತೆಯು ನಿರ್ಮಾಣವಾಗಿದ್ದು ಇವರ ಕಾಲದಲ್ಲೇ. ಉದಾಹರಣೆಗೆ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಕಡೂರಿಗೆ, ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಕುಣಿಗಲ್‍ಗೆ, ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ ಕೋಲಾರಕ್ಕೆ ಸೇರಿದಂತೆ ಇನ್ನೂ ಹಲವು. ಜಮೀನುದಾರರ ಭೂಮಿಯನ್ನು ಅಳತೆ ಮಾಡಿ ಸರ್ವೆ ಕಲ್ಲುಗಳನ್ನು ನಡೆಸುವ ಪದ್ದತಿ ಜಾರಿಗೆ ತಂದದ್ದು ಇದೇ ಬೌರಿಂಗ್. ನ್ಯಾಯಾಂಗ ಇಲಾಖೆಯ ಕಡೆಗೆ ಹೆಚ್ಚಿನ ಗಮನಹರಿಸಿದ್ದ ಬೌರಿಂಗ್ ಜಿಲ್ಲೆಗೊಬ್ಬ ಜುಡಿಷಿಯಲ್ ಅಸಿಸ್ಟೆಂಟ್‍ಗಳನ್ನು ನೇಮಿಸಿ, ಎಲ್ಲಾ ವಿಧವಾದ ಸಿವಿಲ್ ವ್ಯಾಜ್ಯಗಳನ್ನು ಬಗೆಹರಿಸಲು ಅನುವು ಮಾಡಿಕೊಟ್ಟರು. ಬೌರಿಂಗ್ ರವರ ಆಡಳಿತದಲ್ಲಿ ದೇಶದಕ್ಕೆ ಮಾದರಿಯಾಗುವಂತೆ ಮೈಸೂರು ರಾಜ್ಯ ಹಲವು ಆಡಳಿತಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು.
ಬೆಂಗಳೂರಿಗೆ ಹಾಗೂ ಮೈಸೂರು ಸಂಸ್ಥಾನಕ್ಕೆ ಇಷ್ಟೇಲ್ಲ ಸೇವೆಸಲ್ಲಿಸಿದ ಲೂಯಿಸ್ ಬೆಂಥಾಮ್ ಬೌರಿಂಗ್‍ರವರ ಜ್ಞಾಪಕರ್ಥವಾಗಿ ಇರುವ ಏಕೈಕ ವೈದ್ಯಕೀಯ ಕಾಲೇಜಿನ ಹೆಸರನ್ನು ಮರು ನಾಮಕರಣ ಮಾಡುವುದೆಂದರೆ ಎಷ್ಟರ ಮಟ್ಟಿಗೆ ಸರಿ. ದೇಶಕಂಡ ಮತ್ಸದ್ಧಿ ರಾಜಕಾರಣಿ, ವಿರೋಧ ಪಕ್ಷಗಳಿಂದಲೂ ಅತೀವ ಮನ್ನಣೆ ಗಳಿಸಿದ ಮಹಾನ್ ನಾಯಕರ ಹೆಸರನ್ನು ಬೇರೊಬ್ಬರ ಹೆಸರಿನಲ್ಲಿರುವ ಸಂಸ್ಥೆಗೆ ನಾಮಕರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಬದಲಾಗಿ ವಿಶ್ವದರ್ಜೆಯ ವೈದ್ಯಕೀಯ ಕಾಲೇಜು ನಿರ್ಮಿಸಿದರೆ ಅದಕ್ಕೆ ವಾಜಪೇಯಿ ಅವರ ಹೆಸರು ನಾಮಕರಣ ಮಾಡುವುದು ಅವರಿಗೆ ನಾವು ನೀಡುವ ನಿಜವಾದ ಗೌರವ. ಬ್ರಿಟಿಷರು ಹಾಗೂ ವಿದೇಶಿಯರು ಎಂಬ ಕಾರಣಕ್ಕೆ ಈ ನಾಡಿನ ಅಭಿವೃದ್ಧಿಗೆ ಶ್ರಮಿಸಿದವರ ಹೆಸರಿನಲ್ಲಿ ಅಳಿದುಳಿದ ಸ್ಮಾರಕ, ಸಂಸ್ಥೆಗಳ ಹೆಸರುಗಳನ್ನು ಮರುನಾಮಕರಣ ಮಾಡುವುದು ಎಷ್ಟು ಸರಿ ? ಎಂಬುದುನ್ನು ನಾವು ಚಿಂತಿಸಬೇಕಿದೆ.
-ರಾಘವೇಂದ್ರ ಪೂಜಾರಿ ಹೆಚ್ ಎಸ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − three =
Remember me
