ಬೆಂಗಳೂರು:ಖ್ಯಾತ ಇತಿಹಾಸಕಾರ ಡಾ. ಷಡಕ್ಷರಿ ಶೆಟ್ಟರ್(85) ಶುಕ್ರವಾರ ಬೆಳಗ್ಗೆ ನಿಧನರಾದರು. ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸಮಸ್ಯೆ ಜತೆಗೆ ಇತ್ತೀಚೆಗೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು, ಉಸಿರಾಟಕ್ಕೆ ಸಮಸ್ಯೆಯಾಗಿತ್ತು. ಪತ್ನಿ ಪ್ರೇಮಲತಾ ಶೆಟ್ಟರ್, ಪುತ್ರಿಯರಾದ ಪ್ರಿಯಾ, ಸಂತೃಪ್ತಿ, ಅಳಿಯಂದಿರು, ಮೊಮ್ಮಕ್ಕಳನ್ನು ಷ. ಶೆಟ್ಟರ್ ಅಗಲಿದ್ದಾರೆ. ಭೂಪಸಂದ್ರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಎಸ್. ಚಂದ್ರಶೇಖರ್, ಚೂಡಾಮಣಿ ನಂದಗೋಪಾಲ್ ಸೇರಿ ಅನೇಕರು ಅಂತಿಮ ದರ್ಶನ ಪಡೆದರು. ಷ. ಶೆಟ್ಟರ್ ಬಯಕೆಯಂತೆ ಹೊಸಕೋಟೆ ಬಳಿಯ ಆನಳ್ಳಿಯಲ್ಲಿ ಆತ್ಮೀಯರಾದ ಕೋದಂಡರಾಮ ಅವರ ತೋಟದಲ್ಲಿ ಶನಿವಾರ ಬೆಳಗ್ಗೆ 11.30ಕ್ಕೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದು ಶೆಟ್ಟರ್ ಅವರ ಅಕ್ಕನ ಮಗ ಪ್ರೊ. ರವಿ ಕೋರಿ ಶೆಟ್ಟರ್ ತಿಳಿಸಿದ್ದಾರೆ.
ಹಂಪಸಾಗರದ ಕುಡಿ:ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರದಲ್ಲಿ 1935ರಲ್ಲಿ ಜನಿಸಿದ್ದ ಷ. ಶೆಟ್ಟರ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್​ನಲ್ಲಿ ಉನ್ನತ ವ್ಯಾಸಂಗ ಪಡೆದಿದ್ದರು. ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು 30ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳನ್ನು ಷ. ಶೆಟ್ಟರ್ ಪ್ರಕಟಿಸಿದ್ದಾರೆ. ಕೇಂಬ್ರಿಜ್, ಹಾರ್ವರ್ಡ್, ಹೈಡಲ್​ಬರ್ಗ್, ಅಥೆನ್, ಲೈಡನ್, ಮಾಸ್ಕೋ ವಿವಿಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗೂ ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್​ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದರು. ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದ ವಿಶ್ವ ಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವಕ್ಕೆ ಪಾತ್ರರಾಗಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಕುಂದಕುಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್, ರನ್ನ ಪ್ರಶಸ್ತಿ, 2016ರ ಶಾಸ್ತ್ರೀಯ ಕನ್ನಡ ವಾಙ್ಮಯದ ರಾಷ್ಟ್ರಪತಿ ಪ್ರಶಸ್ತಿ ಸೇರಿ ಅನೇಕ ಗೌರವಗಳು ಸಂದಿವೆ.
ಕನ್ನಡ ಪ್ರಕಟಿತ ಕೃತಿಗಳು:ಶ್ರವಣಬೆಳಗೊಳ (1981)ರೂವಾರಿ, ಸಾವಿಗೆ ಆಹ್ವಾನ (2004,2014), ಶಂಗಂ ತಮಿಳಗಂ ಮತ್ತು ಕನ್ನಡ ನಾಡು- ನುಡಿ(ಆರಂಭ ಕಾಲದ ದ್ರಾವಿಡ ಭಾಷಾ ಚಿಂತನೆ)(2007), ಸೋಮನಾಥಪುರ (2008), ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ (2012), ಸಾವನ್ನು ಅರಸಿ (2014), ಸಾವನ್ನು ಸ್ವಾಗತಿಸಿ(2014), ಹಳಗನ್ನಡ-ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ (2014), ಹಳಗನ್ನಡ ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ(2016), ಪ್ರಾಕೃತ ಜಗದ್ವಲಯ(ಪ್ರಾಕೃತ, ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಅನುಸಂಧಾನ).
ಇಂಗ್ಲಿಷ್ ಕೃತಿಗಳು:Hoysala Sculpture in the National Museum, Copenhagen (1975) ಸೇರಿ 10 ಇಂಗ್ಲಿಷ್ ಕೃತಿಗಳು ಪ್ರಕಟವಾಗಿದ್ದು, Archaeological Survey of Mysore: Annual Reports, Vol II-IV, Dharwad (197677) ಸೇರಿ ಆರು ಕೃತಿಗಳನ್ನು ಡಾ. ಷಡಕ್ಷರಿ ಶೆಟ್ಟರ್ ಸಂಪಾದಿಸಿದ್ದಾರೆ.
ವಿಶಾಲ ದೃಷ್ಟಿಕೋನ
ಷ. ಶೆಟ್ಟರ್ ಅವರದ್ದು ವಿಶಾಲ ದೃಷ್ಟಿಕೋನ ಹಾಗೂ ಯಾರೂ ಬೆರಳು ಮಾಡಿ ತೋರದಂತಹ ನಿಖರ ಸಂಶೋಧನೆಯಾಗಿರುತ್ತಿತ್ತು ಎನ್ನುತ್ತಾರೆ ನಾಡಿನ ಹಿರಿಯ ಕಲಾವಿದ ಹಾಗೂ ಶೆಟ್ಟರ್ ಸ್ನೇಹಿತ ಡಾ. ವಿ.ಜಿ. ಅಂದಾನಿ. ಇಬ್ಬರೂ ಸುಮಾರು 40 ವರ್ಷದಿಂದ ಪರಿಚಿತರು. ಕೆ.ಕೆ. ಹೆಬ್ಬಾರ್ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಶೆಟ್ಟರ್ ಹಾಗೂ ನಾನು ಒಟ್ಟಿಗೆ ಸದಸ್ಯರಾಗಿದ್ದೆವು. ದೃಶ್ಯಕಲೆ ಬಗ್ಗೆ ಅವರಿಗೆ ವಿಶೇಷ ಆಸಕ್ತಿ. ಇತ್ತೀಚಿನ ದಿನಗಳಲ್ಲಿ ನೃಪತುಂಗ, ಅಕ್ಕಮಹಾದೇವಿ ಕುರಿತು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದ್ದರು ಎಂದು ನೆನೆದರು.
ಮನೆಯೇ ಗ್ರಂಥಾಲಯ
ಭೂಪಸಂದ್ರದ ಕಲ್ಪನಾ ಚಾವ್ಲಾ ರಸ್ತೆಯಲ್ಲಿರುವ ಹೊಯ್ಸಳ ಶ್ರೀಕೃಷ್ಣ ಅಪಾರ್ಟ್​ವೆುಂಟ್​ನ 2ನೇ ಮಹಡಿಯಲ್ಲಿರುವ ಶೆಟ್ಟರ್ ಅವರ ಫ್ಲಾಟ್ ಒಂದು ಗ್ರಂಥಾಲಯದಂತೆ ಭಾಸವಾಗುವಂತಿದೆ. ಶೆಟ್ಟರ್ ಅವರ ಅಧ್ಯಯನ ಕೊಠಡಿಯೇ ಮಿನಿ ಗ್ರಂಥಾಲಯದಂತಿದ್ದು, ಗೋಡೆ ತುಂಬೆಲ್ಲ ಕಲಾಕೃತಿಗಳೇ. ಮೇಜಿನ ಮೇಲೆ, ಪಕ್ಕದಲ್ಲಿ ಪುಸ್ತಕಗಳನ್ನು ಜೋಡಿಸಿರುವುದು, ಎದುರುಗಡೆಯ ಕಪಾಟಿನಲ್ಲಿ ನೂರಾರು ಪ್ರಶಸ್ತಿ ಫಲಕಗಳು, ಪಾರಿತೋಷಕಗಳು ಕಾಣಿಸುತ್ತವೆ. ಶೆಟ್ಟರ್ ಮಲಗುವ ಕೋಣೆಯಲ್ಲೂ ಪುಸ್ತಕಗಳಿದ್ದು, ಕೊನೇ ದಿನಗಳಲ್ಲೂ ಓದುತ್ತಿದ್ದ ಪುಸ್ತಕವೊಂದು ಹಾಸಿಗೆ ಇನ್ನೂ ತೆರೆದ ಸ್ಥಿತಿಯಲ್ಲೇ ಇತ್ತು. ಪಕ್ಕದಲ್ಲಿ ವಸುಧೇಂದ್ರ ಅವರ ತೇಜೋ-ತುಂಗಭದ್ರ ಸೇರಿ ಕೆಲವು ಕೃತಿಗಳಿದ್ದವು. ಮಲಗುವ ಕೋಣೆ ಎದುರುಗಡೆ ಎತ್ತರವಾಗಿ ಜೋಡಿಸಿರುವ ಕೈಬರಹದ ಕೃತಿಗಳು ಶೆಟ್ಟರ್ ಅವರ 35 ವರ್ಷಗಳ ಪರಿಶ್ರಮವನ್ನು ಬಿಂಬಿಸುತ್ತವೆ. 35 ಹಳಗನ್ನಡ ಕಾವ್ಯಗಳಿಗೆ ಪದಸೂಚಿ, ವಿಷಯಸೂಚಿಯನ್ನು ಕೈಬರಹದಲ್ಲಿ ಸಂಪೂರ್ಣಗೊಳಿಸಿರುವ ಶೆಟ್ಟರ್, ಮುದ್ರಣಕ್ಕೆ ಸಿದ್ಧವಾಗಿವೆ ಎಂದು ಅಭಿನವ ಪ್ರಕಾಶನದ ರವಿಕುಮಾರ್ ತಿಳಿಸಿದರು. ಸದ್ಯದಲ್ಲೇ ವಡ್ಡಾರಾಧನೆ, ಸಾಹಸಭೀಮ ವಿಜಯ ಕುರಿತ ಪದಸೂಚಿ-ವಿಷಯಸೂಚಿಗಳು ಮುದ್ರಣಕ್ಕೆ ಹೋಗಲಿವೆ. ಅದಕ್ಕೂ ಮುನ್ನ ಕ್ರಿ.ಪೂ. 3ರಿಂದ ಕ್ರಿ.ಶ.3ರವರೆಗಿನ ಎಲ್ಲ ಕನ್ನಡ ಶಾಸಕ ಪಠ್ಯಗಳಿಗೆ ಪದಸೂಚಿ, ಹೊಸಗನ್ನಡ ಅರ್ಥ, ಪದದ ಮೂಲ ತಿಳಿಸುವ ಮೊದಲ ಸಹಸ್ರಮಾನದ ಶಾಸನ ಸಂಪುಟಗಳು ಬಿಡುಗಡೆಯಾಗಲಿವೆ ಎಂದರು.
ಬಳ್ಳಾರಿಯಲ್ಲಿ ಬಾಲ್ಯದ ಮೆರುಗು
ಷ.ಶೆಟ್ಟರ್ ಅವರಿಗೂ ಬಳ್ಳಾರಿಗೂ ಅವಿನಾಭಾವ ನಂಟಿದೆ. ಜಿಲ್ಲೆಯ ವಿವಿಧೆಡೆ ಓದಿ ಸಂಶೋಧನಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು ಬಳ್ಳಾರಿಗೆ ಹೆಮ್ಮೆಯ ವಿಷಯವಾಗಿದೆ. ಎರಡನೇ ತರಗತಿ ಓದುವಾಗ ಭಾರತ ಬಿಟ್ಟು ತೊಲಗಿ ಚಳವಳಿ ನಡೆಯುತ್ತಿತ್ತು. ಒಮ್ಮೆ ಶಾಲೆಯಿಂದ ಮನೆಗೆ ಬರುವಾಗ, ವಿದೇಶಿ ವಸ್ತು ಸುಡುವ ಹೋರಾಟವನ್ನು ಕಂಡು ತಮ್ಮ ಅಂಗಿಯನ್ನೂ ಅದರಲ್ಲೆ ಬಿಚ್ಚಿ ಎಸೆದು ಬಂದಿದ್ದರು. ಇದನ್ನು ತಿಳಿದ ಅವರ ತಂದೆ ಶೆಟ್ಟರ್ ಕಪಾಳಕ್ಕೊಂದು ಹೊಡೆದು, ‘ಅದು ವಿದೇಶಿ ಅಂಗಿಯಲ್ಲ, ನಿಮ್ಮವ್ವ ನೇಯಿಸಿದ ಖಾದಿ ಬಟ್ಟೆ. ಅವಳೇ ಪ್ರೀತಿಯಿಂದ ಹೊಲಿದಿದ್ದ ಅಂಗಿ. ದೇಶಪ್ರೇಮ ಎಂಬುದು ಹುಂಬತನವಲ್ಲ, ಹೋರಾಟಕ್ಕೂ ಅರಿವಿನ ನೆಲೆ ಬೇಕು’ ಎಂದು ತಂದೆ ಬುದ್ಧಿ ಹೇಳಿದ್ದರು. ಈ ಘಟನೆ ಶೆಟ್ಟರ್ ಅವರನ್ನು ಸಾಕಷ್ಟು ಪ್ರಭಾವಿಸಿತ್ತು. ಜಿಲ್ಲೆಯ ಕಂಪ್ಲಿಯಲ್ಲಿ 2014ರ ಫೆ.15 ಹಾಗೂ 16ರಂದು ನಡೆದಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಆಗ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದರು.
ಕನ್ನಡ ಲಿಪಿಲೋಕ ತೆರೆದ ಸಾಹಿತಿ
ಡಾ.ಮಲ್ಲಿಕಾರ್ಜುನ ಗುಮ್ಮಗೋಳ, ಧಾರವಾಡ
ಸಾಹಿತ್ಯ ರಾಜಕಾರಣದ ಯಾವ ಸೆಳಕಿಗೂ ಬಲಿಯಾಗದೆ ಶುದ್ಧ ಸಂಶೋಧನೆಯಲ್ಲಿ ತೊಡಗಿದ್ದ ಅಪ್ರತಿಮ ಇತಿಹಾಸಕಾರ ಪೊ›. ಷಡಕ್ಷರಿ ಶೆಟ್ಟರ್ ಸದ್ದುಗದ್ದಲವಿಲ್ಲದೆ ಬದುಕಿದ ಅಪರೂಪದ ವಿದ್ವಾಂಸ. ದ್ರಾವಿಡ ಭಾಷೆಗಳಲ್ಲಿ ಮೊದಲು ವಿಕಾಸವಾಗಿರುವುದು ತಮಿಳು ಎಂಬ ಸ್ಥಾಪಿತ ನಂಬಿಕೆಯನ್ನು ತನ್ನ ಸಂಶೋಧನೆ ಮೂಲಕ ಸುಳ್ಳು ಎಂದು ಸಾಬೀತುಪಡಿಸಿ, ತಮಿಳಿಗಿಂತ ಮೊದಲೇ ಕನ್ನಡ ಲಿಪಿ ಬಳಕೆಯಲ್ಲಿತ್ತು ಎಂಬುದನ್ನು ‘ಶಂಗಂ ತಮಿಳಿಗಂ’ ಹಾಗೂ ‘ಕನ್ನಡ ನಾಡು ನುಡಿ ಮತ್ತು ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಕೃತಿಗಳ ಮುಖಾಂತರ ಲೋಕಕ್ಕೆ ತೋರಿಸಿಕೊಟ್ಟವರು. ಕನ್ನಡ ಶಾಸ್ತ್ರೀಯತೆ ಕುರಿತು ಮಾತನಾಡುವಾಗ, ಈ ಮೇಲಿನ ಕೃತಿಗಳು ಕನ್ನಡದ ಸ್ಥಾನಮಾನ ಕುರಿತು ಆಕರ ಎಂದು ಹೇಳಿದ್ದರು. ಆದರೆ ತಮಿಳರಿಗೆ ಇರುವ ಭಾಷಾಭಿಮಾನ ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಇಲ್ಲದಿರುವುದರ ಕಾರಣ ಕನ್ನಡ ಭಾಷಾ ಸಂಶೋಧನೆಯಲ್ಲಿ ಮತ್ತು ಸ್ಥಾನಮಾನ ಪಡೆಯುವಲ್ಲಿ ಹಿನ್ನಡೆ ಉಂಟಾಗಿದೆ ಎಂದು ಅಸಮಾಧಾನಗೊಂಡಿದ್ದರು. ಅತ್ಯಂತ ಮಿತಭಾಷಿ ಮತ್ತು ಸೌಮ್ಯ ಸ್ವಭಾವದ ಶೆಟ್ಟರ್ ಯಾವುದಾದರೂ ವಿಷಯ ಕುರಿತು ಪ್ರಶ್ನೆ ಕೇಳಿದಾಗ ಸಮಯದ ಮಿತಿಯಿಲ್ಲದೆ ಚರ್ಚೆ ಮಾಡುತ್ತಿದ್ದರು. ಜಾಗತಿಕ ಮಟ್ಟದ ಅರ್ಹತೆಯನ್ನು ಹೊಂದಿದ ಇತಿಹಾಸಕಾರ ನಮ್ಮ ಕನ್ನಡದವರು ಎಂಬುದು ಹೆಮ್ಮೆಯ ಸಂಗತಿ. ಪೊ›. ಎಂ.ಎಂ. ಕಲಬುರ್ಗಿ ಮತ್ತು ಷ. ಶೆಟ್ಟರ್ ಸಂಶೋಧನೆ ಕ್ಷೇತ್ರದ ಎರಡು ಶಿಖರಗಳಾಗಿದ್ದರು. ಅವರ ಜುಗಲ್ಬಂದಿ ತರ್ಕ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ‘ಲಭ್ಯವಿರುವ ಶಾಸನಗಳನ್ನು ಮರು ಶೋಧನೆಗೆ ಒಳಪಡಿಸಿ ಸಂಖ್ಯಾನಿಷ್ಠ ಸಂಶೋಧನೆ ಕೈಗೊಂಡ ಶ್ರೇಷ್ಠಿ’ ಎಂದು ಶೆಟ್ಟರ್ ಕುರಿತಾಗಿ ಕಲಬುರ್ಗಿ ಅವರು ಹೇಳಿರುವುದು ಸತ್ಯವೇ ಆಗಿದೆ. ಶೆಟ್ಟರ್ ಸದಾ ಹೊಸ ಹೊಸ ಆಲೋಚನೆಗಳಲ್ಲಿ ತೊಡಗಿರುತ್ತಿದ್ದರು. ಸ್ಥಳನಾಮ ಮತ್ತು ರೂಪನಿಷ್ಪತ್ತಿ ಕುರಿತ ಅವರ ಸಂಶೋಧನಗಳ ಬಗ್ಗೆ ವಿದ್ವತ್ ವಲಯದಲ್ಲಿ ನಿರಂತರ ಚರ್ಚೆ ನಡೆಯುತ್ತಿವೆ. ಸಾವು, ಇಚ್ಛಾಮರಣ, ಜೈನ್ ಸಿದ್ಧಾಂತ ಕುರಿತು ಮಂಡಿಸಿದ ಸಂಶೋಧನಾ ಕೃತಿಗಳು ಹೊಸ ಇತಿಹಾಸವನ್ನೇ ಬರೆದಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 13 =
Remember me
