ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದುಪಡಿಸಿ, ಕಾಯ್ದೆಯ ಉಪಬಂಧ 79ಎ ಮತ್ತು 79ಬಿ ಮರು ಸ್ಥಾಪಿಸಲು ನಿರ್ಧರಿಸಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಮಾಜಿ ಸಿಎಂ ಡಿ.ದೇವರಾಜ ಅರಸು 109ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಾರ್ವಿುಕರ ಪರ ಹಿರಿಯ ಹೋರಾಟಗಾರ, ಮಾಜಿ ಸಚಿವ ಎಸ್.ಕೆ. ಕಾಂತ ಅವರಿಗೆ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.
ಬಡವರಿಗೆ ನ್ಯಾಯ ಕೊಡಿಸಲೆಂದು ಅರಸು ಉಳುವವನೇ ಭೂಮಿ ಒಡೆಯನನ್ನಾಗಿಸಲು ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿದ್ದರು. ಆದರೆ ಬಡವರು, ಸಾಮಾಜಿಕ ನ್ಯಾಯ ಪರವಾಗಿಲ್ಲದ ಬಿಜೆಪಿ ಉಳ್ಳವನೇ ಭೂಮಿ ಒಡೆಯನಾಗಲು ಅವಕಾಶ ಕಲ್ಪಿಸಿದೆ. ಅರಸು ಕಾಲದ ಭೂಸುಧಾರಣಾ ಕಾಯ್ದೆ 1961ರ ಉಪಬಂಧ 79ಎ ಮತ್ತು ಬಿ ರದ್ದುಪಡಿಸಿದೆ. ಇದರೊಂದಿಗೆ ಕೃಷಿ ಕುಟುಂಬದವರು ಮಾತ್ರ ಕೃಷಿ ಭೂಮಿ ಖರೀದಿಸಬೇಕು, ಕೃಷಿ ಆದಾಯದ ಮಿತಿ 25 ಲಕ್ಷ ರೂ. ಒಳಗಿದ್ದವರು ಮಾತ್ರ ಜಮೀನು ಖರೀದಿ ಮಾಡಬಹುದು ಎಂಬುದನ್ನು ಕೊನೆಗೊಳಿಸಿದೆ.
ಕಾಯ್ದೆ ರದ್ದಾದ ಬಳಿಕ ವಿಚಾರಣೆಗೆ ಬಾಕಿಯಿದ್ದ 13 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಟ್ಟು, ಉಳ್ಳವರಿಗೆ ಅನುಕೂಲ ಮಾಡಿಕೊಟ್ಟಿದೆ. ಬಡವರ ವಿರೋಧಿಯಾದ ಕಾಯ್ದೆ ತಿದ್ದುಪಡಿ ರದ್ದು ಮಾಡಿ 79ಎ ಮತ್ತು ಬಿಮರು ಸ್ಥಾಪಿಸಲಾಗುವುದು. ವಿಧಾನ ಪರಿಷತ್​ನಲ್ಲಿ ಪಕ್ಷ ಬಹುಮತ ಪಡೆಯುವುದಕ್ಕಾಗಿ ಕಾಯುತ್ತಿರುವೆ. ನಿರೀಕ್ಷಿತ ಬಲ ಪಡೆದ ನಂತರ ಅರಸು ಕಾಲದ ಉಳುವವನೇ ಭೂಮಿ ಒಡೆಯ ಕಾನೂನು ಮತ್ತೆ ಜಾರಿಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಒಗ್ಗಟ್ಟಿನ ಹೋರಾಟ:ಜಾತಿ ಗಣತಿಯಿಂದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆ ಸಾಧ್ಯವೆಂದು ಆ ಪ್ರಯತ್ನಕ್ಕೆ ಕೈ ಹಾಕಿರುವೆ. ಇದೇ ಸಿಟ್ಟಿನಿಂದ ಇಲ್ಲದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಹೂಡಿದ್ದು, ಕೆಲವರು ಕೈಜೋಡಿಸಿದ್ದಾರೆ. ಷಡ್ಯಂತ್ರದ ವಿರುದ್ಧ ಅವಕಾಶ ವಂಚಿತರು, ಹಿಂದುಳಿದವರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ. ಜಾತಿ ವ್ಯವಸ್ಥೆ ನಿಮೂಲನೆ, ವಂಚಿತರಿಗೆ ಅವಕಾಶ, ಅಕ್ಷರ ಸಂಸ್ಕೃತಿ, ಸಂಪತ್ತಿನ ಹಂಚಿಕೆಯಿಂದ ಬಸವಾದಿ ಶರಣರು, ಅರಸು ಆಶಯದಂತೆ ಸಮ ಸಮಾಜ ನಿರ್ಮಾಣ ಸಾಧ್ಯವೆಂದು ಸಿಎಂ ಪ್ರತಿಪಾದಿಸಿದರು.
ವ್ಯವಸ್ಥಿತ ಪಿತೂರಿ:ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಅರಸು ವಿರುದ್ಧ ಅವಕಾಶವಾದಿ, ಭ್ರಷ್ಟಾಚಾರ ಅಪಪ್ರಚಾರ ನಡೆಸಿ ಅಧಿಕಾರದಿಂದ ಕೆಳಗಿಳಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎಂದು ನೆನಪಿಸಿದರು. ಅರಸು ದಾರಿಯಲ್ಲಿ ಸಾಗಿರುವ ಸಿದ್ದರಾಮಯ್ಯ ವಿರುದ್ಧವೂ ದೆಹಲಿಯಿಂದ ರಾಜಭವನದವರೆಗೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ವ್ಯವಸ್ಥಿತ ಪಿತೂರಿ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆವಹಿಸಿದ್ದ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ 40 ವರ್ಷಗಳ ನಿಷ್ಕಳಂಕ ರಾಜಕೀಯ ಜೀವನ ನಡೆಸಿಕೊಂಡು ಬಂದಿರುವ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದು, ಸಾಮಾಜಿಕ ನ್ಯಾಯದ ಪರ ನಿಲುವಿನ ಮೇಲೆ ನಡೆಸಿರುವ ಪ್ರಹಾರವೆಂದು ವಿಶ್ಲೇಷಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ಶಾಸಕ ಎ.ಎಸ್.ಪೊನ್ನಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರಷೋತ್ತಮ ಬಿಳಿಮಲೆ, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್, ಅಧಿಕಾರಿಗಳು ಇದ್ದರು.
ಕಲ್ಯಾಣಕ್ಕೆ ಕಾಣಿಕೆ:ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ, ಮಾಜಿ ಸಚಿವ ಎಸ್.ಕೆ. ಕಾಂತ ಮಾತನಾಡಿ ಬಡವರಿಗೆ ನ್ಯಾಯ ಕೊಡಿಸಲು 70ರ ದಶಕದಲ್ಲಿ ಅರಸು ಶ್ರಮಿಸಿದರು. ಭೂಸುಧಾರಣೆ ಕಾಯ್ದೆ ದೇಶದಲ್ಲೇ ಮೊದಲು ಜಾರಿಗೆ ತಂದವರು. ಕೆಟ್ಟ ವ್ಯವಸ್ಥೆಯನ್ನು ಎದುರಿಸಿ, ದೇಶಕ್ಕೆ ಆದರ್ಶ ನೀತಿ ಅನುಷ್ಠಾನಕ್ಕೆ ತಂದವರು ಎಂದು ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಜತೆಗೆ ನೀಡಿದ್ದ ಐದು ಲಕ್ಷ ರೂ.ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿ ಅಸಂಘಟಿತ ಕಾರ್ವಿುಕರ ಕಲ್ಯಾಣ ಮಂಡಳಿಗೆ ಈ ಕಾಣಿಕೆ ಅರ್ಪಿಸುವೆ ಎಂದು ಹೇಳಿದಾಗ ಮೆಚ್ಚುಗೆ ವ್ಯಕ್ತವಾಯಿತು.
ಅರಸುಗೆ ಭಾರತರತ್ನ ಶಿಫಾರಸು:ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತರತ್ನ’ವನ್ನು ದೇವರಾಜ ಅರಸು ಅವರಿಗೆ ಮರಣೋತ್ತರವಾಗಿ ನೀಡಿ ಗೌರವಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಅಲ್ಲದೆ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ‘ಡಿ.ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ’ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ದೇವರಾಜು ಅರಸು ಆಡಳಿತಾವಧಿಯಲ್ಲಿ ರಾಜ್ಯಕ್ಕೆ ‘ಕರ್ನಾಟಕ’ವೆಂದು ಮರು ನಾಮಕರಣ ಮಾಡಲಾಯಿತು. ಸಿದ್ದರಾಮಯ್ಯ ಆಡಳಿತದಲ್ಲಿ 50 ವರ್ಷಗಳನ್ನು ಪೂರೈಸುತ್ತಿರುವ ಕಾರಣ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ವೆಂಬ ಘೋಷ ವಾಕ್ಯದಡಿ ವರ್ಷಪೂರ್ತಿ ಸುವರ್ಣ ಸಂಭ್ರಮ ನಡೆಯುತ್ತಿದೆ. ಕಳೆದ ನವೆಂಬರ್​ನಲ್ಲಿ ಶುರುವಾಗಿರುವ ಸುವರ್ಣ ವರ್ಷದ ಸಂಭ್ರಮ ಸಮಾರೋಪ ವಿಧಾನಸೌಧದಲ್ಲಿ ನ.1ಕ್ಕೆ ನಡೆಯಲಿದೆ. ಅದಕ್ಕೂ ಮುನ್ನ 14 ಅಕಾಡೆಮಿಗಳ ಸಹಯೋಗದಲ್ಲಿ ಗಡಿನಾಡು, ರಾಯಚೂರು, ಮೈಸೂರು ಮತ್ತು ಮಂಗಳೂರಿನಲ್ಲಿ ತಲಾ ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಲಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
1992ರ ಅಜ್ಮೀರ್ ಸಾಮೂಹಿಕ ಅತ್ಯಾಚಾರ ಪ್ರಕರಣ: 6 ಮಂದಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − eight =
Remember me
