|ನಿತ್ಯಾನಂದ ಶಿವಗಂಗೆಶಿವಮೊಗ್ಗ
ಏಳು ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಇದುವರೆಗೆ 22 ಕೋಟಿ ರೂ. ವಿನಿಯೋಗ ಮಾಡಲಾಗಿದೆ. ಆದರೂ ಕೆರೆಗಳಿಗೆ ನೀರು ಹರಿದಿಲ್ಲ. 2008ರಲ್ಲಿ ಈ ಯೋಜನೆಯ ಕಾಮಗಾರಿ ಆರಂಭವಾಗಿದ್ದು, 14 ವರ್ಷ ಕಳೆದರೂ ಮುಕ್ತಾಯವಾಗಿಲ್ಲ. ಉಳಿಕೆ ಕಾಮಗಾರಿ ನೆಪದಲ್ಲಿ ಹಣದ ಹೊಳೆಯನ್ನೇ ಹರಿಸಲಾಗಿದ್ದು, ಕಂಡಕಂಡವರ ಜೇಬು ತುಂಬಿಸುತ್ತಿದೆ. ತಾಲೂಕಿನ ಹರಮಘಟ್ಟ ಹಾಗೂ ಆಲ್ದಳ್ಳಿ ಭಾಗದ ನಾಲ್ಕು ಕೆರೆಗಳಿಗೆ ನೀರು ತುಂಬಿಸಿ ನೀರಾವರಿ ಸೌಲಭ್ಯ ಕಲ್ಪಿಸಲು 7.05 ಕೋಟಿ ರೂ. ವೆಚ್ಚದಲ್ಲಿ ಹೊಳಲೂರು ಏತ ನೀರಾವರಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಗುತ್ತಿಗೆ ಪಡೆದ ಮೊದಲ ಗುತ್ತಿಗೆದಾರ ಹೊಳಲೂರು ಬಳಿ ತುಂಗಭದ್ರಾ ನದಿಗೆ ಜಾಕ್​ವೆಲ್ ನಿರ್ಮಾಣ ಮಾಡಿ ಪಿಎಎಸ್​ಸಿ ಪೈಪ್​ಗಳನ್ನು ಬಳಕೆ ಮಾಡಿ ಪೈಪ್​ಲೈನ್ ನಿರ್ವಿುಸಿದ್ದರು. ಪ್ರಾಯೋಗಿಕವಾಗಿ ನೀರು ಹರಿಸಿದಾಗ ಏರು ಕೊಳವೆ ಮಾರ್ಗದ ಪೈಪ್ ಜಾಯಿಂಟ್​ಗಳಲ್ಲಿ ನೀರು ಸೋರಿಕೆಯಾಗಿದ್ದರಿಂದಾಗಿ ವೆಚ್ಚ ಮತ್ತು ಹೊಣೆಗಾರಿಕೆ(ರಿಸ್ಕ್ ಅಂಡ್ ಕಾಸ್ಟ್) ಆಧಾರದ ಮೇಲೆ ಗುತ್ತಿಗೆ ರದ್ದುಪಡಿಸಲಾಯಿತು. ಜತೆಗೆ ಈ ಕಾಮಗಾರಿ ಬಿಲ್ ತಡೆ ಹಿಡಿಯಲಾಯಿತು. ಬಳಿಕ ಪೈಪ್​ಗಳನ್ನು ಮತ್ತೆ ತೆಗೆದು ಸರಿಯಾಗಿ ಜಾಯಿಂಟ್ ಮಾಡಲು ಎರಡನೆ ಗುತ್ತಿಗೆದಾರನಿಗೆ ಟೆಂಡರ್ ನೀಡಲಾಯಿತು. ಆದರೆ, ಈತ ಮಾಡಿದ ಕೆಲಸವೇ ಬೇರೆ.
ಕರಾರು ಒಂದು, ಮಾಡಿದ್ದು ಮತ್ತೊಂದು:ಎರಡನೆ ಗುತ್ತಿಗೆ ಪಡೆದ ಮೈಸೂರು ಮೂಲದ ಗುತ್ತಿಗೆದಾರ ಕರಾರು ಪ್ರಕಾರ ಹಳೆಯ ಪೈಪ್​ಲೈನ್ ತೆಗೆದು ಮತ್ತೆ ಸರಿಯಾಗಿ ಜೋಡಣೆ ಮಾಡಬೇಕಿತ್ತು. ಆದರೆ, ಈತ ಸುಲಭದ ಮಾರ್ಗ ಕಂಡುಕೊಂಡು ಸೋರಿಕೆ ಸ್ಥಳದಲ್ಲಿ ಕಾಂಕ್ರೀಟ್ ಬ್ಲಾಕ್ ಅಳವಡಿಸಿ ಕಾಮಗಾರಿ ಶಾಸ್ತ್ರ ಮುಗಿಸಿದ. ಪ್ರಾಯೋಗಿಕವಾಗಿ ಮತ್ತೆ ನೀರು ಹರಿಸಿದಾಗಲೂ ಜಾಯಿಂಟ್​ಗಳಲ್ಲಿ ಮೊದಲಿನಂತೆಯೇ ನೀರು ಸೋರಿಕೆಯಾಯಿತು. ಟೆಂಡರ್​ನಲ್ಲಿ ವಿಧಿಸಿದ ಷರತ್ತು ಅನ್ವಯ ಕೆಲಸ ಮಾಡದ ಎರಡನೇ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಬಿಲ್ ತಡೆಹಿಡಿಯುವ ಬದಲಿಗೆೆ ಅಧಿಕಾರಿಗಳು ಎರಡನೇ ಗುತ್ತಿಗೆದಾರನಿಗೆ ಮೂರು ಕೋಟಿಗೂ ಹೆಚ್ಚು ಮೊತ್ತದ ಬಿಲ್ ಪಾಸ್ ಮಾಡಿ ಆತನ ಗುತ್ತಿಗೆ ರದ್ದುಪಡಿಸಿದರು. ಯಥಾಪ್ರಕಾರ ಅಪೂರ್ಣ ಕಾಮಗಾರಿ ಎಂದು ಮೂರನೆ ಬಾರಿಗೆ ಟೆಂಡರ್ ಕರೆದರು.
ಮತ್ತೆ ಮೂರನೇ ಟೆಂಡರ್:ಪಿಎಸ್​ಸಿ ಪೈಪ್​ಲೈನ್ ಮಾಡಿದರೂ ಸಮರ್ಪಕವಾಗಿ ನೀರು ಹರಿಯದ ಹಿನ್ನೆಲೆಯಲ್ಲಿ ಎಂಎಸ್ ಪೈಪ್​ಲೈನ್ ನಿರ್ವಿುಸಲು ಅಧಿಕಾರಿಗಳು ಮೂರನೇ ಬಾರಿ ಟೆಂಡರ್ ಕರೆದರು. 2020ರ ಫೆಬ್ರವರಿ 5ರಂದು 9 ಕೋಟಿ ರೂ. ಗುತ್ತಿಗೆ ಕರಾರು ಫೈನಲ್ ಮಾಡಲಾಗಿದ್ದು, ಈ ಗುತ್ತಿಗೆದಾರ ಪಿಎಸ್​ಸಿ ಪೈಪ್ ಬದಲಿಗೆ ಎಂಎಸ್ ಪೈಪ್ ಅಳವಡಿಸಿದರು. ಆದರೆ, ಇತರ ಕಾಮಗಾರಿ ಮಾಡಲಿಲ್ಲ. ಹೊಳಲೂರು ಜಾಕ್​ವೆಲ್​ನಿಂದ ಹರಮಘಟ್ಟದಲ್ಲಿರುವ ತೊಟ್ಟಿಯವರೆಗೆ ಹಾಗೂ ಹರಮಘಟ್ಟದ ನೀರಿನ ತೊಟ್ಟಿಯಿಂದ ಆಲ್ದಳ್ಳಿ ತೊಟ್ಟಿಯವರೆಗೆ ಮಾತ್ರ ಎಂಎಸ್ ಪೈಪ್ ಅಳವಡಿಕೆ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಎರಡು ನೀರಿನ ತೊಟ್ಟಿಯವರೆಗೆ ಮಾತ್ರ ಎಂಎಸ್ ಪೈಪ್​ಲೈನ್ ಅಳವಡಿಕೆ ಮಾಡಲಾಗಿದೆ. ಆದರೆ, ಕೆರೆಗಳಿಗೆ ಇದುವರೆಗೂ ಪೈಪ್ ಜೋಡಿಸಿಲ್ಲ. ಹೀಗಾಗಿ ಕಾಮಗಾರಿ ಅಪೂರ್ಣವಾಗಿದೆ. ಹರಮಘಟ್ಟ ತೊಟ್ಟಿಯಿಂದ ಎರಡು ಕೆರೆಗಳಿಗೆ ಹಾಗೂ ಆಲ್ದಳ್ಳಿ ತೊಟ್ಟಿಯಿಂದ ಎರಡು ಕೆರೆಗಳಿಗೆ ನೀರು ಒದಗಿಸಲು ಮತ್ತೆ ಪೈಪ್​ಲೈನ್ ಅಳವಡಿಕೆಗೆ ಟೆಂಡರ್ ಕರೆಯಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಹೊಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಆರಂಭವಾಗಿ 14 ವರ್ಷ ಕಳೆದಿದೆ. ಅಧಿಕಾರಿಗಳು ಸುಳ್ಳು ಹೇಳುವ ಮೂಲಕ ಜನರನ್ನು ವಂಚಿಸುತಿದ್ದಾರೆ. ಕಳಪೆ ಕಾಮಗಾರಿ, ಪದೇಪದೆ ಟೆಂಡರ್ ಕರೆದು ಅಧಿಕಾರಿಗಳು ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ.
|ಗೀತಾ ವೇದಮೂರ್ತಿಶಿವಮೊಗ್ಗ ತಾಪಂ ಮಾಜಿ ಸದಸ್ಯೆ
ಕೆರೆಗಳಿಗೆ ನೀರು ಹರಿಸಿದ್ದೇವೆ ಎಂದು ದಾಖಲೆಯಲ್ಲಿ ಉಲ್ಲೇಖಿಸುವ ಮೂಲಕ ಅಧಿಕಾರಿಗಳು ಜನಪ್ರತಿನಿಧಿಗಳನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಜನಪ್ರತಿನಿಧಿಗಳು ಸ್ಥಳಕ್ಕೆ ಬಂದರೆ ಅವರಿಗೆ ವಾಸ್ತವ ತೋರಿಸುತ್ತೇವೆ.
|ಮಹೇಶಪ್ಪ ಹರಮಘಟ್ಟದರೈತ
ಹೊಳಲೂರು ಏತ ನೀರಾವರಿ ಯೋಜನೆ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನವಿದೆ. ಹೀಗಾಗಿ ಯೋಜನೆಯ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ.
|ಮಂಜುನಾಥ್ಸಣ್ಣ ನೀರಾವರಿ ಇಲಾಖೆ ಎಇಇ
ಏನಿದು ಯೋಜನೆ?:ಹೊಳಲೂರು ಬಳಿ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಪೈಪ್​ಲೈನ್ ಮೂಲಕ ಹರಮಘಟ್ಟ ತೊಟ್ಟಿಗೆ ನೀರನ್ನು ತುಂಬಿಸಿ ಅಲ್ಲಿಂದ ನಾರಾಯಣಪುರ ಮತ್ತು ಹರಮಘಟ್ಟ ಕೆರೆಗಳಿಗೆ ನೀರು ತುಂಬಿಸುವುದು. ಬಳಿಕ ಇದೇ ಹರಮಘಟ್ಟ ತೊಟ್ಟಿಯಿಂದ ಆಲ್ದಳ್ಳಿ ತೊಟ್ಟಿಗೆ ನೀರನ್ನು ತುಂಬಿಸಿ ಅಲ್ಲಿಂದ ಬೂದಿಗೆರೆ ಕೆರೆ ಹಾಗೂ ಸುತ್ತುಕೋಟೆ ಕೆರೆಗಳಿಗೆ ನೀರು ತುಂಬಿಸುವುದು ಈ ಯೋಜನೆಯ ಉದ್ದೇಶ.
ರೈತರ ಆಕ್ರೋಶ:ಹರಮಘಟ್ಟ ಹಾಗೂ ಆಲ್ದಳ್ಳಿ ಭಾಗದಲ್ಲಿ ನೀರಿಗೆ ಹಾಹಾಕಾರ ಇದ್ದ ಕಾರಣದಿಂದಲೇ ಹೊಳಲೂರು ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ಎರಡನೇ ಗುತ್ತಿಗೆದಾರ ಕಾಮಗಾರಿ ಮುಗಿಸಿದ ನಂತರವೂ ನೀರು ಜಮೀನುಗಳಿಗೆ ಹರಿಯದ ಕಾರಣ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಿರಿಯ ನಾಗರಿಕರಿಗೊಂದು ಸಂತಸದ ಸಂಗತಿ; ಮತ್ತೊಮ್ಮೆ ಆದೇಶ ಹೊರಡಿಸಿತು ಸರ್ಕಾರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
