ಬೆಂಗಳೂರು:ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದ ಹೊಸ ಪ್ರಭೇದದ ಬಿಲಗಪ್ಪೆಯನ್ನು ಬೆಂಗಳೂರಿನ ನಗರವ್ಯಾಪ್ತಿಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ಸಂಶೋಧಕರು ಪತ್ತೆ ಮಾಡಿದ್ದಾರೆ.ಬೆಂಗಳೂರಿನ ರಾಜಾನುಕುಂಟೆ ಪ್ರದೇಶದ ಬುದುಮನಹಳ್ಳಿ ಗ್ರಾಮದಲ್ಲಿಈ ಹೊಸ ಪ್ರಬೇಧದ ಬಿಲಗಪ್ಪೆಯು ಕಂಡುಬಂದಿರುವುದು ಜೀವವೈವಿಧ್ಯ ಸಂಶೋಧನೆಯಲ್ಲಿ ಮೈಲುಗಲ್ಲಾಗಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.ಬೆಂಗಳೂರಿನಲ್ಲಿ ಈ ಹೊಸ ಪ್ರಬೇಧದ ಬಿಲಗಪ್ಪೆಯ ಉಪಸ್ಥಿತಿ ಅನಿರೀಕ್ಷಿತ ನಗರೀಕರಣ ವ್ಯವಸ್ಥೆಗೂ ವನ್ಯಜೀವಿಗಳು ಹೊಂದಿಕೊಳ್ಳುವ ಗುಣವನ್ನು ಹೊಂದಿವೆ ಎನ್ನುವುದನ್ನು ನಿರೂಪಿಸಿದಂತಿದೆ ಎಂಬ ವ್ಯಾಖ್ಯಾನವನ್ನೂ ನೀಡಿದ್ದಾರೆ.ಇದೀಗ ಪತ್ತೆಯಾಗಿರುವ ಹೊಸ ಪ್ರಭೇದದ ಕಪ್ಪೆಯು ಮಳೆಯ ಆರಂಭಿಕ ಅವಧಿಯಲ್ಲಿ ಬಿಲದಿಂದ ಹೊರಬರುವ ವಿಶಿಷ್ಟ ಗುಣವನ್ನು ಹೊಂದಿರುವ ಕಾರಣದಿಂದ, ‘ಸ್ಫೆರೋಥೆಕಾ ವರ್ಷಾಬು’ ಎಂದು ನಾಮಕರಣ ಮಾಡಲಾಗಿದೆ. ವರ್ಷಾಬು ಎನ್ನುವುದು ಸಂಸ್ಕೃತ ಮೂಲದ ಹೆಸರಾಗಿದೆ (ವರ್ಷಾ, ಮಳೆ; ಭೂ, ಜನಿಸುವುದು). ಮಳೆಯ ಸಮಯದಲ್ಲೇ ಈ ತಳಿಯ ಕಪ್ಪೆಗಳು ಸಂತಾನೋತ್ಪತ್ತಿಯನ್ನೂ ಮಾಡುತ್ತವೆಯಾದ್ದರಿಂದ ಈ ಹೆಸರು ಅನ್ವರ್ಥವಾಗಿದೆ.ತಜ್ಞರ ತಂಡವು ಈ ಆವಿಷ್ಕಾರದಲ್ಲಿ ಜೈವಿಕ ತಂತ್ರಜ್ಞಾನ, ಆಕೃತಿ ವಿಜ್ಞಾನದ ಅಧ್ಯಯನ ಹಾಗೂ ಜೈವಿಕ ಧ್ವನಿಶಾಸ್ತ್ರದ ಮಾದರಿಗಳನ್ನು ಅನುಸರಿಸಿ ಈ ಉಭಯ ವಾಸಿಯ ಹೊಸ ಪ್ರಭೇದದ ವಿಶಿಷ್ಟತೆಯನ್ನು ಖಾತ್ರಿಪಡಿಸಿಕೊಂಡಿದೆ.ಈ ಆವಿಷ್ಕಾರದ ಕುರಿತು ಸಂತಸ ವ್ಯಕ್ತಪಡಿಸಿರುವ ಮುಖ್ಯ ಸಂಶೋಧಕ ಡಾ. ದೀಪಕ್ ಪಿ., ಹೊಸ ಪ್ರಭೇದವು ಎಲ್ಲಿ ಸಿಗಬಹುದು ಎಂಬ ಕುರಿತು ನಮಗಿದ್ದ ತಪ್ಪು ತಿಳುವಳಿಕೆಯನ್ನು ಈ ಆವಿಷ್ಕಾರವು ಬಹಿರಂಗಗೊಳಿಸಿದೆ. ಇಂತಹ ವಿಶಿಷ್ಟವಾದ ಕಪ್ಪೆಯು ಬೆಂಗಳೂರಿನ ಹೃದಯಭಾಗದಲ್ಲಿ ವಾಸಿಸುತ್ತಿದೆ ಎನ್ನುವುದೇ ಅಸಾಮಾನ್ಯವಾದ ವಿಚಾರ ಎಂದಿದ್ದಾರೆ.ಈ ಹೊಸ ಪ್ರಭೇದದ ಆವಿಷ್ಕಾರವು ಬೆಂಗಳೂರಿನ ಸ್ವಾಯತ್ತ ಸಂಸ್ಥೆಯಾದ ಮೌಂಟ್ ಕಾರ್ಮೆಲ್ ಕಾಲೇಜು; ಪುಣೆಯಲ್ಲಿರುವ ಭಾರತೀಯ ಪ್ರಾಣಿ ಸರ್ವೇಕ್ಷಣದ (ಘಖಐ) ಪಶ್ಚಿಮ ಪ್ರಾದೇಶಿಕ ಕಚೇರಿ, ಬೆಂಗಳೂರಿನ ಜೈನ್ (ಡೀಮ್ಡ್) ವಿಶ್ವವಿದ್ಯಾಲಯ, ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಸರ್ಬೊನ್ ವಿಶ್ವವಿದ್ಯಾಲಯದ ಇನ್ಸ್‌ಟಿಟ್ಯೂಟ್ ಆಫ್ ಸಿಸ್ಟಮ್ಯಾಟಿಕ್ಸ್, ಎವೊಲ್ಯೂಷನ್, ಬಯೋಡೈವರ್ಸಿಟಿ, ನ್ಯಾಷನಲ್ ಮ್ಯೂಸಿಯಂ ಆಫ್ ಹಿಸ್ಟರಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಕೇಂದ್ರ, ಚೀನಾದ ಜಿಯಾಂಗ್ಸುವಿನಲ್ಲಿರುವ ನಾಂಜಿಂಗ್ ಫಾರೆಸ್ಟ್ರಿ ಯೂನಿವರ್ಸಿಟಿಯ ಜೀವಶಾಸ್ತ್ರ ಮತ್ತು ಪರಿಸರ ಕಾಲೇಜಿನ ಪ್ರಾಣಿ ವರ್ತನ ಹಾಗೂ ಸಂರಕ್ಷಣ ಪ್ರಯೋಗಾಲಯ ಮತ್ತು ಮೈಸೂರಿನ ಮೈಸೂರು ವಿಶ್ವವಿದ್ಯಾಲನಿಲಯದ ಯುವರಾಜ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ತಳಿ ವಿಜ್ಞಾನ ಸಂಶೋಧನಾ ಪ್ರಯೋಗಾಲಯಗಳನ್ನೊಳಗೊಂಡ ಬಹು ಸಂಸ್ಥೆಗಳ ಸಹಯೋಗದಲ್ಲಿ ಹೊಸ ಪ್ರಭೇದವನ್ನು ಆವಿಷ್ಕರಿಸಲಾಗಿದೆ.ಗಮನಿಸಬೇಕಾದ ವಿಚಾರವೆಂದರೆ ಸ್ಫೆರೋಥೆಕಾ ವರ್ಷಾಬು ಪ್ರಭೇದವು ಶುದ್ಧ ನೀರಿನ ಅಭಾವವಿದ್ದರೂ ನಗರದ ಪರಿಸರಕ್ಕೆ ಆಶ್ಚರ್ಯಕರ ರೀತಿಯಲ್ಲಿ ಹೊಂದಿಕೊಂಡು ಜೀವಿಸುತ್ತಿದೆ. ಅಷ್ಟೇ ಅಲ್ಲದೆ, ಮತ್ತಷ್ಟು ನಗರೀಕರಣದಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ಅವಶ್ಯಕ ಮಾನಸಿಕ ವರ್ತನೆ ಮತ್ತು ಭೌತಿಕ ಗುಣಗಳನ್ನೂ ವ್ಯಕ್ತಪಡಿಸುತ್ತಿದೆ. ನಗರ ಪರಿಸರವನ್ನು ಮತ್ತಷ್ಟು ಶೋಧಿಸಬೇಕಾದ ಹಾಗೂ ವಿಪರೀತ ಮಾನವ ಚಟುವಟಿಕೆಗಳನ್ನು ಹೊಂದಿರುವ ಪ್ರದೇಶಗಳಲ್ಲಿರುವ ಜೀವವೈವಿಧ್ಯವನ್ನು ಮತ್ತು ಶುದ್ಧ ನೀರಿನ ಮೂಲಗಳನ್ನು ಸಂರಕ್ಷಿಸುವ ಅವಶ್ಯಕತೆಯನ್ನು ಈ ಹೊಸ ಆವಿಷ್ಕಾರವು ಪುಷ್ಟೀಕರಿಸಿದೆ.ಹೊಸ ಆವಿಷ್ಕಾರವು ಪ್ರತಿಷ್ಠಿತ ಅಂತಾರಾಷ್ಟ್ರಿಯ ವಿಜ್ಞಾನಿಕ ನಿಯತಕಾಲಿಕೆಯಾದ ಜೂಟ್ಯಾಕ್ಸಾ ದಲ್ಲಿ ಪ್ರಕಟವಾಗಿದ್ದು, ಜಾಗತಿಕ ವೈಜ್ಞಾನಿಕ ಸಮುದಾಯಕ್ಕೆ ಮೌಲ್ಯಯುತ ಮಾಹಿತಿಗಳನ್ನು ಇದು ಒದಗಿಸಿದೆ.ನಗರ ಹಾಗೂ ನಗರ ಹೊರವಲಯದ ಪ್ರದೇಶಗಳು ಜೀವವೈವಿಧ್ಯಕ್ಕೆ ಬೆಂಬಲ ನೀಡುವ ಕುರಿತು ಸಂಶೋಧಕರಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಇಲ್ಲ. ಆದರೆ ನಗರ ಪ್ರದೇಶಗಳಲ್ಲಿ ಪ್ರಭೇದಗಳನ್ನು ರಕ್ಷಿಸುವಲ್ಲಿ ವಿಶಾಲ ಪ್ರದೇಶಗಳು ಹಾಗೂ ಜಲಾಗಾರಗಳು ಪ್ರಮುಖ ಪಾತ್ರ ವಹಿಸುವ ಕುರಿತು ಒಳನೋಟ ಹಾಗೂ ಆಶಾಭಾವನೆಯನ್ನು ಈ ಆವಿಷ್ಕಾರವು ನೀಡುತ್ತಿದೆ ಎಂದು ಜೈನ್ ವಿಶ್ವವಿದ್ಯಾಲಯದ ಸಹಾಯ ಪ್ರಾಧ್ಯಾಪಕ ಡಾ. ಚೇತನ್ ನಾಗ್ ಕೆ.ಎಸ್. ಹೇಳಿದ್ದಾರೆ.ನಗರ ಜೀವವೈವಿಧ್ಯ ಸಂರಕ್ಷಣೆಯ ಹಾಗೂ ನಿರ್ದಿಷ್ಟವಾಗಿ ಶಾಶ್ವತ ಜಲಾಗಾರಗಳ ಮಹತ್ವದ ಅರಿವನ್ನು ಈ ಆವಿಷ್ಕಾರವು ಮತ್ತಷ್ಟು ಹೆಚ್ಚಿಸಿದೆ ಎಂದು ಭಾರತೀಯ ಪ್ರಾಣಿ ಸರ್ವೇಕ್ಷಣದ ವಿಜ್ಞಾನಿ ಡಾ. ಕೆ.ಪಿ. ದಿನೇಶ್ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಇದೀಗ ಪತ್ತೆಯಾಗಿರುವ ಸ್ಫೆರೋಥೆಕಾ ವರ್ಷಾಬು ಬಿಲವಾಸಿ ಕಪ್ಪೆಯು ತನ್ನ ಧ್ವನಿಯ ಮೂಲಕ, ಉಭಯವಾಸಿಗಳ ಅಧ್ಯಯನದಲ್ಲಿ ಜೈವಿಕ ಧ್ವನಿ ಶಾಸ್ತ್ರದ ಮಹತ್ವವನ್ನು ತಿಳಿಸಿಕೊಟ್ಟಿದೆ ಎಂದು ವಿಶಾಲ್ ಕುಮಾರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
