ಬೆಂಗಳೂರು:ರಾಜ್ಯದ ‘ಜನಸೇವೆ’ಯ ಅಧಿಕಾರ ಶತಾಯಗತಾಯ ಮತ್ತೆ ತನ್ನದಾಗಿಸಿಕೊಳ್ಳಲು ಬಿಜೆಪಿ ಪಣತೊಟ್ಟಿದ್ದು, ಜನ-ಮನಗೆಲ್ಲುವ ಕಾರ್ಯಯೋಜನೆಗಳು ಚಾಲ್ತಿಯಲ್ಲಿ ಇರುವ ನಡುವೆಯೇ ದೆಹಲಿಯಲ್ಲಿ ಸೋಮವಾರ ಆರಂಭವಾಗುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ವರ್ಷ ಕರ್ನಾಟಕ ಸೇರಿ ಒಂಭತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೊದಲಿಗೆ ಕರ್ನಾಟಕದ ಸರತಿ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಈ ಸಭೆ ರಾಜ್ಯ ರಾಜಕೀಯ ವಲಯದ ಗಮನಸೆಳೆದಿದೆ. ದಕ್ಷಿಣ ಭಾರತದ ಬಾಗಿಲು ಮುಚ್ಚದಂತೆ ನೋಡಿಕೊಳ್ಳುವ ಜತೆಗೆ ಕೈಪಕ್ಷದ ಲೆಕ್ಕ ಚುಕ್ತಾ ಮಾಡುವ ವ್ಯೂಹಾತ್ಮಕ ತಂತ್ರಗಾರಿಕೆ ಈ ಸಭೆಯಲ್ಲಿ ಚರ್ಚೆಯಾಗಲಿದೆ.
ಸಾಲು ಸಾಲು ಸವಾಲು:ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಪ್ರಮಾಣ ಹೆಚ್ಚಿಸಿದ ಬಳಿಕ ವಿವಿಧ ಸಮುದಾಯಗಳ ಬೇಡಿಕೆಗಳ ಉಬ್ಬರ ಏರತೊಡಗಿದೆ. ಬೇಡಿಕೆಗಳು ಸಹಜ, ಒತ್ತಡವೇನಿಲ್ಲ ಎಂದು ರಾಜ್ಯ ಸರ್ಕಾರ, ಪಕ್ಷದ ನಾಯಕರು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಂಚಮಸಾಲಿ, ಕುರುಬರು, ಗಂಗಾಮತಸ್ಥರು, ಈಡಿಗರು, ಮಡಿವಾಳರು ಸೇರಿ ವಿವಿಧ ಸಮುದಾಯಗಳ ಮೀಸಲು, ಪರಿಶಿಷ್ಟ ಜಾತಿಯ ಮೀಸಲು ವರ್ಗೀಕರಣ ಬೇಡಿಕೆ, ಹುಟ್ಟಿಹಾಕಿರುವ ಗೊಂದಲ ಇತ್ಯರ್ಥವೇ ಪಕ್ಷದ ವರಿಷ್ಠರ ಮುಂದಿರುವ ಪ್ರಧಾನ ಸವಾಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಶೇ.10ರ ಕೋಟಾದಲ್ಲಿ ಶೇ.2.5ರಷ್ಟು ಪಂಚಮಸಾಲಿ ಸಮುದಾಯಕ್ಕೆ ಹಂಚಲು ರಾಜ್ಯ ನಾಯಕರು ಬಯಸಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಒತ್ತಾಸೆಯಂತೆ ಸಂವಿಧಾನಕ್ಕೆ ತಿದ್ದುಪಡಿ ತಂದು ಬಡವರ ಮೀಸಲು ಒದಗಿಸಿದ್ದು, ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಹೀಗಾಗಿ ಶೇ.10ರಲ್ಲಿ ಒಂದಿಷ್ಟು ಬೇರೆ ಸಮುದಾಯಕ್ಕೆ ನೀಡಲು ಮೋದಿಯವರ ಮನವೊಲಿಕೆಗೆ ಕಸರತ್ತು ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮೇಲೆ ಹೆಚ್ಚಿನ ಭಾರ ಬಿದ್ದಿದ್ದು, ಮೀಸಲು ಗೊಂದಲಕ್ಕೆ ಪರಿಹಾರ, ರಾಜ್ಯ ಬಜೆಟ್ ಮತ್ತು ಸಂಘಟನೆ ಬಲವರ್ಧನೆಗೆ ಸಂಬಂಧಿಸಿದಂತೆ ದಿವ್ಯೌಷಧವನ್ನು ರಾಜ್ಯ ನಾಯಕರು ಅಪೇಕ್ಷಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾರೆಲ್ಲ ಭಾಗಿ?:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪಕ್ಷದ ರಾಜ್ಯ ಅಧ್ಯಕ್ಷರು, ರಾಜ್ಯ ಉಸ್ತುವಾರಿ ಅರುಣ್​ಸಿಂಗ್ ಈ ಸಭೆಯಲ್ಲಿ ಪಾಲ್ಗೊಳ್ಳುವರು.
ಪರಾಮರ್ಶೆ:ಸರ್ಕಾರದ ಸಾಧನೆ ತಿಳಿಸುವ ಜನಸಂಕಲ್ಪ ಯಾತ್ರೆ ಸಾಧನೆ ಹಾಗೂ ದೊರೆತ ಸ್ಪಂದನೆ, ಜತೆಗೆ ಡಬಲ್ ಇಂಜಿನ್ ಸರ್ಕಾರದ ಪ್ರಯೋಜನಗಳ ಬಗ್ಗೆ ಪರಿಣಾಮಕಾರಿಯಾಗಿ ಬಿಂಬಿಸಲು ಮಾಡಿದ ಪ್ರಯತ್ನ, ಸಂಘಟನೆ ಬಲವರ್ಧನೆ ಚಟುವಟಿಕೆಗಳ ಪ್ರಗತಿ ಕಾರ್ಯಕಾರಿಣಿಯಲ್ಲಿ ಪರಾಮರ್ಶೆಯಾಗಲಿದೆ. ರಾಜ್ಯಕ್ಕೆ ಪ್ರತ್ಯೇಕವಾಗಿ ಹೆಣೆಯಬೇಕಾದ ಚುನಾವಣಾ ತಂತ್ರಗಾರಿಕೆ ಕುರಿತು ಚರ್ಚೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಚಿವ ಸಂಪುಟದಲ್ಲಿ ಖಾಲಿಯಿರುವ ಆರು ಸ್ಥಾನಗಳ ಭರ್ತಿ, ಅವಧಿ ಮುಗಿದ ನಿಗಮ-ಮಂಡಳಿಗಳಿಗೆ ಹೊಸಬರ ನೇಮಕದ ಬಗ್ಗೆ ವರಿಷ್ಠರ ಬಳಿ ಸಿಎಂ ಬೊಮ್ಮಾಯಿ ಪ್ರಸ್ತಾಪಿಸುವ ಸಾಧ್ಯತೆಗಳಿದ್ದು, ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ದಿನಗಳ ಸಭೆ ಸ್ಥೂಲವಾಗಿ ಪರಾಮರ್ಶೆ ಮಾಡಲಿದೆ.
ನಿರೀಕ್ಷೆಗಳ ಮಾಹಿತಿ ಸಂಗ್ರಹ:ನಾಯಕತ್ವದ ಸ್ಥಿತ್ಯಂತರ ನಿರ್ವಹಣೆ, ತಂತ್ರಗಾರಿಕೆ ನಿಪುಣರಲ್ಲಿ ಒಬ್ಬರಾದ ಭೂಪೇಂದ್ರ ಯಾದವ್ ಇತ್ತೀಚೆಗೆ ಬೆಂಗಳೂರು ಮತ್ತು ಬೆಳಗಾವಿಗೆ ರಹಸ್ಯ ಭೇಟಿ ನೀಡಿ, ವಿವಿಧ ಸಮುದಾಯಗಳು ನಿರೀಕ್ಷೆ ಕುರಿತು ಮಾಹಿತಿ ಸಂಗ್ರಹಿಸಿ, ವರಿಷ್ಠರಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಂ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದೇಕೆ ? ಎಂಬ ಅಸಮಾಧಾನದ ಛಾಯೆಯಿಂದ ವೀರಶೈವ-ಲಿಂಗಾಯತ ಸಮುದಾಯ ಮುಕ್ತವಾಗಿಲ್ಲ. ಮುಂದಿನ ಚುನಾವಣೆ ನಾಯಕತ್ವ ಯಾರದು ಎಂದು ಈ ಸಮುದಾಯ ತಿಳಿಯಲು ಬಯಸಿದ್ದರೆ, ಮುಖ್ಯಮಂತ್ರಿ ಹುದ್ದೆ ಮೇಲೆ ಮತ್ತೊಂದು ಬಲಿಷ್ಠ ಒಕ್ಕಲಿಗ ಸಮುದಾಯ ಕಣ್ಣಿಟ್ಟಿದೆ. ಪಕ್ಷ ತಳೆಯುವ ನಿಲುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ವರದಿಯು ಯಾದವ್ ಮುಖೇನ ಅಮಿತ್ ಷಾ ಕೈಸೇರಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೈ ಪಾಳಯಕ್ಕೆ ಪ್ರಿಯಾಂಕಾ ಟಾನಿಕ್!:ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿರುವ ‘ನಾ ನಾಯಕಿ’ ಸಮಾವೇಶದಲ್ಲಿ ಇಂದಿರಾ ಗಾಂಧಿ ಕುಟುಂಬದ ಪ್ರಿಯಾಂಕಾ ವಾಧ್ರಾ ಪ್ರಮುಖ ಆಕರ್ಷಣೆಯಾಗಿದ್ದಾರೆ. ಜತೆಗೆ ಕಾಂಗ್ರೆಸ್ ನಾಯಕರು ಕೂಡ ಪದೇಪದೆ ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಿಯಾಂಕಾ ಮೊರೆ ಹೋಗಿದ್ದಾರೆ. ರಾಷ್ಟ್ರೀಯ ನಾಯಕತ್ವದ ವಿಚಾರದಲ್ಲಿ ಎದುರಾಳಿಗೆ ಪಕ್ಷಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಾಳಯ ಮಂಕಾಗಿ ಕಾಣಿಸುತ್ತಿರುವ ಹೊತ್ತಿನಲ್ಲೇ ಪ್ರಿಯಾಂಕಾ ಪ್ರವೇಶ ಮಹತ್ವ ಪಡೆದುಕೊಂಡಿದೆ. ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕೆಂಬುದು ಕೆಪಿಸಿಸಿ ಆಶಯ. ಕನಿಷ್ಠ 15-20 ದೊಡ್ಡ ರ್ಯಾಲಿ, ರೋಡ್ ಶೋನಲ್ಲಿ ಪ್ರಿಯಾಂಕಾ ಭಾಗಿಯಾಗಬೇಕೆಂದು ಸ್ಥಳೀಯ ನಾಯಕರು ಬಯಸಿದ್ದು, ಇದೇ ಪ್ರಸ್ತಾಪವನ್ನು ದೆಹಲಿ ನಾಯಕರ ಮುಂದಿಡಲಾಗಿದೆ.
ಕಳೆದುಹೋಗಿದ್ದ ಸೂಟ್​ಕೇಸ್​ 4 ವರ್ಷಗಳ ಬಳಿಕ ಸಿಕ್ಕಿತು!; ಅಚ್ಚರಿಯ ಸಂಗತಿ ಹಂಚಿಕೊಂಡ ಮಹಿಳೆ

‘ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊ’ ಎಂದ ಸಂಬಂಧಿಕರಿಬ್ಬರಿಗೂ ಇರಿದ; ಒಬ್ಬನ ಸಾವು, ಇನ್ನೊಬ್ಬನ ಪರಿಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − four =
Remember me
