ಬೆಂಗಳೂರು:ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಹೊಸ ಸರ್ಕಾರದ ಆಶೋತ್ತರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರತಿಬಿಂಬಿಸುವ ಜತೆಗೆ ರಾಜ್ಯವನ್ನು ಅಭಿವೃದ್ಧಿ ದಿಕ್ಕಿನಲ್ಲಿ ಕೊಂಡೊಯ್ಯಲು ಹತ್ತು ದಿಕ್ಸೂಚಿ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರುವ ಭರವಸೆಯನ್ನು ಸರ್ಕಾರ ನೀಡಿದೆ. ಜತೆಗೆ, ರಾಜ್ಯದ ಆರ್ಥಿಕ ಸ್ಥಿತಿಗತಿ ಮತ್ತು ಭ್ರಷ್ಟಾಚಾರದ ಕುರಿತಂತೆಯೂ ಗಂಭೀರ ಕಳವಳ ವ್ಯಕ್ತವಾಗಿದೆ.
ರಾಜ್ಯಪಾಲ ಥಾವರ್​ಚಂದ್ ಗೆಹ್ಲೋತ್ ಸೋಮವಾರ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಇಂದು ರಾಜ್ಯಗಳ ವಿತ್ತೀಯ, ಆಡಳಿತಾತ್ಮಕ ಮತ್ತು ಶಾಸನಾತ್ಮಕ ಸ್ವಾಯತ್ತೆಯನ್ನು ಸಮರ್ಥವಾಗಿ ಬಲಪಡಿಸಬೇಕಾಗಿದೆ. ಇವೆಲ್ಲದರ ಪರಿಣಾಮವಾಗಿ ಒಮ್ಮೆ ಇಡೀ ದೇಶದಲ್ಲಿ ತಲೆಯೆತ್ತಿ ನಿಂತಿದ್ದ, ದೇಶದ ಬೊಕ್ಕಸಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಕರ್ನಾಟಕವು ಒಂದು ರೀತಿಯ ಸಂಕಟದ ಸ್ಥಿತಿಯಲ್ಲಿ ನಿಂತುಬಿಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜತೆಗೆ ಈ ಆರ್ಥಿಕ ಸ್ಥಿತಿಯಿಂದ ಕರ್ನಾಟಕವನ್ನು ಮೇಲೆತ್ತುವುದು ಸರ್ಕಾರದ ಆದ್ಯತೆಯಾಗಲಿದೆ. ರಾಜ್ಯದ ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ ಆಡಳಿತ ಮಾದರಿಯನ್ನು ಸರ್ಕಾರ ದೇಶಕ್ಕೆ ಪರಿಚಯಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿಬಂದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ತನಿಖಾ ಸಮಿತಿ ರಚನೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ, ರಾಜ್ಯಪಾಲರೂ ಸಹ ತಮ್ಮ ಭಾಷಣದಲ್ಲಿ ವಸ್ತುಸ್ಥಿತಿಯ ಕುರಿತು ಕಳವಳ ಹೊರಹಾಕಿದ್ದಾರೆ.
ಹಲವು ಕಾರಣಗಳಿಂದ ನಮ್ಮ ವ್ಯವಸ್ಥೆಯೊಳಗೆ ಭ್ರಷ್ಟಾಚಾರವು ಸಾಂದ್ರೀಕರಣಗೊಳ್ಳುವ ಮಟ್ಟಕ್ಕೆ ಬೇರು ಬಿಟ್ಟಿದೆ. ಇದನ್ನು ತೊಡೆದು ಹಾಕುವುದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸಿ, ಭ್ರಷ್ಟಾಚಾರದ ನಿಮೂಲನೆ ಮಾಡಲು ಎಲ್ಲರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಆಡಳಿತಾತ್ಮಕ, ಶಾಸನಾತ್ಮಕ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಸಂವಿಧಾನವು ತೋರಿಸಿರುವ ದಾರಿಯಲ್ಲಿ ನಡೆದು ಸಮಾಜದ ಎಲ್ಲ ವರ್ಗಗಳ ಜನರನ್ನು ಅಭಿವೃದ್ಧಿ ಮತ್ತು ನೆಮ್ಮದಿಯ ಕಡೆಗೆ ಮುನ್ನಡೆಸಲು ನನ್ನ ಸರ್ಕಾರವು ಬದ್ಧವಾಗಿದೆ. ದ್ವೇಷರಹಿತ, ಪ್ರೀತಿಯುಕ್ತ ಸಮಾಜವನ್ನು ನಿರ್ಮಾಣ ಮಾಡಲು ಈ ಸರ್ಕಾರವು ಹಲವು ಬಗೆಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ನಾವು ಶಾಂತಿಯುತವಾದ, ಸಮೃದ್ಧವಾದ, ಸೌಹಾರ್ದಯುತವಾದ ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ವಿುಸಲು ಬದ್ಧರಾಗಿದ್ದೇವೆ. ಯಾರನ್ನೂ ಹೊರಗೆ ಇಡದ ಎಲ್ಲರನ್ನೂ ಒಳಗೊಂಡು ‘ಇವ ನಮ್ಮವ’ ಎಂದು ಕೂಡಿ ಬಾಳುವ ನಮ್ಮ ಹಿರಿಯರ ಕನಸನ್ನು ನನಸು ಮಾಡಲು ನನ್ನ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲರು ಹೇಳಿದರು.
ಯಾವುದೇ ತ್ಯಾಗಕ್ಕೆ ಸಿದ್ಧ:ಬಿಪಿಎಲ್ ಕಾರ್ಡ್​ದಾರರಿಗೆ ಐದು ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ಕೊಡಲು ತಕ್ಷಣದಿಂದಲೇ ಪ್ರಾರಂಭಿಸುತ್ತಿದ್ದೇವೆ. ಅಗತ್ಯವಿರುವ ಹೆಚ್ಚುವರಿ ಅಕ್ಕಿ ದೊರೆಯುವವರೆಗೆ ಪ್ರತಿ ತಿಂಗಳು, ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ ಅಕ್ಕಿಗೆ ಬದಲಿಯಾಗಿ 34 ರೂ.ನಂತೆ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡುತ್ತೇವೆ. ಅದಕ್ಕಾಗಿ ಯಾವುದೇ ತ್ಯಾಗ ಮಾಡಿಯಾದರೂ ಸರಿ ನನ್ನ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನ ಮಾಡುತ್ತದೆ ಎಂದು ರಾಜ್ಯಪಾಲರು ಭರವಸೆ ನೀಡಿದರು.
ಜನದ್ರೋಹಿ ನಡೆ:ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ ಎಂದು ಹೆಚ್ಚುವರಿ ಅಕ್ಕಿ ಕೊಡದ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು. ಇಂದಿರಾ ಕ್ಯಾಂಟೀನ್​ಗಳು ಲಕ್ಷಾಂತರ ಜನರ ಹಸಿದ ಹೊಟ್ಟೆ ತುಂಬಿಸಿ ತೃಪ್ತಿ ನೀಡಿವೆ. ಇವುಗಳನ್ನು ಇನ್ನೂ ಸಮರ್ಥವಾಗಿ ನಾವು ನಡೆಸುತ್ತೇವೆ. ಅನ್ನಭಾಗ್ಯ ಯೋಜನೆ ಮತ್ತು ಇಂದಿರಾ ಕ್ಯಾಂಟೀನ್​ಗಳ ಮೂಲಕ ಸರ್ಕಾರವು ರಾಜ್ಯವನ್ನು ಹಸಿವು ಮುಕ್ತ ಮಾಡಲಿದೆ ಎಂದು ಭಾಷಣದಲ್ಲಿ ಉಲ್ಲೇಖಿಸಲಾಗಿದೆ.
ಗ್ಯಾರಂಟಿಗಳ ಸಮರ್ಥನೆ:ಅನ್ನಭಾಗ್ಯ, ಶಕ್ತಿ, ಯುವ ನಿಧಿ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳ ಜಾರಿಯನ್ನು ಸಮರ್ಥನೆ ಮಾಡಿಕೊಳ್ಳಲಾಗಿದೆ. ಯುವನಿಧಿಯಿಂದ ಯುವಕರು ಮತ್ತು ಅವರ ಕುಟುಂಬಗಳಿಗೆ ಹೆಚ್ಚು ಅಗತ್ಯವಿರುವ ಬೆಂಬಲ ಮತ್ತು ಘನತೆಯನ್ನು ಒದಗಿಸಿದಂತಾಗುವುದು ಎಂದು ರಾಜ್ಯಪಾಲರು ತಿಳಿಸಿದರು. ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯಿಂದ ಆರ್ಥಿಕ ಚೈತನ್ಯ ಲಭಿಸಲಿದೆ ಎಂದು ತಿಳಿಸಿದರು.
ವಿಪಕ್ಷ ನಾಯಕನ ಆಸನ ಖಾಲಿ:ರಾಜ್ಯಪಾಲರ ಭಾಷಣದ ವೇಳೆ ಪ್ರತಿಪಕ್ಷ ನಾಯಕನ ಆಸನ ಖಾಲಿ ಇತ್ತು. ವಿಧಾನಸಭೆ ಪಾಲಿಗೆ ಇದೊಂದು ಅಚ್ಚರಿ ವಿಷಯ. ಸಾಮಾನ್ಯವಾಗಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಪ್ರತಿಪಕ್ಷ ತನ್ನ ನಾಯಕನನ್ನು ಘೋಷಿಸುತ್ತದೆ. ಚುನಾವಣೆ ಫಲಿತಾಂಶ ಬಂದು 50 ದಿನಗಳಾದರೂ ಬಿಜೆಪಿ ವರಿಷ್ಠರು ಇನ್ನೂ ಆಯ್ಕೆ ನಡೆಸದ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಉಳಿಯುವಂತಾಯಿತು.

ಪಕ್ಷದ ಕಚೇರಿಯಲ್ಲಿ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ಮುಖಂಡ!

ಏ ಟ್ರೇಲರ್ ಹೈ, ಪಿಚ್ಚರ್ ಅಭಿ ಬಾಕಿ ಹೈ: ಹೆಣ್ಣುಮಕ್ಕಳ ಸಾಧನೆ ಬಗ್ಗೆ ರಾಷ್ಟ್ರಪತಿ ಮುರ್ಮು ಮಾರ್ಮಿಕ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
