ರುದ್ರಣ್ಣ ಹರ್ತಿಕೋಟೆ, ಬೆಂಗಳೂರು
ಸಂಪನ್ಮೂಲ ಕ್ರೋಡೀಕರಣಕ್ಕಾಗಿ ತೆರಿಗೆ ಹೆಚ್ಚಳ ಹಾಗೂ ತೆರಿಗೆಯಲ್ಲಿ ಸುಧಾರಣೆಗಳ ಕಡೆ ಗಮನ ಹರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಮತ್ತಷ್ಟು ಹೊರೆ ಆಗುವುದೇ ಎಂಬ ಅನುಮಾನಕ್ಕೆ ಎಡೆ ಮಾಡಿದೆ. ಯಾವ ವಲಯದಲ್ಲಿ ತೆರಿಗೆ ಹೆಚ್ಚಳ ಹಾಗೂ ತೆರಿಗೆ ಪದ್ಧತಿಯಲ್ಲಿ ಸುಧಾರಣೆಗಳನ್ನು ತರಲು ಸಾಧ್ಯವಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಹಣಕಾಸು ಇಲಾಖೆಯಿಂದ ಎಲ್ಲ ಇಲಾಖೆಗಳಿಗೆ ಸೂಚನೆ ಹೋಗಿರುವುದು ಇಂಥದೊಂದು ಅನುಮಾನಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಜಿಎಸ್​ಟಿ ಪರಿಹಾರ ನಿಲ್ಲಿಸಿದೆ. ಜತೆಗೆ ಕೇಂದ್ರ ಪುರಸ್ಕೃತ ಯೋಜನೆಗಳು, ತೆರಿಗೆ ಹಂಚಿಕೆಯಲ್ಲಿ ಕಡಿಮೆ ಆಗಿದೆ. ಆದರೆ, ರಾಜ್ಯ ಸರ್ಕಾರಕ್ಕೆ ವೆಚ್ಚಗಳು ಹೆಚ್ಚುತ್ತಿರುವುದರಿಂದಲೇ ಸಂಪನ್ಮೂಲ ಸಂಗ್ರಹಕ್ಕೆ ಪರ್ಯಾಯ ಮೂಲಗಳತ್ತ ಗಮನ ಹರಿಸಲು ಮುಂದಾಗಿದೆ. ಜಿಎಸ್​ಟಿ ಇರುವುದರಿಂದ ತೆರಿಗೆ ಹೆಚ್ಚಳದ ಸಾಧ್ಯತೆಗಳು ಅತ್ಯಂತ ಕಡಿಮೆ ಇವೆ. ಆದರೆ ಸುಧಾರಣೆಗಳಲ್ಲಿ ಮತ್ತು ತೆರಿಗೆಯೇತರ ಆದಾಯದಲ್ಲಿ ಗಮನಾರ್ಹವಾಗಿ ಸಂಪನ್ಮೂಲ ಸಂಗ್ರಹಣೆ ಹೆಚ್ಚಿಸಲು ಅವಕಾಶಗಳಿದ್ದರೂ, ಜನಸಾಮಾನ್ಯರ ಮೇಲೆ ಹೊರೆ ಆಗಲಿದೆ ಎಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಈ ವರ್ಷ ರಾಜ್ಯದಲ್ಲಿ ಕೆಲವೊಂದು ಬಿಗಿ ಕ್ರಮಗಳಿಂದ ನಿರೀಕ್ಷಿತ ಗುರಿ ಮೀರಿ ತೆರಿಗೆ ಸಂಗ್ರಹಣೆ ಆಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಎದುರಾಗುವ ಆರ್ಥಿಕ ಹೊರೆಗಳನ್ನು ಗಮನದಲ್ಲಿಟ್ಟುಕೊಂಡೆ ಹೆಚ್ಚಿನ ಸಂಪನ್ಮೂಲಗಳ ಸಂಗ್ರಹದತ್ತ ಸರ್ಕಾರ ದೃಷ್ಟಿ ನೆಟ್ಟಿದೆ.
ರಾಜ್ಯದಲ್ಲಿ ತೆರಿಗೆಯೇತರ ಸಂಪನ್ಮೂಲ ಇಳಿಮುಖ, ವೆಚ್ಚ ವಸೂಲಾತಿ ದರದಲ್ಲೂ ಇಳಿಕೆಯಾಗಿದೆ. ಇನ್ನೊಂದೆಡೆ ಲಾಭಕರವಲ್ಲದ ಸಹಾಯಧನಗಳು, ಸಾರ್ವಜನಿಕ ಉದ್ದಿಮೆಗಳ ಕಳಪೆ ನಿರ್ವಹಣೆ ಸಂಪನ್ಮೂಲ ಸಂಗ್ರಹಣೆಗೆ ಆದ್ಯತೆ ನೀಡಬೇಕಿದೆ ಎಂಬುದಕ್ಕೆ ಪ್ರಮುಖ ಕಾರಣವಾಗಿದೆ.
ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರದಿಂದಾಗಿ ಹಣಕಾಸಿನ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಆದ್ದರಿಂದಲೇ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆರ್ಥಿಕ ಹಿಂಜರಿತ ಗಮನದಲ್ಲಿಟ್ಟುಕೊಂಡು ಸರ್ಕಾರ ಪರ್ಯಾಯ ಮಾರ್ಗಗಳತ್ತ ಗಮನ ಕೇಂದ್ರೀಕರಿಸಿ ಪತ್ರ ಬರೆದಿದೆ ಎಂದು ಹಣಕಾಸು ಇಲಾಖೆ ಮೂಲಗಳು ಖಚಿತಪಡಿಸಿವೆ.
ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ಪರಿಷ್ಕರಣೆಯಂತಹ ದುಸ್ಸಾಹಕ್ಕೆ ಕೈ ಹಾಕುವುದು ಕಷ್ಟ. ಆದರೆ ಕೆಲವೊಂದು ಸುಧಾರಣೆಗಳನ್ನು ಸರ್ಕಾರ ಕೈಗೊಳ್ಳಬಹುದೆಂದು ಹೇಳಲಾಗುತ್ತಿದೆ.
ಸರ್ಕಾರಿ ಜಮೀನುಗಳ ಹರಾಜು ಹಾಕುವುದು ಸಹ ಸಂಪನ್ಮೂಲ ಸಂಗ್ರಹಣೆಗೆ ಪ್ರಮುಖ ಆದ್ಯತೆಯಾಗಿದೆ. ಆದ್ದರಿಂದಲೇ ಖಾಲಿ ಜಮೀನು, ಅದರ ವಿಸ್ತೀರ್ಣ, ಮಾರುಕಟ್ಟೆಯ ದರ, ಕಟ್ಟಡಗಳ ಮಾಲೀಕತ್ವದ ಮಾಹಿತಿಯನ್ನು ಕೋರಲಾಗಿದೆ. ಶಾಸಕ ಬೋಪಯ್ಯ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ಸರ್ಕಾರಕ್ಕೆ ಕೆಲವೊಂದು ಶಿಫಾರಸು ಮಾಡಿದ್ದು, ಎಲ್ಲೆಲ್ಲಿ ಸರ್ಕಾರಿ ಜಮೀನು ವಶಪಡಿಸಿಕೊಂಡು ಹರಾಜು ಹಾಕಿದರೆ ಬರಬಹುದಾದ ಹಣದ ಬಗ್ಗೆಯೂ ಮಾಹಿತಿ ನೀಡಿದೆ. ಆದ್ದರಿಂದಲೇ ಸರ್ಕಾರ ಈಗ ಸಮಗ್ರ ಮಾಹಿತಿಯನ್ನು ಇಲಾಖೆಗಳಿಂದ ಕೇಳಿದೆ.
ತೆರಿಗೆ ಹೆಚ್ಚಳ ಹಾಗೂ ಸುಧಾರಣೆಗೆ ಬೇರೆ ಬೇರೆ ಇಲಾಖೆಗಳಿಗೆ ಪತ್ರ ಬರೆದಿರುವುದು ಮಾಮೂಲಿ ಪ್ರಕ್ರಿಯೆ ಹೊರತು ವಿಶೇಷ ಏನಿಲ್ಲ. ತೆರಿಗೆ ಹೆಚ್ಚಳ ಮಾಡದೇ ಸಂಪನ್ಮೂಲ ಕ್ರೋಡೀಕರಣ ಬೇರೆ ಬೇರೆ ಕ್ರಮಗಳಿಂದ ಹೆಚ್ಚಿಸಿದ್ದೇವೆ. ಜನರ ಮೇಲೆ ಹೊರೆ ಹಾಕುವುದಿಲ್ಲ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಸಿಎಂ ಬೊಮ್ಮಾಯಿ ಹಣಕಾಸು ಖಾತೆಯನ್ನೂ ಹೊಂದಿದ್ದು, ಅವರು ಕೈಗೊಂಡಿರುವ ಬಿಗಿ ಕ್ರಮಗಳಿಂದ ತೆರಿಗೆ ಸಂಗ್ರಹಣೆ ಒಂದಷ್ಟು ಹೆಚ್ಚಳವಾಗಿದೆ. ಜಿಎಸ್​ಟಿ ವ್ಯಾಪ್ತಿಗೆ ನೋಂದಣಿ ಜಾಸ್ತಿಯಾಗಿದೆ. ತೆರಿಗೆ ಕದಿಯುತ್ತಿದ್ದದ್ದು ತಪ್ಪಿಸಿದ್ದಾರೆ. ಕೆಲವೆಡೆ ದಾಳಿಗಳನ್ನು ಮಾಡಿಸಿ ತೆರಿಗೆ ವಸೂಲಿ ಮಾಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
